ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 2
Tuesday, November 14, 2023
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 2
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ದೀಪಾವಳಿ ಎಂದರೆ ದೀಪಗಳ ಹಬ್ಬ. ಮನೆ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸುತ್ತೇವೆ. ಇವತ್ತು ನಾನು ನಿಮಗೆ ಎರಡು ಕತೆಗಳನ್ನೂ ಇನ್ನೊಂದಷ್ಟು ವೈಜ್ಞಾನಿಕ ವಿಷಯಗಳನ್ನೂ ಹೇಳುತ್ತೇನೆ.
ಈ ದೀಪಾವಳಿ ನರಕ ಚತುರ್ದಶಿಯೊಂದಿಗೆ ಆರಂಭವಾಗುತ್ತದೆ. ಅಂದು ಕೃಷ್ಣ ನರಕಾಸುರನ ವಧೆಗೆ ಕಾರಣನಾದ ದಿನ. ವಿಷ್ಣುವಿನ ವರಾಹಾವತಾರದ ವೇಳೆ ವಿಷ್ಣುವಿನ ಒಂದು ಹನಿ ಬೆವರು ಭೂಮಿಯ ಮೇಲೆ ಬಿತ್ತು. ಇದು ಭೌಮಾಸುರನ ಹುಟ್ಟಿಗೆ ಕಾರಣವಾಯಿತು. ಈ ಭೌಮನ ಇನ್ನೊಂದು ಹೆಸರು ನರಕ. ಇವನಿಗೆ ತಾಯಿ ಭೂದೇವಿ ವಿಷ್ಣುವಿನಿಂದ ವೈಷ್ಣವಾಸ್ತ್ರ ಕೊಡಿಸಿದಳು. ನರಕ ಬ್ರಹ್ಮನನ್ನು ತಪಸ್ಸಿನಲ್ಲಿ ಒಲಿಸಿಕೊಂಡು ತನಗೆ ತಾಯಿಯಿಂದ ಮಾತ್ರ ಮರಣ ಬರಲಿ ಎಂದು ವರ ಪಡೆದುಕೊಂಡ. ಭೂಲೋಕದ ಎಲ್ಲ ರಾಜರನ್ನೂ ಸೋಲಿಸಿ ಅವರ ರಾಣಿಯರನ್ನೂ ಪುತ್ರಿಯರನ್ನೂ ಹೊತ್ತೊಯ್ದು ತನ್ನ ರಾಜಧಾನಿಯಾದ ಪ್ರಾಗ್ಜೋತಿಷಪುರದಲ್ಲಿ ಬಂಧನದಲ್ಲಿಟ್ಟ. ಮತ್ತೆ ದೇವಲೋಕಕ್ಕೆ ದಾಳಿ ಮಾಡಿ ಇಂದ್ರನ ಕೊಡೆಯನ್ನೂ ಆತನ ತಾಯಿ ಅದಿತಿಯ ಕಿವಿಯೋಲೆಗಳನ್ನೂ ಅಪಹರಿಸಿದ. ಭಯಭೀತನಾದ ಇಂದ್ರ ದ್ವಾರಕೆಗೆ ಹೋಗಿ ಕೃಷ್ಣನನ್ನು ಬೇಡಿದ. ಕೃಷ್ಣ ತನ್ನ ಪತ್ನಿ ಸತ್ಯಭಾಮೆಯೊಡನೆ ಯುದ್ದಕ್ಕೆ ಹೊರಟ. ಕೃಷ್ಣ ನರಕನ ಮಿತ್ರ ಬಲಾಢ್ಯ ಮುರನನ್ನು ಕೊಂದ. ಆದರೆ ನರಕ ಕೃಷ್ಣನನ್ನು ರಥದಲ್ಲಿ ಹೊಡೆದು ಕೆಡವಿದ. ಆಗ ಬಳಿಯಲ್ಲಿದ್ದ ಸತ್ಯಭಾಮೆ ಹೆದರಲಿಲ್ಲ. ಆಕೆ ಘೋರ ಯುದ್ಧ ಮಾಡಿದಳು. ಈ ರೀತಿ ಸ್ತ್ರೀಯರ ಅಸೀಮ ಸಾಹಸ ಇಂದು ನಿನ್ನೆಯದಲ್ಲ ಅಲ್ಲವೇ. ಕೃಷ್ಣನಿಗೆ ನರಕನ ವರದ ಬಗೆಗೆ ಗೊತ್ತಿತ್ತು. ಆತನಿಗೆ ತಾಯಿಯಿಂದ ಮಾತ್ರ ಮರಣ ಎಂದು. ಅದಕ್ಕೆ ಆತ ಸತ್ಯಭಾಮೆಯನ್ನು ತನ್ನೊಂದಿಗೆ ಕರೆದೊಯ್ದಿದ್ದ. ಭೂದೇವಿಯ ಅವತಾರವಾಗಿದ್ದ ಸತ್ಯಭಾಮೆ ನರಕನನ್ನು ಕೊಂದಳು. ತನ್ನ ಅಂತಿಮ ಕಾಲದಲ್ಲಿ ನರಕನಿಗೆ ಜ್ಞಾನೋದಯವಾಯಿತು. ಕೃಷ್ಣನನ್ನು ಕ್ಷಮಿಸುವಂತೆ ಬೇಡಿಕೊಂಡ. ತನ್ನ ಸಾವಿನ ಕಾಲವಾದ ಆಶ್ವಯುಜ ಕೃಷ್ಣ ಪಕ್ಷದ ಚತುರ್ದಶಿಯಂದು ಚಂದ್ರೋದಯಕ್ಕೆ ಸರಿಯಾಗಿ ಎಣ್ಣೆ ಹಚ್ಚಿ ಕೊಂಡು ಸ್ನಾನ ಮಾಡುವವರಿಗೆ ಗಂಗಾಸ್ನಾನದ ಪುಣ್ಯ ಲಭಿಸುವಂತೆಯೂ ತನ್ನ ಬಂಧನದಲ್ಲಿರುವ 16000 ಸ್ತ್ರೀಯರನ್ನು ಬಂಧಮುಕ್ತ ಮಾಡಿ ಉದ್ಧರಿಸುವಂತೆಯೂ ಬೇಡಿಕೊಂಡ. ಕೃಷ್ಣ ತನ್ನ ತಪ್ಪೊಪ್ಪಿಕೊಂಡ ನರಕನಿಗೆ ಮೋಕ್ಷ ಕರುಣಿಸಿದ. ತಪ್ಪು ಮಾಡುವುದು ಸಹಜ ಆದರೆ ಅದರ ಅರಿವಾಗುವುದು ಬಹಳ ಮುಖ್ಯ ಅಲ್ಲವೇ ಮಕ್ಕಳೇ. ನೀವೂ ಮನೆಯಲ್ಲಿಯೇ ಗಂಗಾ ಸ್ನಾನ ಮಾಡಿದಿರಿ ಅಲ್ಲವೇ?
