-->
ಚಿಟ್ಟೆಗಳಿಗೆ ರೆಕ್ಕೆ ಹಚ್ಚುವ ಪುಟ್ಟ ಬಾಲಕ - ಕೃಷ್ಣ ಕುಮಾರ ಕೆ ಆರ್

ಚಿಟ್ಟೆಗಳಿಗೆ ರೆಕ್ಕೆ ಹಚ್ಚುವ ಪುಟ್ಟ ಬಾಲಕ - ಕೃಷ್ಣ ಕುಮಾರ ಕೆ ಆರ್

ಪ್ರತಿಭಾ ಪರಿಚಯ
ಹವ್ಯಾಸ : ಚಿಟ್ಟೆಗಳ ಬಗ್ಗೆ ಅಧ್ಯಯನ
ವಿದ್ಯಾರ್ಥಿಯ ಹೆಸರು : ಕೃಷ್ಣ ಕುಮಾರ ಕೆ ಆರ್
7ನೇ ತರಗತಿ 
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

    

     ಕೊರೋನ ಮಹಾಮಾರಿಯ ಕರಾಳ ದಿನಗಳ ನೆನಪು ಇನ್ನೂ ಮಾಸಿರದ ಮನಸ್ಸುಗಳು ಹಪಹಪಿಸುತ್ತಿರಬಹುದು. ವ್ಯವಸ್ಥೆಗಳನ್ನೇ ಬುಡಮೇಲು ಮಾಡಿದ ಸನ್ನಿವೇಶಗಳು ಜನ - ಜೀವನವನ್ನೇ ಅಸ್ತವ್ಯಸ್ಥಗೊಳಿಸಿದ್ದನ್ನು ನಾವೆಲ್ಲಾ ಕಂಡಿದ್ದೇವೆ. ದುಸ್ತರವಾದ ಬದುಕಿಗೆ ತುತ್ತಾಗಿ ಸೋತು ಹೋದ ಕುಟುಂಬಗಳನ್ನು ನೋಡಿ ಕೊರಗಿದ್ದೇವೆ....!! ಲಾಕ್ ಡೌನ್... ಲಾಕ್ ಡೌನ್...!! ದಿನಾ ಟಿವಿ ಪರದೆಯ ಮೇಲೆ ಬಿತ್ತರವಾಗುತ್ತಿದ್ದ ಪದಗಳನ್ನು ಕೇಳಿ ಕೇಳಿ ಸುಸ್ತಾಗಿದ್ದಂತು ನಿಜ...!! ಶಾಲೆ ಮುಚ್ಚಿ ಮನೆಯಲ್ಲಿ ಉಳಿಯಬೇಕಾದ ಮಕ್ಕಳು ಅಕ್ಷರಶಃ ಬಡವಾಗಿದ್ದನ್ನು ಪ್ರತಿಯೊಬ್ಬರೂ ಬಲ್ಲರು...!! ಕಾಂಕ್ರೀಟ್ ನಗರದಲ್ಲಿ ಬೆಳೆದ ಮಕ್ಕಳು ನಾಲ್ಕು ಗೋಡೆಯ ಮಧ್ಯ ಮಾನಸಿಕವಾಗಿ ಕುಗ್ಗಿ ಹೋದ ವರದಿಗಳನ್ನು ಮಕ್ಕಳ ಸಮೀಕ್ಷೆಗಳಲ್ಲಿ ಕೇಳಿದ್ದೇವೆ....!! ಚಟುವಟಿಕೆ ಇಲ್ಲದೆ ಶೈಕ್ಷಣಿಕವಾಗಿ ಹಿಂದುಳಿದ ಇಷ್ಟೆಲ್ಲ ಸುದ್ದಿಗಳ ನಡುವೆಯೂ ಸೋಜಿಗದ ಅನೇಕ ಸುದ್ದಿಗಳು ಕೊರೋನ ದ ಸಂಕಷ್ಟದ ದಿನಗಳಲ್ಲಿಯ ಸಾಧ್ಯತೆಗಳನ್ನು ಬಯಲು ಮಾಡುತ್ತದೆ...!! 
      ಇಲ್ಲಿ ಎಲ್ಲವೂ ಕಾರಣವಾಗಿದ್ದು ಸೃಜನಶೀಲ ಮನಸ್ಸುಗಳಿಗೆ ಮಾತ್ರ...!! ಏನೋ ಹೊಸತನ್ನು ಹುಡುಕುವ, ಏನೋ ಹೊಸತನ್ನು ಸಂಶೋಧಿಸುವ ಕುತೂಹಲ ಇರುವ ಮನಸ್ಸುಗಳಿಗೆ ಇಲ್ಲಿ ಸಾಧ್ಯವಾಗಿದೆ...!! ಪ್ರಕೃತಿಯಲ್ಲಿ ಸೌಂದರ್ಯ ಪ್ರಜ್ಞೆ ಕಾಣುವ, ಪ್ರಕೃತಿಯ ಜೊತೆ ಬೆರೆತುಕೊಳ್ಳುವ, ಕಲಾಪ್ರಜ್ಞೆಯನ್ನು ಹೊಂದಿದ ಸ್ವಚ್ಛ ಮನಸ್ಸುಗಳಿಗೆ ಕಷ್ಟದ ದಿನಗಳು ಇಷ್ಟವಾಗಿದೆ. ಇದಕ್ಕೆ ಪೂರಕವೆನಿಸುವ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ... ಅನೇಕ ಸಾಹಸಗಳನ್ನು ಕೈಗೊಂಡಿರುವ ವರದಿಗಳನ್ನು ಒಂದೊಂದಾಗಿ ಕಾಣುತ್ತಾ ಬಂದಿದ್ದೇವೆ....!!
        ಅಪ್ಪ ಅಮ್ಮನಿಗೆ ಗಾಬರಿ..!! ಮಗ ಮೊಬೈಲು ನೋಡಿ ಯೂಟ್ಯೂಬಲ್ಲಿ ಏನೋ ಹುಡುಕಾಡುತ್ತಿದ್ದ...!! ಹುಳ ಹುಪ್ಪಟೆಗಳನ್ನು ತಂದು ಮನೆಯಲ್ಲಿ ಡಬ್ಬದಲ್ಲಿ ಹಾಕಿ ಸಾಕತೊಡಗಿದ..!! ಶಾಲೆ ಇಲ್ಲದ ದಿನಗಳಾದ್ದರಿಂದ ಈ ಪೋರನಿಗೆ ಇದುವೇ ಆಟ. ಬೇರೇನು ವಿಧಿ ಇಲ್ಲದೆ ಅಪ್ಪ ಅಮ್ಮನಿಗೆ ಗಮನಿಸುವುದೊಂದೇ ಪರಿಹಾರ ಎನಿಸಿತ್ತು. ಪ್ರಕೃತಿಯ ನಡುವೆ ಹುಟ್ಟಿ ಬೆಳೆದ ಎರಡನೇ ತರಗತಿಯ ಈ ಹುಡುಗನಿಗೆ ಹತ್ತಿರದ ಬೆಟ್ಟ ಗುಡ್ಡಗಳಲ್ಲಿ ಬಳ್ಳಿ ಪೊದೆಗಳಲ್ಲಿ ಹುಳಗಳನ್ನು ಹುಡುಕುವುದೇ ಆಸಕ್ತಿಯ ವಿಚಾರ...!! ಹುಳಗಳಿಗೆ ಬೇಕಾದ ಸೊಪ್ಪು ತಂದು ಹಾಕುವುದು... ಅದರ ಬೆಳವಣಿಗೆಯನ್ನು ಗಮನಿಸುವುದು ಕುತೂಹಲವೆನಿಸುತ್ತಿತ್ತು...!! ಹೀಗೆ ಒಂದು ದಿನ ಕೋಶ ಕಟ್ಟಿ ಬೆಳೆದ ಹುಳ ಚಿಟ್ಟೆಯಾಗಿ ಹೊರಹೊಮ್ಮಿದಾಗ ಅದೇನೋ ಸಂತೋಷ ಈ ಬಾಲಕನಲ್ಲಿ... ಹೊಸತನ್ನು ಹುಡುಕಿದ , ಸಂಶೋಧಿಸಿದ ಕಲಿಕೆ ಇವನದಾಗಿತ್ತು...!!
