-->
ಜಗಲಿ ಕಟ್ಟೆ : ಸಂಚಿಕೆ - 31

ಜಗಲಿ ಕಟ್ಟೆ : ಸಂಚಿಕೆ - 31

ಜಗಲಿ ಕಟ್ಟೆ : ಸಂಚಿಕೆ - 31
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


        ನಾವು ಯಾವುದೇ ಕೆಲಸವನ್ನು ಮಾಡಲಿ ಅಥವಾ ಯಾವುದೇ ಕಾರ್ಯಕ್ರಮವನ್ನು ಆಯೋಜನೆ ಮಾಡಲಿ ಸುಂದರವಾಗಿರಬೇಕೆನ್ನುವ ಕಲ್ಪನೆ ನಮ್ಮ ಮನಸಲ್ಲಿ ಇದ್ದೇ ಇರುತ್ತದೆ. ಇನ್ನೊಬ್ಬರನ್ನು ಆಕರ್ಷಿಸುವಂತಿರಬೇಕೆನ್ನುವ ಆಲೋಚನೆಯಲ್ಲಿ ಸಿದ್ಧತೆಯಲ್ಲಿರುತ್ತಾರೆ. ಈ ಸೌಂದರ್ಯ ಪ್ರಜ್ಞೆ ನೋಡುಗನಲ್ಲಿ ಮತ್ತು ಆಯೋಜಕರಲ್ಲಿ ಇದ್ದಾಗ ಎಲ್ಲವೂ ಸೊಗಸಾಗಿ ನಡೆಯುತ್ತದೆ ಯಶಸ್ವಿಯಾಗುತ್ತದೆ.
       ಈಗೆಲ್ಲಾ ಶಾಲಾ ವಾರ್ಷಿಕೋತ್ಸವದ ಸಂಭ್ರಮ. ವಿದ್ಯಾರ್ಥಿಗಳೆಲ್ಲ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯನ್ನು ಸ್ವಚ್ಛಗೊಳಿಸಿ ತೋರಣಗಳನ್ನು ಕಟ್ಟಿ ಬಣ್ಣದ ಕಾಗದಗಳಿಂದ ಸಿಂಗರಿಸುವ ಹಬ್ಬವನ್ನು ಸಾಮಾನ್ಯವಾಗಿ ಕಾಣುತ್ತೇವೆ. ಒಟ್ಟು ಶಾಲೆಯ ವಾತಾವರಣವೇ ಸುಂದರಮಯವಾಗಿರುತ್ತದೆ. ಕಣ್ಣಿಗೆ ಹಬ್ಬದಂತಿರುತ್ತದೆ. ಏನೋ ಕಳೆ - ಸಂಭ್ರಮ ತುಂಬಿಕೊಂಡಿರುತ್ತದೆ.
       ಝಗ ಮಗಿಸುವ ಶಾಲೆ ಯಾರನ್ನೂ ಮನಸೂರೆಗೊಳಿಸದಿರದು. ಶಾಲೆಯ ಸಂಭ್ರಮದಲ್ಲಿ ಒಂದಷ್ಟು ಜನ ಗಣ್ಯರು ಮಹಾನುಭಾವರು ಶಾಲಾ ಹಿತೈಷಿಗಳು ಪೋಷಕರು ಹೀಗೆಲ್ಲಾ ಜನ ಸಾಗರವೇ ತುಂಬಿ ಹರಿಯುತ್ತದೆ. ವೇದಿಕೆಯಲ್ಲಿರುವ ಗಣ್ಯರು ಅಥವಾ ಸೇರಿರುವ ಜನರು ಶಾಲೆಯ ಒಟ್ಟು ಸೌಂದರ್ಯವನ್ನು ಪ್ರಶಂಸಿಸುತ್ತಾರೆಯೇ ಅಥವಾ ಅಥವಾ ಇಲ್ಲವೇ ಎನ್ನುವುದು ಪ್ರಶ್ನೆ...? ಪ್ರಶಂಶಿಸುತ್ತಾರೆಂದರೆ ಅವರಲ್ಲಿ ಸೌಂದರ್ಯ ಪ್ರಜ್ಞೆ ಇದೆ ಎಂದು ಅರ್ಥ... 
