-->
ಜಗಲಿ ಕಟ್ಟೆ : ಸಂಚಿಕೆ - 22

ಜಗಲಿ ಕಟ್ಟೆ : ಸಂಚಿಕೆ - 22

ಜಗಲಿ ಕಟ್ಟೆ : ಸಂಚಿಕೆ - 22
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


      ಪೊಟೋಗ್ರಫಿ ಕೂಡಾ ನನ್ನ ಹವ್ಯಾಸಗಳಲ್ಲೊಂದಾಗಿತ್ತು. ಹವ್ಯಾಸ ಅನ್ನುವುದಕ್ಕಿಂತಲೂ ಹಲವಾರು ವರ್ಷ ಭಾಗಶಃ ವೃತ್ತಿಯೇ ಆಗಿತ್ತು. ಹಾಗೇ ಎರಡನೇ ಬಾರಿಗೆಂಬಂತೆ ಪೊಟೋಗ್ರಫಿಗೆಂದು ದೂರದ ಗೆಳೆಯನ ಮನೆಗೆ ಹೋಗಿದ್ದೆ. ಆತಿಥ್ಯ ಸ್ವೀಕರಿಸಿ ಮನೆಮಂದಿಯೆಲ್ಲಾ ಆತ್ಮೀಯತೆಯಿಂದ ಮಾತಾಡ್ತಾ ಇದ್ದೆವು. ಹಳ್ಳಿಯ ಪರಿಸರ ಬೇರೆ... ಅವರ ಪ್ರೀತಿಗೆ ಕೊರತೆಯೇ ಇರಲಿಲ್ಲ. 
       ಅಷ್ಟೊತ್ತಿಗೆ ಹಿಂದಿನಿಂದ ಬಂದವರೇ ಭುಜದ ಮೇಲೆ ಕೈ ಇಟ್ಟ ಅನುಭವವವಾಯಿತು. ಯಾರೆಂದು ನೋಡುವಷ್ಟರಲ್ಲಿ "ನೀವು ಕೈರಂಗಳ' ಅಲ್ವಾ.... ಯಾವಾಗ ಬಂದ್ರಿ...?" ಅಂದ್ರು. ಅವರು ಬೇರೆ ಯಾರೂ ಅಲ್ಲ. ನನ್ನ ಗೆಳೆಯನ ಚಿಕ್ಕಪ್ಪ. ಮಾತಾಡಿ ಮೂರು ವರ್ಷಗಳೇ ಕಳೆದು ಹೋಗಿತ್ತು. ನನ್ನ ಧ್ವನಿಯನ್ನು ಅಷ್ಟು ಚೆನ್ನಾಗಿ ನೆನಪಿಟ್ಟುಕೊಂಡಿದ್ದರು. ಮೂರು ವರ್ಷಗಳ ಹಿಂದೆ ಮಾತಾಡಿದ್ದರೂ ನನ್ನ ಮುಖಚರ್ಯೆ ಅವರಿಗೆ ಗೊತ್ತಿಲ್ಲ. ದೈಹಿಕವಾಗಿ ಯಾವ ರೂಪ ಹೊಂದಿದ್ದೇನೆ ಅನ್ನುವ ಕಲ್ಪನೆಯು ಅವರಿಗಿಲ್ಲ. ಯಾಕಂದರೆ ಅವರು ಹುಟ್ಟುತ್ತಾ ದೃಷ್ಠಿಯನ್ನು ಕಳೆದುಕೊಂಡವರು. ಪ್ರಕೃತಿ ಹೇಗಿದೆ ಅನ್ನೋದನ್ನೇ ಅವರು ನೋಡಿಲ್ಲ....!! 
