-->
ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ - ಭಾಗ 2

ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ - ಭಾಗ 2

ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ - ಭಾಗ 2
ಲೇಖಕಿ : ಚಿತ್ರಾಶ್ರೀ ಕೆ ಎಸ್
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ




ಪ್ರವಾಸವೆಂದರೆ ನನಗೆ ಕೇವಲ ಮೋಜು- ಮಸ್ತಿಯ ಪ್ರಯಾಣವಲ್ಲ. ಹೊಸ ಪ್ರದೇಶಗಳಿಗೆ ಭೇಟಿ ನೀಡಿದಾಗ ಹೊಸ ಭಾಷೆ ಕೇಳಿದಾಗ, ಅಲ್ಲಿಯ ಜನರನ್ನು ಭೇಟಿಯಾದಾಗ ಮತ್ತು ಪ್ರಕೃತಿಯ ಅಚ್ಚರಿಗಳನ್ನು ಕಣ್ತುಂಬಿಕೊಳ್ಳುವಾಗ ದೊರೆಯುವ ಅನನ್ಯ ಹಾಗೂ ಅಮೂಲ್ಯ ಅನುಭವ.

'ದೇಶ ಸುತ್ತು ಕೋಶ ಓದು' ಎಂಬ ಹಿರಿಯರ ನುಡಿ ಅದೆಷ್ಟು ಅರ್ಥಪೂರ್ಣ! ಲೋಕಾನುಭವ ಇಲ್ಲದೇ, ನಾಲ್ಕು ಜನರೊಡನೆ ಬೆರೆತು ಬದುಕುವುದನ್ನು ಕಲಿಯದೇ ಕೇವಲ ಓದಿ ಬರೆದು ಅಂಕ ಗಳಿಸಿ ಉದ್ಯೋಗ ಸಂಪಾದಿಸಿ ದುಡಿಯುತ್ತಾ ಬದುಕುವುದೂ ಒಂದು ಬದುಕೇ?

ನಮ್ಮ ಮನೆಯ ಅಥವಾ ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಾಗ ಆ ಸ್ಥಳದ ಮಹತ್ವ ಹಾಗೂ ಅಲ್ಲಿನ ಅಚ್ಚರಿಗಳ ಬಗ್ಗೆ ಒಂದಿಷ್ಟಾದರೂ ತಿಳಿಸುತ್ತಾ ಬೆಳೆಸಿದರೆ ಬಾಲ್ಯದ ನೆನಪುಗಳು ಬದುಕಿನುದ್ದಕ್ಕೂ ಖುಷಿಕೊಡುವ ಖಜಾನೆಯಾಗಿ ಬೆಳೆಯುತ್ತವೆ. ನನ್ನ ಬಾಲ್ಯದ ಈ ಶ್ರೀಮಂತಿಕೆ ನನ್ನನ್ನು ಬಹಳಷ್ಟು ಬೆಳೆಸಿದೆ. ಎಲ್ಲಾ ಮಕ್ಕಳಿಗೂ ಇಂತಹಾ ಸಂತಸದ ಸಂಪತ್ತು ದೊರೆಯಲಿ ಎಂಬ ಆಶಯದೊಂದಿಗೆ ಈ ಪ್ರವಾಸದ ಅನುಭವದ ಎರಡನೇ ಭಾಗ ಹಂಚಿಕೊಳ್ಳುತ್ತಿದ್ದೇನೆ.

ವಿಶಾಖಪಟ್ಟದಲ್ಲಿ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಸಮಯ ಉಳಿದಾಗ ಇನ್ನಷ್ಟು ನೋಡುವ ತವಕದಲ್ಲಿ ಆಯ್ಕೆಯಾದ ಸ್ಥಳವಿದು! ಆದರೆ ಇಲ್ಲಿಗೆ ಹೋಗದಿದ್ದರೆ ನಾನು ಬಹಳಷ್ಟನ್ನು ತಿಳಿಯುವ ಅವಕಾಶ ಕಳೆದುಕೊಳ್ಳುತ್ತಿದ್ದೆ. 


ಸಮುದ್ರವೆಂಬ ಶಿಲ್ಪಿ ನಿರ್ಮಿಸಿದ ಅತಿ ಅಪರೂಪದ ಶಿಲಾ ಸೇತುವೆ ಇಲ್ಲಿದೆ ಎಂಬ ಕಾರಣಕ್ಕಾಗಿ ತೋಟ್ಲಕೊಂಡದ ಸಮುದ್ರದ ದಂಡೆಗೆ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಭೇಟಿ ನೀಡಿದೆವು. 

ಸುಂದರವಾದ ಕಡಲ ತೀರದಲ್ಲಿ ಅಲೆಗಳ ಅಬ್ಬರದ ನಡುವೆ ಬಂಡೆಗಳು ಕೊರೆಯಲ್ಪಟ್ಟು ಅಪೂರ್ವವಾದ ಸಣ್ಣ ಶಿಲಾ ಸೇತುವೆ ನಿರ್ಮಾಣವಾಗಿದೆ. 

