-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 30

ನಿಷ್ಪಾಪಿ ಸಸ್ಯಗಳು : ಸಂಚಿಕೆ - 30

ನಿಷ್ಪಾಪಿ ಸಸ್ಯಗಳು : ಸಂಚಿಕೆ - 30
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ...? ತಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2024 ಜಗತ್ತಿಗೆ ನೆಮ್ಮದಿಯನ್ನು ನೀಡಲೆಂದು ಹಾರೈಸುತ್ತಾ ಇಂದು ನಾವು ನಮ್ಮ ಮನೆಯಂಗಳದಲ್ಲೆಲ್ಲಾ ಹಬ್ಬುವ ಅತ್ಯಪೂರ್ವ ಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ ಆಗದೇ?
     ಪಾಚಿ ವರ್ಣ, ತೊಟ್ಟಿನ ಬಳಿ ಹೃದಯದಾಕಾರವಿದ್ದು ರಸಪೂರ್ಣವಾದ, ತಂಪಾದ ಎಲೆಗಳನ್ನು ಹೊಂದಿರುವ ಈ ಬಳ್ಳಿ ಪುಟ್ಟ ಪುಟ್ಟ ಗಂಟುಗಳನ್ನು ಮೂಡಿಸುತ್ತಾ ಬೆಳೆಯುತ್ತದೆ. ಅಡಿಕೆ ಮತ್ತು ಸುಣ್ಣದ ಜೊತೆ ಸೇರಿ ತಾಂಬೂಲವೆನಿಸಿಕೊಳ್ಳುತ್ತದೆ, ತೆಂಗಿನ ಕಾಯಿಯೂ ಜೊತೆ ಸೇರಿದರೆ ಫಲತಾಂಬೂಲವೆನಿಸುತ್ತದೆ. ಊಟದ ಬಳಿಕ ನಮ್ಮ ಹಿರಿಯರು ತಪ್ಪದೆ ಈ ತಾಂಬೂಲ ಬಳಸುತ್ತಿದ್ದರು. ಕುಶಲೋಪಹಾರಿಗಳು ತಾಂಬೂಲ ಮೆಲ್ಲುತ್ತಲೇ ನಡೆಯುತ್ತಿದ್ದವು. ಈ ಕಾರಣದಿಂದಲೇ ಯಾವ ಪೇಸ್ಟ್ ಇಲ್ಲದೆಯೂ ಅಜ್ಜ ಅಜ್ಜಿಯರ ಹಲ್ಲುಗಳು ಗಟ್ಟಿಯಾಗಿದ್ದವೆಂದರೆ ನಂಬಲೇಬೇಕು. ಏಕೆಂದರೆ ಈ ಬಳ್ಳಿಯ ಎಲೆಗಳಿಗೆ ಹಲ್ಲುಗಳನ್ನು ಕೊಳೆಯದಂತೆ ಮಾಡುವ, ಸವೆಯದಂತೆ ರಕ್ಷಿಸುವ, ಒಸಡು ಬಲ ಪಡಿಸುವ, ಬಾಯಿಯ ದುರ್ವಾಸನೆ ಹೋಗಲಾಡಿಸುವ ಮಾತ್ರವಲ್ಲದೇ ಬಾಯಿಯ ಕ್ಯಾನ್ಸರ್ ತಡೆಯುವ ಅತ್ಯಪೂರ್ವ ಗುಣಗಳಿವೆ. ಮನೆಗೆ ಅತಿಥಿಗಳು ಬಂದರೆ ಇಂದಿನಂತೆ ತಂಪು ಪಾನೀಯ ಕೊಡುವ ಕ್ರಮವಾಗಲೀ ಚಹಾ - ಕಾಫಿಗಳ ಆತಿಥ್ಯವಿರದೆ ಸಾಂಪ್ರದಾಯಿಕವಾದ ತಾಂಬೂಲವೇ ಸತ್ಕಾರ ನೀಡುತ್ತಿತ್ತು. ಇಂತಹ ಆರೋಗ್ಯಪೂರ್ಣ ಹಾಗೂ ಗೌರವಕ್ಕೆ ಪಾತ್ರವಾದ ಈ ಎಲೆ ಯಾವುದೆಂದು ಜಾಣರಾದ ನಿಮಗೆ ಈಗಾಗಲೇ ಅರ್ಥವಾಗಿದೆಯಲ್ಲವೇ? 
