-->
ಜಗಲಿ ಕಟ್ಟೆ : ಸಂಚಿಕೆ - 26

ಜಗಲಿ ಕಟ್ಟೆ : ಸಂಚಿಕೆ - 26

ಜಗಲಿ ಕಟ್ಟೆ : ಸಂಚಿಕೆ - 26
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



       ಜಗಲಿಯ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಕಥಾಸಿರಿ ಹಾಗೂ ಕವನ ಸಿರಿ ಪ್ರಶಸ್ತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸಂಭ್ರಮದಿಂದ ಆಚರಿಸಿದ್ದೇವೆ. ಹೌದು ನವೆಂಬರ್ 14ನೇ ದಿನಕ್ಕೆ ಮಕ್ಕಳ ಜಗಲಿಯ ಉದಯವಾಗಿ ಮೂರು ಸಂವತ್ಸರಗಳು ತುಂಬಿತು. ಒಂದು ಕ್ಷಣ ಕನಸೋ ಎಂಬಂತೆ ಭಾಸವಾಗುತ್ತಿದೆ. 
      ಕೊರೊನ ಕಾಲದ ಪರಿಸ್ಥಿತಿ ಒಂದೊಳ್ಳೆಯ ಸಾಧ್ಯತೆಗೆ ಪ್ರೇರಣೆ ಆಯ್ತು ಎಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿ ಮಕ್ಕಳ ಜಗಲಿಯ ಹುಟ್ಟಿಗೆ ಸಹಕರಿಸಿದ ಮಕ್ಕಳ ಜಗಲಿಯ ಬಳಗದ ಪ್ರತಿಯೊಬ್ಬರನ್ನು ಸ್ಮರಿಸುತ್ತಿದ್ದೇನೆ. ಸಮಾನ ಮನಸ್ಕ ಮಿತ್ರರೆಲ್ಲರ ನಿಸ್ವಾರ್ಥ ಪ್ರೋತ್ಸಾಹ ಬೆಂಬಲದಿಂದ ಮಕ್ಕಳ ಜಗಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 
        ಅತ್ಯಂತ ವೇಗವಾಗಿ ಸಾವಿರಾರು ಮಕ್ಕಳನ್ನು ತಲುಪಿದ ಮಕ್ಕಳ ಜಗಲಿಯನ್ನು ಬೆಳೆಸಿದವರೇ ನೀವುಗಳು. ಒಂದು ಅವಶ್ಯಕ ಕಾರಣವನ್ನಿಟ್ಟುಕೊಂಡು ಬೆಳೆದ ಜಗಲಿ.... ಕಲೆ ಹಾಗೂ ಸಾಹಿತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಮಕ್ಕಳಿಗೆ ಆಸರೆಯಾಗಿ ನಿಂತಿದೆ. ಮುಂದೊಂದು ದಿನ ಆ ಮಕ್ಕಳು ಈ ನಾಡಿಗೆ ಶ್ರೇಷ್ಠರಾದರೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.
      ನಾವು ಆಯೋಜಿಸುತ್ತಿರುವ ಮೂರನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಮಾಹಿತಿ ಕೆಲವೇ ದಿನಗಳಲ್ಲಿ ನಿಮ್ಮನ್ನು ತಲುಪಲಿದೆ. ಮೊನ್ನೆ ನಡೆದ ಮಕ್ಕಳ ಜಗಲಿ ಕಥಾಸಿರಿ ಮತ್ತು ಕವನಸಿರಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ಇಲ್ಲಿ ಪ್ರಶಸ್ತಿಯನ್ನು ಹಾಗೂ ಮೆಚ್ಚುಗೆ ಬಹುಮಾನವನ್ನು ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಮುಖ್ಯವಾಗಿ ಭಾಗವಹಿಸಿರುವ ಹಾಗೂ ಪ್ರಶಸ್ತಿಯನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಬರೆಯಲು ಪ್ರೇರಣೆ ನೀಡಿರುವ ಎಲ್ಲಾ ಪೋಷಕರಿಗೆ ಹಾಗೂ ಶಿಕ್ಷಕರಿಗೆ ನನ್ನ ಪ್ರೀತಿಯ ವಂದನೆಗಳು. 
      ಈಗಾಗಲೇ ಹೇಳಿದ ಹಾಗೆ ಸ್ಪರ್ಧೆ ಎನ್ನುವುದು ಒಬ್ಬರ ಪ್ರತಿಭೆಯ ಮಾನದಂಡವಾಗುವುದಿಲ್ಲ. ಅವರ ನಿರಂತರ ಪರಿಶ್ರಮ, ಭಾಗವಹಿಸುವಿಕೆ ಅವರನ್ನು ಎತ್ತರಕ್ಕೆ ಏರಿಸಬಲ್ಲುದು. ಹಾಗಾಗಿ ಮಕ್ಕಳಿಗೆ ಹೇಳುವ ಕಿವಿಮಾತು.... ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಭಾಗವಹಿಸಿ... ಆದರೆ ಭಾಗವಹಿಸುವಿಕೆ ಎನ್ನುವುದು ಸ್ಪರ್ಧೆಗೆ ಮಾತ್ರ ಮೀಸಲಾಗದಿರಲಿ. ಮಕ್ಕಳ ಜಗಲಿಯ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಿ. ನೀವು ರಚಿಸಿರುವ ಚಿತ್ರಗಳು, ಬರೆಯುವ ಕಥೆ, ಕವನ, ಲೇಖನಗಳನ್ನು ನಮಗೆ ಕಳುಹಿಸಿಕೊಡಿ. ನಿರಂತರ ಚಿತ್ರ ರಚಿಸುವ ಹಾಗೂ ಬರೆಯುವ ಹವ್ಯಾಸವನ್ನು ಬೆಳೆಸಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಈ ಜಗಲಿ ನಿಮ್ಮ ಮನೆ ಮಕ್ಕಳ ಜಗಲಿ.... ನಮಸ್ಕಾರ


