-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 24

ನಿಷ್ಪಾಪಿ ಸಸ್ಯಗಳು : ಸಂಚಿಕೆ - 24

ನಿಷ್ಪಾಪಿ ಸಸ್ಯಗಳು : ಸಂಚಿಕೆ - 24
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
       
ಪ್ರೀತಿಯ ಮಕ್ಕಳೇ,
        ಹೇಗಿದ್ದೀರಿ? ಬೆಳಕಿನ ಹಬ್ಬ ಬದುಕಿಗೆ ಒಂದಿಷ್ಟು ಉಲ್ಲಾಸ, ಲವಲವಿಕೆ ತುಂಬಿ ಸರಿದಾಗಿದೆ. ಇನ್ನೇನಿದ್ದರೂ ನಮ್ಮದು ಓದಿನ ಕಡೆಗೆ ಗಮನವಲ್ಲವೇ?
         ನಾನು ದೀಪಾವಳಿಯ ರಜೆಯಲ್ಲಿ ನನ್ನ ಗೆಳತಿಯಾದ ಸುಮತಿಯವರ ಮನೆಗೆ ಹೋಗಿದ್ದೆ. ಮುಡಿಪು ಪೇಟೆಯ ಮುಖ್ಯರಸ್ತೆಯಲ್ಲಿದ್ದ ಅವರ ಮನೆಯ ಗೇಟ್ ತೆರೆದು ಇನ್ನೇನು ಒಳಹೋಗಬೇಕೆನ್ನುವಾಗ ಗೇಟಿನ ಪಕ್ಕದಲ್ಲಿ ಕುತೂಹಲ ಮೂಡಿಸುವಂತಹ ಸಸ್ಯವೊಂದು ಹರಡಿಕೊಂಡು ಬೆಳೆದಿತ್ತು. ಮೈಯಲ್ಲೆಲ್ಲ ಮುಳ್ಳು. ಬದನೆ ಗಿಡವನ್ನು ಹೋಲುವ ಎಲೆಗಳು. ಸುಮಾರು ಅಷ್ಟೇ ಎತ್ತರ. ಹೂವುಗಳ ರಚನೆಯೂ ಬದನೆಯಂತೆಯೇ ಇದ್ದರೂ ಬಿಳಿಯಾಗಿತ್ತು. ಗೊಂಚಲು ಗೊಂಚಲಾದ ಪುಟಾಣಿ ಹೂಗಳಿಗೆ ಐದು ದಳಗಳು, ಐದು ಪುಷ್ಪಪತ್ರಗಳಿದ್ದು ಮಧ್ಯದಲ್ಲಿ ಸುಂದರವಾದ ಹಳದಿ ವರ್ಣದ ಕೇಸರಗಳು. ಗಿಡದ ಕೊಂಬೆಗಳಲ್ಲೆಲ್ಲ ಹಸಿರಾದ ಸಣ್ಣಸಣ್ಣ ಕಾಯಿಗಳ ಗೊಂಚಲುಗಳೂ ಇದ್ದವು. ನಾನು ಫೋಟೋ ತೆಗೆಯುವುದನ್ನು ನೋಡಿದ ಸುಮತಿಯವರ ಪತಿ "ನನ್ನ ತಾಯಿ ಅದನ್ನು ಗೊಜ್ಜು ಮಾಡುತ್ತಿದ್ದರು" ಎಂದು ನೆನಪಿಸಿಕೊಂಡರು.
     ಮಕ್ಕಳೇ, ಅದು 'ಕುದನೆ ' ಎಂಬ ನಿಷ್ಪಾಪಿ ಸಸ್ಯ. ಪಾಳು ಬಿದ್ದ ಯಾವುದೇ ಜಾಗದಲ್ಲಿ ನೀವಿದನ್ನು ನೋಡಿರಬಹುದು. ನಮಗ್ಯಾಕೋ ಅದೊಂದು 'ಕಳೆ' ಗಿಡವೆಂಬ ತಾತ್ಸಾರ!. ಬದನೆಯ ನೆಂಟ ಈ ಕುದನೆ ಎಂದು ಗೊತ್ತಾ ನಿಮಗೆ?