      ಹ್ಹಾಂ.. ಹೌದು ಈ ಸುಂದರವಾದ ನಿಷ್ಪಾಪಿ ಬಳ್ಳಿಯ ಎಲೆಯೇ ವೀಳ್ಯದೆಲೆ. ನಮ್ಮ ಸಂಸ್ಕೃತಿ, ಆಹಾರಪದ್ಧತಿ, ಕೃಷಿಯ ಭಾಗವಾಗಿಯೂ ಹಬ್ಬಿರುವ ಈ ವೀಳ್ಯದೆಲೆಯಲ್ಲಿಂದು ಹಲವಾರು ತಳಿಗಳಿವೆ. ಒಂದಡಿಯಷ್ಟುದ್ದದ ಬಳ್ಳಿಯನ್ನು ಆಧಾರವೊಂದು ನೀಡಿ ನೆಟ್ಟರೆ ಕೆಲವೇ ದಿನಗಳಲ್ಲಿ ಪುಟಾಣಿ ಕುಡಿಗಳೊಡೆದು ಏರತೊಡಗುತ್ತವೆ. ದಕ್ಷಿಣ ಭಾರತದಲ್ಲಿ ನಡೆಯುವ ಯಾವುದೇ ದೇವತಾ ಕಾರ್ಯ, ಕೌಟುಂಬಿಕ ಶುಭಕಾರ್ಯ, ಸಾಮಾಜಿಕ ಆಚಾರ ವಿಚಾರಗಳಲ್ಲಿ ಸಾಂಸ್ಕೃತಿಕವಾಗಿ ಹಾಸುಹೊಕ್ಕಾಗಿರುವ ಈ ವೀಳ್ಯದೆಲೆಯು ಅತ್ಯುನ್ನತ ಗೌರವದ ಸ್ಥಾನ ಪಡೆದಿದೆ. ಅಡಿಕೆ ವೀಳ್ಯದೆಲೆಯನ್ನು ಬದಲಿಸಿಕೊಂಡರೆ ಎರಡು ಕುಟುಂಬಗಳ ಸ್ನೇಹ ಸಂಬಂಧವನ್ನು ಊರ್ಜಿತಗೊಳಿಸಿದಂತೆ. ಅದು ನ್ಯಾಯಾಲಯ ನೀಡುವ ಒಪ್ಪಿಗೆ ಮುದ್ರೆಗೆ ಸಮಾನ. ವೀಳ್ಯದೆಲೆಯ ಮೇಲೆ ಅಂಜನ ಹಾಕಿ ಭವಿಷ್ಯ ಹೇಳುವ ಪರಂಪರೆಯೂ ನಮ್ಮಲ್ಲಿದೆ. ನಮ್ಮ ಪೌರಾಣಿಕ ಕಥಾನಕಗಳಲ್ಲಿ ವೀಳ್ಯವನ್ನು ಪಡೆದನೆಂದರೆ ಯುದ್ಧಕ್ಕೆ ಸಿದ್ಧನಾದನೆಂದೇ ಅರ್ಥ. ತಾಂಬೂಲ ಎತ್ತಿಕೊಂಡರೆ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದನೆಂದೇ ಅರ್ಥ. ಅದು ರಣವೀಳ್ಯ ಎಂದೆನಿಸುತ್ತದೆ. ಇಂದಿಗೂ ಕ್ರಿಮಿನಲ್ ಗ್ಯಾಂಗ್ ಗಳು ಸುಪಾರಿ ಪಡೆದು ಕೆಲಸ ಮಾಡಿದರೆಂದು ಪತ್ರಿಕೆಗಳಲ್ಲಿ ಓದುತ್ತೇವೆ.