ದೀಪಾವಳಿಯ ಎರಡನೆಯ ಆಚರಣೆ ಬಲಿ ಪಾಡ್ಯಮಿ. ಇದು ಬಲೀಂದ್ರನನ್ನು ಪೂಜಿಸುವ ದಿನ. ಈ ಬಲೀಂದ್ರ ಯಾರು ಎಂದು ಕೇಳುತ್ತೀರಾ? ಇವನು ಹಿರಣ್ಯ ಕಶಿಪುವಿನ ಮಗ ಪ್ರಹ್ಲಾದನ ಮೊಮ್ಮಗ. ಈತ ಧರ್ಮ ಭೀರೂವೂ, ದೈವ ಭಕ್ತನೂ, ಪ್ರಜಾನುರಾಗಿಯೂ ದಾನಶೂರನೂ ಆಗಿದ್ದ. ಆದರೆ ಇವನ ಕೀರ್ತಿಯನ್ನು ನೋಡಿ ಇಂದ್ರ ವಿಷ್ಣುವಿನ ಬಳಿ ಮೊರೆ ಇಟ್ಟ. ವಿಷ್ಣು ಕುಳ್ಳ ವಾಮನನ ಅವತಾರದಲ್ಲಿ ಬಲಿಯ ಎದುರು ನಿಂತ. ಮೂರು ಹೆಜ್ಜೆ ಜಾಗವನ್ನು ದಾನ ಕೇಳಿದ. ಬಲಿ ದಾನ ಕೊಟ್ಟ. ವಾಮನ ಒಂದು ಹೆಜ್ಜೆಯಲ್ಲಿ ಭೂಮಿಯನ್ನು ಅಳೆದ, ಎರಡನೆಯ ಹೆಜ್ಜೆಯಲ್ಲಿ ಆಕಾಶವನ್ನು ಅಳೆದು ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದ. ಬಲಿ ತನ್ನ ತಲೆಯನ್ನು ತೋರಿಸಿದ. ವಾಮನ ಬಲಿಯನ್ನು ಪಾತಾಳಕ್ಕೆ ಒತ್ತಿದ. ಈ ಸಂದರ್ಭದಲ್ಲಿ ಬಲಿ ಚಿರಂಜೀವಿಯಾಗುವಂತೆಯೂ ವರ್ಷಕ್ಕೊಮ್ಮೆ ಆತನ ಪ್ರಜೆಗಳನ್ನು ನೋಡಲು ಭೂಲೋಕಕ್ಕೆ ಬರುವ ಅವಕಾಶವನ್ನೂ ವಾಮನ ಕರುಣಿಸಿದ. ಕೇರಳೀಯರು ಬಲಿ ಓಣಂ ಹಬ್ಬಕ್ಕೆ ಬರುತ್ತಾನೆಂದರೆ ಕರ್ನಾಟಕದವರು ದೀಪಾವಳಿಯ ವರೆಗೆ ಕಾಯುತ್ತಾರೆ ಅಲ್ಲವೇ. ಅಂದು ಗದ್ದೆಯಲ್ಲಿ ಹೂ, ಹಿಟ್ಟು ಮತ್ತು ದೀಪವನ್ನಿಟ್ಟು ಬಲೀಂದ್ರನನ್ನು ನೀವೂ ಕರೆಯುವುದು ವಾಡಿಕೆ. ಬಲೀಂದ್ರನನ್ನು ಕರೆದಿದ್ದೀರಾ?
ಮಕ್ಕಳೇ ನಮ್ಮ ದೇಹದ ಬೆಳವಣಿಗೆಯನ್ನು ನಿಯಂತ್ರಿಸುವ ಒಂದು ಹಾರ್ಮೋನ್ ಇದೆ. ಇದೇ ಪಿಟ್ಯುಟರಿನ್. ಪಿಟ್ಯುಟರಿನ್ ಹಾರ್ಮೋನ್ ಕಡಿಮೆಯಾದರೆ ವ್ಯಕ್ತಿ ವಾಮನರಾಗುತ್ತಾರೆ (dwarfs). ಇಂತಹ ಕುಳ್ಳ ಒಂದೇ ಹೆಜ್ಜೆಯಲ್ಲಿ ಆಕಾಶವನ್ನು ಅಳೆಯಬಹುದೇ ಎಂದು ನಿಮಗೆ ಅನುಮಾನ ಮೂಡಿದೆ ಅಲ್ಲವೇ? ತ್ರಿಕೋನ ಮಿತಿಯ ಮೂಲಕ (trigonometry) ಇಂತಹ ಪವಾಡ ಸಾಧ್ಯ ಎಂಬುದನ್ನು ನೀವು ಮುಂದೆ ಓದಿ ತಿಳಿದುಕೊಳ್ಳಬಹುದು.
