ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 35
Saturday, November 18, 2023
Edit
ಲೇಖಕರು : ಪ್ರೇಮನಾಥ್ ಮರ್ಣೆ
ಸಹಶಿಕ್ಷಕರು
ಸರಕಾರಿ ಪ್ರೌಢ ಶಾಲೆ ಮೀನಕಳಿಯ
ಬೈಕಂಪಾಡಿ , ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob : +91 99642 14605
"ಬೇಡ, ಸರಳಾಯರೇ.. ನಿಮ್ಮ ಮಗನ ಸಾಮರ್ಥ್ಯವನ್ನು ಇಷ್ಟೇ ಎಂದು ಸೀಮಿತಗೊಳಿಸದಿರಿ. ಆತನಲ್ಲಿ ಉತ್ತಮ ಸಂವಹನ ಕೌಶಲ್ಯವಿದೆ.. ಕಲ್ಲನ್ನೂ ಕರಗಿಸಿ ಮಾತನಾಡಿಸಬಲ್ಲ ಕೌಶಲ್ಯವಿದೆ. ಆತ ನೀವು ನಿರ್ಧರಿಸಿದ್ದನ್ನು ಮೀರಿ ಬೇರೇನೋ ಆಗಬಲ್ಲ. ಸ್ವಲ್ಪ ಸಮಯ ಕಾದು ನೋಡಿ" ಎಂದು ಮಗ ರಮಾನಂದನ ಜಸ್ಟ್ ಪಾಸ್ ಅಂಕವನ್ನು ಎದುರಿಟ್ಟುಕೊಂಡು ಬೆತ್ತ ಕೈಗೆತ್ತಿಕೊಳ್ಳ ಹೊರಟ ಅಪ್ಪನಿಗೆ ನಾನು ಸಲಹೆ ನೀಡಿದೆ.
ಹೌದು.... ಆತ ಎರಡು ದಿನದ ಹಿಂದೆ ಬಂದ ರಿಸಲ್ಟ್ ನ ಪ್ರಕಾರ ಪಿಯುಸಿಯಲ್ಲಿ 'ಜಸ್ಟ್ ಪಾಸ್' ಆಗಿದ್ದ. ಅಪ್ಪ ಅಮ್ಮನ ನಿರೀಕ್ಷೆಯ ಅಂಕಗಳಿಸಲಾಗದೆ ಅವರಿಗೆ ನಿರಾಶೆಯನ್ನುಂಟು ಮಾಡಿದ್ದ. ಮಗನನ್ನು ಪ್ರತಿಷ್ಠಿತ ಕಾಲೇಜಿಗೆ ದಾಖಲಿಸಬೇಕು ಹಾಗೂ ಉನ್ನತ ಸ್ಥಾನಮಾನದ ಉದ್ಯೋಗ ಪಡೆಯುವಂತಹ ಶಿಕ್ಷಣ ನೀಡಬೇಕೆನ್ನುವ ಎಲ್ಲಾ ತಂದೆ ತಾಯಂದಿರ ಕನಸಿನಂತೆ ಆತನೂ ಅಪ್ಪ ಅಮ್ಮನ ಕನಸುಗಳೊಳಗೆ ಬಂಧಿಯಾಗಿದ್ದ. ಅದೂ ತಪ್ಪಲ್ಲ ಬಿಡಿ. ಯಾಕೆಂದರೆ ಎಲ್ಲಾ ತಂದೆ ತಾಯಂದಿರು ತಮ್ಮ ಮಕ್ಕಳು ತಮಗಿಂತ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಮಹದಾಸೆಯನ್ನಿಟ್ಟುಕೊಳ್ಳುವುದು ಸಹಜವೇ.. ಆದರೆ ಮಗುವಿನಲ್ಲಿ ಈಗಾಗಲೇ ಅಡಗಿರುವ ಸಾಮರ್ಥ್ಯವನ್ನು ಗುರುತಿಸಿ, ಶೈಕ್ಷಣಿಕ ಅಧ್ಯಯನಕ್ಕೆ ನಿಖರವಾದ ಗುರಿಯನ್ನು ನೀಡಿ, ಸಾಗಬೇಕಾದ ದಾರಿಯ ಬಗ್ಗೆ ಪ್ರೀತಿಯಿಂದ ಸ್ಫೂರ್ತಿ, ಸಲಹೆ ಮತ್ತು ಮಾರ್ಗದರ್ಶನ ನೀಡಬಲ್ಲ ಜ್ಞಾನ ಪೋಷಕರಲ್ಲಿ ಇಲ್ಲದೇ ಹೋದಾಗ ಮಗು ಸಹಜವಾಗಿಯೇ ಗೊಂದಲಕ್ಕೀಡಾಗುತ್ತದೆ. ಧನಾತ್ಮಕ ಪ್ರೇರಣೆಯಿಲ್ಲದೆ, ಅತ್ಯುನ್ನತ ಶ್ರೇಣಿಯ ಅಂಕಗಳಿಕೆಯ ನಿರಂತರವಾದ ಹೇರಿಕೆ ಮಗುವಿನ ಮಾನಸಿಕ ವೇದನೆಗೂ ಕಾರಣವಾಗುತ್ತದೆ. ಹತಾಶೆ, ಅವಮಾನಕ್ಕೊಳಗಾದ ಮಗುವು ತಪ್ಪು ನಿರ್ಧಾರಗಳನ್ನು ಕೈಗೊಳ್ಳದಂತೆ ಮಗುವಿನ ಪರವಾಗಿಯೇ ನಾವು ನಿಲ್ಲಬೇಕಾಗುತ್ತದೆ. ನಾವು ಸೋತ ಮಗುವಿನ ಗೆಲುವಿಗೆ ಕಾರಣವಾಗಬೇಕಾಗುತ್ತದೆ.
ಈ ಕಾರಣಕ್ಕಾಗಿಯೇ ನಾನು ಆತನ ಪರವಾಗಿ ನಿಂತು ಹೇಳಿದೆ, "ನಾನು ನಿಮ್ಮ ಮಗನ ಮನಸ್ಸನ್ನು ಕಳೆದ ಹನ್ನೆರಡು ವರ್ಷಗಳಿಂದ ಬಲ್ಲೆ. ಆತನಿಗೆ ಕಲಿಸುತ್ತಾ ನಾನೂ ಕಲಿತಿದ್ದೇನೆ. ಆತನೊಳಗಿರುವ ವಿಶಿಷ್ಟ ಗುಣ, ಸಂಸ್ಕಾರವನ್ನೂ ತಿಳಿದುಕೊಂಡಿದ್ದೇನೆ. ನಿಮ್ಮ ಪೆಟ್ಟು ಅಥವಾ ಸಿಟ್ಟು ಆತನನ್ನು ಸರಿಪಡಿಸುತ್ತದೆ ಎಂದು ನಿಮ್ಮ ನಿರ್ಧಾರವಾದಲ್ಲಿ ನಾನು ನಿಮ್ಮ ನಿಲುವನ್ನು ಒಪ್ಪುವುದೇ ಇಲ್ಲ" ಅಂದೆ. ಆಗ ಆತ ನಿಧಾನವಾಗಿ ನನ್ನ ಕಡೆ ಸರಿಯಲಾರಂಭಿಸಿದ್ದನ್ನು ಕಂಡೆ. ತಂದೆಗೂ ನನ್ನ ಮಾತು ನಾಟಿದಂತಾಗಿ, "ಇರಲಿ ಸರ್. ಕಾಲೇಜು ಕಲಿಯುವುದು ಬೇಡಾಂದ್ರೆ, ದೇವಸ್ಥಾನದಲ್ಲಿ ಪೂಜೆ ಮಾಡಲಿಕ್ಕೆ ಹೋಗ್ಲಿ, ಪುರೋಹಿತಿಕೆಯಾದ್ರು ಕಲೀಲಿ. ಹೇಗೂ ಹತ್ರದಲ್ಲೇ ನಮ್ಮ ದೇವಸ್ಥಾನ ಉಂಟು, ನಂಗೇನು?" ಅಂದ್ರು. "ಪುರೋಹಿತಿಕೆ ಕಲೀಲಿ. ಅದರಲ್ಲೇನೂ ತಪ್ಪಿಲ್ಲ. ಆದರೆ ಆತನಲ್ಲಿರುವ ಮಾತಿನ ಕೌಶಲ್ಯ ಆತನಿಗೆ ಬೇರೆಯೇ ಭವಿಷ್ಯವಿದೆ ಅಂತ ಹೇಳುತ್ತಿದೆ" ಅಂದೆ. "ಏನು ಭವಿಷ್ಯ ಸರ್? ಇಂಗ್ಲಿಷಿನಲ್ಲಿ ಜಸ್ಟ್ ಪಾಸ್. ಒಂದೆರಡು ಅಂಕ ಕಮ್ಮಿಯಾಗಿದ್ರೂ ಫೇಲಾಗ್ತಿದ್ದ" ಅಂದ್ರು. "ಬರೇ ಈ ಅಂಕದ ಆಧಾರದ ಮೇಲೆ ನಿಮ್ಮ ಮಗನ ಸಾಮರ್ಥ್ಯ ಮತ್ತು ಭವಿಷ್ಯವನ್ನು ನಿರ್ಧರಿಸಿಬಿಡಬೇಡಿ. ನಿಮ್ಮ ಮಗನ ಸಾಮರ್ಥ್ಯ ವನ್ನು ಬೆಳೆಸಬಲ್ಲ ಕಾಲೇಜೊಂದು ಮಂಗಳೂರಿನಲ್ಲಿ ಆರಂಭಗೊಂಡಿದೆ. ನೀವು ಕಳುಹಿಸುವುದಾದಲ್ಲಿ ಆತನನ್ನು ಅಲ್ಲೇ ದಾಖಲಿಸೋಣ. ಇರುವುದಕ್ಕೆ ಹೇಗೂ ನಮ್ಮ ಮನೆಯಿದೆ. ಈ ಒಂದು ವರ್ಷ ಅವನಿಗೆ ಚಾನ್ಸ್ ಕೊಟ್ಟು ನೋಡಿ" ಅಂತ ಆತನ ಮೇಲಿನ ದೃಢನಂಬಿಕೆಯಿಂದಲೇ ಹೇಳಿದೆ. ನನ್ನ ಮೇಲೆ ಇದ್ದ ವಿಶ್ವಾಸದ ಕಾರಣಕ್ಕಾಗಿಯೇ ಸರಳಾಯರು ತಕ್ಷಣ, "ಆಯ್ತು ಸರ್... ನೀವೇ ಅವನನ್ನು ಕರ್ಕೊಂಡು ಹೋಗಿ ಸರ್. ನನ್ನ ಅಭ್ಯಂತರವೇನಿಲ್ಲ" ಅಂದ್ರು. ಆತನೂ ಒಪ್ಪಿದ. ಮರುದಿನವೇ ನಾವು ಮೂವರೂ ಮಂಗಳೂರಿನ ಆ ಖಾಸಗಿ ಕಾಲೇಜಿಗೆ ಹೋದೆವು. ಮಾನವ ಸಂಪನ್ಮೂಲ ಅಭಿವೃದ್ಧಿ (ಬಿ.ಎಚ್.ಆರ್.ಡಿ) ಪದವಿ ತರಗತಿಗೆ ಆತನನ್ನು ದಾಖಲಿಸಿದೆವು. ಕಾಲೇಜಿನ ಪ್ರಾಂಶುಪಾಲರ ಸ್ಫೂರ್ತಿಯ ಮಾತು ತಂದೆ ಮತ್ತು ಮಗನಿಗೆ ಖುಷಿಕೊಟ್ಟಿತ್ತು. ಆತ ನಮ್ಮ ಮನೆಯ ಸದಸ್ಯನಂತೆಯೇ ಆಗಿ ಬಿಟ್ಟ. ಆರು ತಿಂಗಳ ಬಳಿಕ ಆತನ ಮನೆಗೆ ಭೇಟಿ ನೀಡಿದೆ. ಸರಳಾಯರು ಗೋಡೆಯ ಮರೆಯಲ್ಲಿ ಏನನ್ನೋ ಆಲಿಸುತ್ತಾ ಖುಷಿಪಡುತ್ತಿರುವುದನ್ನು ಕಂಡು, "ಏನು ವಿಶೇಷ ಸರಳಾಯರೇ? ತುಂಬಾ ಖುಶಿಯಲ್ಲಿರುವ ಹಾಗೆ ಕಾಣುತ್ತಿದೆ.." ಎಂದು ಕೇಳಿದೆ. "ನೋಡಿ ಸರ್, ನನ್ನ ಮಗ ಎಷ್ಟು ಚಂದ ಇಂಗ್ಲಿಷ್ ಮಾತಾಡ್ತಿದ್ದಾನೆ ನೋಡಿ. ಇಷ್ಟು ಚಂದ ಇಂಗ್ಲಿಷ್ ಮಾತಾಡಿದ್ದನ್ನು ನಾನು ಈವರೆಗೆ ನೋಡೇ ಇಲ್ಲ" ಎನ್ನುತ್ತಾ , ಸಹಪಾಠಿಗಳೊಂದಿಗೆ ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಹರಟುತ್ತಿದ್ದ ಆತನ ಸಂಭಾಷಣೆಯನ್ನು ಕಣ್ತುಂಬಿಕೊಳ್ತಾ ಇದ್ರು. ತಂದೆಯ ಮುಖದಲ್ಲಿ ಸಂತೋಷ ಮತ್ತು ಸಂತೃಪ್ತಿಯ ಭಾವವಿತ್ತು. ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗಳು, ಕ್ಷೇತ್ರ ಅಧ್ಯಯನ, ಸಂವಹನ ಕೌಶಲ್ಯ, ಹಾಗೂ ನಮ್ಮ ಮನೆಯ ಕಲಾ ಪರಿಸರ ಆತನ ವ್ಯಕ್ತಿತ್ವ ವಿಕಾಸಕ್ಕೆ ನೀರೆರೆದು ಪೋಷಿಸಿತ್ತು. ಮೊದಲ ವರ್ಷ ಶೇಕಡಾ ಅರುವತ್ತೈದು, ಎರಡನೇ ವರ್ಷ ಎಪ್ಪತ್ತೆರಡು ಹಾಗೂ ಅಂತಿಮ ಪದವಿಯಲ್ಲಿ ಎಪ್ಪತ್ತೈದು ಶೇಕಡ ಅಂಕದೊಂದಿಗೆ ಆತ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದ. ಮುಂದೆ ಎಂ.ಬಿ.ಎ ಅಧ್ಯಯನ ಮಾಡುವ ಆತನ ಅಪೇಕ್ಷೆಯಂತೆ ಮಂಗಳೂರಿನಲ್ಲೇ ಸ್ನಾತಕೋತ್ತರ ಪದವಿ ಪಡೆದು ಓರ್ವ ಉತ್ತಮ ಸಂವಹನಕಾರನಾದ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಸಿದ್ಧ ಮೊಬೈಲ್ ಕಂಪನಿಯೊಂದರಲ್ಲಿ ಎಚ್.ಆರ್. ಎಕ್ಸಿಕ್ಯುಟಿವ್ ಆಗಿ ದೇಶ ವಿದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಂಪೆನಿಗೆ ಆಯ್ಕೆ ಮಾಡಿಕೊಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾನೆ. ಆಗಾಗ ಫೋನ್ ಮಾಡಿ ಮಾತನಾಡುವ ಅಭ್ಯಾಸ ಇನ್ನೂ ನಿಂತಿಲ್ಲ. ಸರಳಾಯ ದಂಪತಿಗಳಂತೂ ಈಗ ಸದಾನಂದದಿಂದ ಇದ್ದಾರೆ. ಪ್ರತೀ ವರ್ಷ ಶಿಕ್ಷಕ ದಿನಾಚರಣೆಯಂದು ಸಂಜೆ ಶಿಷ್ಯ ರಮಾನಂದನ ಫೋನ್ ಕರೆ ಬರುತ್ತದೆ. ಅದರೊಳಗೆ ಕೃತಜ್ಞತೆಯ ಭಾವವೂ ಇರುತ್ತದೆ. ಎಲ್ಲಾ ಶಿಕ್ಷಕರಿಗೂ ಅನಿಸುವಂತೆ ನನಗೂ ಅನಿಸುತ್ತದೆ... "ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಬೇಕೇ...?"
ಸಹಶಿಕ್ಷಕರು
ಸರಕಾರಿ ಪ್ರೌಢ ಶಾಲೆ ಮೀನಕಳಿಯ
ಬೈಕಂಪಾಡಿ , ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob : +91 99642 14605
*******************************************