        ವೀಳ್ಯದೆಲೆಯಲ್ಲಿ 'ತೊಟ್ಟು' ವಿಶೇಷ ಗುಣವುಳ್ಳದ್ದಾಗಿದೆ. ಒಂದಿಂಚು ತೊಟ್ಟಿರುವ ಎಲೆಯೊಂದನ್ನು ತಟಸ್ಥವಾಗಿರುವ ನೀರಲ್ಲಿ ಹಾಕಿದರೆ ಉತ್ತರ ದಕ್ಷಿಣವಾಗಿಯೇ ನಿಲ್ಲುತ್ತದೆ. ಕಾಡಿನಲ್ಲಿ ದಾರಿ ತಪ್ಪಿದರೆ ವೀಳ್ಯದೆಲೆ ಜೊತೆಗಿದ್ದರೆ ದಾರಿ ಕಂಡು ಹಿಡಿಯಬಹುದೆಂಬ ಪ್ರತೀತಿ ಇದೆ.
        ಪೈಪರಾಸಿಯೆ ಕುಟುಂಬದ ವೀಳ್ಯದೆಲೆ ಬಳ್ಳಿಯು ಪೈಪರ್ ಬೆಟಲ್ ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಪಡೆದ ಈ ಬಳ್ಳಿ ಬಹುವಾರ್ಷಿಕ ಸಸ್ಯ. ಇದನ್ನು ಅಲಂಕಾರಕ್ಕಾಗಿಯೂ, ಬಳಕೆಗಾಗಿಯೂ ಬೆಳೆಸುತ್ತಾರೆ. ಹೆಚ್ಚು ನೆರಳನ್ನು ಬಯಸುವ ಈ ಬಳ್ಳಿಗೆ ನೀರನ್ನು ಹಾಕುತ್ತಿರಬೇಕಾಗುತ್ತದೆ. ವಾರ ವಾರ ಬಲಿತ ಎಲೆಗಳನ್ನು ಕೊಯ್ಯುತ್ತಾ ನಾಲ್ಕೈದು ತಿಂಗಳಿಗೊಮ್ಮೆ ಬಳ್ಳಿಯನ್ನು ಸವರುತ್ತಾ (ಕತ್ತರಿಸುತ್ತಾ) ಇದ್ದರೆ ರುಚಿಯಾದ ಹೊಸ ಚಿಗುರುಗಳು ಮೂಡುತ್ತವೆ. ಇಲ್ಲವಾದರೆ ಎಲೆಗಳು ಒರಟಾಗಿ ಒಗರು ರುಚಿ ನೀಡುತ್ತವೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಮಾತ್ರ ನಾರಿಲ್ಲದ, ಗರಿಗರಿಯಾದ ರುಚಿಕರ ಎಲೆಗಳು ಮೂಡುತ್ತವೆ. ಮದುವೆ, ಗೃಹ ಪ್ರವೇಶ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಮಹತ್ವ ಪಡೆಯುವ ಈ ಎಲೆಯು ಒಂದು ಕಟ್ಟಿಗೆ 100 ರುಪಾಯಿಗೆ ಮಾರಾಟವಾಗುವುದಿದೆ. ಒಂದು ಕಟ್ಟಿನಲ್ಲಿ 20 ಎಲೆಗಳ 4 "ಕವಲೆ' ಗಳಿರುತ್ತದೆ. ಇಂತಹ 24 ಸೂಡಿಗಳು (ಕಟ್ಟು) ಒಂದು ಪನ್ನಾಸ್ ಎಂದು ಕರೆಯಲ್ಪಡುತ್ತದೆ. ಕಪ್ಪು ಎಲೆಗಳ (ಇದರ ಬಳ್ಳಿ ಕಂದು ಬಣ್ಣ) ಒಂದು ಕಟ್ಟು 80 ರುಪಾಯಿಗಳನ್ನು ಪಡೆದರೆ ಹಸಿರು