-->
ಜೀವನ ಸಂಭ್ರಮ : ಸಂಚಿಕೆ - 108

ಜೀವನ ಸಂಭ್ರಮ : ಸಂಚಿಕೆ - 108

ಜೀವನ ಸಂಭ್ರಮ : ಸಂಚಿಕೆ - 108
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                     
   
     ಮಕ್ಕಳೇ, ಈ ಕಥೆ ಓದಿ. ಒಂದು ವಿಶಾಲ ಮರ. ಅದರಲ್ಲಿ ಫಲ ತುಂಬಿ ತುಳುಕುತ್ತಿತ್ತು. ಹೂಗಳ ಸುವಾಸನೆ ಎಲ್ಲಾ ಕಡೆ ಹರಡಿತ್ತು. ಆ ಮರದ ಕೊಂಬೆಯ ಮೇಲೆ ಬೇರೆ ಬೇರೆ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. ಆ ಮರದ ಪೊಟರೆಯಲ್ಲಿ ಒಂದು ಗೂಬೆ ವಾಸ ಮಾಡಿತ್ತು. ಗೂಬೆಯ ರೂಪ, ಆಕಾರ ಮತ್ತು ಧ್ವನಿ ಯಾರಿಗೂ ಹಿಡಿಸುವುದಿಲ್ಲ. ಆ ಗೂಬೆ ರಾತ್ರಿ ವೇಳೆಯಲ್ಲಿ ಹೊರಗೆ ಹೋಗಿ ತನ್ನ ಆಹಾರ ಹುಡುಕಿಕೊಂಡು, ತಿಂದು ಬರುತ್ತಿತ್ತು. ಎಲ್ಲಾ ಪಕ್ಷಿಗಳು ರಾತ್ರಿ ವೇಳೆ ನಿದ್ರೆ ಮಾಡುತ್ತಿದ್ದ ವೇಳೆಯಲ್ಲಿ ಗೂಬೆ ಪೊಟರೆಯಿಂದ ಹೊರ ಬರುತ್ತಿತ್ತು. ಎಲ್ಲಾ ಪಕ್ಷಿಗಳು ನಿದ್ರೆಯಿಂದ ಏಳುವ ಮುನ್ನ ಗೂಬೆ ತನ್ನ ಪೊಟರೆ ಸೇರುತ್ತಿತ್ತು. ಈ ಗೂಬೆ ಯಾವ ಪಕ್ಷಿಗೂ ತೊಂದರೆ ಕೊಟ್ಟಿರಲಿಲ್ಲ. ಆದರೆ ಆ ಮರದ ಪಕ್ಷಿಗಳಿಗೆ ಇದರ ನಡುವಳಿಕೆ ಇಷ್ಟವಾಗಲಿಲ್ಲ. ಎಲ್ಲಾ ಪಕ್ಷಿಗಳು ಒಂದು ಕಡೆ ಸಭೆ ಸೇರಿದವು. ಆ ಸಭೆಯ ಅಧ್ಯಕ್ಷತೆಯನ್ನು ಸುಂದರ ಬಣ್ಣದ, ಮುದ್ದು ಮಾತನಾಡುವ ಗಿಳಿ ವಹಿಸಿತ್ತು. ಎಲ್ಲಾ ಪಕ್ಷಿಗಳು ಗೂಬೆಯ ನಡುವಳಿಕೆಯನ್ನು ವಿರೋಧಿಸಿದವು. ಈ ಮರದಲ್ಲಿ ಹಗಲು ಹಾರಾಡುವ ಪಕ್ಷಿಗಳು ಮಾತ್ರ ಇರಬೇಕು. ರಾತ್ರಿ ಹಾರಾಡುವ ಪಕ್ಷಿ ಈ ಮರದಲ್ಲಿ ಇರಬಾರದು ಎಂದು ಠರಾವು ಪಾಸ್ ಮಾಡಿದವು. ಈ ಠರಾವನ್ನು ಒಂದು ಪಕ್ಷಿಯ ಮೂಲಕ ಗೂಬೆಗೆ ಕಳುಹಿಸಿದವು. ಗೂಬೆ ಈ ಠರಾವನ್ನು ಕೇಳಿ ಹೇಳಿತು. "ನನ್ನ ರೂಪ ಕುರೂಪವಿರಬಹುದು, ನನ್ನ ಬಣ್ಣ ಚೆನ್ನಾಗಿ ಇಲ್ಲದಿರಬಹುದು, ನನ್ನ ಧ್ವನಿ ಕರ್ಕಶವಾಗಿರಬಹುದು. ಆದರೆ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ನೀವೆಲ್ಲ ಮಲಗಿದ ನಂತರ ನಾನು ಹೊರಗೆ ಹೋಗುತ್ತೇನೆ. ನೀವು ಎಚ್ಚರಗೊಳ್ಳುವ ಮುಂಚೆ ನಾನು ನನ್ನ ಪೊಟರೆ ಸೇರಿಕೊಳ್ಳುತ್ತೇನೆ. ನಿಮಗೆ ಯಾರಿಗೂ ನಾನು ಮುಖ ತೋರಿಸಿಲ್ಲ. ಹಗಲಿನಲ್ಲಿ ನಿಮ್ಮ ಬಣ್ಣ, ರೂಪ ನೋಡಿ ಆನಂದಿಸುತ್ತೇನೆ. ನಿಮ್ಮ ಧ್ವನಿ ಕೇಳಿ ಸಂತೋಷಪಟ್ಟಿದ್ದೇನೆ. ನಾನು ನಿಮ್ಮ ವೈರಿಯಲ್ಲ. ಆದರೂ ನನ್ನನ್ನು ಏಕೆ ಹೊರ ಕಳುಹಿಸುತ್ತೀರಿ...? ನಿಮ್ಮವರ ಮೈ ಬಣ್ಣ ಸುಂದರ, ರೂಪ ಸುಂದರ, ದ್ವನಿ ಮಧುರ, ಆದರೆ ನಿಮ್ಮ ಹೃದಯ ಕುರೂಪ. ನನ್ನ ರೂಪ ಕುರೂಪ , ಧ್ವನಿ ಕರ್ಕಶ, ಆದರೆ ನನ್ನ ಹೃದಯ ಸುಂದರ" ಎಂದಿತು. ಈ ಮಾತನ್ನು ಕೇಳಿದ ಪಕ್ಷಿಯು ಉಳಿದ ಪಕ್ಷಿಗಳಿಗೆ ಬಂದು ಗೂಬೆಯ ಅಭಿಪ್ರಾಯ ಹೇಳಿತು. ಆಗ ಪಕ್ಷಿಗಳಿಗೆ ಜ್ಞಾನೋದಯವಾಗಿತ್ತು. ನಾವು ಗೂಬೆಯ ದೋಷಗಳನ್ನು ಗುರುತಿಸಿ, ದ್ವೇಷಿಸಿದೆವು ಎನ್ನುವುದು ಅರಿವಿಗೆ ಬಂದಿತ್ತು.
       ನಮ್ಮ ಬದುಕು ಹೀಗೆ ಆಗಿದೆ. ನಾವು ಬೇರೊಬ್ಬರ ದೋಷಗಳನ್ನು ಗುರುತಿಸಿ ಗುರುತಿಸಿ ದ್ವೇಷಿಸುತ್ತೇವೆ. ಈ ಪ್ರಪಂಚದಲ್ಲಿ ದೋಷವೇ ಇಲ್ಲದ ವ್ಯಕ್ತಿ ಇಲ್ಲ. ಅದೇ ರೀತಿ ದೋಷವೇ ಇಲ್ಲದ ವಸ್ತುವಿಲ್ಲ. ಪ್ರತಿಯೊಂದು ವಸ್ತುವಿನಲ್ಲೂ, ಪ್ರತಿಯೊಬ್ಬರಲ್ಲೂ, ಏನಾದರೂ ಒಂದು ದೋಷ ಇದ್ದೇ ಇರುತ್ತದೆ. ಆ ದೋಷ ಗುರುತಿಸುತ್ತಾ ಹೋದರೆ ದ್ವೇಷವೇ ಬರುವುದು. ಆ ರೀತಿ ದೋಷ ಗುರುತಿಸುತ್ತಾ ಹೋದರೆ ಪ್ರಪಂಚದಲ್ಲಿರುವ ಯಾವ ವ್ಯಕ್ತಿಯನ್ನು, ವಸ್ತುವನ್ನು ಪ್ರೀತಿಸಲು ಸಾಧ್ಯವಿಲ್ಲ. ಪ್ರತಿಯೊಂದು ವಸ್ತುವನ್ನು ಮತ್ತು ವ್ಯಕ್ತಿಯನ್ನು ದ್ವೇಷಿಸಬೇಕಾಗುತ್ತದೆ. ನಾವು ಮಾಡಬೇಕಿರುವುದು ದೋಷಗಳನ್ನು ಗುರುತಿಸುವುದಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಏನಾದರೂ ಒಂದು, ಎರಡು ಅಥವಾ ಹೆಚ್ಚು ಒಳ್ಳೆಯ ಗುಣಗಳಿರುತ್ತವೆ. ಆ ಒಳ್ಳೆಯದನ್ನು ಗುರುತಿಸಿ ಹೇಳಿದರೆ ಪ್ರೀತಿ ಉಂಟಾಗುತ್ತದೆ. ಹೀಗೆ ಒಳ್ಳೆಯದನ್ನು ಗುರುತಿಸುವುದನ್ನು ಕಲಿತರೆ, ಜಗತ್ತಿನಲ್ಲಿ ಯಾವುದನ್ನು ದ್ವೇಷ ಮಾಡುವ ಸಂಭವ ಉಂಟಾಗುವುದಿಲ್ಲ. ಕೆಲವರು ಪ್ರಶ್ನಿಸುತ್ತಾರೆ. ನಾವು ದ್ವೇಷಿಸುವುದಿಲ್ಲ. ನಮ್ಮನ್ನು ದ್ವೇಷಿಸಿದರೆ ಏನು ಮಾಡಬೇಕು ಎಂದು. ಒಂದು ಸತ್ಯ ಗೊತ್ತಿರಲಿ. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ನಾಲ್ಕು ಮಂದಿ ದ್ವೇಷಿಸುವವರು ಇರುತ್ತಾರೆ. ದ್ವೇಷಿಸುವವರು ನಾಲ್ಕು ಮಂದಿ. ಪ್ರೀತಿಸುವವರು ಸಾವಿರ ಮಂದಿ . ಆ ನಾಲ್ಕು ಮಂದಿ ಕಡೆ ಲಕ್ಷ್ಯ ಕೊಡೋದಿದ್ದರೆ ಮುಗಿಯಿತು. ಅವರನ್ನು ದ್ವೇಷಿಸುವುದು ಬೇಡ. ಪ್ರೀತಿಸುವುದು ಬೇಡ. ಆಗ ಪ್ರೀತಿಸುವ ಸಾವಿರ ಮಂದಿ ಕಾಣಿಸುತ್ತಾರೆ. ಹೀಗೆ ನಾವು ಜಗತ್ತನ್ನು, ಜನರನ್ನು ಮತ್ತು ವಸ್ತುವನ್ನು ಪ್ರೀತಿಸಬೇಕು. ಅಲ್ಲವೇ, ಮಕ್ಕಳೇ
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article