        ನನಗೆ ಆಶ್ಚರ್ಯ.... ಸುಮಾರು ವರ್ಷಗಳ ಬಳಿಕ ನನ್ನ ಗುರುತು ಅವರಿಂದ ಹೇಗೆ ಸಾಧ್ಯವಾಯಿತು...? ನಾನು ತುಂಬಾ ಯೋಚನೆ ಮಾಡಲು ಶುರು ಮಾಡಿದೆ. ಇಂತಹ ಒಂದು ಅದ್ಭುತ ಶಕ್ತಿ ಅವರಿಗೆ ಹೇಗೆ ಸಿಕ್ಕಿತು ಎನ್ನುವುದೇ ನನ್ನ ಪ್ರಶ್ನೆಯಾಯ್ತು..! ಈ ಪ್ರಶ್ನೆ ಹುಟ್ಟಲೂ ಒಂದು ಕಾರಣ ಇದೆ. ನಾವು ಅನೇಕ ಬಾರಿ ಮಾತನಾಡಿದರೂ ವರ್ಷಗಳು ಕಳೆದು ಹೋದ ಮೇಲೆ ಮರೆತುಬಿಡುತ್ತೇವೆ. ಜೊತೆಗಿದ್ದರೂ ಯಾವುದೋ ಒಂದು ಕಾರಣಕ್ಕಾಗಿ ದೂರವಾಗುತ್ತೇವೆ. ಕೆಲವೊಮ್ಮೆ ಸಹಾಯ ಮಾಡಿದ ವ್ಯಕ್ತಿಗಳೂ ಕೂಡಾ ನಮ್ಮ ಮನ ಪಟಲದಿಂದ ದೂರವಾಗುತ್ತಾರೆ. ಅಗತ್ಯ ಸಂದರ್ಭದಲ್ಲಿ ಸಹಾಯಕ್ಕೆ ನಿಂತವರು ಕೂಡ ಮನಸ್ಸಿನಿಂದ ದೂರವಾಗುತ್ತಾರೆ. ಇವೆಲ್ಲವೂ ಯಾಕೆ ನಮ್ಮಿಂದ ಘಟಿಸುತ್ತಾ ಇದೆ....??? ಪ್ರಶ್ನೆ ಪ್ರಶ್ನೆ ಪ್ರಶ್ನೆ.... ಆಗ ನನಗೆ ಸಿಕ್ಕ ಉತ್ತರ ಮಾತ್ರ ವಿಶೇಷವಾಗಿತ್ತು.... "ಕಾಣುವ ಗುಣ ಬೇಕು." ಗೋಪಾಡ್ಕರ್ ಹೇಳಿದ ಮಾತು. ಕಣ್ಣಿಲ್ಲದವರ ಜೊತೆಗಾದರೂ ವ್ಯವಹರಿಸಬಹುದು ಆದರೆ ಕಾಣುವ ಗುಣ ಇಲ್ಲದವರ ಜೊತೆ ವ್ಯವಹರಿಸಲು ತುಂಬಾ ಕಷ್ಟ. ನೀವು ಯಾವುದೇ ರೀತಿಯಾದ ಸಾಧನೆ ಅಥವಾ ದಾಖಲೆಗಳನ್ನು ಮಾಡಿದರೂ ನಮ್ಮ ಸುತ್ತಮುತ್ತ ಇರುವ ಕೆಲವಷ್ಟು ಕಾಣುವ ಕಣ್ಣುಗಳ ಗುಣಗಳಿಂದಾಗಿ ಎಲ್ಲವೂ ಗುರುತಿಸಲ್ಪಡುತ್ತಿದೆ... ಬೆಳಕಿಗೆ ಬರುತ್ತಿದೆ..!! ಕಾಣುವ ಕಣ್ಣುಗಳಿಲ್ಲದೆ ಅದೆಷ್ಟೋ ಪ್ರತಿಭೆಗಳು ನಾಶವಾಗುತ್ತಿದೆ...!! ನಮಸ್ಕಾರ..