        "ನಿಮ್ಮ ಶಾಲೆಯನ್ನು ತುಂಬಾ ಸುಂದರಗೊಳಿಸಿದ್ದೀರಿ... ಎಲ್ಲಾ ಮಕ್ಕಳಿಗೆ ಅಭಿನಂದನೆಗಳು" ಎಂದು ಒಂದು ಮಾತನ್ನು ಗಣ್ಯರು ವೇದಿಕೆಯಲ್ಲಿ ಹೇಳಿದಾಗ ಎಲ್ಲಾ ಮಕ್ಕಳು ಎಷ್ಟೊಂದು ಖುಷಿ ಪಡಬಹುದು. ಎಲ್ಲಾ ಮಕ್ಕಳ ಮುಖದಲ್ಲಿ ತುಂಬಲಾರದಷ್ಟು ಹರ್ಷ ಹೊನಲಾಡಬಹುದು... ಈ ರೀತಿ ಪ್ರಶಂಸೆಯ ಮಾತುಗಳನ್ನಾಡಿದ ಅತಿಥಿಗಳು ಗಣ್ಯರು ನಿಮಗೆ ಸಿಕ್ಕಿರಬಹುದು. ಅವರ ವ್ಯಕ್ತಿತ್ವವನ್ನು ಗಮನಿಸಿದಾಗ ನಿಮಗೆ ವಿಶೇಷ ಅನಿಸಿರಲೂ ಬಹುದು.
     ಹಲವು ವರ್ಷಗಳ ಹಿಂದೆ ಮಂಗಳೂರಿನ ಒಂದು ಖಾಸಗಿ ಶಾಲೆಯಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದೆ. ಆ ಶಾಲೆಯ ವರ್ಷದ ಸಂಭ್ರಮದಲ್ಲಿ ಮಕ್ಕಳು ಶಾಲೆಯನ್ನು  ಜೋರಾಗಿಯೇ ಸಿಂಗರಿಸಿದ್ದರು. ವಿಶೇಷವೆನಿಸುವ ಪತಾಕೆಗಳು, ಆಕರ್ಷಿಸುವ ವೇದಿಕೆ  ಸುಂದರವಾಗಿ ಮೂಡಿ ಬಂದಿತ್ತು. ಹಲವಾರು ಗಣ್ಯರ ಜೊತೆ ಖ್ಯಾತ ವೈದ್ಯ ಡಾ. ಬಿ ಎಮ್ ಹೆಗ್ಡೆ ಕೂಡಾ ಅಂದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಹಲವು ಗಣ್ಯರ ಮಾತುಗಳ ನಂತರದ ಮಾತು ಹೆಗ್ಡೆಯವರದಾಗಿತ್ತು... ಮಾತಿನ ಆರಂಭಕ್ಕೆ ಮುಂಚೆ ಶಾಲಾ ಸೌಂದರೀಕರಣವನ್ನು ಮೆಚ್ಚಿ ಹೊಗಳಿಕೆಯ ಮಾತುಗಳನ್ನು ಆಡಿದರು. ಬಣ್ಣದ ವೇದಿಕೆಯನ್ನು ಕೊಂಡಾಡಿದರು... ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡ ಮಕ್ಕಳಿಗೂ ಸಾರ್ಥಕತೆಯ ಮನೋಭಾವ.. ಯಾರೂ ಕಾಣದ ಸೌಂದರ್ಯ ಪ್ರಜ್ಞೆಯನ್ನು ಇವರು ಕಂಡಿದ್ದರು.