ಕಳೆದ ಸಂಚಿಕೆಯ ಜಗಲಿಕಟ್ಟೆ - 25 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು.. ಕವಿತಾ ಶ್ರೀನಿವಾಸ ದೈಪಲ , ಗಣೇಶ ಐತಾಳ್ , ಶ್ರೀಮತಿ ವಿಜಯ ಶಿಕ್ಷಕಿ, ಶಾಂತಿ ಸಲ್ದಾನ ಮುಖ್ಯಶಿಕ್ಷಕಿ , ಸಲೀಂ ಪಾಷಾ, ಶಿಕ್ಷಕರು ಬಿಜಾಪುರ, ಬಿಂದುರಾಣಿ ಲಮಾಣಿ, ಹಾವೇರಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ತೇ,
     ಮೂರು ವರ್ಷದ ಹಿಂದೆ ನವೆಂಬರ್ 14 ರಂದು ಮಕ್ಕಳ ಜಗಲಿ ಉದ್ಘಾಟನಾ ಸಂಭ್ರಮದಲ್ಲಿ ಸಾಕ್ಷಿಯಾಗಿದ್ದವರಲ್ಲಿ ನಾನು ಒಬ್ಬ. ಅತ್ಯಂತ ಸರಳ ಸಮಾರಂಭದಲ್ಲಿ ಉತ್ತಮ ಆನ್ ಲೈನ್ ಪತ್ರಿಕೆ ಹುಟ್ಟಿಕೊಂಡು 3ನೇ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸುತ್ತಿದೆ. ಬಹಳ ಎತ್ತರಕ್ಕೆ ಬೆಳೆದು ನಿಂತ ಜಗಲಿಯಲ್ಲಿ ಬರವಣಿಗೆಯ ಬಗ್ಗೆ ಅಷ್ಟೊಂದು ಗೊತ್ತಿರದ ನನ್ನನ್ನು ಏನಾದರೂ ಬರೆಯಲು ಪ್ರೇರೇಪಿಸಿದ ಸ್ನೇಹಿತರಾದ ತಾರಾನಾಥ ಕೈರಂಗಳರವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತಾ ಜಗಲಿಯ 3ನೇ ಹುಟ್ಟುಹಬ್ಬಕ್ಕೆ ಶುಭ ಕೋರುತ್ತೇನೆ.
     ಮೊತ್ತ ಮೊದಲನೆಯದಾಗಿ ಜಗಲಿ ಏರ್ಪಡಿಸಿದ ಕಥಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಧನ್ಯವಾದಗಳು. ಹಾಗೆಯೇ ಜಗಲಿಯಲ್ಲಿ ಏರ್ಪಡಿಸಿದ ಈ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. 
      ಜಗತ್ತು ಕೆಟ್ಟಿದೆ ಎಂದು ನಾವೆಲ್ಲ ಕೆಲವೊಮ್ಮೆ ಹೇಳುವುದಿದೆ ಆದರೆ ಜಗತ್ತು ಕೆಟ್ಟಿಲ್ಲ ಬದಲಾಗಿ ಅದನ್ನು ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿದೆ ಎಂಬುದನ್ನು ರವೀಂದ್ರನಾಥ ಠಾಗೋರ್ ರವರ ಉದಾಹರಣೆಯೊಂದಿಗೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ತಮ್ಮ ಜೀವನ ಸಂಭ್ರಮ ಸಂಚಿಕೆಯಲ್ಲಿ ಬಹಳ ಮಾರ್ಮಿಕವಾಗಿ ತಿಳಿಸಿದ್ದಾರೆ.
     ಆಲಿಸುವಿಕೆಯಲ್ಲಿರುವ ಹಲವು ಬಗೆಗಳು ಮನಸ್ಸಿನ ಏಕಾಗ್ರತೆಗೆ ಆಲಿಸುವಿಕೆ ಹೇಗೆ ಕಾರಣವಾಗುವುದು.. ಶ್ರವಣ ಹೇಗಿರಬೇಕು? ಎನ್ನುವುದರ ಕುರಿತಾದ ವಿಸ್ತಾರವಾದ ಮಾಹಿತಿಯನ್ನು ತಮ್ಮ ಶ್ರವಣ ಲೇಖನದಲ್ಲಿ ರಮೇಶ್ ಸರ್ ರವರು ಸೊಗಸಾಗಿ ತಿಳಿಸಿದ್ದಾರೆ.