ಕಳೆದ ಸಂಚಿಕೆಯ ಜಗಲಿಕಟ್ಟೆ - 21 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು.. ರಘು, ಮುಖ್ಯಶಿಕ್ಷಕರು , ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢ ಶಾಲೆ , ವಿದ್ಯಾಗಣೇಶ್ ಚಾಮೆತ್ತಮೂಲೆ, ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಧನ್ಯಶ್ರಿ , 7ನೇ ತರಗತಿ ಮತ್ತು ನೇತ್ರಾವತಿ ಎಸ್ ಹತ್ತನೇ ತರಗತಿ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ತೇ,
      ಸುಖ, ಸಂಪತ್ತು, ಪ್ರಶಸ್ತಿ, ಪ್ರಸಿದ್ಧಿ, ಇವೆಲ್ಲವನ್ನು ಪಡೆದಿದ್ದರೂ ಕೂಡ ಗಿಗ್ಲಿ ಎನ್ನುವ ಪ್ರಸಿದ್ಧ ಸಂಗೀತಗಾರನು ಕೊನೆಗಾಲದಲ್ಲಿರುವ ಒಬ್ಬ ಬಡ ಹುಡುಗನ ಸಂಗೀತದ ಆಶೆಯನ್ನು ಪೂರೈಸಿದಾಗ ದೊರಕಿದ ನೆಮ್ಮದಿ - ಮೇಲಿನ ಎಲ್ಲಕ್ಕಿಂತಲೂ ಮಿಗಿಲು ಎನ್ನುವುದನ್ನು ಗಿಗ್ಲಿ ಸಂಗೀತಗಾರನ ಕಥೆಯ ಮೂಲಕ ಸುಂದರವಾಗಿ ನಿರೂಪಿಸಿದ್ದಾರೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು.
     ಗೆಳೆತನ ಮತ್ತು ಗೆಳೆಯರೊಳಗಿನ ಸಂಬಂಧ ಹೇಗಿರಬೇಕು...? ಹೇಗಿದ್ದರೆ ಗೆಳೆತನ ಶಾಶ್ವತವಾಗಿ ಮುಂದುವರೆಯ ಬಹುದೆನ್ನುವ ಕಿವಿಮಾತಿನೊಂದಿಗೆ ರಮೇಶ್ ಬಾಯಾರ್ ರವರ ಸ್ಪೂರ್ತಿಯ ಮಾತುಗಳು ತುಂಬಾ ಅರ್ಥಪೂರ್ಣವಾಗಿದ್ದುವು.
     ಅರವಿಂದ ಸರ್ ರವರ ಕಡಲ ಕಪೋತ ವಲಸೆ ಹಕ್ಕಿಯ ಪರಿಚಯ ಕಡಲ ಪಯಣದ ಅನುಭವದೊಂದಿಗೆ ಚೆನ್ನಾಗಿ ಮೂಡಿ ಬಂದಿದೆ.
    ವಿಜಯಾ ಮೇಡಂ ರವರ ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ಬೆಳ್ಳೆಟ್ಟೆ ಸಸ್ಯದ ಪರಿಚಯ ತುಂಬಾ ಚೆನ್ನಾಗಿತ್ತು. ಉಪಯುಕ್ತ ಸಂಚಿಕೆ.
     ಯಾಕೂಬ್ ಸರ್ ರವರ ಹೃದಯದ ಮಾತು ಸಂಚಿಕೆಯಲ್ಲಿ ವಿದ್ಯಾರ್ಥಿಯೋರ್ವ ತುಂಬಾ ಕಷ್ಟದಲ್ಲಿರುವ ತನ್ನ ಶಿಕ್ಷಕಿ ಶಾಂತಿ ಟೀಚರ್ ಗೆ ಸಹಾಯ ಮಾಡಿ ಅವರ ಕಷ್ಟ ಕಾಲದಲ್ಲಿ ನೆರವಾಗುವ ಸುಂದರ ಸನ್ನಿವೇಶ ಮನ ಮುಟ್ಟುವಂತಿತ್ತು. 
     ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ "ಕಿಕ್ ಮಾಡು ಗಾಡಿ ಬಿಡು" ಪುಸ್ತಕದ ಕುರಿತಾದ ಮಾಹಿತಿ ಚೆನ್ನಾಗಿತ್ತು.
     ಧನ್ವಿತಾರವರ ಪ್ರವಾಸ ಕಥನ ಹಾಗೂ ಲಿಖಿತಾರವರ ದಸರಾ ಲೇಖನ ಉತ್ತಮವಾಗಿತ್ತು. ಮಕ್ಕಳ ಚಿತ್ರಗಳ ಎರಡೂ ಸಂಚಿಕೆಗಳಲ್ಲಿ ಮಕ್ಕಳ ಚಿತ್ರಗಳು ಚೆನ್ನಾಗಿವೆ.
      ಕೌಟುಂಬಿಕ ಕಾರಣದಿಂದ ಅನೇಕ ಮಕ್ಕಳು ದಾರಿತಪ್ಪುವ ಸಾಧ್ಯತೆಯನ್ನು ತಮ್ಮ ಅನುಭವದ ಮಾತಿನ ಮೂಲಕ ಶಿಕ್ಷಕರ ಡೈರಿಯಲ್ಲಿ ಸುರೇಖಾ ಮೇಡಂರವರು ತುಂಬಾ ಚೆನ್ನಾಗಿ ಹಂಚಿಕೊಂಡಿದ್ದಾರೆ. ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ.
     ಈ ವಾರದ ಜಗಲಿಯಲ್ಲಿ ಸ್ಪೂರ್ತಿ ತುಂಬಿದ ಎಲ್ಲಾ ಹಿರಿಯರಿಗೆ ಹಾಗೂ ಮಕ್ಕಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.
     ಮತ್ತೆ ಮುಂದಿನ ವಾರದಲ್ಲಿ ನಿಮ್ಮೊಂದಿಗೆ...
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


    ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
..................................... ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article