ಜೀವನ ಸಂಭ್ರಮ : ಸಂಚಿಕೆ - 106
Sunday, October 8, 2023
Edit
ಜೀವನ ಸಂಭ್ರಮ : ಸಂಚಿಕೆ - 106
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಎಲ್ಲಾ ಜ್ಞಾನಿಗಳು ಅನುಭವಿಗಳಲ್ಲ. ಹಾಗೆ ಎಲ್ಲಾ ಅನುಭವಿಗಳು ಅನುಭಾವಿಗಳಲ್ಲ. ಮೂರಕ್ಕೂ ವ್ಯತ್ಯಾಸವಿದೆ. ಏನು ಎಂದು ನೋಡೋಣ.
ಜ್ಞಾನಿ: ಒಬ್ಬ ವ್ಯಕ್ತಿ ಇದ್ದಾನೆ. ಆತ ಪ್ರಪಂಚದ ಗುಲಾಬಿಗಳ ಬಗ್ಗೆ ತಿಳಿದಿದ್ದಾನೆ. ಗುಲಾಬಿಯ ವಿಧಗಳು, ತಳಿಗಳು, ಬಣ್ಣ, ಆಕಾರ ಎಲ್ಲಾ ತಿಳಿದಿದ್ದಾನೆ. ಯಾವ ಸಮಯದಲ್ಲಿ ಬೆಳೆಯಬೇಕು...?ಯಾವ ಗೊಬ್ಬರ ಹಾಕಬೇಕು..? ಯಾವಾಗ ಹಾಕಬೇಕು..? ರೋಗ ಬಂದರೆ ಯಾವ ಔಷಧಿ ಹಾಕಬೇಕು..? ಯಾವುದಕ್ಕೆ ಯಾವುದನ್ನ ಕಸಿ ಮಾಡಿದರೆ ಯಾವ ತಳಿ ಬರುತ್ತದೆ..? ಎಲ್ಲಾ ತಿಳಿದಿದ್ದಾನೆ. ಆದರೆ ಆತ ಒಂದು ದಿನವೂ ಜಮೀನಿಗೆ ಹೋಗಲಿಲ್ಲ, ಹುತ್ತಲಿಲ್ಲ, ಬಿತ್ತಲಿಲ್ಲ. ಅವುಗಳನ್ನು ಮುಟ್ಟಿ ಅನುಭವಿಸಲಿಲ್ಲ. ಅವುಗಳ ನೈಜ ಸೌಂದರ್ಯ ಮತ್ತು ಸುಗಂಧವನ್ನು ಅನುಭವಿಸಿ ಗೊತ್ತಿಲ್ಲ. ಆತನಿಗೆ ಆ ಹೂವಿನಿಂದ ಎಷ್ಟು ಲಾಭ ಬರುತ್ತದೆ..? ಹೇಗೆ ಹಣ ಗಳಿಸಬಹುದೆಂದು ತಿಳಿದಿದ್ದಾನೆ. ಈತ ಶಿಕ್ಷಣ ಪಡೆದ ಜ್ಞಾನಿ. ಆದರೆ ಈತನು ಅನುಭವಿನೂ ಅಲ್ಲ. ಅನುಭಾವಿನೂ ಅಲ್ಲ. ಕೇವಲ ಜ್ಞಾನಿ. ಈಗ ಶಿಕ್ಷಣ ಪಡೆದಿರುವ ನಾವೆಲ್ಲ ಜ್ಞಾನಿಗಳು.
