ನನ್ನ ಪ್ರವಾಸದ ಅನುಭವ
Sunday, November 19, 2023
Edit
ಮಕ್ಕಳ ಲೇಖನ : ನನ್ನ ಪ್ರವಾಸದ ಅನುಭವ
ರಚನೆ: ಅಭಿನವ ಪಿ ಎನ್
ಐದನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್
ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಮುಂಡೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಇಲ್ಲಿಂದ ನವಂಬರ್ 9ರಂದು ಬೆಂಗಳೂರು ನೆಹರು ತಾರಾಲಯಕ್ಕೆ ಪ್ರವಾಸ ಹೋಗಲಿಕ್ಕಿದೆ, ಇದು ಉಚಿತವಾದ ಪ್ರವಾಸ. ಇದರ ಖರ್ಚನ್ನು ನೆಹರು ತಾರಾಲಯದವರು ಭರಿಸುತ್ತಾರೆ ಎಂದಾಗ ನನಗೂ ಪ್ರವಾಸ ಹೋಗಬೇಕೆಂಬ ಆಸೆ ಉಂಟಾಯಿತು. ಆದರೆ ಕೇವಲ ಐವತ್ತು ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ ಎಂದಾಗ ನನಗೆ ಈ ಅವಕಾಶ ದೊರೆಯುತ್ತದೋ ಇಲ್ಲವೋ ಎಂಬ ಆತಂಕ ಉಂಟಾಯಿತು.
ಮರುದಿನ ಐದನೇ ತರಗತಿಯ ವಿದ್ಯಾರ್ಥಿಗಳಿಗೂ ಪ್ರವಾಸ ಹೋಗಲು ಅವಕಾಶ ಇದೆ ಎಂದಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಬಹಳ ಸಂತೋಷದಿಂದ ಮನೆಗೆ ಬಂದೆನು. ಮನೆಯಲ್ಲಿ ಪ್ರವಾಸ ಹೋಗಲು ಅನುಮತಿಯನ್ನು ಕೇಳಿದೆನು. ತುಂಬಾ ಹಠ ಹಿಡಿದು ಮನೆಯವರನ್ನು ಒಪ್ಪಿಸಿದೆನು.
ಒಪ್ಪಿಗೆ ಪತ್ರವನ್ನು ತಂದು ಶಿಕ್ಷಕರಲ್ಲಿ ನೀಡಿದೆನು. ಅಂದಿನಿಂದ ಪ್ರವಾಸದ ತಯಾರಿ ನಡೆಯಿತು. ನಮ್ಮ ಅದೃಷ್ಟವೋ ಎನ್ನುವಂತೆ ನಮಗೆ ಇದರ ಜೊತೆಗೆ ಬೇಲೂರು ಮತ್ತು ಹಳೇಬೀಡಿಗೂ ಹೋಗಲಿದೆ ಎಂದು ನಮ್ಮ ಮುಖ್ಯ ಶಿಕ್ಷಕರಾದ ವಿಜಯ ಮಿಸ್ ಹೇಳಿದಾಗ ನಮಗಾದ ಖುಷಿ ಅಷ್ಟಿಷ್ಟಲ್ಲ. ಪ್ರವಾಸದ ದಿನ ಬಂದೇ ಬಿಟ್ಟಿತು.
ಅಂದು ಗುರುವಾರ, ಎಂದಿನಂತೆ ಬೆಳಗ್ಗೆ ಶಾಲೆಗೆ ಹೋದೆನು. ಶಾಲೆಯಲ್ಲಿ ಪ್ರವಾಸದ ಮಕ್ಕಳನ್ನು ಐದು ತಂಡಗಳನ್ನಾಗಿ ಮಾಡಿ, ಐದು ಶಿಕ್ಷಕರು ಆ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಒಂದು ತಂಡಕ್ಕೆ ವಿಜಯ ಮಿಸ್, ಇನ್ನೊಂದು ತಂಡಕ್ಕೆ ವನಿತಾ ಮಿಸ್, ಮತ್ತೊಂದು ತಂಡಕ್ಕೆ ರಾಮಚಂದ್ರ ಸರ್, ಮಗದೊಂದು ತಂಡಕ್ಕೆ ರವೀಂದ್ರ ಶಾಸ್ತ್ರಿ ಸರ್, ಹಾಗೆಯೇ ಇನ್ನೊಂದು ತಂಡಕ್ಕೆ ಬಶೀರ್ ಸರ್ ಮುಖ್ಯಸ್ಥರಾಗಿದ್ದರು. ನಾನು ರಾಮಚಂದ್ರ ಸರ್ ರವರ ತಂಡದಲ್ಲಿದ್ದೆನು. ಸಂಜೆ ಮೂರು ಮೂವತ್ತಕ್ಕೆ ನಮ್ಮನ್ನು ಮನೆಗೆ ಹೋಗಲು ತಿಳಿಸಿದರು. 