ಹಕ್ಕಿ ಕಥೆ : ಸಂಚಿಕೆ - 125
Tuesday, November 14, 2023
Edit
ಹಕ್ಕಿ ಕಥೆ : ಸಂಚಿಕೆ - 125
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಮೊನ್ನೆ ಸೋಮವಾರ ಅಂದ್ರೆ ನವೆಂಬರ್ 12 ಭಾರತ ಕಂಡ ಶ್ರೇಷ್ಠ ಪಕ್ಷಿ ತಜ್ಞ ಡಾ. ಸಲೀಂ ಅಲಿ ಯವರ ಜನ್ಮ ದಿನ. ಮೈಸೂರಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಮಿತ್ರರು ಇದೇ ದಿನ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ನೀನು ಬರ್ತೀಯಾ ಅಂತ ಹಲವು ದಿನಗಳ ಹಿಂದೆಯೇ ಕೇಳಿದ್ದರು. ದೀಪಾವಳಿಯ ರಜೆ ಹೇಗೂ ಇತ್ತು, ಇದೇ ಅವಕಾಶ ಎಂದುಕೊಂಡು ಬರುವುದಾಗಿ ಒಪ್ಪಿಕೊಂಡೆ.
ಬೆಳಗ್ಗೆ ಆರೂವರೆ ಗಂಟೆಗೇ ಕುಕ್ಕರಹಳ್ಳಿ ಕೆರೆಯ ಬಳಿ ಸೇರಿ ಪಕ್ಷಿವೀಕ್ಷಣೆ ಪ್ರಾರಂಭ ಮಾಡಿದೆವು.
ಕುಕ್ರಳ್ಳಿ ಕೆರೆ ಮೈಸೂರು ನಗರದ ಮಧ್ಯೆ ಇರುವ ಸುಂದರವಾದ ಕೆರೆ. ಮೈಸೂರು ವಿಶ್ವವಿದ್ಯಾನಿಲಯ ಇರುವ ವಿಶಾಲ ಪ್ರದೇಶದ ನಡುವೆ ಹುಣಸೂರು ರಸ್ತೆ ಮತ್ತು ಬೋಗಾದಿ ರಸ್ತೆಗಳ ನಡುವೆಯೇ ಈ ಕೆರೆ ಇದೆ. ಕೆರೆ ಏರಿಯ ಮೇಲೆ ನಡೆಯಲು ಆಗುವಷ್ಟು ಕಾಲುದಾರಿ ಇದೆ. ಒಂದು ಪೂರ್ಣ ಸುತ್ತು ನಡೆದರೆ ಸುಮಾರು ನಾಲ್ಕು ಕಿಲೋಮೀಟರ್ ಕ್ರಮಿಸಿದಂತಾಗುತ್ತದೆ. ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಮತ್ತು ಜಾಗಿಂಗ್ ಮಾಡಲು ಬರುತ್ತಾರೆ. ನಾವು ಸುಮಾರು ಹತ್ತು ಜನರ ಗುಂಪು ಕೆರೆ ಏರಿಯ ಮೇಲೆ ನಡೆಯುತ್ತಾ, ಅಲ್ಲಿ ಕಂಡ ಹಕ್ಕಿಗಳನ್ನು ಗಮನಿಸುತ್ತಾ, ಅವುಗಳ ಸ್ಥಳೀಯ ಮತ್ತು ಇಂಗ್ಲೀಷ್ ಹೆಸರುಗಳ ಬಗ್ಗೆ ಚರ್ಚೆ ಮಾಡುತ್ತಾ ಹೋಗುತ್ತಿದ್ದೆವು. ಬೆಳಗ್ಗೆ ಆರುವರೆಯಿಂದ ಒಂಭತ್ತೂವರೆ ನಡುವೆ ನೂರಾರು ಜನ ಓಡಾಡುತ್ತಿದ್ದರೂ ಸುಮಾರು ಮೂವತ್ತು ಬಗೆಯ ಪಕ್ಷಿಗಳು ನಮಗೆ ಕಾಣಸಿಕ್ಕವು ಅನ್ನುವುದು ವಿಶೇಷ. ಕೆರೆಯಲ್ಲಿ ತೇಲುತ್ತಾ, ಈಜುತ್ತಾ ಮೀನು ಹಿಡಿಯುವ, ಕೆರೆಯ ಅಂಚಿನಲ್ಲಿ ಓಡಾಡುತ್ತಾ ಆಹಾರ ಹುಡುಕುವ, ಕೆರೆಯ ಬದಿಯ ಮರಗಳಲ್ಲಿ ಮತ್ತು ಪೊದೆಗಳಲ್ಲಿ ಹಲವಾರು ಬಗೆಯ ಹಕ್ಕಿಗಳು ಇದ್ದವು.