ಇಲ್ಲಿ Khondalite ಎಂಬ ವಿಧದ ಶಿಲೆಯ ಪರಿಚಯ ನನಗಾಯ್ತು. ನೀರಿನಲ್ಲಿ ಸುಲಭವಾಗಿ ಕರಗಬಲ್ಲ ಲವಣಗಳು ಹಾಗೂ ಲೋಹಗಳನ್ನು ಹೊಂದಿರುವ ಶಿಲೆಗಳಿರುವ ಈ ಕಡಲ ತೀರದಲ್ಲಿ ನೂರಾರು ವರ್ಷಗಳಿಂದ ಸಮುದ್ರದ ಅಲೆಗಳ ಹೊಡೆತಕ್ಕೆ ಸವೆತಗೊಂಡು ರಚನೆಯಾದ ಶಿಲಾ ಸೇತುವೆ ಹಾಗೂ ಕೊರಕಲುಗಳಿಂದ ಕೂಡಿದ್ದ ಸಮುದ್ರದ ದಂಡೆ ನನ್ನಂತಹಾ ಶಿಕ್ಷಕರಿಗೂ ಅತ್ಯಾಸಕ್ತಿಯ ಕಲಿಕಾ ತಾಣ! 

ನನ್ನ ಜೊತೆಯಲ್ಲಿದ್ದ ಮಗಳಿಗೆ ಶಿಲೆಗಳ ರಚನೆ, ಸವೆತ, ಶಿಲಾ ಸೇತುವೆಯ ನಿರ್ಮಾಣಗಳನ್ನು, ಕಡಲತಡಿಯಲ್ಲಿ ಕಂಡುಬರುವ ಜೀವ ವೈವಿಧ್ಯವನ್ನು ಪ್ರಕೃತಿಯ ಮಡಿಲಲ್ಲಿ ಪರಿಚಯಿಸುವಾಗ ನನ್ನ ವಿದ್ಯಾರ್ಥಿಗಳ ನೆನಪಾಯ್ತು. ಅವರನ್ನಂತೂ ಈ ದಂಡೆಗೆ ಕರೆತಂದು ಪಾಠ ಮಾಡುವುದು ದೂರದ ಮಾತು! ಹಾಗಾಗಿ ಈ ದಂಡೆಯ ಒಂದೆರಡು ಬಗೆಯ ಶಿಲೆಗಳನ್ನು ನನ್ನೊಂದಿಗೆ ತರಗತಿಗೆ ತೆಗೆದುಕೊಂಡು ಹೋಗಲು ಆಯ್ದುಕೊಂಡೆ, ಶಿಲಾ ಸವೆತದ ಸ್ಪಷ್ಟ ಮಾದರಿಗಳ ಉದಾಹರಣೆಗಾಗಿ.

ಅಲ್ಲಿಯೇ ಸಮೀಪದಲ್ಲಿದ್ದ ತೋಟ್ಲಕೊಂಡದ ಬೌದ್ಧ ವಿಹಾರದ ವೀಕ್ಷಣೆಗೆ ಹೊರಟ ನಮಗೆ ಅಚ್ಚರಿ ಕಾದಿತ್ತು! ಸಾ.ಶ.ಪೂ.2ನೇ ಶತಮಾನದಿಂದ ಸಾ.ಶ. 2 ನೇ ಶತಮಾನದ ನಡುವೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಧಾರೆಯನ್ನೆರೆದ ಈ ವಿಹಾರದ ಅವಶೇಷಗಳ ನಡುವೆ ಮಹಾಸ್ತೂಪ ಎಂಬ ಒಂದು ಸ್ತೂಪವಿದೆ. ಅಲ್ಲಿಯೇ ಸಮೀಪದಲ್ಲಿ 4 ಕೊಳಗಳಿವೆ. ಎರಡು ಕೊಳಗಳಲ್ಲಿ ಆ ಬೆಟ್ಟದ ತುದಿಯಲ್ಲಿದ್ದರೂ ಅಷ್ಟು ಬಿಸಿಲಿನ ಶಾಖವಿದ್ದರೂ ಖಾಲಿಯಾಗದ ಶುದ್ಧ ಜಲವಿತ್ತು! ಆ ಕಾಲದ ಜಲ ಸಂರಕ್ಷಣಾ ತಂತ್ರಜ್ಞಾನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? 