9 ಗಂಟೆಗೆ ಸರಿಯಾಗಿ ಎಲ್ಲರೂ ಪ್ರವಾಸ ಹೋಗಲು ಶಾಲೆಗೆ ಬರಬೇಕೆಂದು ಸೂಚಿಸಿದರು. ಹಾಗಾಗಿ ಮನೆಗೆ ಬಂದು ಪ್ರವಾಸ ಹೋಗಲು ಬೇಕಾದ ವಸ್ತುಗಳನ್ನು ಜೋಡಿಸಿಟ್ಟುಕೊಂಡೆನು. ನನಗೆ ಬೇಕಾದ ಬಟ್ಟೆ, ಬ್ರಷ್, ಸೋಪು ಬಾಚಣಿಕೆ, ಸ್ವೆಟ್ಟರ್, ನೀರು, ಬೆಡ್ ಶೀಟ್ ಎಲ್ಲವನ್ನು ಬ್ಯಾಗಿನಲ್ಲಿ ತುಂಬಿಸಿ ಪ್ರವಾಸಕ್ಕೆ ರೆಡಿಯಾದೆನು. ರಾತ್ರಿ 9:00 ಗಂಟೆಗೆ ಸರಿಯಾಗಿ ಲಗೇಜ್ ಹಿಡಿದುಕೊಂಡು ಅಪ್ಪನ ಜೊತೆಗೆ ಶಾಲೆ ಕಡೆಗೆ ಹೊರಟೆನು. ನನ್ನ ಜೊತೆಗೆ ನನ್ನನ್ನು ಬಿಟ್ಟು ಬರಲು ನನ್ನ ತಮ್ಮನೂ ಶಾಲೆ ತನಕ ಬಂದನು. ನನ್ನನ್ನು ಬಸ್ಸಿನಲ್ಲಿ ಕುಳ್ಳಿರಿಸಿ ಅಪ್ಪ ಮತ್ತು ತಮ್ಮ ಮನೆಗೆ ಹೊರಟು ಹೋದರು.
ನಂತರ ನಾವೆಲ್ಲರೂ ಬಸ್ಸಿನಲ್ಲಿ ಕುಳಿತುಕೊಂಡ ನಂತರ ಭಗವಂತನನ್ನು ಪ್ರಾರ್ಥಿಸಿ ಅಲ್ಲಿಂದ ಬಸ್ಸಿನಲ್ಲಿ ಹೊರಟೆವು. ಮಾರನೆಯ ದಿನ ಅಂದರೆ ಶುಕ್ರವಾರ ಬೆಳಗ್ಗೆ ಬೆಂಗಳೂರು ತಲುಪಿದೆವು. ಅಲ್ಲಿಂದ ಶಿಕ್ಷಕರ ಸದನಕ್ಕೆ ಹೋಗಿ ಹಲ್ಲುಜ್ಜಿ ಸ್ನಾನ ಮಾಡಿ ರೆಡಿಯಾದೆವು. ನಮ್ಮ ಶಿಕ್ಷಕರು ನಮಗಾಗಿ ಶಾಲೆಯಿಂದಲೇ ಆಹಾರವನ್ನು ತಯಾರಿಸಿ ತಂದಿದ್ದರು. ಶುಚಿ, ರುಚಿಯಾದ ಆಹಾರವನ್ನು ಸೇವಿಸಿ ಅಲ್ಲಿಂದ ನೆಹರು ತಾರಾಲಯಕ್ಕೆ ಹೊರಟೆವು. ಎಲ್ಲರಿಗೂ ಸಂಭ್ರಮವೋ ಸಂಭ್ರಮ. ಬಹು ದಿನಗಳಿಂದ ಕನಸು ಕಾಣುತ್ತಿದ್ದ ಸ್ಥಳ ನಮ್ಮ ಕಣ್ಣೆದುರಿಗೇ ಇದ್ದಿತು. ಇಲ್ಲಿ ನಮಗೆ ಹಲವು ಪ್ರಯೋಗದ ಜೊತೆಗೆ ವಿಜ್ಞಾನದ ಪಾಠವನ್ನು ಮಾಡಿದರು. ಎಲ್ಲಾ ವಿಷಯಗಳನ್ನು ತಿಳಿದುಕೊಂಡು ನಮ್ಮ ಪುಸ್ತಕದಲ್ಲಿ ಬರೆದುಕೊಂಡೆವು. ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದ ರವಿ ಸರ್ ಇವರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಂದಾಗಿ ನಮಗೆಲ್ಲರಿಗೂ ಈ ಅವಕಾಶ ದೊರೆಯಿತು. ಅವರು ನಮ್ಮನ್ನು ಬಹಳ ಚೆನ್ನಾಗಿ ಸತ್ಕರಿಸಿದರು.