ಅನುಭವಿ: ಒಬ್ಬ ರೈತನಿದ್ದಾನೆ. ಆತ ಏನು ಓದಿಲ್ಲ. ಆತನಿಗೆ ಒಂದು ಗುಲಾಬಿ ಕಡ್ಡಿ ಸಿಕ್ಕಿದೆ. ಅದನ್ನು ತಂದು ನೆಟ್ಟಿದ್ದಾನೆ. ತನಗೆ ತಿಳಿದ ಗೊಬ್ಬರ ಹಾಕಿದ್ದಾನೆ. ಪ್ರತಿದಿನ ನೀರು ಹಾಕಿ, ರಕ್ಷಣೆ ಮಾಡಿ, ಬೆಳೆಸಿದ್ದಾನೆ. ಆ ಗಿಡ ಬೆಳೆದು ಹೂ ಬಿಟ್ಟಿದೆ. ಆ ಗಿಡದ ಹೂವನ್ನು ಮುಟ್ಟಿ ಸೌಂದರ್ಯ ಸವಿಯುತ್ತಾನೆ. ಅದರ ಸುವಾಸನೆ ಅನುಭವಿಸಿ ಆನಂದಿಸುತ್ತಾನೆ. ಆತನಿಗೆ ಎಲ್ಲಾ ಗಿಡಗಳ ಹೂಗಳ ಸೌಂದರ್ಯ ಮತ್ತು ಸುಗಂಧ ಪರಿಚಯವಿಲ್ಲದಿರಬಹುದು, ತಾನು ಬೆಳೆಯುವ ಗಿಡದ ಸೌಂದರ್ಯ ಮತ್ತು ಸುಗಂಧ ಅನುಭವಿಸುತ್ತಾನೆ. ಈತ ಅನುಭವಿ ಆದರೆ ಅನುಭಾವಿ ಅಲ್ಲ ಹಾಗೂ ಪೂರ್ಣ ಜ್ಞಾನಿ ಅಲ್ಲ. ತಾನು ಬೆಳೆಯುವ ಗಿಡದ ಜ್ಞಾನ ಅಲ್ಪಸ್ವಲ್ಪ ಗೊತ್ತಿದೆ.
ಅನುಭಾವಿ: ಮತ್ತೊಬ್ಬ ವ್ಯಕ್ತಿ ಇದ್ದಾನೆ. ಆತ ಗುಲಾಬಿ ಬಗ್ಗೆ ಓದಿಲ್ಲ. ಗುಲಾಬಿ ಬೆಳೆದಿಲ್ಲ. ಯಾರೋ ಹೇಳುತ್ತಾರೆ, ಅಲ್ಲಿ ಗುಲಾಬಿ ಇದೆ ನೋಡು ಎಂದು. ಹೋಗುತ್ತಾನೆ. ಗುಲಾಬಿ ಮುಟ್ಟಿ ಅದರ ಸೌಂದರ್ಯ ಮತ್ತು ಸುಗಂಧದಲ್ಲಿ ಮುಳುಗುತ್ತಾನೆ. ತಾನೇ ಹೂವಾಗಿ ಅಥವಾ ಹೂವೆ ತಾನಾಗಿ ಮಗ್ನನಾಗುತ್ತಾನೆ. ಅನುಭವಿ ಅನುಭವಿಸುತ್ತಾನೆ. ಅನುಭಾವಿಯು ಅನುಭವಿಸುತ್ತಾನೆ. ಆದರೆ ಸ್ವಲ್ಪ ವ್ಯತ್ಯಾಸವಿದೆ. ಅನುಭವಿ ಅನುಭವಿಸುತ್ತಾನೆ ಆ ವಸ್ತುವನ್ನು ತನ್ನದು ಮಾಡಿಕೊಂಡು. ಅನುಭಾವಿ ತನ್ನನ್ನು ಮರೆತು, ಅದರಲ್ಲಿ ತಲ್ಲೀನನಾಗಿ ಮಗ್ನನಾಗಿ ಅನುಭವಿಸುತ್ತಾನೆ. ಆತನಿಗೆ ಆ ವಸ್ತು ತನ್ನದು ಅಂತಲ್ಲ, ಇನ್ನೊಬ್ಬರದು ಅಂತಲ್ಲ. ಅದು ಯಾರದ್ದೋ ಇರಬಹುದು. ಆ ವಸ್ತುವಿನಲ್ಲಿ ವಸ್ತುವಾಗುತ್ತಾನೆ. ಆತನೇ ಅನುಭಾವಿ. ಆತ ಸೌಂದರ್ಯ ಮಾಧುರ್ಯ ಶಾಂತಿ ಮತ್ತು ಸಂತೋಷದಲ್ಲಿ ಮುಳುಗುವುದರಿಂದ, ಆತನ ಮನಸ್ಸು ಸೌಂದರ್ಯ, ಮಾಧುರ್ಯ, ಶಾಂತಿ ಮತ್ತು ಸಂತೋಷದಿಂದ ತುಂಬಿರುತ್ತದೆ. ಆತನ ಮಾತಿನಲ್ಲಿ ಮಾಧುರ್ಯ, ಸೌಂದರ್ಯದ ಅನುಭವ ಇರುವುದರಿಂದ, ಆ ವ್ಯಕ್ತಿ ಇಲ್ಲದಿದ್ದರೂ ಆತನ ಮಾತು ಶಾಶ್ವತವಾಗಿರುತ್ತದೆ. ಬುದ್ದ, ಬಸವಣ್ಣ ಮತ್ತು ಅಕ್ಕಮಹಾದೇವಿ ಇಂದಿಲ್ಲ. ಆದರೆ ಅವರ ಮಾತುಗಳು ಇವೆ. ಏಕೆಂದರೆ ಆ ಮಾತಿನಲ್ಲಿ ಸತ್ಯದ ಅಂಶ, ಸೌಂದರ್ಯ ಮತ್ತು ಮಾಧುರ್ಯ ತುಂಬಿದೆ. ಈ ಮಾತು ಕೇಳಿದರೆ ನಮ್ಮ ಮನಸ್ಸು ಸ್ವಚ್ಛವಾಗಿ ಸೌಂದರ್ಯ ಮಾಧುರ್ಯ ತುಂಬುತ್ತದೆ. ಒಬ್ಬ ವ್ಯಕ್ತಿ ಚಿನ್ನದಿಂದ, ಸೂಕ್ಷ್ಮ ಕೆತ್ತನೆಗಳಿಂದ ಸುಂದರ ಹೂವನ್ನು ಮಾಡಿಸಿ ಇಟ್ಟಿದ್ದಾನೆ. ಅದರ ಪಕ್ಕ ಮಲ್ಲಿಗೆ ಹೂವಿದೆ. ಪತಂಗ ನಿಜ ಹೂವನ್ನು ಸ್ಪರ್ಶಿಸುತ್ತದೆ ವಿನಃ, ಕೃತಕ ಹೂವನ್ನು ತಿರುಗಿಯೂ ನೋಡುವುದಿಲ್ಲ. ಕೆಲವರು ಎಷ್ಟೇ ವೈಭವ ಪೂರ್ಣವಾಗಿ ಮಾತನಾಡಿದರು, ಹೃದಯ ತಲುಪುವುದಿಲ್ಲ. ಅದು ಕೃತಕ ಹೂವಿದ್ದಂತೆ. ಏಕೆಂದರೆ ಅದರಲ್ಲಿ ಸುಗಂಧವಿಲ್ಲ. ಅನುಭವಿಗಳ ಮಾತು ನಿಜ ಹೂವಿದ್ದಂತೆ. ಸೌಂದರ್ಯ, ಮಾಧುರ್ಯ ಮತ್ತು ಸತ್ಯ ಎಲ್ಲಾ ಅಡಕವಾಗಿರುತ್ತದೆ. ನಮ್ಮ ಮನಸ್ಸು ಸ್ವಚ್ಛವೂ ಸಂತೋಷಭರಿತವೂ ಆಗುತ್ತದೆ. ಇಂತಹ ಮಾತುಗಳನ್ನು ಮೆಲುಕು ಹಾಕಬೇಕು. ಮೆಲಕು ಹಾಕುವುದೆಂದರೆ ಹಸು ಉಲ್ಲನ್ನು ತಿಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿ ಆನಂದದಿಂದ ಪುನಃ ಜಠರದಿಂದ ವಾಪಸ್ ತೆಗೆದು ಅಗಿಯುತ್ತದೆ. ಹಾಗೆ ಇಂಥ ಮಾತುಗಳನ್ನು ಪದೇಪದೇ ನೆನಪು ಮಾಡಿಕೊಂಡರೆ ಒಳ್ಳೆಯದು. ಒಳ್ಳೆಯದನ್ನು ಪುನಃ ಪುನಃ ನೆನಪು ಮಾಡಿಕೊಂಡರೆ, ಆ ಮಾತಿನ ಪದದ ಸೌಂದರ್ಯ, ಮಾಧುರ್ಯ ಮತ್ತು ಸತ್ಯವನ್ನು ಅರಿತು ಅನುಭವಿಸಿ, ಆ ಸೌಂದರ್ಯ ಮಾಧುರ್ಯ ಮತ್ತು ಸತ್ಯದಲ್ಲಿ ಮನಸ್ಸು ತಲ್ಲೀನವಾಗಿ, ಅದೇ ರೀತಿ ಮನಸ್ಸು ಮಾರ್ಪಟ್ಟು ನಾವು ಅನುಭಾವಿಗಳಾಗಬಹುದು ಅಲ್ಲವೇ ಮಕ್ಕಳೇ....
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************