ಅಥವಾ ಬಿಳಿಯೆಲೆಗಳ ಕಟ್ಟು ಅಂದಾಜು 120 ರುಪಾಯಿಗೆ ಮಾರಾಟವಾಗುತ್ತದೆ. ಈ ನಿಷ್ಪಾಪಿ ಸಸ್ಯ ಕೃಷಿ ಭಾರತದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ದಶಲಕ್ಷ ಜನರಿಗೆ ಉದ್ಯೋಗವನ್ನು ನೀಡಿದ್ದು ವಾರ್ಷಿಕ 10 ಕೋಟಿಯ ವ್ಯವಹಾರ ನಡೆಸುತ್ತದೆಯೆಂದರೆ ವಿಸ್ಮಯ ವಾಗುತ್ತದೆಯಲ್ಲವೇ? ಭಾರತದಿಂದ ವಿದೇಶಗಳಿಗೆ ರಫ್ತಾಗುವ ವಸ್ತುವಾಗಿಯೂ ವೀಳ್ಯದೆಲೆ ಸ್ಥಾನ ಪಡೆದಿದೆ. ಇದೀಗ ಸಾವಯವ ವೀಳ್ಯದೆಲೆ ಚಹಾ ಪ್ರಚಾರದಲ್ಲಿದೆ. ನಿಂಬೆ, ಗುಲಾಬಿ, ಕಿತ್ತಳೆ ಹಾಗೂ ಮೂಲ ಪರಿಮಳ ಹಾಗೂ ಸ್ವಾದಗಳಲ್ಲಿ ಮಂಗಳೂರಿನ ನಿಟ್ಟೆ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ ಸತೀಶ್ ಭಂಡಾರಿ ಈ ಸಾವಯವ ವೀಳ್ಯದೆಲೆ ಚಹಾದ ಬ್ರಾಂಡ್ ಬಿಡುಗಡೆಗೊಳಿಸಿ 10 ದೇಶಗಳಿಗೆ ಕಳಿಸುವ ಮೂಲಕ ವ್ಯಾಪಾರದ ಜಾಡು ಹಿಡಿದಿರುವುನ್ನು ಕಾಣಬಹುದು.
       ವೀಳ್ಯದೆಲೆಯಿಂದ ಹಾರ ಮಾಡಲೂ ಸಾಧ್ಯ. ದೇವಿ ಹಾಗೂ ಹನುಮಂತ ದೇವರ ಇಷ್ಟದ ವಸ್ತುಗಳಲ್ಲಿ ಈ ವೀಳ್ಯದೆಲೆಯೂ ಒಂದಾಗಿದ್ದು ವೀಳ್ಯದೆಲೆಯು ಹಾರದ ರೂಪದಲ್ಲೂ ಅರ್ಪಣೆಯಾಗುತ್ತದೆ. ಧರ್ಮಸ್ಥಳ ದಲ್ಲಿ ಮಹಾನಡಾವಳಿ ನಡೆಯುವಾಗ ಸಾಂಪ್ರದಾಯಿಕವಾಗಿ ವೀಳ್ಯದೆಲೆಯ ಚಪ್ಪರವನ್ನು ಹಾಕಲಾಗುತ್ತದೆ. ಒಂದು ವೀಳ್ಯದೆಲೆ ಯನ್ನು ಇಬ್ಬರು ಹಂಚಿಕೊಳ್ಳಬೇಕಾದಾಗ ಅದನ್ನು ಉದ್ದಕ್ಕೆ ಸೀಳದೆ ಅಡ್ಡಕ್ಕೆ ತುಂಡುಮಾಡಿಕೊಳ್ಳುವ ಕ್ರಮವಿದೆ. ಜರಾಸಂಧನ ಕತೆಯ ಕಾರಣವಾಗಿರ ಬಹುದೆಂದು ಹಿರಿಯರು ಹೇಳಿದರೂ ಎಲೆಯ ನರಗಳಲ್ಲಿ ವಿಶೇಷ ಸತ್ವ ಇರುವುದರಿಂದ ಇಬ್ಬರಿಗೂ ಹಂಚಿಹೋಗಲೂ ಸಹಾಯಕವೆಂದು ತಜ್ಞರು ಅಭಿಪ್ರಾಯ ನೀಡುತ್ತಾರೆ.
         ವೀಳ್ಯದೆಲೆಯು ಸೂರ್ಯ ಕಿರಣಗಳನ್ನು ಅಧಿಕ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಹೆಚ್ಚು ಬಲವರ್ಧಕವಾಗಿ ಕೆಲಸ ನಿರ್ವಹಿಸುತ್ತದೆ. ವಿಶೇಷ ಪರಿಮಳ ಹೊಂದಿರುವ ಈ ವೀಳ್ಯದೆಲೆ ನಮ್ಮ ನರ ವ್ಯವಸ್ಥೆಯನ್ನು ವರ್ಧಿಸುತ್ತದೆ. ಇದರ ರಸ ಸೇವನೆಯಿಂದ ಮನುಷ್ಯನ ಚಟುವಟಿಕೆಯ ಮಟ್ಟ ಹೆಚ್ಚಾಗುತ್ತದೆ. ವೀಳ್ಯದೆಲೆಯು ವಾತಹರ, ಉದರವಾಯುಹರ, ಉತ್ತೇಜನಕಾರಿ ಮಾತ್ರವಲ್ಲದೆ ಸೋಂಕು ಗಳನ್ನು ತಡೆಗಟ್ಟುವ ಗುಣ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೆ ಧ್ವನಿಯನ್ನು ಸರಿಪಡಿಸುತ್ತದೆ. ಬ್ಯಾಕ್ಟೀರಿಯಾ, ವೈರಸ್ ಗಳನ್ನು ನಾಶಪಡಿಸಬಲ್ಲ ವೀಳ್ಯದೆಲೆ ಕೀಲು ನೋವು, ಉರಿಯೂತ, ಮಲಬದ್ದತೆ, ನಂಜು ನಿರೋಧಕ, ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ನಿದ್ರಾಹೀನತೆ ಹಾಗೂ ಕೂದಲುದುರುವಿಕೆಗೆ ಸಾಂಪ್ರದಾಯಿಕ ಔಷಧಿಯಾಗಿದೆ. ಮಕ್ಕಳಲ್ಲಿ ಕೆಮ್ಮು, ಅಜೀರ್ಣ, ಉಸಿರಾಟದ ಸಮಸ್ಯೆಗಳುಂಟಾದಾಗ ಉಪಶಮನ ಗೊಳಿಸುತ್ತದೆ. ವಿಟಮಿನ್ A, B, C ಗಳಲ್ಲದೆ ಕಬ್ಬಿಣ, ಪೊಟಾಸಿಯಂ, ಕ್ಯಾಲ್ಸಿಯಂ, ಕ್ಯಾರೊಟಿನ್ ಗಳು ಸಮೃದ್ಧವಾಗಿವೆ. ಮಧುಮೇಹ ನಿಯಂತ್ರಣ, ಖಿನ್ನತೆ, ಅಸ್ತಮಾ, ಹೆಚ್ಚುವರಿ ತೂಕ ಕಳೆದುಕೊಳ್ಳಲು, ನೋವು, ಗಾಯ, ಚರ್ಮದ ಸಮಸ್ಯೆ, ತೀವ್ರ ತಲೆನೋವಿಗೆ ಶಮನಕಾರಿಯಾಗಿದೆ.