ನಂತರ ನಮಗೆ ತಿಂಡಿಯನ್ನು ಕೊಟ್ಟು ನಮ್ಮನ್ನು ತಾರಾಲಯದ ಒಳಗೆ ಕರೆದುಕೊಂಡು ಹೋದರು. ಅಲ್ಲಿ ತುಂಬಾ ವಿಷಯಗಳನ್ನು ತಿಳಿದುಕೊಂಡೆವು. ಆಕಾಶದ ಬಗ್ಗೆ 2D ಫಿಲಂ ನೋಡಿದೆವು. ಮೊದಲೇ ಆಕಾಶ ವೀಕ್ಷಣೆಯಲ್ಲಿ ಆಸಕ್ತಿ ಇದ್ದ ನನಗೆ ನನ್ನ ಆಸಕ್ತಿ ಇನ್ನು ಹೆಚ್ಚಾಯಿತು. ಇಡೀ ದಿನ ನೋಡಿದರೂ ಮುಗಿಯದಷ್ಟು ವಿಷಯಗಳು ಅಲ್ಲಿದ್ದವು. ಅಲ್ಲಿಂದ ಬರಲು ಮನಸ್ಸೇ ಬರಲಿಲ್ಲ. ಸಂಜೆ ಆದದ್ದೇ ಗೊತ್ತೇ ಆಗಲಿಲ್ಲ. ನಮಗೆ ಅವಕಾಶ ಒದಗಿಸಿದ ರವಿ ಸರ್ ತಂಡಕ್ಕೆ ಧನ್ಯವಾದಗಳನ್ನು ಹೇಳಿ ಅಲ್ಲಿಂದ ಹೊರಟೆವು.
ಅಂದು ರಾತ್ರಿ ಆದಿಚುಂಚನಗಿರಿ ಮಠದಲ್ಲಿ ವಿಶ್ರಾಂತಿಯನ್ನು ಪಡೆದೆವು. ಗೆಳೆಯರ ಜೊತೆಗಿದ್ದ ಆ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಬಹಳ ಹೊತ್ತಿನವರೆಗೆ ನಿದ್ದೆಯೇ ಬರಲಿಲ್ಲ. ನಂತರ ಆ ದಿನದ ನೆನಪುಗಳನ್ನೆಲ್ಲ ಮೇಲುಕು ಹಾಕುತ್ತಾ ನಿದ್ದೆ ಮಾಡಿದೆವು. ಬೆಳಗ್ಗೆ ಎದ್ದು ಹಲ್ಲುಜ್ಜಿ ಸ್ನಾನ ಮಾಡಿ ತಿಂಡಿಯನ್ನು ತಿಂದು ಅಲ್ಲಿಂದ ಹೊರಟೆವು. ಬಸ್ಸಿನಲ್ಲಿ ಹಾಡು ಹಾಡುತ್ತಾ ಕುಣಿಯುತ್ತ ಸಂತೋಷದಿಂದ ಹಳೆಬೀಡಿಗೆ ತಲುಪಿದೆವು. ಅಲ್ಲಿನ ಶಿಲ್ಪ ಕಲೆಯನ್ನು ನೋಡಿ ಕಣ್ ತುಂಬಿಕೊಂಡೆವು.
ಇದು ನನ್ನ ಎರಡನೇ ಸಲದ ಭೇಟಿಯಾಗಿತ್ತು. ಹಾಗಾಗಿ ಕಳೆದ ಬಾರಿಯ ನೆನಪುಗಳನ್ನು ಮತ್ತಷ್ಟು ಗಟ್ಟಿಯಾಗಿಸಿಕೊಂಡೆನು. ನಂತರ ಅಲ್ಲಿಂದ ಬೇಲೂರಿಗೆ ಹೋದೆವು. ಇದೂ ನನಗೆ ಎರಡನೇ ಬಾರಿಯ ಭೇಟಿಯಾದರೂ ಇನ್ನೂ ನೋಡಬೇಕೆಂಬ ಕುತೂಹಲ ಉಂಟಾಗುತ್ತಿತ್ತು. ಆಮೇಲೆ ಅಲ್ಲಿ ಕೆಲವೊಂದು ವಸ್ತುಗಳನ್ನು ಖರೀದಿಸಿ ಬಸ್ಸನ್ನು ಹತ್ತಿ ಮನೆ ಕಡೆ ಹೊರಟೆವು. ಬಸ್ಸಿನಲ್ಲಿ ಪ್ರವಾಸದ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಮನೆಗೆ ಶನಿವಾರ ರಾತ್ರಿ 9:00 ಗಂಟೆಗೆ ತಲುಪಿದೆನು.
ವಂದನೆಗಳೊಂದಿಗೆ
ಐದನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್
ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ಮುಂಡೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************