      ತರಕಾರಿಗಳ ರಾಜ ಬದನೆ. ಬದನೆಯ ವಿಕಾಸ ಹಾಗೂ ವೈವಿಧ್ಯತೆ ಬಹು ಅಪರೂಪವಾದುದು. ಪ್ರಪಂಚದ ಎಲ್ಲಾ ಕಡೆ ಬೆಳೆಯಲ್ಪಡುವ ಬದನೆ ಬಹು ಬೇಡಿಕೆಯ ಬೆಳೆ. ಇದರಲ್ಲಿ 2700 ಪ್ರಭೇದಗಳು. ಟೊಮೆಟೊ, ಆಲೂಗಡ್ಡೆಗಳೂ ಇದರದೇ ಸಂಬಂಧಿಗಳು. ಈಗ ನಿಮಗೆ ಕುದನೆಯಿಂದ ಬದನೆಗೆ ಹಾರಿದ್ದೇಕೆ..? ಎಂದನಿಸಬಹುದು. ಕಾರಣವೇನೆಂದರೆ ಇವುಗಳ ಪ್ರಭೇದಗಳು ಬೇರೆಯಾದರೂ ಗುಣ ನಿರ್ಧರಿಸುವ ಅನುವಂಶಿಕ ಮೂಲವರ್ಣ ತಂತುವಿನ ಸಂಖ್ಯೆ12. ಇವು ಒಂದೇ ಬಗೆಯ ಪೂರ್ವಜರಿಂದ 15.5 ದಶಲಕ್ಷ ವರ್ಷಗಳ ಹಿಂದೆಯೇ ವಿಕಾಸಗೊಂಡಿದೆ. ವರ್ಣತಂತುವಿನ ಮರುಜೋಡಣೆಯಿಂದಾಗಿ ಗುಣಗಳ ಬದಲಾವಣೆಗಳಾಗಿವೆ. ವಿವಿಧ ಕಾಲಘಟ್ಟದಲ್ಲಿ ಹಲವು ಪ್ರಭೇದಗಳು ಹೊರಹೊಮ್ಮಿರುವುದನ್ನು ವರ್ಣತಂತುಗಳ ಸಂರಕ್ಷಿತ ಚಿಹ್ನೆಗಳ ಮೂಲಕ ತಿಳಿಯಲಾಗಿದೆ.
    ಬದನೆಯ ಕಾಡು ಪ್ರಭೇದಗಳು ದಕ್ಷಿಣ ಆಫ್ರಿಕಾ ಖಂಡದಿಂದ ವಿಶ್ವದೆಲ್ಲೆಡೆ ಪ್ರಸಾರವಾಗಿದ್ದರೆ ಬದನೆಗೆ ಭಾರತವೇ ಮೂಲವೆನ್ನಲಾಗಿದೆ. ತೈವಾನ್ ನ ವಿಶ್ವ ತರಕಾರಿ ಕೇಂದ್ರದಲ್ಲಿ 3000ಕ್ಕೂ ಹೆಚ್ಚಿನ ಬದನೆಯ ತಳಿಗಳನ್ನು ಪರಿಚಯಿಸಲಾಗಿದ್ದರೆ ನಮ್ಮ ದೇಶದ ದೆಹಲಿಯಲ್ಲಿ 1900 ತಳಿಗಳನ್ನು ರಕ್ಷಿಸಲಾಗಿದೆ. ಹೀಗಿದ್ದರೂ ಚೆನ್ನೈ, ಮುಂಬಯಿ ಗಳಂತಹ ನಗರಗಳಲ್ಲಿ ಕಿಲೊ ಒಂದಕ್ಕೆ 400 ರಿಂದ 500 ರುಪಾಯಿಗಳಿಗೆ ಮಾರಾಟವಾಗುವ ಕುದನೆಯ ಕಾಯಿಗಳನ್ನು ನಾವು ಉಪೇಕ್ಷಿಸುವುದೇ ಹೆಚ್ಚು.