       ಹೌದು ಇವನ ಹೆಸರು ಕೃಷ್ಣ ಕುಮಾರ. ಪ್ರಸ್ತುತ ಬಂಟ್ವಾಳ ತಾಲೂಕಿನ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಏಳನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮೂಲತಃ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಅಚ್ಚುತರಾಜ ಮತ್ತು ರಮ್ಯಾ ದಂಪತಿಗಳ ಪುತ್ರ. ಅಪ್ಪ ಅಮ್ಮನ ಮಾತುಗಳಿಗಿಂತಲೂ ಜೀವಿಗಳ ಜೊತೆ ಸಂವಹನ ಕೌಶಲಬೆಳೆಸಿಕೊಂಡಿದ್ದ ಕೃಷ್ಣ ಕುಮಾರನಿಗೆ ಬಿಡುವಿಲ್ಲದ ಕೆಲಸ. ಇರುವೆ, ಕಪ್ಪೆ, ಮೀನು , ಜೇಡ , ಬಸವನ ಹುಳು , ಚಿಟ್ಟೆ ಹೀಗೆ ಪರಿಸರ ಜೀವಿಗಳ ಜೊತೆ ನಿತ್ಯ ಸಂಪರ್ಕ. ಅವುಗಳ ಅಧ್ಯಯನ. ತನ್ನ ಅಧ್ಯಯನದ ಜೊತೆ ಸೇರಿಕೊಂಡಿರುವ ಪುಟ್ಟ ತಂಗಿ ಆರಾಧ್ಯ. ಆಕೆ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಹುಳಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಅಣ್ಣನಿಗೆ ನೆರವಾಗುವ ಈಕೆ ತಾನು ಏನು ಕಮ್ಮಿ ಇಲ್ಲದಂತೆ ಅಣ್ಣನಿಗೆ ಸಾಥ್ ನೀಡುತ್ತಿದ್ದಾಳೆ.
      ಶ್ರೀರಾಮ ವಿದ್ಯಾಕೇಂದ್ರವು ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸದಾಕಾಲ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿಷಯ ತಿಳಿದ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕರು ಶ್ರೀ ರವಿರಾಜ ಶ್ರೀಮಾನ್ ಹಾಗೂ ಶಿಕ್ಷಕ ವೃಂದದವರು ಚಿಟ್ಟೆಗಳ ಹುಳಗಳನ್ನು ಸಂಗ್ರಹಿಸಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲು ಸಮ್ಮತಿಸಿ ಕೃಷ್ಣ ಕುಮಾರನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿಗಳು ಚಿಟ್ಟೆಗಳ ಜೀವನ ಚಕ್ರದ ನಾಲ್ಕು ಹಂತಗಳನ್ನು ಶಾಲಾ ಪರಿಸರದಲ್ಲಿ ಮೂರು ವಾರಗಳಿಂದ ವಿವಿಧ ಹಂತದಲ್ಲಿ ನಿರಂತರ ಅಧ್ಯಯನ ಮಾಡಿದರು. ಇವುಗಳಲ್ಲಿ ಮೊಟ್ಟೆ, ಲಾರ್ವ, ಪೊರೆ, ಮತ್ತು ವಯಸ್ಕ ಹಂತದ ಬಗ್ಗೆ ತಿಳಿದುಕೊಂಡು ಮೊಟ್ಟೆಯಿಂದ ಚಿಟ್ಟೆಗಳು ಹೊರಬರುವ ಹಂತದವರೆಗೆ ವೈಜ್ಞಾನಿಕವಾಗಿ ಪ್ರಯೋಗ ಮಾಡಿ ಪ್ರತಿ ಹಂತವನ್ನು
ದಾಖಲಿಸಿ ಲಾರ್ವದಿಂದ ಹೊರಬಂದ ಚಿಟ್ಟೆಯ
ಚಟುವಟಿಕೆಗಳನ್ನು ವೀಕ್ಷಿಸಿದರು.