       ಇನ್ನೊಂದು ಘಟನೆ.... ಬಂಟ್ವಾಳ ನಿರತ ಸಾಹಿತ್ಯ ಸಂಪದದ ಜೊತೆಗೂಡಿ ನಮ್ಮ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆವು. ಒಂದು ವಾರದಿಂದ ಪೂರ್ವ ಸಿದ್ಧತೆಯ ಕೆಲಸ. ಶಾಲೆಯ ಅಂಗಳದಲ್ಲಿ ಪೂರ್ತಿ ಸಾವಿರಕ್ಕೂ ಮಿಕ್ಕಿ ಭಿತ್ತಿ ಪತ್ರಿಕೆಗಳ ತೋರಣ. ದಾರಿಯುದ್ದಕ್ಕೂ ರಂಗೋಲಿ. ಪತಾಕೆಗಳು ಮುಖವಾಡಗಳು ತೋರಣಗಳು ಹೀಗೆ ಕಣ್ಣಿಗೆ ಕಟ್ಟುವಷ್ಟು ಸಂಭ್ರಮ. ಕಣ್ಣು ತುಂಬುವಷ್ಟು  ವೇದಿಕೆಯ ಸೊಗಸು. ಅಂದಿನ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿಯವರು ಮುಖ್ಯ ಅತಿಥಿ. ಇವರು ಸೌಂದರ್ಯವನ್ನು ಅನುಭವಿಸಿದ  ರೀತಿ ಕಂಡು ಬೆರಗಾದೆ. ಮಾತಿನ ಆರಂಭಕ್ಕೆ ಮೊದಲಾಗಿ ಹೇಳಿದ ಒಟ್ಟು ಮಾತುಗಳೇ ಅಲಂಕಾರದ ಕುರಿತಾಗಿತ್ತು.... ಆ ದೃಶ್ಯವೇ ಎಲ್ಲರಿಗೂ ಸ್ಪೂರ್ತಿ ಒದಗಿಸುವಂತಿತ್ತು.
     ನಾವು ಸೌಂದರ್ಯವನ್ನು ಅನುಭವಿಸಿದರೆ ನಮ್ಮ ವ್ಯಕ್ತಿತ್ವವೂ ಶೃಂಗಾರಗೊಳ್ಳತ್ತದೆ ಅನ್ನುವುದಕ್ಕೆ ಇಂತಹವರೇ ಸಾಕ್ಷಿ. ಹೀಗೆ ಸೌಂದರ್ಯ ಪ್ರಜ್ಞೆ ಇರುವ ಮಹಾನುಭಾವರ ಅನುಭವದ ಸಾಲು ಸಾಲುಗಳೇ ಇವೆ. ಇದರ ಜೊತೆಗೆ ಏನೂ ಕಾಣದೆ,  ಸೌಂದರ್ಯ ಪ್ರಜ್ಞೆ ಇಲ್ಲದೇ ಹೋದ ವ್ಯಕ್ತಿತ್ವಗಳನ್ನು ನಾವು ಗಮನಿಸಿದ್ದೇವೆ. ಈ ಸಂದರ್ಭದಲ್ಲಿ ಗೋಪಾಡ್ಕರ್ ಹೇಳಿದ ಮಾತು, "ಕಾಣುವ ಗುಣ ಬೇಕು" ಪ್ರಸ್ತುತವೆನಿಸುತ್ತದೆ.

        ಕೆಲವಷ್ಟು ದಿನಗಳಿಂದ ತುಂಬಾ ಒತ್ತಡದ ಕಾರ್ಯಬಾಹುಳ್ಯ ಹಾಗೂ ಸಮಯದ ಕೊರತೆ ಕಾರಣಕ್ಕೆ ಮಕ್ಕಳ ಚಿತ್ರ ಮತ್ತು ಬರಹಗಳನ್ನು ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ನಿಮ್ಮ ಬರಹ ಮತ್ತು ಚಿತ್ರಗಳು ನಮಗೆ ಅಮೂಲ್ಯವಾದದ್ದು. ನಿರಂತರವಾಗಿ ಕಳಿಸಿ ಪ್ರತಿಯೊಬ್ಬರಿಗೂ ಅವಕಾಶ ನೀಡುವ ಕರ್ತವ್ಯ ನಮ್ಮದು.... ಅದೇ ರೀತಿ ಮೂರನೇ ವರ್ಷದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ. ಡಿಸೆಂಬರ್ 31 ಕೊನೆಯ ದಿನಾಂಕ ವಾಗಿರುತ್ತದೆ.