      ವರ್ಷವಿಡೀ ಹೂ ಹಾಗೂ ಕಾಯಿಗಳನ್ನು ನೀಡುವ ಈ ಕುದನೆ ಉಳಿದ ಸಸ್ಯಗಳಂತೆ ಏಕವಾರ್ಷಿಕ ಸಸ್ಯವಾಗಿರದೆ ತನ್ನ ಗುಣವಿಶೇಷದಿಂದ ದೀರ್ಘಕಾಲಿಕ ಸಸ್ಯವಾಗಿದೆ. ಅವ್ಯಾಹತವಾಗಿ ಬೆಳೆಯುವ ಈ ಗಿಡದ ಹೂವಿನ ಕೆಳಗೆ ಕಂಕುಳಿನ ಮೊಗ್ಗು ಮತ್ತೆ ಹೊಸ ಕೊಂಬೆ, ಎಲೆಗಳು ಮೂಡಿಬರಲು ಪೂರಕವಾಗಿರುತ್ತವೆ. ಗಿಡವು ನಿರಂತರ ಹೂವಿನ ಮೂಲಕ ಬೆಳವಣಿಗೆ ಮುಂದುವರಿಸುತ್ತದೆ.
       ಸುಂಡೆ, ಟರ್ಕಿ ಬೆರ್ರಿಚಿಟ್ ಬದನೆ, ಕಾಡು ಬದನೆ, ಬೃಹತಿ ಎಂದೆಲ್ಲ ಕರೆಸಿಕೊಳ್ಳುವ ಕುದನೆ ಶಾಸ್ತ್ರೀಯವಾಗಿ Solanum torvum ಆಗಿದ್ದು solanaceae ಕುಟುಂಬಕ್ಕೆ ಸೇರಿದೆ.
      ಕುದನೆ ಗಿಡದ ಇನ್ನೊಂದು ವಿಶೇಷತೆ ಎಂದರೆ ಇದನ್ನು ಕಸಿಕಟ್ಟಲು ಬಳಸುತ್ತಾರೆ. ಸಾಮಾನ್ಯ ಬದನೆ ಅಥವಾ ಗುಳ್ಳದ ಗಿಡಕ್ಕೆ ಈ ಕುದನೆ ಕಸಿ ಮಾಡಿದರೆ ವರ್ಷವಿಡೀಬದನೆಯನ್ನು ಪಡೆಯಬಹುದು !.ಎಂತಹ ಪರಿಸರವಿದ್ದರೂ ನೀರು ಗೊಬ್ಬರವಿರದೆ ಸದಾ ಹೂ ಬಿಡುವ ಕುದನೆಯ ಗುಣ ಕಸಿಕಟ್ಟಿಸಿಕೊಂಡ ಗಿಡವೂ ಪಡೆದುಕೊಳ್ಳುತ್ತದೆ! ವೈರಸ್, ಬ್ಯಾಕ್ಟೀರಿಯಾ ಫಂಗಸ್, ಕ್ರಿಮಿ ಕೀಟಗಳ ಬಾಧೆಗಳನ್ನು ಎದುರಿಸಿಕೊಂಡು ಬೆಳೆದು ಬಂದ ಕುದನೆ ಕಸಿಗಿಡದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಪ್ರಕೃತಿಯ ವಿಸ್ಮಯಕ್ಕೆ ಎಣೆಯಿದೆಯೇ!. ಕುದನೆಯ ಬೇರಿನ ಭಾಗವನ್ನು ಹತ್ತಿರ ಸಂಬಂಧಿಯಾದ ಟೊಮೆಟೊ ಗಿಡಕ್ಕೂ ರೈತರು ಕಸಿ ಮಾಡುತ್ತಾರೆ.
