-->
ಜಗಲಿ ಕಟ್ಟೆ : ಸಂಚಿಕೆ - 20

ಜಗಲಿ ಕಟ್ಟೆ : ಸಂಚಿಕೆ - 20

ಜಗಲಿ ಕಟ್ಟೆ : ಸಂಚಿಕೆ - 20
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಮಕ್ಕಳ ಜಗಲಿಯ ಎಲ್ಲರಿಗೂ ಪ್ರೀತಿಯ ನಮಸ್ಕಾರಗಳು... ಜೂನ್ ತಿಂಗಳಲ್ಲಿ ಶಾಲಾರಂಭವಾಗಿ ಅಕ್ಟೋಬರ್ ತಿಂಗಳು ಬಂದಾಯ್ತು. ಒಂದರ್ಥದಲ್ಲಿ ಶೈಕ್ಷಣಿಕ ಅವಧಿಯ ಅರ್ಧ ಭಾಗವೇ ಮುಗಿದು ಹೋಯಿತು. ದಸರಾ ಹಬ್ಬಕ್ಕೆ ದಿನ ಗಣನೆ ಆರಂಭವಾಗಿದೆ. ಎಲ್ಲರೂ ದಸರಾ ರಜೆಯ ಸಂಭ್ರಮದಲ್ಲಿ ನವರಾತ್ರಿ ಹಬ್ಬವನ್ನು ಸವಿಯಲಿದ್ದೇವೆ. ನವರಾತ್ರಿ ಹಬ್ಬವು ಎಲ್ಲರಿಗೂ ಸುಖ ಸಂತೋಷಗಳನ್ನು ತರಲಿ ಎಂದು ಹಾರೈಸುತ್ತೇವೆ.
        ಮೊನ್ನೆ ವಾಟ್ಸಪ್ ಮೂಲಕ ಸುದ್ದಿಯೊಂದು ಹರಿದಾಡಿತು. ಹಲವಾರು ಗ್ರೂಪುಗಳಲ್ಲಿ ಚರ್ಚೆ ಕೂಡಾ ಆಗುತ್ತಿತ್ತು. ಬಹುಶಃ ಕರ್ನಾಟಕದ ಹೆಚ್ಚಿನ ಓದುಗರು ಇದರಿಂದ ನಿರಾಶರಾಗಿರಬಹುದು. ಕಾರಣ ಕನ್ನಡದ ಪ್ರಖ್ಯಾತ 'ಮಂಗಳ ಪತ್ರಿಕೆ' ಇನ್ನು ಪ್ರಕಟವಾಗುವುದಿಲ್ಲ ಎನ್ನುವ ಸುದ್ದಿ. ನನಗೂ ತುಂಬಾ ಬೇಜಾರಾಯಿತು. 
          ನಾನು ಸಣ್ಣದಿರುವಾಗ ಪ್ರೈಮರಿ ಹೈಸ್ಕೂಲ್ ದಿನಗಳಲ್ಲಿ ಶಾಲೆಯಿಂದ ವಾಪಾಸು ಬರಬೇಕಾದರೆ ರಾಮಣ್ಣನ ಸೆಲೂನ್ ಶಾಪಿಗೆ ಹೋಗುತ್ತಿದ್ದೆ. ಒಂದಷ್ಟು ಹೊತ್ತು ಪುಸ್ತಕ ಓದಿ ಮನೆಗೆ ತೆರಳುತ್ತಿದ್ದೆ. ಅವರ ಶಾಪ್ ನಲ್ಲಿ ತರಂಗ, ಸುಧಾ, ಮಂಗಳ ಪತ್ರಿಕೆಗಳು ಇರುತ್ತಿದ್ದವು. ಆ ಪತ್ರಿಕೆಗಳನ್ನು ಓದುವ ಮೂಲಕ ನಾವು ಬಾಲ್ಯದಲ್ಲಿ ಸಾಹಿತ್ಯವನ್ನು ಪ್ರೀತಿಸುವ ಹವ್ಯಾಸವನ್ನು ಬೆಳೆಸಿಕೊಂಡೆವು. ಪತ್ರಿಕೆಯಲ್ಲಿ ಬರುತ್ತಿದ್ದ ಕಥೆಗಳು ಹಾಗೂ ಅದಕ್ಕೆ ಪೂರಕವಾಗಿ ಬಿಡಿಸುತ್ತಿದ್ದ ಜಲ ವರ್ಣ ಚಿತ್ರಗಳು ನಮ್ಮನ್ನು ಹೆಚ್ಚು ಆಕರ್ಷಿಸಿಕೊಳ್ಳುತ್ತಿತ್ತು. ನಾನೂ ಬರೆಯಬೇಕು, ನಾನೂ ಚಿತ್ರ ಮಾಡಬೇಕು ಎನ್ನುವ ಆಸೆ ಮೂಡಲು ಆ ಪತ್ರಿಕೆಯೇ ಕಾರಣ. ನಮ್ಮಲ್ಲೊಂದಿಷ್ಟು ಕನಸುಗಳನ್ನು ತುಂಬಿ ಸದಾಭಿರುಚಿಗಳನ್ನು ಮೂಡಿಸುತ್ತಿದ್ದ ಪತ್ರಿಕೆಗಳು ಇಂದು ಕಣ್ಮರೆಯಾಗುತ್ತಿರುವುದು ದುರಂತದ ಸಂಗತಿ. ಸಣ್ಣ ಸಣ್ಣ ಬರಹಗಳನ್ನು, ಕಾರ್ಟೂನ್ ಚಿತ್ರಗಳನ್ನು ರಚಿಸಲು ಪ್ರೇರಣೆಯಾಗುತ್ತಿದ್ದ ಪತ್ರಿಕೆಗಳು ಇಂದು ಮುಚ್ಚಿ ಹೋಗಲು ಕಾರಣ ಏನು ಎನ್ನುವುದನ್ನು ನಾವೆಲ್ಲರೂ ಚಿಂತಿಸಬೇಕಾಗಿದೆ...!! 
       ಮಕ್ಕಳ ಜಗಲಿಯ ರಾಜ್ಯಮಟ್ಟದ ಕಥೆ ಕವನ ಸ್ಪರ್ಧೆಗೆ ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ ಸ್ಪಂದನೆ ಸಿಕ್ಕಿದೆ. ನಿಮ್ಮೆಲ್ಲರ ಸಹಕಾರದಿಂದ ತುಂಬಾ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ತಲುಪಿಸುವ ಜವಾಬ್ದಾರಿ ಸುಸೂತ್ರವಾಗಿ ನಡೆದಿದೆ. ಸುದ್ದಿಗಳು ತಲುಪಿರದ ಇನ್ನಷ್ಟು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಮತ್ತೆ ಮತ್ತೆ ತಲುಪಿಸುವ ಮೂಲಕ ನಿಮ್ಮೆಲ್ಲರ ಸಹಕಾರವನ್ನು ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇವೆ. ಏನಾದರೂ ಸಂದೇಹಗಳಿದ್ದರೆ ಕೊಟ್ಟಿರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ವಂದನೆಗಳು....                
        