         ಅಮ್ಮ ಶ್ರೀಮತಿ ರಮ್ಯ ಹೇಳೋ ಮಾತಿನಂತೆ, "ಕೊರೋನ ಅವಧಿಯಲ್ಲಿ ಕೃಷ್ಣನಿಗೆ ಚಿಟ್ಟೆಗಳ ಬಗ್ಗೆ ಅಧ್ಯಯನ ಮಾಡುವ ಕುತೂಹಲ ಮೂಡಿತು. ಯೂಟ್ಯೂಬ್ ಮೂಲಕ ವಿಚಾರಗಳನ್ನು ತಿಳಿದುಕೊಂಡು ಪ್ರಯೋಗಗಳನ್ನು ಮಾಡುತ್ತಿದ್ದ. ಆರಂಭದಲ್ಲಿ ಹುಳಗಳನ್ನು ತಂದು ಮನೆಯಲ್ಲಿ ರಾಶಿ ಹಾಕುವುದನ್ನು ಕಂಡು ಅಸಹ್ಯ ಎನಿಸಿದ್ದು ಉಂಟು. ಹುಳ ಬಲಿತು ಚಿಟ್ಟೆಯಾಗುವ ಹಂತಗಳನ್ನು ನಾನು ಗಮನಿಸುತ್ತಾ ನನಗೂ ಕುತೂಹಲವೆನಿಸಿತು. ಅವನ ಜೊತೆ ನಾನೂ ತುಂಬಾ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು." ಎನ್ನುತ್ತಾರೆ.
     ಈ ಪುಟ್ಟ ಪುಟ್ಟ ಜೀವಿಗಳೆಂದರೆ ಕೃಷ್ಣನಿಗೆ ತುಂಬಾ ಪ್ರೀತಿ. ಅವುಗಳನ್ನು ತಂದು ಸಂಗ್ರಹಿಸುವುದು. ಅವಕ್ಕೆ ಆಹಾರ ನೀಡುವುದು ರೂಢಿಯಾಗಿದೆ. ಯಾವ ಹುಳು ಯಾವ ಎಲೆಯನ್ನು ತಿನ್ನುತ್ತದೆ ಎಂಬುದನ್ನು ಅರಿತಿದ್ದಾನೆ. ಆ ಬಗ್ಗೆ ತುಂಬಾ ಪ್ರಯೋಗಗಳನ್ನು ಮಾಡಿ ಅನುಭವದ ಮೂಲಕ ತಿಳಿದುಕೊಂಡಿದ್ದಾನೆ. "ಕೆಲವು ಹುಳಗಳು ಕೆಲವು ಜಾತಿಯ ಎಲೆಗಳನ್ನು ಮಾತ್ರ ತಿನ್ನುತ್ತದೆ. ಆ ಹುಳಗಳಿಗೆ ಅಂತಹ ಎಲೆಗಳನ್ನು ಮಾತ್ರ ತಂದು ಹಾಕಬೇಕು. ಮಳೆಗಾಲದಲ್ಲಿ ಜಾಸ್ತಿ ಸಿಕ್ಕುವ ಹುಳಗಳು ಬೇಸಿಗೆ ಕಾಲಕ್ಕಾಗುವಾಗ ಕಡಿಮೆಯಾಗುತ್ತದೆ. ಈಗೀಗ ಮರ-ಗಿಡಗಳ ಸಂಖ್ಯೆಯೂ ಕಡಿಮೆಯಾಗಿದೆ." ಎನ್ನುತ್ತಾನೆ ಕೃಷ್ಣ. ಟೊಮೆಟೊ, ಬಟಾಟೆ ಇತರ ತರಕಾರಿಗಳನ್ನು ಕೊಚ್ಚಿ ಆಹಾರವಾಗಿ ಈ ಪುಟ್ಟ ಪುಟ್ಟ ಜೀವಿಗಳಿಗೆ ನೀಡುತ್ತಾನೆ. ಬೇರೆ ಬೇರೆ ಜಾತಿಯ ಮೀನುಗಳು, ಅವುಗಳು ಮರಿ ಹಾಕುವ ಕುತೂಹಲದ ಸಂಗತಿಗಳು , ಬಸವನ ಹುಳು ಅದರ ಶಂಖಾಕೃತಿಯ ಮೈ ಹರಿದಾಡುವಾಗ ಕಾಂಕ್ರೀಟ್ ಮೆಷಿನ್ ಬಂದ ಹಾಗೆ ಅನಿಸುವ ಕಲ್ಪನೆಗಳು ಆಸಕ್ತಿದಾಯಕವಾಗಿದೆ.
