ಹೃದಯದ ಮಾತು : ಸಂಚಿಕೆ - 22
Thursday, December 21, 2023
Edit
ಹೃದಯದ ಮಾತು : ಸಂಚಿಕೆ - 22
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಆತ ಹತ್ತು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯಾಗಿದ್ದ. ಕಲಿಕಾ ನ್ಯೂನ್ಯತೆಯ ಹುಡುಗನಾತ. ಹತ್ತನೇ ತರಗತಿಯಲ್ಲಿ 99+1= 910 ಎಂದು ಬರೆದು ನನ್ನನ್ನೇ ಚಕಿತಗೊಳಿಸಿದ್ದ. ಕಲಿಕೆಯ ವಿಷಯ ಪಕ್ಕಕ್ಕಿಟ್ಟರೆ ಆತನೊಬ್ಬ ಅಪ್ಪಟ ಚಿನ್ನ. ಗುರುಗಳ ಬಗ್ಗೆ ಅಪಾರ ಗೌರವ. ಬೈದಾಗ ಇಲ್ಲವೇ ಪೆಟ್ಟು ಕೊಟ್ಟಾಗ, ಒಂದಷ್ಟು ಅಳುತ್ತಿದ್ದ. ಸ್ವಲ್ಪ ಹೊತ್ತಲ್ಲೇ ಸುಧಾರಿಸಿಕೊಳ್ಳುತ್ತಿದ್ದ. ಅದೆಷ್ಟೋ ಬುದ್ಧಿವಂತ ವಿದ್ಯಾರ್ಥಿಗಳ ಮಧ್ಯೆ ಆತ ವಿಶೇಷವಾಗಿ ಗುರುತಿಸಿಕೊಂಡಿದ್ದ. ಒಂದು ದಿನವೂ ಶಾಲೆ ತಪ್ಪಿಸದ ಆತನ ಕಂಡರೆ ನನಗೆ ವಿಶೇಷ ಪ್ರೀತಿ. ಅದು ಆತನ ನಿಷ್ಠೆಗಾಗಿ.
ಅದೊಂದು ದಿನ ನನ್ನ ಬಳಿ ಬಂದು ಅಳತೊಡಗಿದ. "ನನಗೆ ಗಣಿತ, ವಿಜ್ಞಾನ ಅರ್ಥವೇ ಆಗೋದಿಲ್ಲ. ನಾನು ಪಾಸು ಆಗಲು ಸಾಧ್ಯವೇ ಇಲ್ಲ ಸರ್" ಎಂದು ಹೇಳುತ್ತಾ ಮತ್ತಷ್ಟು ಅತ್ತ. ನಾನು ಆತನನ್ನು ಸಮಾಧಾನ ಪಡಿಸಿದೆ. "ನೀನು ಪಾಸಾಗಬಹುದು ಇಲ್ಲವೇ ಫೇಲಾಗಬಹುದು. ಅದು ಮುಖ್ಯವಲ್ಲ. ಆದರೆ ನಿನ್ನ ವಿನಯ, ವಿನಮ್ರತೆ, ಗುರುಗಳ ಬಗ್ಗೆ ನಿನಗಿರುವ ವಿಧೇಯತೆ... ಈ ಎಲ್ಲಾ ಗುಣಗಳು ನಿನ್ನನ್ನು ಬದುಕಿನಲ್ಲಿ ಗೆಲ್ಲಿಸುತ್ತದೆ. ಮುಂದೊಂದು ದಿನ ನೀನು ಹೆಮ್ಮೆ ಪಡುವ ರೀತಿಯಲ್ಲಿ ಬೆಳೆಯುತ್ತಿ." ಎಂದು ಹರಸಿದೆ. ಆತನ ಮುಖಭಾವ ಆತ ಮುಂದೊಂದು ದಿನ ಗೆದ್ದೇ ಗೆಲ್ಲುತ್ತಾನೆ ಎಂಬ ಭರವಸೆ ನನ್ನಲ್ಲಿ ಮೂಡಿಸಿತ್ತು.
ಹತ್ತನೇ ತರಗತಿ ಅಂತಿಮ ಪರೀಕ್ಷೆ ಮುಗಿದು, ಫಲಿತಾಂಶವೂ ಪ್ರಕಟಗೊಂಡಿತ್ತು. ಆತನ ಫಲಿತಾಂಶ ನೋಡುವ ಕುತೂಹಲ ನನಗಿತ್ತು. ಹೌದು ಆತ ನಿರೀಕ್ಷೆಯಂತೆ ಐದು ವಿಷಯದಲ್ಲಿ ಫೇಲಾಗಿದ್ದ. ಆದರೂ ನನ್ನ ಬಳಿಗೆ ಬಂದು ಅತ್ತಿದ್ದ. ಸಮಾಧಾನ ಪಡಿಸಿ ಕಳುಹಿಸಿದ್ದೆ.
