-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 33

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 33

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 33
ಲೇಖಕರು : ಪ್ರಜ್ವಲಾ ಶೆಣೈ
ದ ಕ ಜಿ ಪಂ ಹಿ ಪ್ರಾ ಶಾಲೆ, ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣಕನ್ನಡ ಜಿಲ್ಲೆ
Mob : +91 99646 77549

           
        
    ವೃತ್ತಿಯನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯ ಮುಖದಲ್ಲೂ ಆತ್ಮತೃಪ್ತಿಯ ರಾಜಕಳೆ ವಿರಾಜಿಸುತ್ತದೆ. ಅದರಲ್ಲೂ ಗುರುಸ್ಥಾನವೆಂದರೆ ಅದರ ಘನತೆ ಗೌರವ ಮತ್ತಷ್ಟು ಹಿರಿದು. ವಿದ್ಯಾಲಯದಲ್ಲಿ ಗುರು ಶಿಷ್ಯರ ಸಂಬಂಧ ಅನುಬಂಧವು ಪದಗಳಲ್ಲಿ ವರ್ಣಿಸಲಾಗದ್ದು. ಇಂತಹ ಹತ್ತು ಹಲವು ಅನುಭವಗಳು ಶಾಲೆಯ ನೆನಪುಗಳನ್ನು ಹಸಿರಾಗಿಸುತ್ತದೆ.
ಬದುಕು ಸಾರ್ಥಕಗೊಳ್ಳುವ ಕ್ಷಣ ಯಾವುದು..? ಬದುಕಿನುದ್ದಕ್ಕೂ ಜೀವನೋತ್ಸಾಹ ಚಿಮ್ಮುವ ಉತ್ಸಾಹದ ಚಿಲುಮೆ ಅಡಗಿರುವುದಾದರು ಎಲ್ಲಿ..? ಈ ಎಲ್ಲಾ ಪ್ರಶ್ನೆಗಳನ್ನು ಮನದೊಳಗೆ ಹುಟ್ಟು ಹಾಕಿ ಹುಡುಕುತ್ತಾ ಹೋದವರಿಗೆ ಎಷ್ಟೆಲ್ಲಾ ಪ್ರಶ್ನೆಗಳು ಕಾಡುತ್ತವೆ.?. ಪ್ರಶ್ನೆಗಳು ಹಲವಾದರೆ ಬಿಡದೆ ಕಾಡುವ ನಿರೀಕ್ಷೆಗಳು ಇನ್ನೂ ಕೆಲವು. ತನ್ನನ್ನು ಇತರರು ಪ್ರೀತಿಸಬೇಕು, ಎಂದಿಗೂ ಜೊತೆಯಾಗಿರಬೇಕು. ತನಗಾಗಿ ತನ್ನಿಷ್ಟದ ವಸ್ತುಗಳನ್ನು ಕೊಡಬೇಕು. ಮೊದಲ ಆದ್ಯತೆ ತನಗಾಗಿ ನೀಡಬೇಕು. ಇತ್ಯಾದಿ ಎಷ್ಟೆಲ್ಲಾ ನಿರೀಕ್ಷೆಗಳು ಬದುಕಿನಲ್ಲಿ ತುಂಬಿರುತ್ತವೆ. ನಿರೀಕ್ಷೆಗಳು ಹುಸಿಯಾಗುವ ಸಂದರ್ಭಗಳು ಹಲವಾರು ಬಾರಿ ನಮ್ಮ ಜೀವನದಲ್ಲಿ ಬರುತ್ತವೆ. ಆದರೆ ಯಾವ ನಿರೀಕ್ಷೆಯೂ ಇಲ್ಲದೆ ಅನಿರೀಕ್ಷಿತವಾಗಿ ಬರುವ ಸಂತೋಷ ಹೆಚ್ಚು ಕಾಲ ಮನಪಟಲದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. ಜೀವನದ ಜಂಜಾಟಗಳ ನಡುವೆ ಕಳೆದು ಹೋಗುತ್ತಿರುವ ಸಂತೋಷವನ್ನು ಮತ್ತೆ ಹುಡುಕಿ ಕೊಟ್ಟವರು ನನ್ನ ನೆಚ್ಚಿನ ಶಾಲಾ ವಿದ್ಯಾರ್ಥಿಗಳು. ಅದೆಷ್ಟೋ ಬಾರಿ ನನ್ನ ದುಗುಡ ಚಿಂತೆಗಳನ್ನು ದೂರಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಹಿರಿದು. ನಾನು