     ದೀಪಾವಳಿ ಹಬ್ಬದಲ್ಲಿರುವ ವಿಶೇಷತೆ ಹಾಗೂ ವೈಜ್ಞಾನಿಕತೆಗೆ ಇರುವ ಸಂಬಂಧನನ್ನು ತಿಳಿಸುವ ದಿವಾಕರ ಸರ್ ರವರ ಲೇಖನ ಸೊಗಸಾಗಿತ್ತು.
    ಅರವಿಂದ ಸರ್ ರವರ ನೀಲಿ ಬಾಲದ ಕಳ್ಳಪೀರ ಹಕ್ಕಿಯ ಪರಿಚಯ ವಿಸ್ತೃತವಾಗಿ ಸೊಗಸಾಗಿತ್ತು. ಹಕ್ಕಿಯ ಛಾಯಾಚಿತ್ರ ಮತ್ತಷ್ಟು ಮುದ ನೀಡಿತು.
      ನಿಷ್ಪಾಪಿ ಸಸ್ಯಗಳ ಈ ಸಲದ ಸಂಚಿಕೆಯಲ್ಲಿ ಬಹುಪಯೋಗಿ ಕುದನೆ ಗಿಡದ ಉಪಯುಕ್ತ ಮಾಹಿತಿಯನ್ನು ಸವಿಸ್ತಾರವಾಗಿ ನೀಡಲಾಗಿದೆ. ಪ್ರಕೃತಿಯಲ್ಲಿನ ಹೆಚ್ಚಿನ ಎಲ್ಲಾ ಸಸ್ಯಗಳು ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತ. ಇಂತಹ ಅನೇಕ ಸಸ್ಯಗಳ ರಕ್ಷಣೆಗಾಗಿ ಜಾಗೃತಿಯನ್ನುಂಟು ಮಾಡುವ ವಿಜಯಾ ಮೇಡಂರವರ ಲೇಖನ ಸರಣಿಗೆ ನನ್ನ ನಮನಗಳು.
     ಕುಡಿತದ ಚಟ ಹತ್ತಿಕೊಂಡಾಗ ಆ ಕುಟುಂಬದ ಸ್ಥಿತಿ ಎಷ್ಟು ಶೋಚನೀಯವಾಗಿರುತ್ತದೆ ಹಾಗೂ ಅದನ್ನೆಲ್ಲ ಧೈರ್ಯವಾಗಿ ಎದುರಿಸಿದ ಕುಟುಂಬದ ಯಜಮಾನನ ಮಗಳು ವೀಣಾಳ ಗಟ್ಟಿತನವನ್ನು ಮೆಚ್ಚಲೇಬೇಕು. ಯಾಕೂಬ್ ಸರ್ ರವರಿಂದ ಉತ್ತಮ ಸಂಚಿಕೆ.
    ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ ನಮಗೆ ಕಥೆ ಹೇಳುವ ರೀತಿಯನ್ನು ನೆನಪಿಸುವ ಬೇವಿನ ಮರದ ಕೆಳಗೆ ಎಂಬ ಪುಸ್ತಕ ಪರಿಚಯ ಚೆನ್ನಾಗಿತ್ತು.
      ಶಿಕ್ಷಕರ ಡೈರಿಯಲ್ಲಿ ಮತ್ತೆ ಪ್ರೇಮನಾಥ ಮರ್ಣೆಯವರಿಂದ ಉತ್ತಮ ಸಂದೇಶದ ಅನುಭವದ ಲೇಖನ. ಕಡಿಮೆ ಅಂಕ ಗಳಿಸಿ ಪಾಸಾದ ವಿದ್ಯಾರ್ಥಿಯಲ್ಲಿ ಕೂಡ ಏನಾದರೂ ಒಂದು ಕೌಶಲವಿದ್ದೇ ಇರುತ್ತದೆ ಎನ್ನು ವುದನ್ನು ಪೋಷಕರಿಗೆ ಮನವರಿಕೆ ಮಾಡುವ ಮೂಲಕ ಆ ವಿದ್ಯಾರ್ಥಿಯು ತನ್ನ ಭವಿಷ್ಯವನ್ನು ರೂಪಿಸುವಲ್ಲಿ ನೀಡಿದ ಸಹಕಾರ ಅದ್ಭುತ.
     ಮಕ್ಕಳ ಚಿತ್ರಗಳ ಸಂಚಿಕೆಯಲ್ಲಿ ಎಲ್ಲಾ ಚಿತ್ರಗಳು ಸೊಗಸಾಗಿವೆ. ಚಿತ್ರ ರಚಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಕುತೂಹಲಕರವಾಗಿತ್ತು.
     4ನೇ ವರ್ಷದ ಹೊಸ್ತಿಲಲ್ಲಿರುವ ಜಗಲಿ ಇನ್ನಷ್ಟು ಪುಟಾಣಿ ಪ್ರತಿಭೆಗಳಿಗೆ ಅವಕಾಶ ನೀಡಿ ಮತ್ತಷ್ಟು ಬೆಳಗಲಿ ಎಂಬ ಸದಾಶಯದೊಂದಿಗೆ ಎಲ್ಲರಿಗೂ ನನ್ನ ಪ್ರೀತಿಯ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************