       ಕೃಷ್ಣ ಅವರ ತಂದೆ ಅಚ್ಯುತರಾಜರು ಹೇಳುವಂತೆ, "ಪುಟ್ಟ ಮನೆಯಲ್ಲಿ ವಾಸವಾಗಿರುವ ನಾವು, ಹುಳಗಳನ್ನು ತಂದು ರಾಶಿ ಹಾಕುವ ಮಗನ ಹವ್ಯಾಸಕ್ಕೆ ಬೆಂಬಲವಾಗಿ ನಿಂತಿದ್ದೇನೆ. ಮಗನಿಗೆ ಅನುಕೂಲವಾಗಲೆಂದು ಮೀನು ಸಾಕಲು ಅಕ್ವೇರಿಯಂ ಬಾಕ್ಸ್, ಸ್ವಚ್ಛವಾಗಿ ಕಾಣಲೆಂದು ಹುಳಗಳನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಾಕ್ಸ್ ಗಳನ್ನು ನೀಡಿದ್ದೇನೆ. ಮಗನ ಈ ಅಪರೂಪದ ವಿಶೇಷ ಹವ್ಯಾಸಕ್ಕೆ ಬೆರಗಾಗಿದ್ದೇನೆ." ಎನ್ನುತ್ತಾರೆ.
      ಮಕ್ಕಳ ಜಗಲಿಯಲ್ಲಿ ಪಕ್ಷಿಗಳ ಅಧ್ಯಯನ ಬರಹವನ್ನು ನೀಡುತ್ತಿರುವ ಅರವಿಂದ ಕುಡ್ಲ ಇವರು ತನ್ನ ಶಾಲಾ ಮಕ್ಕಳಿಗೂ ಚಿಟ್ಟೆಗಳನ್ನು ಬೆಳೆಸುವ, ಅಧ್ಯಯನ ಮಾಡುವ ಈ ತರಹದ ಹವ್ಯಾಸಗಳನ್ನು ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಕ್ಕಳಿಗೆ ಪಾಠ ಮುಗಿಸುವುದೊಂದೇ ಮುಖ್ಯವಲ್ಲ. ಬದಲಾಗಿ ಪ್ರಕೃತಿಯ ಜೊತೆ ಬೆರೆಯುವ, ಪ್ರಕೃತಿಯ ಜೊತೆ ಸೇರಿ ಕಲಿಯುವ ಪರಿಕಲ್ಪನೆಯಲ್ಲಿ ಮಕ್ಕಳಿಗೆ ಅಧ್ಯಯನಶೀಲ ಗುಣಗಳನ್ನು ಬೆಳೆಸುವ ಶಿಕ್ಷಕರಾಗಿದ್ದಾರೆ.
     ಕೃಷ್ಣ ಕುಮಾರ ಮತ್ತು ಆರಾಧ್ಯ ಶಾಲೆ ಬಿಟ್ಟು ಬಂದ ತಕ್ಷಣ ಚಿಟ್ಟೆಗಳ ಜೊತೆ ಸಂವಹನಿಸುವ ಮೂಲಕ ಬಿಡುವಿನ ವಿರಾಮವನ್ನು ಕಳೆಯುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಪ್ರಕೃತಿಯ ಜೊತೆ ಆಟವಾಡುತ್ತಾ ನಿತ್ಯ ಕಲಿಯುತ್ತಾ ಹೊಸ ವಿಚಾರಗಳನ್ನು ತಿಳಿಯುತ್ತಾ ಬೆಳೆಯುತ್ತಿದ್ದಾರೆ. ಮೊಬೈಲು, ಕಂಪ್ಯೂಟರ್, ಟಿವಿ ಮಾತ್ರವೇ ಪ್ರಧಾನವಾಗಿ ಆಟದ ಸಾಧನವಾಗಿರುವ ಇಂದಿನ ಕಾಲಘಟ್ಟದಲ್ಲಿ ಇಂತಹ ಅಭಿರುಚಿಗಳು ಮನೋಲ್ಲಾಸ ನೀಡುತ್ತದೆ. ಮಕ್ಕಳ ಆಸಕ್ತಿಯ ಕಲಿಕೆಯನ್ನು ಅರಳಿಸುತ್ತದೆ. ಪ್ರೀತಿ, ಕಾಳಜಿ, ವಿಶ್ವಾಸಗಳನ್ನು ಬೆಳೆಸುತ್ತದೆ. ಈ ರೀತಿಯ ಪ್ರಕೃತಿಯನ್ನು ಪ್ರೀತಿಸುವ ಮಕ್ಕಳು ಎಲ್ಲಾ ಶಾಲೆಯಲ್ಲಿಯೂ ಅರಳಲಿ....!
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************Ads on article

Advertise in articles 1

advertising articles 2

Advertise under the article