-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 30

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 30

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 30
ಲೇಖಕರು : ಶ್ರೀಮತಿ ಶ್ವೇತಾ ಹಳದೀಪುರ
ಸರಕಾರಿ ಪದವಿ ಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ
ಕಾಟಿಪಳ್ಳ 7ನೇ ವಿಭಾಗ
ಮಂಗಳೂರು ಉತ್ತರ ವಲಯ
ದಕ್ಷಿಣ ಕನ್ನಡ ಜಿಲ್ಲೆ

                  

    ಶಾಲಾ ಪ್ರಾರಂಭದ ಜೂನ್ ತಿಂಗಳಲ್ಲಿ ಎಂಟನೇ ತರಗತಿಗೆ ಹೊಸ ಹೊಸ ವಿದ್ಯಾರ್ಥಿಗಳ ಹೊಸ ಮುಖಗಳ ಪರಿಚಯ.... ನಮ್ಮ ಶಾಲೆ ಇರುವ ಮೈದಾನದಲ್ಲಿ ಮೂರು ಶಾಲೆಗಳ ಸಂಗಮ. ನಮ್ಮದು ಪ್ರೌಢಶಾಲೆ, ನಮ್ಮದೇ ಅಂಗ ಸಂಸ್ಥೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಹಿರಿಯ ಪ್ರಾಥಮಿಕ ಶಾಲೆ. ಈ ಮೂರು ಸಂಸ್ಥೆಗಳ ನಡುವೆ ಒಡನಾಟ ಹೇಗಿತ್ತೆಂದರೆ ಒಂದೇ ಆತ್ಮ ಮೂರು ದೇಹಗಳ ಹಾಗೆ.  ಸಂಸ್ಥೆಯಲ್ಲಿ ನಡೆಯುವ ಪ್ರತಿಯೊಂದು ಶೈಕ್ಷಣಿಕ ಚಟುವಟಿಕೆಗಳು ಪ್ರತಿಯೊಂದು ಸಂಸ್ಥೆಗೂ ಗೊತ್ತು. ಅಲ್ಲಿರುವ ಮಕ್ಕಳ ಪರಿಚಯ  ಪ್ರತಿಯೊಬ್ಬ ಶಿಕ್ಷಕರಿಗೆ ಮೊದಲೇ ಅರಿವಿರುತ್ತಿತ್ತು. ವಿಶೇಷವಾಗಿ ನನಗೆ  ಸಮುದಾಯದತ್ತ ಶಾಲೆಗೆ ಮಾರ್ಗದರ್ಶಿ ಶಿಕ್ಷಕರಾಗಿ ಆ ಶಾಲೆಗೆ ಹೋಗುತ್ತಿರುವುದರಿಂದ ನನಗೆ ಅಲ್ಲಿಯ ಎಲ್ಲ ಮಕ್ಕಳು ಸುಮಾರು ವರ್ಷಗಳಿಂದ ಪರಿಚಯ ಹಾಗೆ ಶಿಕ್ಷಕರಂತೂ ತುಂಬಾ ಆತ್ಮೀಯರಾಗಿದ್ದರು. ಈ ವರ್ಷ ಶಿವರಾಜ ನಮ್ಮ ಶಾಲೆಗೆ ಬಂದಿದ್ದ. ಆ ಶಾಲೆಯ ಶಿಕ್ಷಕರು, "ಶಿವರಾಜನನ್ನು ಕಟ್ಟಿ ಹಾಕುವುದು ಸಾಮಾನ್ಯದ ಕೆಲಸವಲ್ಲ. ಶಿಕ್ಷಕರಿಗೆ ಬಹಳ ತೊಂದರೆ ಕೊಟ್ಟಿದ್ದಾನೆ. ಹಾಗೆ ನಿಮ್ಮ ಪ್ರೌಢಶಾಲೆಗೆ ಬಂದು ಅಲ್ಲಿಯೂ ಸಹ ಇದೇ ರೀತಿ ತೊಂದರೆ  ಕೊಡಬಹುದು" ಎಂದು ಮುನ್ಸೂಚನೆ ನೀಡಿದರು. ಮೊದಲೇ ಗೊತ್ತಿದ್ದರಿಂದ ಅವನನ್ನು ಗಮನಿಸುವುದು ಅವನ ಮೇಲೆ ಒಂದು ಕಣ್ಣು ಇಟ್ಟಿರುವುದು ಗಣಿತ ಶಿಕ್ಷಕಿಯಾದ ನನಗೆ ಅನಿವಾರ್ಯವಾಗಿತ್ತು.
