-->
ಹೃದಯದ ಮಾತು : ಸಂಚಿಕೆ - 23

ಹೃದಯದ ಮಾತು : ಸಂಚಿಕೆ - 23

ಹೃದಯದ ಮಾತು : ಸಂಚಿಕೆ - 23
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


    ನಾನು ಎಸ್ ಎಸ್ ಎಲ್ ಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಒಂದೂವರೆ ಗಂಟೆಯ ಅವಧಿ ನನಗಿತ್ತು. ಶಾಲೆಯ ಶಿಕ್ಷಕರು ವರ್ಷಪೂರ್ತಿ ಪಾಠ ಮಾಡಿರುತ್ತಾರೆ. ತರಬೇತಿ ಹೆಸರಲ್ಲಿ ವರ್ಷದ ಪಾಠವನ್ನು ಗಂಟೆಯೊಂದರಲ್ಲಿ ಮುಗಿಸಲಾಗದು. ತರಬೇತುದಾರ ಮಾಯಾಜಾಲ ಸೃಷ್ಟಿಸಿ ಫಲಿತಾಂಶ ಬದಲಿಸಲಾರ. ಹಾಗೇನಾದರೂ ಸಂಭವವಿದ್ದಿದ್ದರೆ ಅಂತಹ ತರಬೇತುದಾರರನ್ನು ಎಲ್ಲಾ ಶಾಲೆಗಳಿಗೆ ಒಂದೊಂದು ಗಂಟೆ ಕಳುಹಿಸಿ ಮಾಯೆಯನ್ನು ಸೃಷ್ಟಿಸಬಹುದಿತ್ತು. ಆದರೆ ಅವೆಲ್ಲಾ ಟುಸ್ಸ್ ಪಠಾಕಿಗಳಷ್ಟೆ!

ನಾನು ಬಹಳಷ್ಟು ಇಂತಹ ತರಬೇತಿಗಳಲ್ಲಿ ಭಾಗವಹಿಸಿದವ. ಕೆಲವೊಮ್ಮೆ ಅರ್ಧಗಂಟೆ ಮಾತ್ರ ಲಭಿಸಿದ್ದೂ ಇದೆ. ಕಾರ್ಯಕ್ರಮ ಉದ್ಘಾಟನೆಯಂತೂ ಇದ್ದೇ ಇರುತ್ತದೆ. ತರಬೇತಿಯ ಬಹಳಷ್ಟು ಸಮಯ ಅಲ್ಲೇ ಸಾಯುತ್ತದೆ. ಆದರೂ ಅದು ಅನಿವಾರ್ಯ. ಅಲ್ಲಿ ಅಂದಿನ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಬಹಳಷ್ಟು ಹೊಗಳುವಿಕೆ. ನನಗೂ ಈ ಅನುಭವ ಸಾಕಷ್ಟಿದೆ. ಮುಜುಗರವಾದರೂ ಮೌನವಾಗಿರಲೇಬೇಕು.

ನಾನು ಸಮಯ ದೊರೆತಾಗ, ಆಹ್ವಾನವಿದ್ದರೆ ತರಬೇತಿಯಲ್ಲಿ ಭಾಗವಹಿಸುತ್ತೇನೆ. ಗಂಟೆಯೊಂದು ಅಥವಾ ಹೆಚ್ಚೆಂದರೆ ದಿನವೊಂದರಲ್ಲಿ ಅದ್ಭುತ ಸಾಧಿಸಲಾಗದು. ಅಂತಹ ಸಿದ್ಧಿ ಲಭಿಸಿದವನೂ ನಾನಲ್ಲ. ಹಾಗೇನಾದರೂ ಸಾಧ್ಯವಿದ್ದಿದ್ದರೆ ನನ್ನ ಶಾಲೆಯಲ್ಲಿ ಅದು ಮೊದಲಿಗೆ ಸಾಧ್ಯವಿರುತ್ತಿತ್ತು. ಆದರೆ ನನ್ನ ಯೋಚನಾ ಲಹರಿ ಭಿನ್ನ. ನಾನು ತರಬೇತಿಯಲ್ಲಿ ಮಕ್ಕಳ ಹೃದಯ ತಟ್ಟುವ ಪ್ರಯತ್ನವಷ್ಟೇ ಮಾಡುತ್ತೇನೆ. ಗಣಿತ ನನ್ನ ವಿಷಯ. ಹದಿನೈದು ಪಾಠ, ಎಂಬತ್ತು ಅಂಕಗಳು... ಹೀಗೇ ಎಲ್ಲವೂ ಮಕ್ಕಳಿಗೆ ಗೊತ್ತು. ನನ್ನ ಕೆಲಸ ಅವರನ್ನು ಪಾಠದೊಳಗೆ ತರುವುದಷ್ಟೇ. ಗಣಿತ ಕ್ಲಿಷ್ಟವಲ್ಲ ಎಂಬ ಭಾವನೆ ಮೂಡಿಸುವುದು. ಅದಕ್ಕಾಗಿ ಕೆಲವು ಉದಾಹರಣೆ ಮಾತ್ರ ನೀಡಿ ಮುಂದಿನ ಕೆಲಸ ಮಕ್ಕಳಿಗೇ ಒಪ್ಪಿಸುವುದು. 