       ಕೆಮ್ಮು ಕಫಕ್ಕೆ ಒಂದು ವೀಳ್ಯದೆಲೆಯ ಜೊತೆ ಒಂದೆರಡು ಹರಳು ಕಲ್ಲುಪ್ಪು , ಎರಡು ಕರಿಮೆಣಸು ಜಗಿದು ತಿಂದರೆ ಶಾಂತವಾಗುವುದು. ಇದರ ಬೇರನ್ನು ಜಗಿದು ತಿಂದರೆ ಸ್ವರವು ಮೃದುವಾಗುವುದು. ಒಣಕೆಮ್ಮಿಗೆ ಜೇನಿನ ಜೊತೆ ಬಳಕೆ ಜನಪ್ರಿಯ ಔಷಧಿಯಾಗಿದೆ.
     ಭಾರತ ಮಾತ್ರವಲ್ಲದೆ ಏಷ್ಯಾದುದ್ದಕ್ಕೂ ವೀಳ್ಯದೆಲೆಯನ್ನು ಔಷಧಿಯಾಗಿ ಹಾಗೂ ಆಹಾರದ ಭಾಗವಾಗಿ ಬಳಸುವ ರೂಢಿಯಿದೆ. ಇಷ್ಟೊಂದು ಪ್ರಯೋಜನಕಾರಿ ಬಳ್ಳಿಯನ್ನು ಬೆಳೆಯಾಗಿ ಬೆಳೆಯುವ ರೈತರಿಗೆ ಚಂಡಮಾರುತಗಳು ಅಪಾರ ನಷ್ಟವನ್ನುಂಟುಮಾಡುತ್ತಿರುವುದರಿಂದ ಈ ಬೆಳೆಯನ್ನು ಕೈಬಿಟ್ಟು ಇತರ ಉದ್ಯೋಗಗಳತ್ತ ಮನ ಮಾಡುವಂತಾಗಿದೆ. ಅನಿಯಮಿತ ಮಳೆ, ಅಸಾಧಾರಣ ತಾಪಮಾನಗಳ ಏರಿಳಿತದಂತಹ ಹವಾಮಾನ ವೈಪರೀತ್ಯಗಳಿಂದ ವೀಳ್ಯದೆಲೆಯ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮಗಳಾಗಿವೆ. ರೋಗಗಳು ಹೆಚ್ಚಾಗಿವೆ.
     ಮಕ್ಕಳೇ... ಪುಟ್ಟ ಗುಬ್ಬಚ್ಚಿಯಂತೆ ಮನೆ ಮನೆಯಲ್ಲಿ ಬೆಳೆಸುತ್ತಿದ್ದ ವೀಳ್ಯದೆಲೆ ಇಂದು ನಮ್ಮಿಂದ ದೂರವಾಗಿದೆ. ತಿಂದರೆ ಕೇಡಾಗುವುದೆಂಬ ಗುಮ್ಮ ಕೂರಿಸಲಾಗಿದೆ. ಹೊಗೆಸೊಪ್ಪು ಮಾತ್ರವೇ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದಲ್ಲದೆ ವೀಳ್ಯದೆಲೆಯಲ್ಲ. ನಮ್ಮ ನಮ್ಮ ಮನೆಯಲ್ಲಿ ಸಣ್ಣ ಡಬ್ಬಿ, ಚಟ್ಟಿಗಳಲ್ಲೂ ಈ ಮುಗ್ದ ಸಸ್ಯವನ್ನು ಬೆಳೆಸಿಕೊಳ್ಳಬಹುದು. ಹಿತ್ತಲಲ್ಲಿದ್ದ ಯಾವುದೇ ಮರಕ್ಕೂ ಲಾಲಿತ್ಯದಿಂದ ಹಬ್ಬಿಸಬಹುದು. ದಿನವೂ ನೀವದರ ಹಬ್ಬುವ ಕುಡಿಯೊಡನೆ ಮಾತನಾಡಬಹುದು ಅಲ್ಲವೇ...?
      ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
............................ ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************
Ads on article

Advertise in articles 1

advertising articles 2

Advertise under the article