-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 32

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 32

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 32
ಲೇಖಕರು : ಸುರೇಖಾ ಯಳವಾರ
ವಿಶೇಷ ಸಂಪನ್ಮೂಲ ಶಿಕ್ಷಕಿ
ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94480 40225

             
     ಪಟ ಪಟನೆ ಅರುಳು ಹುರಿದಂತೆ ಮಾತಾಡುವ ಆಕಾಶ್‌ನ ಶಾಲೆಗೆ ಭೇಟಿ ಕೊಟ್ಟಾಗಲೆಲ್ಲಾ ಆತನ ತರಗತಿಗೆ ಹೋಗದೆ ನಾನು ಯಾವತ್ತೂ ಹಿಂದಿರುಗುತ್ತಿರಲಿಲ್ಲ. ಹೊಳೆಯುವ ಕಣ್ಣುಗಳು ಕುತೂಹಲಭರಿತ ಮಾತುಗಳು ಯಾವ ಪ್ರಶ್ನೆಗಳನ್ನು ಕೇಳಿದರೂ ತನಗೆಲ್ಲಾ ಗೊತ್ತಿದೆ ಅನ್ನುವ ಅಹಂ, ಕೊಂಚ ಹೆಚ್ಚಿದ್ದರೂ ಇನ್ನಷ್ಟು ಹೊತ್ತು ಆತನೊಂದಿಗೆ ಮಾತನಾಡಬೇಕೆನ್ನುವ ಅಭಿಲಾಷೆ ಉಂಟುಮಾಡುವ ಚುರುಕಿನ ಪೋರ.
       ಈ ದಿನ ಆಕಾಶ್‌ನ ತರಗತಿಗೆ ಕುತೂಹಲ ಕೆರಳಿಸುವ ಪ್ರಶ್ನೆಗಳೊಂದಿಗೆ ಲಗುಬಗೆಯಿಂದ
ಹೋದಾಗ ಆತ ಕಿಟಕಿಯ ಹೊರಗೆ ಮುಖ ಮಾಡಿ ಕುಳಿತಿದ್ದ. ತರಗತಿಗೆ ಹೋದ ಕೂಡಲೇ ಎಲ್ಲರಿಗಿಂತ ಮೊದಲು ಓಡಿ ಬಂದು ನನ್ನ ಕೈ ಹಿಡಿದು ಟೀಚರ್ ಟೀಚರ್ ಅಂತ ಹತ್ತು ಸಲ ಕರೆಯುತ್ತಿದ್ದವ ನಾನು ಬಂದಿರುವ ಅರಿವೆಯೇ ಇಲ್ಲದೆ ಕಣ್ಣೋಟ ಹೊರಗೆಯೇ ಇತ್ತು. ಎಲ್ಲ ಮಕ್ಕಳನ್ನು ಕುಳ್ಳಿರಿಸಿ ಬರೆಯಲು ಮುಂದುವರಿಯುವಂತೆ ತಿಳಿಸಿ ಆಕಾಶನ ಬಳಿ ಹೋದಾಗ ಕಣ್ಣಿಂದ ತಾನಾಗೆಯೇ ಒಂದೊಂದೇ ಹನಿಗಳು ಕೆನ್ನೆಯಿಂದ ಜಾರುತ್ತಿದ್ದವು. ಎರಡು ಸಲ ಕರೆದರೂ ಮೈಮೇಲೆ ಪ್ರಜ್ಞೆ ಇಲ್ಲದಂತ್ತಿದ್ದ ಆಕಾಶನ ಮೈ ಕುಲುಕಿಸಿ ಜೋರಾಗಿ ಆಕಾಶ್ ಎಂದು ಕೂಗಿದೆ. ಗಾಬರಿಸಿ ನನ್ನ ಮುಖವನ್ನೇ ನೋಡುತ್ತಾ ಜಾರುತ್ತಿದ್ದ ಮುತ್ತಿನ ಹನಿಗಳನ್ನು ಒರೆಸಿಕೊಳ್ಳುತ್ತಾ ಸಣ್ಣ ಧ್ವನಿಯಲ್ಲಿ ಟೀಚರ್ ಎಂದ ಆತನ ಮೇಲುಧ್ವನಿ ಕೇಳಿ ನನ್ನ ಮನಸ್ಸಿಗೆ ಕಸಿವಿಸಿಯಾಯಿತು. 
      "ಏನು ಆಕಾಶ್ ಏನಾಯಿತು" ಎಂದು ಕೇಳಿದಾಗ ಕೃತಕ ನಗೆ ಬೀರುತ್ತಾ, ಏನಿಲ್ಲ ಟೀಚರ್ ಎಂದ. ಅಷ್ಟೊತ್ತಿಗಾಗಲೇ ಆಟಕ್ಕೆ ಗಂಟೆ ಭಾರಿಸಿದಾಗ ಎಲ್ಲಾ ಮಕ್ಕಳು ಹೋ ಎಂದು ಕೂಗುತ್ತಾ ಆಟದ ಮೈದಾನಕ್ಕೆ ತೆರಳಿದಾಗ, ಆಕಾಶನ ಕೈ ಹಿಡಿದು ಮೇಜಿನ ಬಳಿ
ಕರೆದೊಯ್ದೆ. ತಲೆ ನೇವರಿಸುತ್ತ ಆತನನ್ನು ಕೇಳಿದೆ,  "ಎರಡು ವರ್ಷದಿಂದ ನಿನ್ನನ್ನು ನೋಡುತ್ತಾ
ಇದ್ದೇನೆ. ಇಷ್ಟೊಂದು ದುಃಖದಲ್ಲಿ ಮೌನದಲ್ಲಿ ಇರುವುದನ್ನು ನಾನು ನೋಡೇ ಇಲ್ಲ.... ಏನಾಗಿದೆ"
ಎಂದು ಪುನಃ ಪುನಃ ಕೇಳಿದಾಗ.. ದುಃಖ ಒತ್ತರಿಸಿ ಅಳಲು ಪ್ರಾರಂಭಿಸಿದ. ಆಗೋತ್ತಿಗೆ ಮುಖ್ಯ
ಶಿಕ್ಷಕಿ ಸಾನಿದ್ಯ ತರಗತಿಗೆ ಬಂದು ನಮ್ಮಿಬ್ಬರ ಮೌನವನ್ನು ಮುರಿಯಲು ಮಾತಿಗೆ ಮುಂದಾದರು. "ಮೇಡಂ ಸುಮಾರು ಆರು ತಿಂಗಳಿನಿಂದ ಮಾತಿಲ್ಲ. ಮೌನದಲ್ಲೇ ಇರುತ್ತಾನೆ. ಪಾಠದ ಕಡೆಗೆ ಗಮನ ಇಲ್ಲ. ಏನು ಕೇಳಿದರೂ ಸರಿಯಾಗಿ ಉತ್ತರಿಸುವುದಿಲ್ಲ. ನೀವೇ
ಆತನನ್ನು ವಿಚಾರಿಸಿ." ಎಂದು ಆಟದ ಮೈದಾನಕ್ಕೆ ತೆರಳಿದರು. 
     ಎಡೆಬಿಡದೆ ನಾನು ಆತನನ್ನು ಪ್ರಶ್ನಿಸಿದೆ. "ನಿನ್ನ ಏನೇ ಸಮಸ್ಯೆ ಇದ್ದರೂ ನಾನು ಪರಿಹರಿಸುವೆ. ಹೇಳು ಆಕಾಶ್" ಎಂದೆ. ನನ್ನನ್ನು ಕಣ್ಣು ಮಿಟುಕಿಸದೆ ನೋಡುತ್ತಾ, ದೀರ್ಘ ಉಸಿರು ಎಳೆದು ಕೊಂಡ. ಪುನಃ ಕೊಂಚ ಮೌನ. ನಾನು ಆತನ ಭುಜವನ್ನು ಸವರುತ್ತಾ ಕೇಳಿದೆ, "ನಾನು ಏನು ಮಾಡಲು ಸಾಧ್ಯ ಹೇಳು." ಎಂದಾಗ ಏನಿಲ್ಲ ಟೀಚರ್ ಎಂದ. ನನ್ನನ್ನು ಪುನಃ ನೋಡುತ್ತಾ ಹೇಳಬೇಕೋ ಬೇಡವೋ ಎಂದು ಮನದಲ್ಲಿ ನೂರು ಸಲ ಲೆಕ್ಕ ಹಾಕಿ ಒಂದೇ ಒಂದು ಮಾತು ಹೇಳಿದ “ಅಪ್ಪ ಅಮ್ಮನ ಹತ್ತಿರ ಮಾತನಾಡುವುದಿಲ್ಲ” ಅಷ್ಟೇ. ಆತನ ಕಣ್ಣಿಂದ ಧಾರಕಾರವಾಗಿ ನೀರು ಹರಿಯುತ್ತಿತ್ತು. ಆತನ ಮಾತು ಕೇಳುವಾಗ ಏನೋ ದೊಡ್ಡ ವಿಷಯ ಅನ್ನಿಸುತ್ತದೆ. ಆದರೆ ಮಗುವಿಗೆ ಆದ ಆಘಾತವನ್ನು ಕೇಳುವವರು ಯಾರು...? ನಾನು ಹೇಳಿದೆ, "ನಿನ್ನ ಅಪ್ಪ ಅಮ್ಮನ ಹತ್ತಿರ ನಾನು ಮಾತಾಡುತ್ತೇನೆ." ಎಂದಾಗ ಬೇಡ ಟೀಚರ್ ಇದರಿಂದ ಮನೆಯಲ್ಲಿ ಇನ್ನಷ್ಟು ಜಗಳ ಆಯಿತು ಎಂದ ಆಕಾಶ್.
     ಆತ್ಮೀಯರೇ ಮನೆಯ ಹಿರಿಯರು, ತಂದೆ ತಾಯಿಯರು ಮಕ್ಕಳಿಗೆ ಹುರುಪು ತುಂಬಿ
ಅವರಲ್ಲಿನ ಮಾನಸಿಕ ಏರುಪೇರುಗಳಿಗೆ ಸಾಂತ್ವಾನ ಹೇಳುವ ಬದಲು ಮನೆಯಲ್ಲಿನ ಅಭದ್ರತೆಯ ವಾತಾವರಣದಿಂದಾಗಿ ಮಕ್ಕಳ ಮನಸ್ಸು ತಲ್ಲಣಗೊಳ್ಳುತ್ತದೆ. ಸಾರ್ವಜನಿಕ ಬದುಕಿನಿಂದ ತಪ್ಪಿಸಿಕೊಳ್ಳುವ, ದುರಾಭ್ಯಾಸಗಳಿಗೆ ದಾಸರಾಗುತ್ತಾ ಸಮಾಜ ಕಂಟಕರಾಗಿ ಬೆಳೆಯಬಹುದು. ನಮ್ಮದೇ ಮಕ್ಕಳ ಬಾಳಿನಲ್ಲಿ ನಾವೇ ಖಳನಾಯಕರಾಗಿ ಬಿಡುತ್ತೇವೆ. ಇದಕ್ಕೆ ಯಾರು ಹೊಣೆ? ತಂದೆ, ತಾಯಿ, ಪರಿಸರ ಸಮಾಜ, ಶಿಕ್ಷಕರು. ಈ ಪ್ರಶ್ನೆಗಳಿಗೆ ಉತ್ತರಗಳಿವೆಯೇ..? ಆಕಾಶನಂಥ
ಅನೇಕ ಮಕ್ಕಳು ನಮ್ಮ ಸುತ್ತಲೂ ಇಲ್ಲವೇ...? ಸ್ವಚ್ಚಂದ ಬದುಕು ಕೊಡುವ ಹೊಣೆ ಯಾರದ್ದು
ನೀವೇ ಹೇಳಿ.....!!
.................................. ಸುರೇಖಾ ಯಳವಾರ
ವಿಶೇಷ ಸಂಪನ್ಮೂಲ ಶಿಕ್ಷಕಿ
ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94480 40225
*******************************************

Ads on article

Advertise in articles 1

advertising articles 2

Advertise under the article