     ಎಲ್ಲರಿಗೂ ನಮಸ್ಕಾರಗಳು.... ದಸರಾ, ದೀಪಾವಳಿ ಹಬ್ಬದ ಆಚರಣೆಯ ಸಡಗರವೆಲ್ಲ ಮುಗಿದು ಇದೀಗ ದಿನಗಳು ಯಥಾಸ್ಥಿತಿಯಲ್ಲಿಯೇ ನಡೆಯುತ್ತಿದೆ. ಬಿಡುವು ಮಾಡಿಕೊಂಡು ಮಕ್ಕಳ ಜಗಲಿಯ ಒಂದೊಂದೇ ಲೇಖನಗಳನ್ನು ಓದೋಣವೆಂದು ಕುಳಿತ ನಾನು ಈ ವಾರದ ಮೊದಲ ಅಂಕಣ ಜಗಲಿ ಕಟ್ಟೆಯ - ಓದುಗರ ಮಾತುಕತೆಯಿಂದಲೇ (ಸಂಚಿಕೆ - 25) ಓದಲು ಆರಂಭಿಸಿದೆ. ಬಹುತೇಕ ಓದುಗರು ವ್ಯಕ್ತಪಡಿಸಿದ್ದ ಮನ ಮಿಡಿಯುವ, ಹಾರೈಕೆಯ, ಮುಂದೇನಾಯ್ತು ಎಂಬ ಕಾತರದ ಬರಹಗಳು ನನಗೆ ವಿಶೇಷವಾಗಿ ಕಂಡವು. ಅವರೆಲ್ಲರ ಬರಹಗಳಲ್ಲಿದ್ದ ಮಿಡಿತ "ಬದುಕು ಕಟ್ಟಲು ಹೊರಟವಳು...." ಎಂಬ ಶೀರ್ಷಿಕೆಯಡಿಯಲ್ಲಿ ಯಾಕೂಬ್ ಸರ್ ರವರ ಲೇಖನ ಮಾಲೆಯಲ್ಲಿ ಮೂಡಿ ಬಂದ 'ಶಾಂತ' ಎಂಬ ಹೆಣ್ಣಿನ ಜೀವನಗಾಥೆಯ ಮೇಲೆಯೇ ಎಂಬುವುದು ತಿಳಿಯಿತು. ತಕ್ಷಣವೇ ಆ ಲೇಖನವನ್ನು ಓದಬೇಕೆನ್ನುವ ಅವಸರದಲ್ಲಿ ಧುಮುಕಿದ ನಾನು ಒಂದಿನಿತು ಕ್ಷಣ ಮೌನದಲ್ಲೇ ಮಗ್ನಳಾದಂತೆ ಭಾಸವಾದದ್ದು ಮಾತ್ರ ಸುಳ್ಳಲ್ಲ.
        ನಾನು ಈ ವಾರದ ಜಗಲಿಕಟ್ಟೆಗೆ ನನ್ನ ಅನಿಸಿಕೆಯ ಪ್ರತೀ ಪದವನ್ನೂ ಬದುಕು ಕಟ್ಟಲು ಹೊರಟ 'ಶಾಂತ' ಳಿಗಾಗಿಯೇ ಬರೆಯ ಹೊರಟಿದ್ದೇನೆ. ಕಾರಣ 'ಶಾಂತಾ' ಳ ಜೀವನದಂತೆಯೇ ಒಮ್ಮೆ ಬರಡಾಗಿ, ಮತ್ತೆ ಚಿಗುರಲು ಹೊರಟ ಎಷ್ಟೋ ನಾರಿಮಣಿಯರಿಗೆ ಮಾದರಿಯಾದ ಬರಹವಿದು. ಬದುಕನ್ನು ಗೆಲ್ಲಲೇಬೇಕೆನ್ನುವ ಆಶಾವಾದಿಗಳಿಗೆ ದಾರಿದೀಪವಾಗಿರುವ ಚಿತ್ರಣವದು. ಯಾರೇ ನಮ್ಮನ್ನು