ಕಳೆದ ಸಂಚಿಕೆಯ ಜಗಲಿಕಟ್ಟೆ - 30 ಅಂಕಣದಲ್ಲಿ  ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಗಣೇಶ್ ಚಾಮೆತ್ತಮೂಲೆ ಮನೆ, ವಿದ್ಯಾ ಕಾರ್ಕಳ ಸಹಶಿಕ್ಷಕಿ ....  ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ....
      ಇದ್ದುದರಲ್ಲೇ ತೃಪ್ತಿಪಟ್ಟು ಅತ್ಯಾಸೆಗೆ ಎಡೆಕೊಡದೆ ನಿಶ್ಚಿಂತೆಯಿಂದ ಬದುಕಬೇಕೆನ್ನುವುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಮಾರ್ಮಿಕವಾಗಿ ತಮ್ಮ ಈ ಸಲದ ಸಂಚಿಕೆಯಲ್ಲಿ ತಿಳಿಸಿದ್ದಾರೆ.
     ಪರಸ್ಪರ ಗೌರವ, ಪ್ರೀತಿ, ಸಹ ಬಾಳ್ವೆಯ ಮೂಲಕ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಾಗ ಭಾರತೀಯತೆಯನ್ನು ಕಾಯ್ದುಕೊಳ್ಳಬಹುದು. ಇದನ್ನು ಎಲ್ಲರೂ ಅನುಸರಿಸಿದಲ್ಲಿ ಭಾರತ ಪ್ರಕಾಶಿಸುವುದರಲ್ಲಿ ಸಂಶಯವಿಲ್ಲ. ರಮೇಶ್ ಬಾಯಾರ್ ರವರಿಂದ ವಿವರಣಾತ್ಮಕವಾದ ಸುಂದರ ಲೇಖನ.
    ಸಾಪೇಕ್ಷತಾ ಸಿದ್ಧಾಂತವನ್ನು ಕೇವಲ ಭೌತಶಾಸ್ತ್ರಕ್ಕೆ ಮಾತ್ರವಲ್ಲದೆ ಇನ್ನಿತರ ಕಡೆಗಳಲ್ಲೂ ಹೇಗೆ ಅನ್ವಯಿಸಬಹುದೆಂಬುದನ್ನು ದಿವಾಕರ ಸರ್ ರವರು ತಮ್ಮ ವೈಜ್ಞಾನಿಕ ಲೇಖನದಲ್ಲಿ ಉದಾಹರಣೆಯೊಂದಿಗೆ ಅರ್ಥವತ್ತಾಗಿ ವಿವರಿಸಿದ್ದಾರೆ.
      ಒಗಟಿನೊಂದಿಗೆ ಮತ್ತೊಂದು ಸುಂದರ ಕಾಜಾಣ ಹಕ್ಕಿಯ ಪರಿಚಯ ಅರವಿಂದ ಸರ್ ರವರಿಂದ.
     ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ವಿಜಯಾ ಮೇಡಂರವರಿಂದ ಆನೆ ತಜಂಕ್ ಗಿಡದ ವಿವರಣಾತ್ಮಕ ಪರಿಚಯ ಸುಂದರ ಛಾಯಾ ಚಿತ್ರದೊಂದಿಗೆ ತುಂಬಾ ಸೊಗಸಾಗಿತ್ತು.