ಕಳೆದ ಸಂಚಿಕೆಯ ಜಗಲಿಕಟ್ಟೆ - 19 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು , ಕವಿತಾ ಶ್ರೀನಿವಾಸ, ಸಲೀಂ ಪಾಶಾ ಪ್ರಾಥಮಿಕ ಶಾಲಾ ಶಿಕ್ಷಕರು, ಬಿಜಾಪುರ ಮತ್ತು ಪೂರ್ಣಿಮ ಕೋಟ್ಯಾನ್ ಮಾರ್ನಾಡ್.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರ,
      ಬದುಕುವ ಕಲೆಯನ್ನು ಕಲಿತಾಗ ಬದುಕು ಸುಂದರ, ಸಾರ್ಥಕ ಎನ್ನುವ ಸಂದೇಶದೊಂದಿಗೆ ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಬದುಕುವ ಪರಿಯನ್ನು ಹಕ್ಕಿಗಳ ಬದುಕಿನೊಂದಿಗೆ ಹೋಲಿಸಿ ಬರೆದ ಲೇಖನ - ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರ ಜೀವನ ಸಂಭ್ರಮ ಸಂಚಿಕೆ - ಬದುಕುವುದು ಹೇಗೆ? ತುಂಬಾ ಅದ್ಭುತವಾಗಿತ್ತು.
     
     ಈ ವಾರದ ಮಕ್ಕಳ ಕಥೆಯಲ್ಲಿ ಇಂದಿನ ಯಾಂತ್ರಿಕ ಜೀವನಕ್ಕಿಂತ ಪ್ರಕೃತಿಯೊಂದಿಗಿರುವ ಹಿಂದಿನ ನೈಜ ಜೀವನ ಬಲು ಸುಂದರ. ನೈಜ ಜೀವನದ ಕೊರತೆಯನ್ನು ತಾಯಿಗೆ ಬರೆದ ಪತ್ರದ ಮೂಲಕ ತನ್ನ ಕಥೆಯಲ್ಲಿ ಆರ್ಯರವರು ಸೊಗಸಾಗಿ ತಿಳಿಸಿದ್ದಾರೆ. ಅಭಿನಂದನೆಗಳು ಆರ್ಯಳಿಗೆ.