       ಕುದನೆಯ ಎಳೆಕಾಯಿಗಳಿಂದ ಸಾಂಬಾರ್, ಗೊಜ್ಜು, ಪಲ್ಯ, ಮಜ್ಜಿಗೆ ಹುಳಿ, ತಂಬುಳಿ, ಚಟ್ನಿ, ಉಪ್ಪಿನಕಾಯಿಯನ್ನು ಮಾಡುವುದು ಮಾತ್ರವಲ್ಲದೇ ಚಿಗುರನ್ನೂ ತರಕಾರಿಯಾಗಿ ಬಳಸುತ್ತಾರೆ. ತಮಿಳುನಾಡಿನಲ್ಲಿ ಇದರ ಕಾಯಿಯನ್ನು ಒಣಗಿಸಿಟ್ಟು ಬಳಸುತ್ತಾರೆ. ಕೆಲವು ದೇಶಗಳಲ್ಲಿ ಮಾಂಸದಡುಗೆಗೆ ಇದೇ ಕಾಯಿ ಮಸಾಲೆ. ಮಲೇಶಿಯಾದಲ್ಲಿ ಇದರ ಚಿಗುರೆಲೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
       ಇಷ್ಟೆಲ್ಲ ಗುಣಗಳಿರುವ ಕುದನೆಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ರಾಜಮರ್ಯಾದೆಯಿದೆ!. ರೋಗಾಣುಗಳ ವಿರುದ್ಧ ಹೋರಾಡುವ ಗಟ್ಟಿ ಗುಣ ಇದರಲ್ಲಿದ್ದು ಜ್ವರ, ಕೆಮ್ಮು, ಅಸ್ತಮಾ, ಹೊಟ್ಟೆನೋವು, ಗೊನೇರಿಯಾ, ಹೊಸಗಾಯ, ಚರ್ಮದ ಕಾಯಿಲೆ, ಮಲೇರಿಯಾ, ಯಕೃತ್ತಿನ ತೊಂದರೆ, ತಲೆನೋವು, ವಿಷಕೀಟಗಳ ಕಡಿತ, ನಿಶ್ಯಕ್ತಿ, ವಾಂತಿ, ಹಲ್ಲಿನ ಹುಳುಕು, ಚಯಾಪಚಯ ಕ್ರಿಯೆ, ಸಂಧಿವಾತ, ಊತ, ಮೆದುಳು ಲಿವರ್ ಗಳ ಸಮಸ್ಯೆಗೆ ಉಷ್ಣ ಪಿತ್ತ ಶಮನ, ರಕ್ತಹೀನತೆ ಇತ್ಯಾದಿಗಳಿಗೆ ಕುದನೆ ಶಮನಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಹೆಚ್ಚಿದ ರಕ್ತದೊತ್ತಡಕ್ಕೆ ಇದರಿಂದಲೇ ಔಷಧ ತಯಾರಿಸುತ್ತಾರೆ. ದಶಮೂಲಗಳಲ್ಲಿ ಕುದನೆಯೂ ಒಂದಾಗಿದೆ. ಮಾನಸಿಕ ಒತ್ತಡ, ನಿದ್ರಾಹೀನತೆ, ಉರಿಮೂತ್ರಗಳಿಗೂ ಕುದನೆ ಉಪಯುಕ್ತವಾದುದು.
    ಮಕ್ಕಳೇ, ಹಿತ್ತಲ ಗಿಡ ಮದ್ದಲ್ಲ ವೆಂಬ ಗಾದೆಯಂತೆ ಸ್ವಾದಿಷ್ಟ ರುಚಿಯ ಹಾಗೂ ಔಷಧದ ಗಣಿಯಾಗಿರುವ ಈ ಕುದನೆ ನಮ್ಮ ಕಣ್ಣಿಗೆ ಬರೀ ಒಂದು ಕಳೆ ಸಸ್ಯ!! ಅದರ ಇರುವಿಕೆಯ ಬಗ್ಗೆ ತಾತ್ಸಾರ.. ಕಡಿದು ಬಿಸಾಡಿದರೇ ಉತ್ತಮವಿತ್ತೆಂಬ ಕಿರಿಕಿರಿಯ ಮನೋಭಾವ ಎಷ್ಟು ಸರಿ... ಯೋಚಿಸಿದಿರಾ?
       ನಮ್ಮ ಸುತ್ತ ಮುತ್ತ ಈ ಗಿಡಗಳಿರಬಹುದು.. ಹುಡುಕಿ ಕಾಯಿಯ ಬಳಕೆಯನ್ನಾದರೂ ಮಾಡೋಣ... ಕಡಿಯದೆ ಕಾಪಾಡೋಣ.. ಅಲ್ಲವೇ?
     ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article