ನೀವು ಹಚ್ಚುವ ಗೂಡು ದೀಪದ ಬಗ್ಗೆ ಹೇಳದೇ ದೀಪಾವಳಿಯ ಕಥೆ ಪೂರ್ಣವಾಗುವದಿಲ್ಲ ಅಲ್ಲವೇ? ಗೂಡುದೀಪವನ್ನು ಆಕಾಶ ಬುಟ್ಟಿ ಅಥವಾ ಯಮದೀಪ ಎಂದೂ ಕರೆಯುತ್ತಾರೆ. ಈಗ ಮನೆಯ ಮುಂದುಗಡೆ ತೂಗು ಹಾಕುವ ಈ ದೀಪವನ್ನು ಮೊದಲು ಮನೆಗಿಂತ ಎತ್ತರದ ಒಂದು ಕಂಬಕ್ಕೆ ಕಟ್ಟುತ್ತಿದ್ದರು. ಅದನ್ನು ಕೆಳಗಿಳಿಸಿ ದಿನಾಲೂ ಅದರಲ್ಲಿ ಎಣ್ಣೆಯ ದೀಪ ಹಚ್ಚಿ ಮೇಲಕ್ಕೇರಿಸುತ್ತಿದ್ದರು. ಆದರೆ ಈಗ ವಿದ್ಯುತ್ ದೀಪ ಬಂದಿದೆ. ಒಳಗಡೆ ನಿಂತು ಸ್ವಿಚ್ ಅದುಮಿದರಾಯಿತು. ಈಗ ಚೀನಾದಲ್ಲಿ ಮಾಡಿದ ಯಮ ದೀಪಗಳು ವಿವಿಧ ಮಾದರಿಯಲ್ಲಿ ಅಗ್ಗದಲ್ಲಿ ದೊರೆಯುತ್ತವೆ. ಇದರಿಂದ ನಮ್ಮ ದೇಶದ ಕಲಾಕಾರರಿಗೆ ತೊಂದರೆಯಾಗುತ್ತದೆ. ಆದ್ದರಿಂದ ದೇಶೀ ನಿರ್ಮಿತ ಗೂಡುದೀಪಗಳನ್ನು ಮಾತ್ರ ಖರೀದಿಸೋಣ.
ಈ ಯಮ ದೀಪಗಳನ್ನು ಯಾಕೆ ಹಚ್ಚುತ್ತಾರೆ ಎಂದು ನಿಮ್ಮ ಹಿರಿಯರ ಬಳಿ ಕೇಳಿದ್ದೀರಾ? ಇದು ಪಿತೃಗಳಿಗೆ ದಾರಿ ತೋರಿಸುತ್ತದೆ ಎನ್ನುತ್ತಾರವರು. ವೈಜ್ಞಾನಿಕವಾಗಿ ಇದರ ಮಹತ್ವವೇನು ಎಂದು ತಿಳಿಯೋಣ. ನಿಮಗೆ ಕೀಟಗಳ ಜೀವನ ಚಕ್ರದ ಬಗ್ಗೆ ತಿಳಿದಿದೆ ತಾನೇ. ಹಾರುವ ಪತಂಗ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರ ಬರುವ ಲಾರ್ವಾಗಳು ಹುಳುವಿನಂತಿದ್ದು ತಿನ್ನುತ್ತಾ ತಿನ್ನುತ್ತಾ ಗೂಡು ಕಟ್ಟಿ ಕೋಶಾವಸ್ಥೆಯಲ್ಲಿ (pupa) ಒಂದಷ್ಟು ದಿನ ಇದ್ದು ಬಿಡುತ್ತವೆ. ರೇಷ್ಮೆ ಹುಳು ಗೂಡು ಕಟ್ಟುತ್ತದಲ್ಲ ಹಾಗೆ ನಂತರ ಅವು ಬಣ್ಣದ ಪತಂಗಗಳಾಗಿ ಹಾರಾಟ ಆರಂಭಿಸುತ್ತವೆ. ಕೀಟಗಳು