ವಿದ್ಯಾರ್ಥಿಗಳ ವಾಸ್ತವ್ಯಕ್ಕಾಗಿ ರಚಿಸಲ್ಪಟ್ಟ ಹಲವು ಕೊಠಡಿಗಳ ಅವಶೇಷಗಳನ್ನು ನೋಡುವಾಗ ಅವುಗಳ ರಚನೆಗೆ ಬಳಸಿದ್ದ ಆ ಕಾಲದ ಇಟ್ಟಿಗೆಗಳ ಗಾತ್ರ ಹಾಗೂ ಅಳತೆ ಹಾಗೂ ಅವುಗಳ ಜೋಡಣೆಯ ಕ್ರಮ ಮನಸೆಳೆಯಿತು. ಅರೇ! ಇಟ್ಟಿಗೆಗಳಲ್ಲಿ ಏನಿದೆ? ಎನ್ನಿಸಬಹುದಾದರೂ ಸಾವಿರಾರು ವರ್ಷಗಳ ಹಿಂದಿನ ಇಟ್ಟಿಗೆಗಳನ್ನು, ಅವುಗಳ ಜೋಡಣೆಯ ತಂತ್ರಜ್ಞಾನವನ್ನು ನೋಡುವುದೂ ನನ್ನಂತಹಾ ಇತಿಹಾಸ ಪ್ರಿಯರಿಗೆ ಆಸಕ್ತಿಯ ವಿಚಾರವೇ! ಸಾವಿರಾರು ವರ್ಷಗಳ ಗಾಳಿ- ಮಳೆಗಳನ್ನೆದುರಿಸಿ ಕರಗದೇ, ಕದಲದೇ ನಿಂತ ಈ ಇಟ್ಟಿಗೆಗಳನ್ನು ನೋಡುವಾಗ ಭಾರತೀಯರ ಪ್ರಾಚೀನ ಜ್ಞಾನ ಸಂಸ್ಕೃತಿಯ ಬಗೆಗೆ ಹೆಮ್ಮೆಯಾಯ್ತು. (ಪೂರ್ವ ಕರಾವಳಿಯಲ್ಲಿನ ಮಳೆ ನಮ್ಮಲ್ಲಿ ಬರುವ ಮಳೆಗೆ ಹೋಲಿಸಿದರೆ ಕಡಿಮೆ. ಆದರೆ, ಪ್ರತಿ ವರ್ಷವೂ ಅಲ್ಲಿ ಚಂಡಮಾರುತದ ದಾಳಿಯ ಪರಿಣಾಮ ಸಣ್ಣದಲ್ಲವಲ್ಲ!)


ವಿದ್ಯಾರ್ಥಿಗಳ ಪಾಠ- ಪ್ರವಚನ- ಚರ್ಚೆ ನಡೆಯುತ್ತಿದ್ದ ವಿಶಾಲ ಪ್ರಾಂಗಣವೂ ಸೇರಿದಂತೆ ಬೌದ್ಧ ವಿಹಾರದ ಸ್ಪಷ್ಟ ಚಿತ್ರಣ ನಮಗೆ ಲಭ್ಯವಾಯಿತು. ಜೊತೆಗೆ ಈ ಸ್ಥಳ ಬೌದ್ಧರಿಗೆ ಪವಿತ್ರವಾದ ಲುಂಬಿನಿ, ಖುಷೀನಗರ, ಸಾರಾನಾಥ ಗಳಂತೆ 83.3 ಪೂರ್ವ ರೇಖಾಂಶದ ಮೇಲಿರುವ ಸ್ಥಳ!

(ಚೈತ್ಯಾಲಯದ ಅವಶೇಷ)

ಶಾತವಾಹನರ ಕಾಲದಲ್ಲಿ ವ್ಯಾಪಾರ ಕೇಂದ್ರವಾಗಿದ್ದ ಈ ಸ್ಥಳದಿಂದ ಪ್ರಾಚೀನ ರೋಮನ್ ಸಾಮ್ರಾಜ್ಯದ ಜೊತೆಗೆ ವ್ಯಾಪಾರ ನಡೆಯುತ್ತಿತ್ತು! ವ್ಯಾಪಾರಿಗಳ ಆಶ್ರಯದಲ್ಲಿ ಬೆಳೆದ ಈ ವಿಹಾರವು ಶ್ರೀಲಂಕಾ ಹಾಗೂ ಭಾರತದ ಪೂರ್ವಕ್ಕಿರುವ ದೇಶಗಳಿಗೆ ಬೌದ್ಧಮತ ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸಮುದ್ರದ ದಂಡೆಯಲ್ಲಿರುವ ಬೆಟ್ಟದಮೇಲಿನ ಈ ಸ್ತೂಪದ ಬೆಳಕು ನಾವಿಕರಿಗೆ ದೀಪಸ್ತಂಭದಂತೆ ಕಾರ್ಯ ನಿರ್ವಹಿಸುತ್ತಿತ್ತಂತೆ! 

ಕಣ್ಣಳತೆಯಲ್ಲಿ ಕಾಣುವ ವಿಶಾಲ ಸಮುದ್ರದ ನೋಟವೇ ಪ್ರೇರಣೆಯಾಗುವ ಈ ಪ್ರಶಾಂತ ಸ್ಥಳದಲ್ಲಿ ಕಲಿತ ವಿದ್ಯಾರ್ಥಿಗಳ ಪುಣ್ಯ ದೊಡ್ಡದು ಎನಿಸಿತು.
(ಮುಂದುವರಿಯುವುದು, ಭಾಗ - 3 ಮುಂದಿನ ಸಂಚಿಕೆಯಲ್ಲಿ)
........................................ ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
Mob : 9449946810
********************************************


Ads on article

Advertise in articles 1

advertising articles 2

Advertise under the article