ಸುಮಾರು ಐದು ವರ್ಷಗಳ ಬಳಿಕ ಆತ ಮತ್ತೆ ಶಾಲೆಯಲ್ಲಿ ಪ್ರತ್ಯಕ್ಷ. ಎಸ್.ಎಸ್.ಎಲ್.ಸಿ. ಪರೀಕ್ಷೆ ಕಟ್ಟಲು ಮತ್ತೆ ಬಂದಿದ್ದ. ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದ. ಕಂಪನಿಗೆ ಈತನ ನಿಷ್ಠೆ, ಸಮಯ ಪ್ರಜ್ಞೆ ತುಂಬಾನೆ ಹಿಡಿಸಿತ್ತು. ಆತ ಅಲ್ಲಿ ಎಲ್ಲರ ಮೆಚ್ಚುಗೆ ಪಡೆದಿದ್ದ. ಕಂಪೆನಿಯಿಂದ ವಿದೇಶದಲ್ಲಿ ಆತನಿಗೆ ಒಳ್ಳೆಯ ಕೆಲಸವೊಂದಕ್ಕೆ ಆಫರ್ ಬಂದಿತ್ತು. ಆದರೆ ಅದಕ್ಕೆ ಎಸ್.ಎಸ್.ಎಲ್.ಸಿ. ಕಡ್ಡಾಯವಿತ್ತು. ಈತ ಎಸ್.ಎಸ್.ಎಲ್.ಸಿ. ಫೇಲಾದ ವಿಷಯ ಕೇಳಿ ಅವರಿಗೆ ನಿರಾಸೆಯಾಗಿತ್ತು. ಆದರೂ ಅವನಿಗೊಂದು ಆಫರ್ ಇತ್ತು. ಆರು ತಿಂಗಳೊಳಗೆ ಪರೀಕ್ಷೆ ಪಾಸು ಮಾಡಿದರೆ ಅದೇ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದರು. ಆಸೆ ಹೊತ್ತು ಪರೀಕ್ಷೆ ಕಟ್ಟಲು ಮತ್ತೆ ಬಂದಿದ್ದ.
ಆರೂ ವಿಷಯಗಳಲ್ಲಿ ಮರು ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆಯಂತೂ ಕಟ್ಟಿದ. ಪಾಸಾಗುವ ಎಳ್ಳಷ್ಟೂ ಭರವಸೆ ಆತನಿಗಿರಲಿಲ್ಲ. ಆ ಬಗ್ಗೆ ಆತನಿಗೆ ವಿಷಾದವಿತ್ತು. ಆದರೆ ನನಗೆ ಈಗಲೂ ಅವನ ಮೇಲೆ ಭರವಸೆ. ಆತನ ಮೇಲೆ ಎಲ್ಲಾ ಗುರುಗಳ ಆಶೀರ್ವಾದವಿತ್ತು. "ಗುರು ಭಕ್ತಿ ಇದ್ದವ ಜೀವನದಲ್ಲಿ ಸೋಲಲಾರ" ಎಂಬ ಬಗ್ಗೆ ಅಚಲ ನಂಬಿಕೆ ನನ್ನಲ್ಲಿತ್ತು.
ಪರೀಕ್ಷೆ ನಡೆದೇ ಹೋಯಿತು. ಅದು 2020ರ ಕೋವಿಡ್ ವರ್ಷ. ಆತ ಪಾಸಾಗುವ ಆಸೆ ಸಂಪೂರ್ಣ ತೊರೆದಿದ್ದ. ಪಾಸಾಗಿದ್ದರೆ ಕಂಪೆನಿಯು ಆತನಿಗೆ ಒಂದು ಲಕ್ಷ ವೇತನದ ಕೆಲಸ ಕತಾರ್ ನಲ್ಲಿ ಕೊಡುವುದರಲ್ಲಿತ್ತು. ಆದರೆ ಅದಕ್ಕೂ ನಸೀಬು ಬೇಕಲ್ವಾ?. ಹೌದು ನಸೀಬಿನಲ್ಲಿ ಆತ ಹಿಂದೆ ಬೀಳಲಿಲ್ಲ. ಆ ವರ್ಷ ಪರೀಕ್ಷೆ ಬರೆದ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿತ್ತು. ಕೋವಿಡ್ ಕಾರಣದಿಂದ ಇಲಾಖೆ ತೆಗೆದುಕೊಂಡ ಆ ನಿರ್ಧಾರ ಆತನ ಅದೃಷ್ಟವನ್ನೇ ಖುಲಾಯಿಸಿತ್ತು. ಅಂದು ಆತ ಪಾಸಾಗಿದ್ದ. ಆತನ ಅದೃಷ್ಟದ ಬಾಗಿಲು ತೆರೆದಿತ್ತು.
ಕಂಪೆನಿ ಕೊಟ್ಟ ಭರವಸೆ ಈಡೇರಿಸಿದೆ. ಆತ ಇಂದು ವಿದೇಶದಲ್ಲಿ ದುಡಿಯುತ್ತಿದ್ದಾನೆ. ಲಕ್ಷ ಸಂಪಾದನೆ. ಊರಿಗೆ ಬಂದಾಗ ಕಲಿತ ಶಾಲೆಗೆ ಏನಾದರೂ ಕೊಡುವ ಭರವಸೆ ನೀಡಿದ್ದಾನೆ. ಆತ ತನ್ನ ಗುಣಗಳಿಂದ ಗೆದ್ದಿದ್ದ. ಇಂದಿಗೂ ಆ ಗುಣಗಳನ್ನೇ ಉಳಿಸಿಕೊಂಡಿದ್ದಾನೆ. ತಂದೆ ತಾಯಿಯ ಹೆಮ್ಮೆಯ ಮಗ ಎನಿಸಿಕೊಂಡಿದ್ದಾನೆ. ಗುರುಗಳ ಆಶೀರ್ವಾದ ಸದಾ ಹೊತ್ತು ತಿರುಗುತ್ತಿದ್ದಾನೆ. ಇಂದು ಅದೆಷ್ಟೋ ವಿದ್ಯಾರ್ಥಿಗಳಿಗೆ ಆತ ಆದರ್ಶ. ಗುರುವಿನ ಗುಲಾಮನಾದರೆ ಬದುಕು ಅದೆಷ್ಟು ಸುಂದರವಾಗುತ್ತದೆ ಎಂಬುವುದಕ್ಕೆ ಆತನೊಬ್ಬ ಜ್ವಲಂತ ಉದಾಹರಣೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************