     ಕಲಿಕಾ ನ್ಯೂನತೆ ಇದ್ದ ಒಬ್ಬ ವಿದ್ಯಾರ್ಥಿ ಆತನ ವಿನಮ್ರತೆ, ವಿಧೇಯತೆ, ಗುರುಗಳ ಕುರಿತಾಗಿ ಗೌರವ ಭಾವದಿಂದ ಒಮ್ಮೆ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೂ ಗುರುಭಕ್ತಿ ಆತನಿಗೆ ಮುಂದೆ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಮಾಡಿ ಉತ್ತಮ ಕೆಲಸ ಪಡೆಯುವಂತೆ ಹೇಗೆ ಸಹಾಯ ಮಾಡಿತು ಎಂಬುದನ್ನು ಯಾಕೂಬ್ ಸರ್ ತಮ್ಮ ಈ ಸಲದ ಸಂಚಿಕೆಯಲ್ಲಿ ಬಹಳ ಸುಂದರವಾಗಿ ತಿಳಿಸಿದ್ದಾರೆ.
      ವಾಣಿಯಕ್ಕನವರಿಂದ ಈ ಸಲ ತಬಲಾ ಮಾಂತ್ರಿಕ ಝಾಕೀರ್ ಹುಸೈನ್ ಕುರಿತಾದ ಸುಂದರ ಪುಸ್ತಕದ ಪರಿಚಯ.
      ಶಾಲೆಯ ಬಳಿಯಲ್ಲಿರುವ ವೃಕ್ಷದ ಜೊತೆ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನವರ ಅನ್ಯೋನ್ಯತೆ ಆ ವೃಕ್ಷದ ರಕ್ಷಣೆಗೆ ಹೇಗೆ ಕಾರಣವಾಯಿತು ಎಂಬುದನ್ನು ತಮ್ಮ ಅನುಭವದ ಮಾತಿನಲ್ಲಿ ಡಾ. ಪ್ರಶಾಂತ್ ಕುಮಾರ್ ಸೊಗಸಾಗಿ  ತಿಳಿಸಿದ್ದಾರೆ.
   ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಶತಕದಂಚಿಗೆ ಮುಂದುವರಿಯುತ್ತಿದೆ.
     ಚಿತ್ರಾಶ್ರೀಯವರ ಪ್ರವಾಸ ಕಥನದಲ್ಲಿ ಪೂರ್ವ ಕರಾವಳಿ ಭಾಗವಾದ ವಿಶಾಖ ಪಟ್ಟಣಂನ ಕೊಟ್ಟಕೊಂಡ್ಲ ಶಿಲಾ ಸೇತುವೆ, ಭೌದ್ಧ  ವಿಹಾರ ಹಾಗೂ ವ್ಯಾಪಾರ ಕೇಂದ್ರದ ಕುರಿತಾದ ಪರಿಚಯ ಸುಂದರ ಛಾಯಾ ಚಿತ್ರಗಳೊಂದಿಗೆ ಅದ್ಭುತವಾಗಿತ್ತು.