ಕಡೆಗಣಿಸಿದರೂ ಕೇವಲವಾಗಿ ಕಂಡರೂ "ನನ್ನ ನಡೆ ಗೆಲವಿನ ಕಡೆ" ಎಂಬ ಅಚಲ ನಿರ್ಧಾರವನ್ನು ಕೈಗೊಂಡರೆ 'ಶಾಂತಾ' ಳಂತೆಯೇ ಪ್ರಶಾಂತವಾಗಿ ಗುರಿಯತ್ತ ಹೆಜ್ಜೆ ಹಾಕಬಹುದೇನೋ? ಆದರೆ ಈ ಹಂತದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಎದುರಿಸುವ ಗಟ್ಟಿತನ ಇರಲೇಬೇಕು. ಬಹುಶಃ ಸಮಯ -ಸಂದರ್ಭ ಎಲ್ಲವನ್ನೂ ಕಲಿಸುತ್ತದೆ.
          ನನ್ನ ಜೀವನದ ದಾರಿಗೂ ಒಂದು ತೆರನಾಗಿ ಹೋಲಿಕೆಯಂತಿರುವ ಈ ಲೇಖನದ ಪಾತ್ರಧಾರಿ ಬಲು ಬೇಗನೇ ಹತ್ತಿರವಾದಂತಾದರು. ಶ್ರದ್ಧೆ ಬಿಡದ ಛಲಗಾತಿಗೆ ಜಯ ಲಭಿಸುವಂತಾಗಲಿ. ದೂಷಿತರೆಲ್ಲರ ಸಮ್ಮಖದಲ್ಲೇ ಸನ್ಮಾನವಾಗಲಿ. ವಯಸ್ಸು ಸಾಧನೆಗೆ ಅಡ್ಡಿಯಾಗಲಾರದು ಎಂಬ ಸತ್ಯವನ್ನು ನಾಡಿಗೆ ಸಾರಲು ಹೊರಟ ಅದ್ಭುತ ಪ್ರತಿಭೆಗೆ ಶುಭಕೋರುವುದಷ್ಟೇ ನಮ್ಮ ಮುಂದಿರುವ ಕೆಲಸ. ಶುಭಾಶಯಗಳೊಂದಿಗೆ..........
.......................................... ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ 
ಕೊಣಾಲು ಗ್ರಾಮ ಮತ್ತು ಅಂಚೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಮತ್ತು ವಿದ್ಯಾ ಗಣೇಶ್ ಚಾಮೆತ್ತಮೂಲೆ,.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

Ads on article

Advertise in articles 1

advertising articles 2

Advertise under the article