ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 36
Saturday, November 25, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 36
ಲೇಖಕರು : ರಾಜೇಶ್ ನೆಲ್ಯಾಡಿ
ಶಿಕ್ಷಕರು
ಸ ಹಿ ಪ್ರಾ ಶಾಲೆ ಪೆರಿಂಜೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 93797 93722
ನಮ್ಮ ಶಾಲೆಯಲ್ಲಿ ಗೃಹಾಧಾರಿತ ಹುಡುಗಿಯೊಬ್ಬಳು ದಾಖಲಾಗಿದ್ದಾಳೆ. ಇಲಾಖೆ ಎಷ್ಟೇ ಸಮನ್ವಯ ಶಿಕ್ಷಣ ಎಂದು ಹೇಳಿದರೂ ಗೃಹಾಧಾರಿತ ಮಕ್ಕಳನ್ನು ಕೇವಲ ಶಾಲೆಗೆ ದಾಖಲು ಮಾಡಿಕೊಳ್ಳುವುದಷ್ಟೇ ನಾವು ಮಾಡಬಹುದಾದ ಕಾರ್ಯ. ಜೊತೆಗೆ ಇಲಾಖೆಯಿಂದ ದೊರಕುವ ಒಂದಷ್ಟು ಸವಲತ್ತುಗಳನ್ನು ಆ ಮಕ್ಕಳಿಗೆ ತಲುಪಿಸಬಹುದಷ್ಟೇ. ಬೇರೆಲ್ಲಾ ವಿಚಾರಗಳಿಗೆ ಅವರಿಗಾಗಿ ನಿಯೋಜನೆಗೊಂಡ ನುರಿತ ವೈದ್ಯಾಧಿಕಾರಿಗಳು ಸೂಕ್ತ ಥೆರಪಿಗಳು, ಜೀವನ ಕೌಶಲಗಳನ್ನು ಹೇಳಿಕೊಡಬಲ್ಲವರು.
ಒಂದು ದಿನ ಹೀಗೆ ಶಾಲೆಗೆ ಭೇಟಿ ನೀಡಿದ ಆ ಬಾಲಕಿಯ ಹೆತ್ತಮ್ಮ, ಇವರ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಆ ಮಗುವನ್ನು ಪ್ರತಿವಾರ ತಪ್ಪದೇ ಫಿಜಿಯೋಥೆರಪಿ ಚಿಕಿತ್ಸೆಗೆ ಕರೆದೊಯ್ಯುತ್ತಾರೆ. ಇಲಾಖೆಯಿಂದ ಬರಬೇಕಾದ ಸವಲತ್ತುಗಳ ಬಗ್ಗೆ ಬಹಳ ಶ್ರಮ, ಮುತುವರ್ಜಿ ವಹಿಸಿ ಅವಳಿಗೆ ದಕ್ಕುವಂತೆ ಹೋರಾಡುತ್ತಾರೆ. ಅದಕ್ಕಿಂತಲೂ ಮುಖ್ಯವಾಗಿ ಆ ಮಗು ತನಗೆ ಹೊರೆ ಎಂಬಂತೆ ಸಣ್ಣ ಯೋಚನೆಯನ್ನೂ ಮಾಡಿದವರಲ್ಲ ಆ ಮಹಾತಾಯಿ. ಅದಕ್ಕಾಗಿ ಅವರ ಬಗ್ಗೆ ವಿಶೇಷ ಗೌರವ ನನಗೆ. ಆ ತಾಯಿ ಆ ದಿನ ಶಾಲೆಗೆ ಬಂದವರೇ ಹೇಗಿದ್ದಾಳೆ ಪಾಪು ಎಂದು ಕೇಳುವಾಗ ಸ್ವಲ್ಪ ಚೇತರಿಸುತ್ತಿದ್ದಾಳೆ, ಆದರೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಅವಳಿಗೊಂದು ಕ್ಲಿನಿಕಲ್ ಬೆಡ್ ಕೊಡಿಸುವಂತೆ ಡಾಕ್ಟರ್ ಸೂಚಿಸಿರುತ್ತಾರೆ ಎಂದರು. ನಮಗೆಲ್ಲ ಅದನ್ನು ಕೊಡಿಸಲು ಅಷ್ಟು ಹಣ ಹೊಂದಿಸುವುದು ಹೇಗೆ ಸಾಧ್ಯ ಮಾಸ್ಟ್ರೇ ಎಂದಾಗ ಬಹಳ ಸಂಕಟವಾಯಿತು. ಈ ಕುರಿತು ಸಮಾನ ಮನಸ್ಕ ಗೆಳೆಯರಲ್ಲಿ ವಿಷಯವನ್ನು ಹಂಚಿಕೊಂಡಾಗ ದಾನಿಗಳೊಬ್ಬರು ಅವಳಿಗೆ ಕ್ಲಿನಿಕಲ್ ಬೆಡ್ ಒದಗಿಸಿಕೊಡುವ ಭರವಸೆ ನೀಡಿದರು. ಮತ್ತೊಬ್ಬರು ಅದರ ಪೂರ್ತಿ ಸಾಗಾಟದ ಜವಾಬ್ದಾರಿ ವಹಿಸಿಕೊಂಡರು. ಅಂತೂ ಇಂತೂ ನಾವೆಲ್ಲ ಗೆಳೆಯರು ಸೇರಿಕೊಂಡು ತುರ್ತಾಗಿ ಅವಳ ಮನೆಗೆ ಬೆಡ್ ಸಾಗಿಸಿ ಅವಳಿಗೆ ಅದನ್ನು ಹಸ್ತಾಂತರಿಸಿದಾಗ ಅವಳ ಮುಖದ ಕಿರುನಗೆ ನೋಡಿ ಆ ಶ್ರಮ ನಮಗೆ ಸಾರ್ಥಕವೆನಿಸಿತು. ಅವಳ ನೆಮ್ಮದಿಯ ನಿದ್ರೆಗೆ ಸಹಕರಿಸಿದ ತೃಪ್ತಿ ನಮ್ಮದಾಗಿತ್ತು.
ವಿಶೇಷ ಚೇತನ ಮಕ್ಕಳಿಗೆ ನಮ್ಮ ಕನಿಕರದ ಅಗತ್ಯ ಬೇಕಿಲ್ಲ, ಅಗತ್ಯವಾದ ಸಣ್ಣ ಸಹಕಾರ, ಕಾಳಜಿ, ಪ್ರೀತಿ, ಅವಕಾಶಗಳ ಅಗತ್ಯವಿದೆ ಎನ್ನುವ ಮಾತು ಅದೆಷ್ಟು ನಿಜ ಎನಿಸಿತು ಆ ದಿನ ನನಗೆ.
ಶಿಕ್ಷಕರು
ಸ ಹಿ ಪ್ರಾ ಶಾಲೆ ಪೆರಿಂಜೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 93797 93722
*******************************************