ಕೊಟ್ಟ ಪ್ರೀತಿ ಮೀನಿನಷ್ಟು ಆದರೆ ಅವರಿಂದ ದೊರೆತದ್ದು ಸಾಗರದಷ್ಟು. ಶಿಕ್ಷಕರ ಮೇಲೆ ಮಕ್ಕಳ ಪ್ರೀತಿ ಎಷ್ಟಿದೆ ಎಂಬುವುದು ನನ್ನ ನಿರೀಕ್ಷೆಗೂ ನಿಲುಕದ್ದು. ಕೆಲವು ದಿನಗಳ ಹಿಂದೆ ಇಂತಹ ಒಂದು ಅದ್ಭುತ ಕ್ಷಣದ ಅನುಭೂತಿ ನನ್ನ ಅನುಭವಕ್ಕೆ ನಿಲುಕಿತು.
       ಆ ದಿನ ನನ್ನ ಜನುಮ ದಿನವಾಗಿತ್ತು. ತರಗತಿಯಲ್ಲಿ ನಾನು ಈ ಬಗ್ಗೆ ಯಾರಿಗೂ ಹೇಳದೇ ಸಾಮಾನ್ಯ ದಿನದಂತೆ ಕಳೆದಿದ್ದೆ. ಆದರೆ ಅದು ಹೇಗೋ ಎರಡು ದಿನದ ಬಳಿಕ ನನ್ನ ಮುಖಪುಟದ ಶುಭಾಶಯ ನುಡಿಯ ಮೂಲಕ ತಿಳಿದುಕೊಂಡು ಒಬ್ಬಳು ವಿದ್ಯಾರ್ಥಿನಿ ನನಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿ ಈ ಬಗ್ಗೆ 
ವಿಚಾರಿಸಿದ್ದಳು. ತಾನು ಶುಭಾಶಯ ಕೋರಲಿಲ್ಲ ಎಂದು ಉಳಿದ ವಿದ್ಯಾರ್ಥಿಗಳು ಅದೆಷ್ಟು ಪರಿತಪಿಸಿದರೋ ನಾ ಕಾಣೆ. ಮರುದಿನ ಶಾಲೆಗೆ ಬಂದರೂ ವಿಷಯ ತಿಳಿದರೂ ಯಾರೊಬ್ಬರ ಮುಖದಲ್ಲೂ ವಿಷಯ ಗೊತ್ತಾದ ಕುರುಹು ಇರಲಿಲ್ಲ. ಇದೆಲ್ಲಾ ನಡೆದು ಅದೆಷ್ಟೋ ದಿನಗಳು ಕಳೆದ ಕಾರಣ ನಾನು ಅದೆಲ್ಲಾ ಮರೆತು ನನ್ನ ಕೆಲಸದಲ್ಲೇ ಮಗ್ನಳಾದೆ. ಮಧ್ಯವಾರ್ಷಿಕ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಇತ್ತು. ಆದರೆ ವಿದ್ಯಾರ್ಥಿಗಳು ಆಗಾಗ ಪಾಠದ ನಡುವೆ ಡೆಸ್ಕಿನ ಒಳಗೆ, ಪುಸ್ತಕದ ಒಳಗೆ ಅಡಗಿಸಿ ಏನೋ ಮಾಡುತ್ತಿರುವುದು ಗಮನಕ್ಕೆ ಬಂದು ವಿದ್ಯಾರ್ಥಿಗಳಿಗೆ ಬೈದು ಬುದ್ದಿವಾದ ಹೇಳಿದ್ದೆ. ತರಗತಿಗೆ ಬರುವ ಮೊದಲು ತರಗತಿ ಪ್ರವೇಶಕ್ಕೆ ಇಬ್ಬರು ಹುಡುಗರು ಬಾಗಿಲ ಬಳಿ ಅಡ್ಡ ಗಟ್ಟುವುದು… ಮಧ್ಯಾಹ್ನದ ಊಟದ ಬಳಿಕ ತರಗತಿಗೆ ಬರುವ ಸಮಯ ನೋಡಿ ನಾನು ತರಗತಿಗೆ ನೇರವಾಗಿ ಬರದಂತೆ ಕಾವಲು ಕಾಯಲು ಇಬ್ಬರು ಹುಡುಗರು… ಸಂಜೆ ಕಸ ಗುಡಿಸಲು ಬೇರೆಯವರ ಸರದಿ ಇದ್ದರೂ ಅವರಿಗೆ ಬಿಡುವು ಕೊಟ್ಟು ತಾನೇ ಗುಡಿಸುವ ಕೆಲ ವಿದ್ಯಾರ್ಥಿಗಳು… ಎರಡು ದಿನಗಳಿಂದ ವಿದ್ಯಾರ್ಥಿಗಳಲ್ಲಿ ಆದ ವಿಚಿತ್ರ ಬದಲಾವಣೆ ಕಂಡು ಆಶ್ಚರ್ಯ ಚಕಿತಳಾಗಿ ಕಾರಣ ಹುಡುಕಿ ಸೋತು ಸುಮ್ಮನಾಗಿಬಿಟ್ಟಿದ್ದೆ. 