    ಮಾನವನಿಗೆ ಬಾಹ್ಯಶುಚಿತ್ವ ಎಷ್ಟು ಮುಖ್ಯವೋ ಆಂತರಿಕ ಶುಚಿತ್ವವೂ ಅಷ್ಟೇ ಮುಖ್ಯ ಎನ್ನುವುದನ್ನು ಬಹಳ ಸೊಗಸಾಗಿ ಉದಾಹರಣೆ ಸಹಿತ ನಿರೂಪಿಸಿದ ರಮೇಶ್ ಸರ್ ರವರ 'ಶುಚಿ' ಲೇಖನ ಉತ್ತಮವಾಗಿತ್ತು.

     ಬಹಳ ದಿನಗಳ ನಂತರ ತೇಜಸ್ವಿ ಯವರ ಲೇಖನ. ಸ್ವರೂಪ ಅಧ್ಯಯನ ಸಂಸ್ಥೆಯ ಶಿಬಿರದ ಕುರಿತಾದ ಚೆಂದದ ಅನುಭವವನ್ನು ಹಂಚಿಕೊಂಡಿದ್ದೀರಿ. ಮಕ್ಕಳ ಕವನಗಳಲ್ಲಿ ಶರ್ಮಿಳ ಕೆ. ಎಸ್. ರವರ ಕವನಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಶರ್ಮಿಳಾರವರಿಗೆ.

     ಅರವಿಂದರ ಹಕ್ಕಿಕಥೆಯಲ್ಲಿ ಸುಂದರ ಛಾಯಾ ಚಿತ್ರದೊಂದಿಗೆ ಬೂದು ಬಕ ಪಕ್ಷಿಯ ಪರಿಚಯವು ವಿವರಣಾತ್ಮಕವಾಗಿ ಚೆನ್ನಾಗಿ ಮೂಡಿಬಂದಿದೆ.

     ವಿಜಯ ಮೇಡಂರವರ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ಕರುಳ ಬಳ್ಳಿಯ ಸಂಬಂಧವನ್ನು ಗಟ್ಟಿಗೊಳಿಸುವ, ಪುಟ್ಟಮಕ್ಕಳಿಗೆ ಅವಶ್ಯವಾಗಿ ಬೇಕಾಗುವ ಬಂದನಾರು ಗಿಡದ ಪರಿಚಯವು ಅಗತ್ಯ ಮಾಹಿತಿಗಳೊಂದಿಗೆ ತುಂಬಾ ಉಪಯುಕ್ತವಾಗಿತ್ತು.

      ಅತ್ಯಂತ ಬಡ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳಲ್ಲಿ ಅವಳ ತಾಯಿಯ ಮೇಲಿನ ಪ್ರೀತಿ ಹಾಗೂ ಕಳಕಳಿಯ ಜೊತೆಗೆ ಅವಳ ಪ್ರೀತಿಯ ಶಿಕ್ಷಕಿಯ ಸಹಕಾರದ ಕುರಿತು - ಮನ ಮಿಡಿಯುವ ಲೇಖನ ಯಾಕೂಬ್ ಸರ್ ರವರ ಹೃದಯದ ಮಾತು ಸಂಚಿಕೆಯಲ್ಲಿ.
     ವಾಣಿಯಕ್ಕನವರ 'ಲಾಟೀನು' ಪುಸ್ತಕದ ಪರಿಚಯ ಚೆನ್ನಾಗಿತ್ತು. ಶ್ವೇತಾ ಮೇಡಂ ರವರು ಶಿಕ್ಷಕರ ಡೈರಿಯಲ್ಲಿ ಹಂಚಿಕೊಂಡ ಅನುಭವ, ರಮೇಶ್ ನಾಯ್ಕ ಉಪ್ಪುಂದ ಇವರ ಪದದಂಗಳ ಉತ್ತಮವಾಗಿತ್ತು.

     ಈ ವಾರದ ಎಲ್ಲಾ ಲೇಖನಗಳು ಅತ್ಯಂತ ಸುಂದರವಾಗಿ ಮೂಡಿ ಬರಲು ಕಾರಣರಾದ ಹಿರಿಯರಿಗೆ ಹಾಗೂ ಕಿರಿಯರಿಗೆ ಮನದಾಳದ ಕೃತಜ್ಞತೆಗಳು. ಈಗಾಗಲೇ ಎಲ್ಲರ ಮನೆ ಮಾತಾದ ಜಗಲಿ ಇನ್ನಷ್ಟು ಬೆಳಗಲಿ ಎನ್ನುವ ಆಶಯಗಳೊಂದಿಗೆ ಮತ್ತೆ ಮುಂದಿನ ವಾರದ ಅನಿಸಿಕೆಯೊಂದಿಗೆ ...... ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


     ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article