ನನ್ನ ತರಬೇತಿ ಕೇವಲ ಗಣಿತಕಷ್ಟೇ ಸೀಮಿತವಲ್ಲ. ಅಷ್ಟಕ್ಕೇ ಸೀಮಿತಗೊಂಡರೆ ಆ ಮಕ್ಕಳಿಗೆ ಗಣಿತ ಶಿಕ್ಷಕರೇಕೆ?... ಮಕ್ಕಳು ಭಾವನಾತ್ಮಕವಾಗಿ ವಿಷಯದೊಳಗೆ ಪ್ರವೇಶಿಸಬೇಕು. ಪ್ರತಿದಿನ ತಮ್ಮ ಶಿಕ್ಷಕರು ಹೇಳುವುದು ಸತ್ಯ ಎಂಬ ಅರಿವು ಮೂಡಿಸಲು ತರಬೇತಿ ಶಕ್ತವಾಗಬೇಕು. ತರಬೇತಿ ಮುಗಿದಾಗ ತನ್ನ ಶಿಕ್ಷಕರೇ ಅವರಿಗೆ ಹೀರೋಗಳಾಗಿ ಕಾಣಬೇಕು. ಹಾಗಾದಲ್ಲಿ ಮುಂದಿನ ದಿನದಿಂದ ಮಕ್ಕಳ ಕಲಿಯುವಿಕೆ ಮೌಲ್ಯ ಹಾಗೂ ಅರ್ಥಪೂರ್ಣವಾಗಿರುತ್ತದೆ. 

ಮಕ್ಕಳೆಲ್ಲಾ ನಮ್ಮ ಮಾತುಗಳನ್ನು ಕೇಳಲೇಬೇಕು ಎಂಬ ಭಾವನೆ ನನಗಿಲ್ಲ. ಆ ಭಾವನೆ ತರಬೇತುದಾರನಿಗೆ ಇರಲೂ ಬಾರದು. ಆದರೆ ಮಕ್ಕಳು ನಮ್ಮ ಮಾತನ್ನು ಕೇಳಲೇ ಬೇಕೆಂಬ ಸನ್ನಿವೇಶವನ್ನು ಸೃಷ್ಟಿಸಲು ಶಕ್ತನಾಗಬೇಕು. ತರಬೇತಿಯ ಕೊನೆಯು ಭಾವನಾತ್ಮಕವಾಗಿರಬೇಕು. ತಾವು ಏನನ್ನು ಕಳೆದುಕೊಂಡಿದ್ದೇವೆ ಇಲ್ಲವೇ ಯಾವ ತಪ್ಪನ್ನು ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ಮಕ್ಕಳಿಗೆ ಮೂಡಿಸಲು ತರಬೇತಿಯಿಂದ ಸಾಧ್ಯವಾಗಬೇಕು. ತರಬೇತಿಯ ಅವಧಿ ಮುಗಿದದ್ದು ಮಕ್ಕಳ ಅರಿವಿಗೆ ಬಾರದೇ ಹೋದರೆ ಅದುವೇ ಸಫಲತೆಯ ಸಂಕೇತ. ಮಕ್ಕಳು ಮತ್ತೊಮ್ಮೆ ಬನ್ನಿ ಎಂಬ ಬೇಡಿಕೆ ಯಶಸ್ವಿ ತರಬೇತಿನ ಲಕ್ಷಣ.

ಮಕ್ಕಳು ಕೆಲವೊಮ್ಮೆ ವಿಚಿತ್ರವಾಗಿರುವುದರ ವಿಶ್ಲೇಷಣೆ ಅಗತ್ಯ. ಅವನಲ್ಲಿರುವ ನೆಗೆಟಿವ್ ಅಂಶಗಳನ್ನು ಎತ್ತಿ ತೋರಿಸುವುದು ಶಿಕ್ಷಕನ ಕೆಲಸವಲ್ಲ. ಅದಕ್ಕೆ ಸಮಾಜದಲ್ಲಿ ನೂರಾರು ಮಂದಿ ಉಚಿತವಾಗಿ ದೊರೆಯಬಲ್ಲರು. ಆತನಲ್ಲಿ ಧನಾತ್ಮಕ ಚಿಂತನೆ ಬೆಳೆಸಲು ಶಿಕ್ಷಕನಿಂದ ಮಾತ್ರ ಸಾಧ್ಯ. ಶಿಕ್ಷಕ ಇಲ್ಲವೇ ತರಬೇತುದಾರ ತನ್ನ ವಿಷಯದ ಚೌಕಟ್ಟಿಗೆ ಮಾತ್ರ ಸೀಮಿತಗೊಳ್ಳಬಾರದು. ಶಿಕ್ಷಕ ಎಂದಿಗೂ ಕಣ್ಣಿಗೆ ಪರದೆ ಕಟ್ಟಿದವನಾಗಬಾರದು. ಆತನ ಸ್ಪರ್ಶ ಇಲ್ಲವೇ ಒಂದು ಅಪ್ಪುಗೆ ಮಕ್ಕಳಲ್ಲಿ ಅಗೋಚರ ಶಕ್ತಿ ಸಂಚಯಗೊಂಡ ಅನುಭವ ಮೂಡಿಸಬೇಕು. ಒಬ್ಬ ಉತ್ತಮ ಶಿಕ್ಷಕನ ಒಂದು ಸ್ಪರ್ಶ ಮಕ್ಕಳ ಬದುಕಿನ ದಿಕ್ಕನ್ನು ಬದಲಾಯಿಬಲ್ಲದು.
........................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************





ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************





Ads on article

Advertise in articles 1

advertising articles 2

Advertise under the article