    ಕೊನೆಯದಾಗಿ - ಜಗಲಿಯಲ್ಲಿ ಕಣ್ಣಾಡಿಸಿದಾಗ ಏನೆಲ್ಲ ಇದೆ ಎನ್ನುವುದಕ್ಕಿಂತ ಎಲ್ಲವೂ ಇದೆ ಎನ್ನಬಹುದಲ್ಲವೆ? ಮಕ್ಕಳ ಜ್ಞಾನದಾಹವನ್ನು ತಣಿಸುವ ಜಗಲಿಯು -   ಜೀವನವನ್ನು ಸಂಭ್ರಮಿಸುವ ಕುರಿತಾದ ಜೀವನ ಸಂಭ್ರಮ ಸಂಚಿಕೆ, ಮಕ್ಕಳಿಗೆ ಸ್ಫೂರ್ತಿ ತುಂಬುವ ಸ್ಪೂರ್ತಿಯ ಮಾತುಗಳು, ವೈಜ್ಞಾನಿಕ ಮನೋಭಾವ ಬೆಳೆಸಲು ವೈಜ್ಞಾನಿಕ ಲೇಖನ, ಹಕ್ಕಿಯ ಪರಿಚಯದ ಹಕ್ಕಿ ಕಥೆ,  ಸಸ್ಯಗಳನ್ನು ಪರಿಚಯಿಸುವ ಹಾಗೂ ಬೆಳೆಸುವ ಕಾಳಜಿ ವಹಿಸುವ ನಿಷ್ಪಾಪಿ ಸಸ್ಯಗಳ ಸಂಚಿಕೆ, ಹೃದಯಕ್ಕೆ ನಾಟುವ ಹೃದಯದ ಮಾತು ಸಂಚಿಕೆ, ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸುವ ಕುರಿತಾದ ಪುಸ್ತಕದ ಪರಿಚಯ, ಶಿಕ್ಷಕರ ಅನುಭವದ ಬುತ್ತಿಯನ್ನುಣಿಸುವ ಶಿಕ್ಷಕರ ಡೈರಿ, ಮದುಳಿಗೆ ಮೇವು ನೀಡುವ ಪದದಂಗಳ, ಪ್ರವಾಸದನುಭವವನ್ನು ನೀಡುವ ಪ್ರವಾಸ ಕಥನ  ಜೊತೆಗೆ ಮಕ್ಕಳ ಕತೆಗಳು, ಕವನಗಳು ಹಾಗೂ ಚಿತ್ರಗಳು ವಿಶೇಷ ಸಂದರ್ಭಗಳಲ್ಲಿ ವಿಶೇಷ ಲೇಖನಗಳು ಹೀಗೆ ಪಟ್ಟಿ ಉದ್ದಕ್ಕೆ ಬೆಳೆಯುತ್ತಿರುತ್ತದೆ ಮತ್ತು ಇನ್ನಷ್ಟು ಲೇಖನಗಳನ್ನು ನೀಡುತ್ತಿದೆ. ಇದನ್ನು ಯಾಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಜಗಲಿಯ ಆರಂಭದಿಂದ ಇಂದಿನವರೆಗೂ  ಜಗಲಿಯ ಒಡನಾಟದಲ್ಲಿದ್ದು ಲೇಖನಗಳನ್ನು ಆಸ್ವಾದಿಸಿದವರಲ್ಲಿ ನಾನು ಒಬ್ಬ. ಇದು ನನಗೆ ಮಾತ್ರವಲ್ಲ ಇದರಲ್ಲಿರುವರಿಗೆ ಎಲ್ಲರಿಗೂ ಇದೇ ಅನುಭವ ಎಂದು ನನ್ನ ಅನಿಸಿಕೆ. ಇದೇ ಕಾರಣಕ್ಕಿರಬಹುದು ಜಗಲಿ ಎಲ್ಲರಿಗೂ ಅತ್ಯಾಪ್ತ ಪತ್ರಿಕೆ. ಅದಕ್ಕಾಗಿ ಇಲ್ಲಿರುವ ಎಲ್ಲಾ ಮಕ್ಕಳು, ಲೇಖಕರು ಧನ್ಯರು. ಈ ಪತ್ರಿಕೆ ನಡೆಸುತ್ತಿರುವ ನನ್ನ ಆತ್ಮೀಯ ತಾರಾನಾಥ ಕೈರಂಗಳ ಸರ್ ಗೆ  ಅವರ ಸಹಧರ್ಮಿಣಿ ತುಳಸಿಯವರಿಗೆ ಹಾಗೂ ಜಗಲಿಯ ಬಳಗದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
     ಈ ವಾರದ ಜಗಲಿಯ ಅಂದವನ್ನು ತಮ್ಮ ಲೇಖನಗಳ ಮೂಲಕ ಹೆಚ್ಚಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಓದುಗರ ಮಾತುಕತೆಯಲ್ಲಿ.....  ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article