ಕೆರೆಯ ಬದಿಯ ಮರಗಳಲ್ಲಿ ಚಳಿಗಾಲದ ಅತಿಥಿಯೊಂದು ಕಾಣಸಿಕ್ಕಿತು. ಸುಮಾರು ಮೈನಾ ಗಾತ್ರದ ಹಕ್ಕಿ. ತೆಳ್ಳಗೆ ಉದ್ದನೆಯ ಹಸಿರು ಬಣ್ಣದ ದೇಹ, ಕೊಕ್ಕಿನಿಂದ ಕಣ್ಣಿನವರೆಗೂ ಕಪ್ಪುಬಣ್ಣದ ಪಟ್ಟಿ, ಕಪ್ಪು ಬಣ್ಣದ ಪಿಕ್ಕಾಸಿಯಂತಹ ಕೊಕ್ಕು, ಕುತ್ತಿಗೆ ಭಾಗದಲ್ಲಿ ಕಂದುಮಿಶ್ರಿತ ಕೇಸರಿ ಬಣ್ಣ. ನೀಲಿ ಬಣ್ಣದ ಉದ್ದನೆಯ ಬಾಲ.
ಮರದ ತುದಿಯ ಕೊಂಬೆಯ ಮೇಲೆ ಕುಳಿತು ಅತ್ತ ಇತ್ತ ನೋಡುತ್ತಿತ್ತು. ಅದೇನೊ ಕಂಡಕೂಡಲೇ ತಕ್ಷಣ ಕವಣೆಯಿಂದ ಬಿಟ್ಟ ಕಲ್ಲಿನಂತೆ ಫಟ್ಟನೆ ನೆಗೆದು ಹಾರಾಡುವ ಹುಳವೊಂದನ್ನು ಹಿಡಿದು, ಮತ್ತೆ ಅದೇ ಕೊಂಬೆಯ ಮೇಲೆ ಬಂದು ಕುಳಿತಿತು. ಹಿಡಿದ ಜೇನುಹುಳದಂತಹ ಯಾವುದೋ ಕೀಟವನ್ನು ಕೊಂಬೆಗೆ ಉಜ್ಜಿ ಅದನ್ನು ಸಾಯಿಸಿ ಇಡಿಯಾಗಿ ನುಂಗುತ್ತಿತ್ತು. ಆಸುಪಾಸಿನ ಕೊಂಬೆಯಲ್ಲಿ ಕುಳಿತ ಉಳಿದ ಹಕ್ಕಿಗಳದ್ದೂ ಇದೇ ಕೆಲಸ. ಕಳ್ಳಪೀರ ಅಥವಾ ಜೇನುಹಿಡುಕ ಜಾತಿಗೆ ಸೇರಿದ ನೀಲಿಬಾಲದ ಈ ಹಕ್ಕಿ ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುತ್ತದೆ. ಬೇಸಗೆಯಲ್ಲಿ ಮತ್ತೆ ಉತ್ತರ ಭಾರತಕ್ಕೆ ಹೋಗುತ್ತದೆ. ನಮ್ಮೂರಿನಲ್ಲಿ ಕಾಣುವ ಸಾಮಾನ್ಯ ಜೇನುಹಿಡುಕಕ್ಕಿಂತ ಗಾತ್ರದಲ್ಲಿ ತುಸು ದೊಡ್ಡದು. ನೀರು ಇರುವ ಪ್ರದೇಶಗಳಲ್ಲಿ ಮರಗಳ ಮೇಲೆ ಕಾಣಸಿಗುತ್ತದೆ. ಹಾರಾಡುವ ಕೀಟಗಳೇ ಇದರ ಮುಖ್ಯ ಆಹಾರ.
ಕನ್ನಡ ಹೆಸರು: ನೀಲಿಬಾಲದ ಕಳ್ಳಪೀರ
ಇಂಗ್ಲೀಷ್ ಹೆಸರು: Blue-Tailed Bee-eater
ವೈಜ್ಞಾನಿಕ ಹೆಸರು: Merops philippinus
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************