ನಿಷ್ಪಾಪಿ ಸಸ್ಯಗಳು : ಸಂಚಿಕೆ - 22
Wednesday, November 1, 2023
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 22
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ..? ಶಾಲಾ ದಿನಗಳು ಮತ್ತೆ ಉಲ್ಲಾಸವನ್ನು ತುಂಬಲಾರಂಭಿಸಿವೆಯಲ್ಲವೇ..? ನಾನಿಂದು ನಿಮಗೆ ತುಂಬಾ ಸುಂದರವಾದ ಬಳ್ಳಿಯೊಂದರ ಪರಿಚಯ ಮಾಡಲಿದ್ದೇನೆ. ಎಲ್ಲಾ ಬಳ್ಳಿಗಳಂತೆ ಇದು ತುಂಬಾ ಮೃದುವಾಗಿಲ್ಲ. ಎಲೆಗಳಿಂದ ತುಂಬಿಕೊಂಡಿಲ್ಲ... ಆಧಾರ ಸಿಕ್ಕಿದ ಕೂಡಲೇ ಅವಸರವಸರವಾಗಿ ಹಬ್ಬದು. ಇದೇನಿದ್ದರೂ ನಿಮ್ಮ ಕೈಬೆರಳುಗಳ ಗಂಟುಗಳ ಜೋಡಣೆಯಂತೆ ಎರಡೆರಡು ಅಂಗುಲದ ಒಂದು ತುಂಡಿಗೆ (ಗಿಣ್ಣಿಗೆ) ಇನ್ನೊಂದು ತುಂಡು ಅಂಟಿಯಂಟಿ ಬೆಳೆಯುತ್ತದೆ. ಒಂದು ಗಿಣ್ಣು ಬೆಳೆದು ಬಳಿಕ ಒಂದು ಪುಟಾಣಿ ಎಲೆ ಮೂಡಿದ ಬಳಿಕ ಮುಂದಿನ ಗಿಣ್ಣು ರೂಪುಗೊಳ್ಳುವುದು. ಎಲೆಗಳು ಪರ್ಯಾಯವಾಗಿ ಜೋಡಿಸಲ್ಪಟ್ಟು ಪ್ರತಿ ಎಲೆಗೆ ಅಭಿಮುಖವಾಗಿ ತಂತುಕುಡಿ ಇರುತ್ತದೆ. ಬಳ್ಳಿಯ ಬೆಳವಣಿಗೆಯೇ ಈ ಕುಡಿಮೊಗ್ಗಿನಿಂದ. ಈ ತುದಿ ಮೊಗ್ಗೇ ತಂತು ಕುಡಿಯಾಗುವುದು. ಈ ರೀತಿಯ ಬೆಳವಣಿಗೆಗೆ ಸಿಂಪೋಡಿಯಲ್ ಎನ್ನುವರು. ಬಳ್ಳಿಯೂ ಉರುಟುರುಟಾಗಿದೆ. ಮೂರು ಅಥವಾ ನಾಲ್ಕು ಮೂಲೆಗಳಿದ್ದು ಚಪ್ಪಟೆಯಾಗಿ, ಹಸಿರಾಗಿ, ನಯವಾಗಿ ರೂಪುಗೊಂಡಿರುತ್ತದೆ. 15 ರಿಂದ 20 ಅಡಿಗಳೆತ್ತರವೂ ಏರಬಲ್ಲದು. ಇದರಲ್ಲಿ ಹಳದಿ ಬಣ್ಣದ ಪುಟಾಣಿ ಹೂಗಳ ಗೊಂಚಲುಗಳಿದ್ದು ಹೂಗಳು ದ್ವಿಲಿಂಗಿಗಳಾಗಿವೆ. ಪ್ರತಿ ಹೂವಲ್ಲೂ ನಾಲ್ಕು ಪತ್ರಕ, ನಾಲ್ಕು ದಳ, ನಾಲ್ಕು ಕೇಸರಗಳಿರುತ್ತವೆ. ಸಣ್ಣ ಗಾತ್ರದ ಕಾಯಿಯಾಗುವುದು.
ಇದೊಂದು ಕ್ಯಾಕ್ಟಸ್ ಜಾತಿಯ ಬಳ್ಳಿ. ಇದನ್ನು ಸಂದು ಬಳ್ಳಿ, ಮಂಗರವಳ್ಳಿ, ವಜ್ರವಲ್ಲಿ ಎಂದೂ ಕರೆಯುತ್ತಾರೆ. ಭಾರತದಾದ್ಯಂತ ಬೆಳೆಯುವ ಈ ಬಳ್ಳಿ ಬೇಲಿ ಪೊದೆಗಳ ಮೇಲೆ ತಂತುಕುಡಿಗಳ ನೆರವಿನಿಂದ ಹರಡಿಕೊಳ್ಳುತ್ತದೆ. ಅಲಂಕಾರಿಕ ಸಸ್ಯವಾಗಿಯೂ ಬೆಳೆಸಲ್ಪಡುತ್ತದೆ.
ಸಿಸ್ಸಸ್ ಕ್ವಾಡ್ರಾಂಗ್ಯುಲ್ಯಾರಿಸ್ ಎಂಬ ವೈಜ್ಞಾನಿಕ ಹೆಸರಿರುವ ಈ ಸಂದುಬಳ್ಳಿ ವೈಟೇಸಿ ಕುಟುಂಬಕ್ಕೆ ಸೇರಿದೆ. ಅಪಾರವಾದ ಕ್ಯಾಲ್ಸಿಯಂ ಅಂಶ ಹೊಂದಿರುವ ಈ ಸಸ್ಯವನ್ನು ಅನೇಕ ರೀತಿಯಲ್ಲಿ ಔಷಧವಾಗಿ ಬಳಸುತ್ತಾರೆ. ಚಟ್ನಿ, ಗಂಜಿ, ಎಣ್ಣೆ ಕಾಯಿಸಿ ಬಳಸಲೂ ಕೆಲವೊಮ್ಮೆ ಸೂಚಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ನಿಷ್ಪಾಪಿ ಸಸ್ಯವು ಮೂಳೆ ಸವಕಳಿ, ಮೂಳೆ ಮುರಿತ, ಸಂದು ನೋವು, ಎಲುಬು ತೂತಿನ ರೋಗಗಳಿಗೆ ರಾಮಬಾಣವಾಗಿದೆ. ನೋವಿರುವಲ್ಲಿ, ಮುರಿತಗಳಾದಲ್ಲಿ ಈ ಬಳ್ಳಿಯನ್ನು ಜಜ್ಜಿ ಪ್ಲಾಸ್ಟರ್ ನಂತೆ ಕಟ್ಟಿದರೆ ಕೆಲವೇ ದಿನಗಳಲ್ಲಿ ನೋವು ಶಮನಗೊಳ್ಳುವುದು.. ಮುರಿದ ಮೂಳೆ ಶಾಶ್ವತವಾಗಿ ಜೋಡಣೆಯಾಗುವುದೆಂದು ಹಿರಿಯರ ಅನುಭವದ ಮಾತು. ಆದ್ದರಿಂದಲೇ ಸಂಸ್ಕೃತದಲ್ಲಿ ಈ ಸಂದುಬಳ್ಳಿಯನ್ನು ಅಸ್ಥಿಶೃಂಖಲಾ ಎನ್ನುತ್ತಾರೆ. ಮರದಿಂದ ಜೋತು ಬಿದ್ದಂತೆ ಕಾಣುವುದರಿಂದ ಮಂಗರವಳ್ಳಿ ಎನ್ನುತ್ತಾರೆ. ಮೂಲವ್ಯಾಧಿ, ಅಜೀರ್ಣ, ಉಬ್ಬಸ, ಕಿವಿನೋವು, ಬೊಜ್ಜು, ರಕ್ತದೊತ್ತಡಗಳಿಗೂ ಪರಿಹಾರ ನೀಡುವ ಈ ಬಳ್ಳಿಯ ರಸವನ್ನು ಹಳ್ಳಿಗಳಲ್ಲಿ ಹಪ್ಪಳ ಖಾರವಾಗುವಂತೆ ಮಾಡಲು ಸೇರಿಸುತ್ತಾರೆ.
ಮಕ್ಕಳೇ, ಇದನ್ನು ಬೆಳೆಸುವುದು ಬಹು ಸುಲಭ. ಎರಡು ಗಿಣ್ಣಿರುವ ಒಂದು ತುಂಡನ್ನು ಮಣ್ಣಲ್ಲಿ ಅಥವಾ ಚಟ್ಟಿಯಲ್ಲಿ ನೆಟ್ಟರೆ ಕುಡಿಯೊಡೆಯಲು ತಯಾರಾಗುತ್ತದೆ. ಇದರಿಂದ ಯಾವುದೇ ಇತರ ಗಿಡಗಳಿಗೆ ತೊಂದರೆಯಾಗದು. ರೋಗ, ಕೀಟ ಬಾಧೆಗಳು ಈ ಸಸ್ಯಕ್ಕೆ ಬರದ ಕಾರಣ ಹೆಚ್ಚಿನ ಕಾಳಜಿಯೂ ಬೇಕಾಗಿಲ್ಲ. ಅದರ ಬೆಳವಣಿಗೆಯನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಕುರುಚಲು ಕಾಡಿನಲ್ಲಿ ಬೆಳೆಯುತ್ತದೆಯಾದರೂ ಅಳಿವಿಗೆ ಸಮೀಪವಾಗಿರುವ ಗಿಡವೇ ಸರಿ. ಕಾಪಾಡುವುದು ಹಾಗೂ ಸೃಷ್ಟಿಯ ವೈಚಿತ್ರ್ಯ ಗುರುತಿಸುವುದು ನಮ್ಮ ಕರ್ತವ್ಯವೂ ಆಗಬೇಕಲ್ಲವೇ? ಆ ಕೆಲಸ ನೀವು ಆರಂಭಿಸಿದ್ದೀರೆಂದು ಭಾವಿಸಿದ್ದೇನೆ.
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************