      ಹೀಗೆ ದಿನಗಳು ಕಳೆದು ಜುಲೈ ತಿಂಗಳು ಬಂದಾಗ ಒಂದು ದಿನ ಶಿವರಾಜ ಶಾಲೆಗೆ ಬಂದಿರಲಿಲ್ಲ. ಶಾಲೆಗೆ ಬರದೇ ಶಾಲೆಯ ಇಬ್ಬರು ಕಿರಿಯ ಮೂರು ಮತ್ತು ನಾಲ್ಕನೇ ತರಗತಿಯ ಗಂಡು ಮಕ್ಕಳನ್ನು ಕರೆದುಕೊಂಡು ವಾಮಂಜೂರಿಗೆ ಹೋಗಿದ್ದ ಎಂಬ ವಿಷಯ ಬೆಳಕಿಗೆ ಬಂತು. ಶಿವರಾಜನಿಗೆ ತಂದೆ ತಾಯಿ ಇಬ್ಬರೂ ಇಲ್ಲ. ಅಣ್ಣ ಮತ್ತು ಅಕ್ಕ ಇದ್ದಾರೆ. ಅಣ್ಣನಿಗೆ ಮದುವೆಯಾಗಿ ಸಣ್ಣ ಸಂಸಾರವನ್ನು ಹೂಡಿದ್ದಾನೆ. ಆದರೆ ಶಿವರಾಜನನ್ನು ನೋಡಿಕೊಳ್ಳುವಷ್ಟು ಆರ್ಥಿಕವಾಗಿ ಸದೃಢತೆ ಹೊಂದಿಲ್ಲ. ಆದ್ದರಿಂದ ನಮ್ಮ ಶಾಲೆಯ ಹತ್ತಿರದ ಒಂದು ಆಶ್ರಮದಲ್ಲಿ ಶಿವರಾಜನಿಗೆ ಶಿಕ್ಷಣವನ್ನು ಕೊಡಿಸಲಾಗುತ್ತಿತ್ತು. ಶಿವರಾಜ ಕೌಟುಂಬಿಕ ಪ್ರೀತಿಯಿಂದ  ವಂಚಿತನಾಗಿದ್ದಾನೆ. ಅವನ ಗೆಳೆಯ ಮೋಹನ ಬೇರೆ ಜಿಲ್ಲೆಯಿಂದ ಬಂದವನು. ಆವತ್ತು ಅವನಿಗೆ ಮೈಯೆಲ್ಲಾ ಕಜ್ಜಿ ತುರಿಕೆ ಬರುತ್ತಿತ್ತು. ಯಾರಾದರೂ ನೋಡಿದರೆ ಅಯ್ಯೋ ಪಾಪ ಎನ್ನಿಸುವಂತಹ ಭಯಂಕರ ತುರಿಕೆ ರೋಗ ಎದ್ದು ಕಾಣುತ್ತಿತ್ತು.  ಚರ್ಮದ ಮೇಲೆ ಗುಳ್ಳೆಗಳು ಎದ್ದಿದ್ದವು. ಇದನ್ನೇ ಶಿವರಾಜ ಬಹಳ ಚಾಣಕ್ಯತನದಿಂದ ಬಳಸಿಕೊಂಡು ಅವನನ್ನು ಕರೆದುಕೊಂಡು ವಾಮಂಜೂರು  ಮೂರು ದಾರಿ ಸೇರುವ ರಸ್ತೆಯಲ್ಲಿ ಭಿಕ್ಷೆ ಬೇಡುವವರ ಹಾಗೆ ಕುಳಿತುಕೊಂಡು ಆ ಸಣ್ಣ ಎರಡು ಮಕ್ಕಳನ್ನು ಸಹ ಭಿಕ್ಷೆಗೆ ಕುಳ್ಳಿರಿಸಿ ಬಂದ ಹಣವನ್ನು ಜೋಡಿಸುತ್ತಿದ್ದ. ಆ ದಾರಿಯಾಗಿ ಹೋಗುತ್ತಿದ್ದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ದೃಷ್ಟಿ ಇವನ ಮೇಲೆ ಬಿತ್ತು. ಶಾಲಾ ಸಮವಸ್ತ್ರವನ್ನು ಧರಿಸಿ ಈ ನಾಲ್ಕು ಮಕ್ಕಳು ಏನು ಮಾಡುತ್ತಿದ್ದಾರೆ...? ಎಂದು ವಿಚಾರಿಸಿದಾಗ ಈ ಮಕ್ಕಳು ಶಾಲೆಗೆ ಹೋಗದೇ ಇಲ್ಲಿಗೆ ಬಂದಿರುವ ವಿಚಾರ ಅಧಿಕಾರಿಗೆ ಗೊತ್ತಾಯಿತು. ಕೂಡಲೇ ಶಾಲೆಗೆ ರಿಂಗಾಯಿಸಿ ಆಗ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ವಿಷಯ ಮುಖ್ಯ ಶಿಕ್ಷಕರ ಗಮನಕ್ಕೆ ತಿಳಿಯಿತು. ಅವರು ಕೂಡಲೇ ಶಿವರಾಜನ ಅಣ್ಣನ ಸಹಾಯ ಪಡೆದು ರಿಕ್ಷಾದಲ್ಲಿ ತೆರಳಿ ಆ ನಾಲ್ಕು ಮಕ್ಕಳನ್ನು ಶಾಲೆಗೆ ತಂದು ಬಿಟ್ಟರು. ಶಿವರಾಜನನ್ನು ನೋಡುವಾಗ  ಗದರಿಸಲು ಸಹ ಮನಸ್ಸಾಗಲಿಲ್ಲ. ಅವನನ್ನು ಸ್ಟಾಫ್ ರೂಮಿಗೆ ಕರೆದು ನಾನು ಮತ್ತು ನನ್ನ ಸಹೋದ್ಯೋಗಿ ಮಂಜುನಾಥ್ ಸರ್ ಇವರು ಎಲ್ಲಾ ವಿಷಯವನ್ನು ಅವನ ಬಾಯಿಯಿಂದ ಕೇಳಿದಾಗ... ಕೆಲವೆಲ್ಲ ಕಟ್ಟುಕಥೆಯನ್ನು ಕಟ್ಟಿ ತುಂಬಾ ಸ್ವಾರಸ್ಯಕರವಾಗಿ ತನ್ನ ಸಂಗತಿಯನ್ನು ಹೇಳಿದ. "ಹಾಗಾದರೆ ನೀನು ಆಶ್ರಮವನ್ನು ಬಿಟ್ಟು ಓಡಿದ್ಯಾಕೆ...?" ಎಂದು ಕೇಳಿದಾಗ ನಮಗೆ ಆಶ್ಚರ್ಯ  ಮತ್ತು ಆತಂಕ ಕಾದಿತ್ತು. ಅಮ್ಮನಿಲ್ಲದ ಅವನು ಪ್ರೀತಿಯನ್ನು ಕಳೆದುಕೊಂಡಿದ್ದ. ಅದನ್ನು ತನ್ನ ಅತ್ತಿಗೆಯಲ್ಲಿ ಕಾಣಲು ಬಯಸುತ್ತಿದ್ದ. ಆದರೆ ಅವರೆಲ್ಲರೂ  ದೂರವಿಟ್ಟದ್ದರಿಂದ ಈ ಊರನ್ನೇ ಬಿಟ್ಟು ಮೋಹನನ ಊರಿಗೆ ಹೋಗಲು ಸಂಚು ಮಾಡಿದ್ದ. ಆದರೆ ಅಧಿಕಾರಿಯ ಕೈಗೆ ಸಿಕ್ಕಿ ಅವನ ಯೋಚನೆಯೆಲ್ಲ ತಲೆಕೆಳಗಾಗಿತ್ತು. ಆಗ ನಾನು ಅವನಿಗೆ ಹೇಳಿದ್ದು ಒಂದೇ ಮಾತು ನೋಡು...  "ನಿನ್ನ ಅಮ್ಮ ಮೇಲೆ ನಕ್ಷತ್ರವಾಗಿ ಸದಾ ನಿನ್ನನ್ನು ಗಮನಿಸುತ್ತಿರುತ್ತಾರೆ. ನೀನು ಮಾಡುವ ಒಂದೊಂದು ತಪ್ಪು ಕೆಲಸವೂ ಅವಳಿಗೆ ತುಂಬಾ ನೋವನ್ನು ನೀಡುತ್ತದೆ, ಆದ್ದರಿಂದ ನೀನು ಅವಳಿಗೆ ನೋವು ಮಾಡದೇ ಯಾವುದೇ ತಪ್ಪು ಕೆಲಸವನ್ನು ಮಾಡದೇ ಇವತ್ತಿನಿಂದ ಒಳ್ಳೆಯ ಶಿವರಾಜನಾಗಿ ಎಲ್ಲರಿಗೂ ಆದರ್ಶಪ್ರಾಯನಾಗಿರಬೇಕು." ನನ್ನ ಮಾತಿಗೆ ಮಂಜುನಾಥ್ ಸರ್ ಸಹ ಧ್ವನಿಗೂಡಿಸಿದರು. ಆಗ ಅವನು "ತಪ್ಪಾಯ್ತು ಟೀಚರ್ ಇನ್ನು