     ಅದೊಂದು ದಿನ ತರಗತಿಗೆ ಬಂದಾಗ ಎಂದಿನಂತೆ ಇಬ್ಬರು ವಿದ್ಯಾರ್ಥಿಗಳು ಕೈ ಅಡ್ಡಗಟ್ಟಿದರು. ಕಣ್ಣು ಮುಚ್ಚಿಕೊಂಡು ತರಗತಿಗೆ ಬರಬೇಕೆಂದು ವಿದ್ಯಾರ್ಥಿಗಳೆಲ್ಲರ ಒಕ್ಕೊರೊಲ ಕೂಗು ಕೇಳಿ ಬಂತು. ಕಣ್ಣು ಬಿಟ್ಟಾಗ ಕಣ್ಣೆದುರು ವಿದ್ಯಾರ್ಥಿಗಳು ಪ್ರೀತಿ, ಮಮತೆ, ವಾತ್ಸಲ್ಯ ಭರಿತ ಹುಟ್ಟು ಹಬ್ಬದ ಶುಭಾಶಯ ಪತ್ರಗಳನ್ನು ಎಲ್ಲರೂ ಒಟ್ಟಾಗಿ ಹಿಡಿದು ನನ್ನ ಕಣ್ಣ ಮುಂದೆ ತಂದಿರಿಸಿ ಶುಭಾಶಯ ಕೋರಿದರು. ಒಂದು ಕ್ಷಣ ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ತರಗತಿಯ ಕರಿಹಲಗೆಯ ಮೇಲೆ ಬಿಡಿಸಿದ ಶುಭಾಶಯ ನುಡಿ ಕಂಡು ಮನಸ್ಸು ತುಂಬಿ ಬಂತು. ನನಗರಿವಿಲ್ಲದೇ ಆನಂದ ಭಾಷ್ಪ ಹರಿಯಿತು. ಶುಭಾಶಯ ಪತ್ರ ತಯಾರಿಸಲು ವಿದ್ಯಾರ್ಥಿಗಳ ಶ್ರಮ, ಪ್ರೀತಿ, ಒಲುಮೆ ಕಂಡು ವಿದ್ಯಾರ್ಥಿಗಳ ಅಭಿಮಾನ, ಮಮತೆಯ ಎದುರು ನಾನು ಅವರಿಗೆ ಕೊಟ್ಟದ್ದು ಏನೂ ಅಲ್ಲ ಎನಿಸಿತು. ಕೆಲವು ದಿನಗಳಿಂದ ಶುಭಾಶಯ ಪತ್ರ ತಯಾರಿಸಲು ಎಷ್ಟೆಲ್ಲ ಕಸರತ್ತು ನಡೆಸಿದರು ಎಂದು ಅವರ ಬಾಯಿಂದಲೇ ತಿಳಿದಾಗ ನನ್ನ ಮುಖದಲ್ಲಿ ಮಂದಹಾಸ ಮೂಡಿತು. 
     ಮೇಲಕ್ಕೆಸೆದ ವಸ್ತು ಮತ್ತೆ ಕೆಳಕ್ಕೆ ಬೀಳುತ್ತದೆ, ಗೋಡೆಗೆಸೆದ ಚೆಂಡು ಮತ್ತೆ ಹಿಂದಕ್ಕೆ ಬರುತ್ತದೆ. ಹೀಗೆಯೇ ನಾವು ಏನು ಕೊಡುತ್ತೇವೋ ಅದು ನಮಗೆ ಮರಳಿ ಸಿಗುತ್ತದೆ. ಮುಗ್ಧ ಮನಸ್ಸುಗಳ ಸ್ವಚ್ಛ ಪ್ರೀತಿಗೆ ಎಂದೂ ಬೆಲೆಕಟ್ಟಲಾಗದು. ಇಂತಹ ವಿದ್ಯಾರ್ಥಿಗಳ ಪ್ರೀತಿಗೆ ನಾನು ಪಾತ್ರಳಾಗಿದ್ದೇನೆ ಎನ್ನುವುದೇ ಅತ್ಯಂತ ಹೆಮ್ಮೆಯ ವಿಷಯ. ಕೇವಲ ಹಣ, ಹೆಚ್ಚು ಬೆಲೆ ಬಾಳುವ ವಸ್ತುಗಳಿಂದ ಮನಸ್ಸು ಖುಷಿಯಾಗುತ್ತದೆ ಎನ್ನುವುದನ್ನು ಒಪ್ಪಲಾಗದು. ವಿದ್ಯಾರ್ಥಿಗಳ, ಪ್ರೀತಿ, ಗುರುಭಕ್ತಿ, ಮುಗ್ಧತೆ ಬೆಲೆ ಕಟ್ಟಲಾಗದ ಅಮೂಲ್ಯ ಸಂಪತ್ತು. ಓರ್ವ ಶಿಕ್ಷಕಿಯಾಗಿ ಬದುಕಿನ ಸಾರ್ಥಕ ಕ್ಷಣಗಳನ್ನು ಅನುಭವಿಸುವ ಸೌಭಾಗ್ಯ ನೀಡಿರುವ ಭಗವಂತನಿಗೆ ಸಾವಿರ ಸಾವಿರ ನಮನಗಳು. 
.............................. ಪ್ರಜ್ವಲಾ ಶೆಣೈ, ಸಹಶಿಕ್ಷಕಿ
ದ ಕ ಜಿ ಪಂ ಹಿ ಪ್ರಾ ಶಾಲೆ, ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣಕನ್ನಡ ಜಿಲ್ಲೆ
Mob : +91 99646 77549
*******************************************Ads on article

Advertise in articles 1

advertising articles 2

Advertise under the article