-->
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಚಾರುವಸಂತ ನಾಟಕ

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಚಾರುವಸಂತ ನಾಟಕ

        ಮೂಡುಬಿದ್ರೆಯಲ್ಲಿ ಚಾರುವಸಂತ ನಾಟಕ
ಆಳ್ವಾಸ್ ನಿಂದ ಹಂಪನಾರ ದೇಸೀಕಾವ್ಯಕ್ಕೆ ಹೊಸ ರಂಗರೂಪ

     ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕನ್ನಡದ ಶ್ರೇಷ್ಠ ಕಾವ್ಯವೊಂದನ್ನು ರಂಗಕ್ಕೆ ತರುತ್ತಿದೆ. ಅ.29 ರಂದು ಸಂಜೆ 6.15ಕ್ಕೆ ಮೂಡುಬಿದ್ರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಸಿದ್ಧಪಡಿಸಿಕೊಂಡ ಚಾರುವಸಂತ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ.
      ಹಿರಿಯ ಸಾಹಿತಿ ಹಾಗೂ ಸಂಶೋಧಕರಾದ ನಾಡೋಜ ಹಂಪನಾ ರಚಿಸಿರುವ ಚಾರುವಸಂತ ಎಂಬ ದೇಸೀ ಕಾವ್ಯವನ್ನು ಡಾ.ನಾ.ದಾ.ಶೆಟ್ಟಿಯವರು ರಂಗರೂಪಕ್ಕಿಸಿದ್ದಾರೆ. ಡಾ| ಜೀವನ್ ರಾಂ ಸುಳ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ.
      ಚಾರುವಸಂತ ಈಗಾಗಲೇ 16 ಭಾಷೆಗಳಿಗೆ ಅನುವಾದಗೊಂಡ ಹಂಪನಾರವರ ಪ್ರಸಿದ್ಧ ಮಹಾಕಾವ್ಯ. ದೇಶದ ಪ್ರಾಚೀನ ಕಥಾ ಪರಂಪರೆಯಲ್ಲಿ ಚಾರುದತ್ತನ ಕಥೆಗೆ ವಿಶಿಷ್ಟ ಸ್ಥಾನವಿದೆ. ಕ್ರಿಸ್ತ ಪೂರ್ವದಿಂದ ತೊಡಗಿ ಜೈನ- ಅಜೈನ ಎಂಬ ಭೇದಭಾವವಿಲ್ಲದೆ ಈ ಕಥೆಯನ್ನು ಪ್ರೇರಣೆಯಾಗಿಟ್ಟುಕೊಂಡು ಹಲವಾರು ಮಂದಿ ಕಾವ್ಯ ರಚಿಸಿದ್ದಾರೆ. ಶೃಂಗಾರ ಮತ್ತು ಸಾಹಸ ಪ್ರಧಾನವಾದ ಈ ಕಥೆಯ ಮೂಲಕ ವರ್ತಮಾನದ ಸವಾಲು ಹಾಗೂ ತಲ್ಲಣಗಳಿಗೆ ಉತ್ತರಿಸುವ ಪ್ರಯತ್ನವನ್ನು ಹಂಪನಾ ಮಾಡಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಪ್ರಯೋಗವನ್ನು ಬಹಳ ಭಿನ್ನವಾಗಿ ರಂಗಕ್ಕಿಳಿಸಲು ಜೀವನ್ ರಾಂ ಸುಳ್ಯ ಶ್ರಮಿಸಿದ್ದಾರೆ.
     
            ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ, ಹಿರಿಯ ಸಂಶೋದಕರು ಹಾಗೂ ಕೃತಿಕಾರ ನಾಡೋಜ ಡಾ. ಹಂ.ಪ.ನಾಗರಾಜಯ್ಯ ಚಾರುವಸಂತ ರಂಗಪಯಣವನ್ನು ಉದ್ಘಾಟಿಸಲಿದ್ದಾರೆ.
ಚಾರುವಸಂತ ಕಾವ್ಯವನ್ನು ನಾಟಕವನ್ನಾಗಿಸಿದ ಡಾ.ನಾ.ದಾಮೋದರ ಶೆಟ್ಟಿ,ಆಳ್ವಾಸ್ ಕಾಲೇಜು ಪ್ರಾಂಶುಪಾಲರಾದ ಪ್ರೊ| ಕುರಿಯನ್ ಹಾಗೂ ಆಳ್ವಾಸ್ ಪ.ಪೂ.ಕಾಲೇಜು ಪ್ರಾಂಶುಪಾಲರಾದ ಪ್ರೊ| ಮಹಮ್ಮದ್ ಸದಾಕತ್ ಉಪಸ್ಥಿತರಿರುವರು.
        ಸಮಯಕ್ಕೆ ಸರಿಯಾಗಿ ಆರಂಭವಾಗುವ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಸಭಾ ಕಾರ್ಯಕ್ರಮ ಕೇವಲ 15 ನಿಮಿಷ ಮಾತ್ರ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ ಆಳ್ವ ತಿಳಿಸಿದ್ದಾರೆ.

       ರಾಜ್ಯ- ದೇಶಾದ್ಯಂತ ಪಯಣಿಸಲಿರುವ ಚಾರುವಸಂತ ಮೊದಲ ಹಂತದಲ್ಲಿ ಅಕ್ಟೋಬರ್ - 29 ಮೂಡುಬಿದ್ರೆಯ ಪ್ರದರ್ಶನದ ನಂತರ
ಅಕ್ಟೋಬರ್ - 31 ರಂದು ಕಲಾಮಂದಿರ ಮೈಸೂರು, ನವೆಂಬರ್ -02 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ನವೆಂಬರ್ - 04 ಡಾ.ಹೆಚ್.ಎನ್.ಕಲಾಮಂದಿರ ಗೌರಿಬಿದನೂರು, ನವೆಂಬರ್ - 06 ಗುಬ್ಬಿ ವೀರಣ್ಣ ಕಲಾಮಂದಿರ ತುಮಕೂರು, ನವೆಂಬರ್ - 08 ರಂದು ತ.ರಾ.ಸು.ರಂಗಮಂದಿರ ಚಿತ್ರದುರ್ಗ, ನವೆಂಬರ್ - 10 ರಂದು ಮಲ್ಲಿಕಾರ್ಜುನ ರಂಗಮಂದಿರ ದಾವಣಗೆರೆ, ನವೆಂಬರ್ - 12 ಡಾ.ಪಾಟೀಲ ಪುಟ್ಟಪ್ಪ ಸಭಾಭವನ ಧಾರವಾಡ ಹಾಗೂ ನವೆಂಬರ್ - 15 ರಂದು ರಂಗಮನೆ ಸುಳ್ಯದಲ್ಲಿ ಪ್ರದರ್ಶನಗೊಳ್ಳಲಿದೆ.

        ಕನ್ನಡ ಸಾಹಿತ್ಯ ಲೋಕದ ಪ್ರಮುಖ ದೇಸೀ ಕಾವ್ಯ ಎಂದು ಗುರುತಿಸಿಕೊಂಡಿರುವ ಹಂಪನಾರ ಚಾರುವಸಂತಕ್ಕೆ ದೇಶಾದ್ಯಂತ ಬಹುಬೇಡಿಕೆ ಇದ್ದು ಇದನ್ನು ಹಿಂದಿ ಭಾಷೆಯಲ್ಲೂ ಸಿದ್ಧಪಡಿಸಿಕೊಂಡು ದೇಶದ ಪ್ರಮುಖ ನಗರಗಳಲ್ಲಿ ಪ್ರದರ್ಶಿಸುವ ಯೋಜನೆಯೂ ಇದೆ ಎಂದು ನಿರ್ದೇಶಕರಾದ ಜೀವನ್ ರಾಂ ಸುಳ್ಯ ತಿಳಿಸಿದರು.


Ads on article

Advertise in articles 1

advertising articles 2

Advertise under the article