ಮುಂದೆ ಹೀಗೆ ಆಗುವುದಿಲ್ಲ ಎಂದು ತಲೆತಗ್ಗಿಸಿ ತರಗತಿಗೆ ನಡೆದ. ದಿನ ಕಳೆದಂತೆ ಎಂಟನೇ ತರಗತಿಯಲ್ಲಿ ಅವನ ನಡವಳಿಕೆಗಳು ಬದಲಾಗತೊಡಗಿದವು. ಕೆಟ್ಟ ವರ್ತನೆಗಳನ್ನು ಹೊಂದಿದ್ದ ಅವನು ಎಲ್ಲವನ್ನು ತ್ಯಜಿಸಿ ಒಳ್ಳೆಯ ವಿದ್ಯಾರ್ಥಿಯಾಗಲು ಪಣತೊಟ್ಟಿರುವ ಹಾಗೆ ಭಾಸವಾಗುತ್ತಿತ್ತು. ಆದರೂ ಇವನನ್ನು ನಂಬುವುದು ಹೇಗೆ...? ಪ್ರತಿದಿನ ಅವನನ್ನು ಗಮನಿಸುವುದೇ ನನಗೊಂದು ದಿನಚರಿಯಾಗಿ ಹೋಯಿತು. ಪ್ರತಿ ತರಗತಿಯಲ್ಲಿಯೂ ಅವನಿಗೆ ವಿಶೇಷವಾಗಿ ಗಮನ ಸಿಗುತ್ತಿರುವುದು ಗೊತ್ತಾಗಿ ಅವನು ಈಗ ಒಳ್ಳೆಯ ವಿದ್ಯಾರ್ಥಿಯಾಗಿ ರೂಪುಗೊಳ್ಳಲು ಆರಂಭಿಸಿದ್ದಾನೆ. ಈ ಪರಿಯಲ್ಲಿ ಬದಲಾದದ್ದು ನಮ್ಮ ಶಾಲೆಯ ಎಲ್ಲರಿಗೂ ಖುಷಿ ನೀಡಿದೆ. ನಮ್ಮ ಮುಖ್ಯ ಶಿಕ್ಷಕಿ ಅವರಿಗೆ ಸಹ ಆಶ್ಚರ್ಯವಾಗಿದೆ..!! "ಅಮ್ಮನಿಗೆ ನೋವಾಗುತ್ತದೆ" ಎಂಬ ವಿಷಯ ಅವನು ಅರಿತದ್ದು ಅವನು ಬದಲಾದದ್ದು ನೋಡುವಾಗ ಅಮ್ಮನ ಪ್ರೀತಿ ಎಂತವರನ್ನು ಸಹ ಬದಲಿಸಬಹುದು... ಮನ ಪರಿವರ್ತನೆ ಮಾಡಬಹುದು ಎನ್ನುವ ಸತ್ಯ ಸಂಗತಿ ನಿದರ್ಶನ ನಮ್ಮ ಮುಂದಿದೆ. ಅವನು ಹೀಗೆ ಒಳ್ಳೆಯ ವಿದ್ಯಾರ್ಥಿಯಾಗಿ ಮುಂದುವರೆಯಲಿ ಎನ್ನುವುದು ನಮ್ಮೆಲ್ಲರ ಅಭಿಲಾಷೆ. ಹೀಗೆಯೇ ಅವನು ಮುಂದುವರೆದು ಒಳ್ಳೆಯ ಪ್ರಜೆಯಾಗಲಿ ಎನ್ನುವ ಆಶಯ ನನ್ನದು, ನಮ್ಮೆಲ್ಲರದ್ದು……!! 
........................... ಶ್ರೀಮತಿ ಶ್ವೇತಾ ಹಳದೀಪುರ
ಸರಕಾರಿ ಪದವಿ ಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ
ಕಾಟಿಪಳ್ಳ 7ನೇ ವಿಭಾಗ
ಮಂಗಳೂರು ಉತ್ತರ ವಲಯ
ದಕ್ಷಿಣ ಕನ್ನಡ ಜಿಲ್ಲೆ
Mob : +91 94820 43140
*******************************************







Ads on article

Advertise in articles 1

advertising articles 2

Advertise under the article