ಸೋಣ ತಿಂಗಳಿನಲ್ಲಿ ಲಾರ್ವಾ ಹಂತದಲ್ಲಿರುತ್ತವೆ. ಅವು ಹರಿದಾಡಿ ಮನೆಯೊಳಗೆ ಬರಬಾರದೆಂದು ರಂಗವಲ್ಲಿ ಹಾಕುವ ಹೊಸ್ತಿಲು ಬರೆಯುವ ಪದ್ದತಿ ಇದೆಯಲ್ಲವೇ. ರಂಗೋಲಿಗೆ ಮೊದಲು ಆಹಾರವಾದ ಅಕ್ಕಿ ಹಿಟ್ಟನ್ನು ಬಳಸುತ್ತಿದ್ದರು. ದೀಪಾವಳಿಯ ಸಮಯಕ್ಕೆ ಅವು ಹಾರಾಟ ಆರಂಭಿಸುತ್ತವೆ. ನಮ್ಮ ಮನೆಯ ಯಮ ದೀಪ ಇವುಗಳನ್ನಾಕರ್ಷಿಸುತ್ತವೆ ಮತ್ತು ಅವುಗಳು ದೀಪಕ್ಕೆ ಬಿದ್ದು ಯಮಪುರಿಗೆ ಸಾಗುತ್ತವೆ. ಹೊಸ್ತಿಲು ಬರೆಯುವುದು ಮತ್ತು ಆಕಾಶ ಬುಟ್ಟಿ ನಮ್ಮ ಹಿರಿಯರು ಅನುಸರಿಸುತ್ತಿದ್ದ ಕೀಟ ನಿಯಂತ್ರಣಾ ಕ್ರಮ.
ಈ ಆಕಾಶ ಬುಟ್ಟಿಗಳನ್ನು ದಶಂಬರದಲ್ಲಿ ಬರುವ ವೈಕುಂಠ ಏಕಾದಶಿಯ ದಿನ ಕೆಳಗಿಳಿಸುತ್ತೇವೆ. ಜನವರಿ 15 ಕ್ಕೆ ಆರಂಭವಾಗುವ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆಗೆಯುತ್ತದೆ. ಅದಕ್ಕಾಗಿ ಗರುಡ ಭೂಮಿಯಿಂದ ವೈಕುಂಠ ಏಖಾದಶಿಯ ದಿನ ಹೊರಡುತ್ತಾನೆ ಎಂದು ನಂಬಲಾಗಿದೆ. ಆದರೆ ಭೌಗೋಳಿಕವಾಗಿ ಉತ್ತರಾಯಣ ಆರಂಭವಾಗುವುದು ದಶಂಬರ 21 ಕ್ಕೆ. ವೈಕುಂಠ ಏಕಾದಶಿ ಈ ದಿನಕ್ಕೆ ತುಂಬಾ ಹತ್ತಿರವಿರುವುದರಿಂದ ಅದಕ್ಕೆ ಅಷ್ಟೊಂದು ಮಹತ್ವ.
ಮಕ್ಕಳೇ ಪ್ರತಿಯೊಂದು ಹಬ್ಬದ ಹಿಂದೆ ಒಂದಷ್ಟು ಪೌರಾಣಿಕ ಹಿನ್ನೆಲೆಯಿದೆ ಹಾಗೂ ವೈಜ್ಞಾನಿಕ ಮಹತ್ವವೂ ಇದೆ. ನಾವು ಅವುಗಳನ್ನು ಅರಿತು ಆಚರಿಸಿದರೆ ನಮ್ಮ ಹಬ್ಬಗಳು ಹೆಚ್ಚು ಅರ್ಥಪೂರ್ಣವಾಗುತ್ತವಲ್ಲವೇ.
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************