ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 25
Friday, September 1, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 25
ಲೇಖಕರು : ಪ್ರಶಾಂತ್ ಅನಂತಾಡಿ
ಆಂಗ್ಲಭಾಷಾ ಶಿಕ್ಷಕರು
ಸ.ಪ.ಪೂ.ಕಾ.ಕಡಬ (ಪ್ರೌಢಶಾಲಾ ವಿಭಾಗ)
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸುಮಾರು ಐದು ವರ್ಷಗಳ ಹಿಂದಿನ ನೆನಪುಗಳು ಇವು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ಐದನೇ ತರಗತಿಗೆ ಶಶಾಂಕ್ ಅನ್ನುವ ಹುಡುಗ ಹೊಸದಾಗಿ ಸೇರ್ಪಡೆಗೊಂಡಿದ್ದ. (ಹೆಸರು ಬದಲಿಸಲಾಗಿದೆ) ಖಾಸಗಿ ಶಾಲೆಯಿಂದ ಬಿಡಿಸಿ ಆತನ ಪೋಷಕರು ನಮ್ಮ ಶಾಲೆಗೆ ಸೇರ್ಪಡೆಗೊಳಿಸಿದ್ದರು. ಹೇಳಿಕೇಳಿ ಅದು ಜೂನ್ ತಿಂಗಳು. ವಿದ್ಯಾರ್ಥಿಗಳ ದಾಖಲಾತಿಯ ಒತ್ತಡ ಬಹುವಾಗಿ ಇದ್ದ ಸಮಯವದು. ಹೊಸದಾಗಿ ದಾಖಲುಗೊಂಡ ವಿದ್ಯಾರ್ಥಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ಅವರನ್ನು ಶಾಲಾ ಚಟುವಟಿಕೆಗಳಲ್ಲಿ ಒಳಗೊಳಿಸಿಕೊಳ್ಳಲು ಒಂದಷ್ಟು ದಿನಗಳೇ ಬೇಕಾಗುತ್ತಿದ್ದವು. ಹೀಗಿದ್ದ ಸಂದರ್ಭದಲ್ಲಿ ಶಾಲೆಗೆ ಬರುತ್ತಿದ್ದ ಶಶಾಂಕ್ ನಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವಾದ ವರ್ತನಾ ಬದಲಾವಣೆಗಳು ಉಂಟಾಗಲಾರಂಭಿಸಿದವು! ದಿನಾ ತಂದೆಯೊಂದಿಗೆ ಶಾಲೆಗೆ ಬರುತ್ತಿದ್ದ ಹುಡುಗ ತಂದೆ ಆತನನ್ನು ಶಾಲೆಯಲ್ಲಿ ಬಿಟ್ಟು ತೆರಳಲು ಅಣಿಯಾಗುತ್ತಿದ್ದಂತೆ ಗಾಬರಿ ಬೀಳುವಂತೆ ಅಳಲಾರಂಭಿಸಿದ. ಒಂದೈದು ದಿನಗಳಲ್ಲಿ ಇದು ಸರಿಯಾಗಬಹುದು ಎಂದು ಭಾವಿಸಿ ಆತನ ಪೋಷಕರು ಆತನನ್ನು ಶಾಲೆಯಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಅಳು ತೀರಾ ಜಾಸ್ತಿಯಾಯಿತೆಂದಾಗ ಮನೆಗೆ ಕರೆದೊಯ್ಯುತ್ತಿದ್ದರು. ಒಂದು ವಾರ ಕಳೆದಂತೆ ಆತನ ಈ ಸಮಸ್ಯೆ ಇನ್ನೊಂದು ಸ್ವರೂಪವನ್ನು ಪಡೆದಿತ್ತು! ಪ್ರತಿದಿನ ಶಾಲೆಗೆ ಹೊರಟು ನಿಂತ ತಕ್ಷಣ ಹುಡುಗನಿಗೆ ಹೊಟ್ಟೆ ತೊಳಸಿ ವಾಂತಿಯಾಗುವ ಸಮಸ್ಯೆ ಶುರುವಿಟ್ಟುಕೊಂಡಿತು. ವಾಂತಿಯಾದರೋ ಎಂಥದು!! ತೀವ್ರವಾದ ವಾಂತಿಯ ಪರಿಣಾಮವಾಗಿ ಹುಡುಗ ಬಸವಳಿದು ಹೋಗಿ ಶಾಲೆಗೆ ಬರಲಾರದ ಪರಿಸ್ಥಿತಿಗೆ ತಲುಪಿಬಿಡುತ್ತಿದ್ದ. ಬಹಳಷ್ಟು ನಿರೀಕ್ಷೆಗಳೊಂದಿಗೆ ನಮ್ಮ ಶಾಲೆಗೆ ಸೇರಿಸಿದ್ದ ಆತನ ಪೋಷಕರು ಗಾಬರಿಬಿದ್ದರು. ನಮ್ಮ ಶಾಲೆಗೆ ಹುಡುಗ ಬರುವ ಸ್ಥಿತಿಯಲ್ಲಿಲ್ಲ.. ಹಳೆಯ ಶಾಲೆಗೆ ವಾಪಾಸ್ ಹೋಗುವಂತಿಲ್ಲದ ಸಂಕಟ ಅವರದಾಯಿತು. ಒಂದಷ್ಟು ದಿನಗಳ ನಂತರವಷ್ಟೇ ಈ ಸಮಸ್ಯೆಯ ತೀವ್ರತೆ ನಮ್ಮ ಗಮನಕ್ಕೆ ಬಂದಿತು. ಹಾಗೋ ಹೀಗೋ ಹುಡುಗನನ್ನು ಆಟೋರಿಕ್ಷಾದಲ್ಲಿ ತಂದೆ ತಾಯಿಗಳಿಬ್ಬರೂ ಶಾಲೆಗೆ ಕರೆತಂದರೂ ಶಾಲೆಯ ಗೇಟ್ ದಾಟುತ್ತಿದ್ದಂತೆ ಎಲ್ಲರೂ ಗಾಬರಿ ಬೀಳುವಂತೆ ವಾಂತಿ ಮಾಡಲಾರಂಭಿಸುತ್ತಿದ್ದ. ಒಂದೆರಡು ದಿನ ಆತನ ತಾಯಿ ಮಗನ ಜೊತೆಯಲ್ಲೇ ಶಾಲೆಯಲ್ಲಿ ಉಳಿದರು. ಆದರೆ ವಾಂತಿ ಹಾಗೂ ತನ್ನಿಮಿತ್ತವಾದ ಬಳಲಿಕೆಯ ಕಾರಣದಿಂದ ಹುಡುಗ ತರಗತಿಯೊಳಗೆ ಕೂರಲಾಗದೆ ತಾಯಿ ಜೊತೆಯಲ್ಲೇ ಇರುವಂತಾಗಿತ್ತು. ಮತ್ತೆ ಒಂದಷ್ಟು ದಿನಗಳ ಕಾಲ ಶಾಲೆ ಕಡೆಗೆ ಮುಖ ಮಾಡದೆ ಮನೆಯಲ್ಲೇ ಆರೋಗ್ಯವಾಗಿ ಉಳಿದಿದ್ದ!
ಅಷ್ಟೊತ್ತಿಗಾಗಲೇ ಜೂನ್ ಕಳೆದು ಜುಲೈ ತಿಂಗಳು ಪ್ರಾರಂಭವಾಗಿತ್ತು. ನಮ್ಮ ಒತ್ತಡಗಳು ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದವು. ಒಂದು ದಿನ ಸಂಜೆ ಆ ಹುಡುಗನ ಮನೆಗೆ ಫೋನ್ ಮಾಡಿ ತಾಯಿಯ ಜೊತೆ ಮಾತಾಡಿ ಬಳಿಕ 'ಶಶಾಂಕ್ ಗೆ ಫೋನ್ ಕೊಡಿ' ಅಂದೆ. ಆದರೆ ನನ್ನ ನಿರೀಕ್ಷೆಯನ್ನು ಹುಸಿಗೊಳಿಸಿದ ಶಶಾಂಕ್ ಮಾತಾಡಲು ಒಪ್ಪಲೇ ಇಲ್ಲ. ಮತ್ತೆ ತಾಯಿಯ ಬಳಿ "ನಾಳೆ ಒಮ್ಮೆ ಶಶಾಂಕ್ ನನ್ನು ಶಾಲೆಗೆ ಕರೆತುವಿರಾ?" ಎಂದು ಕೇಳಿದೆ. ಅಷ್ಟು ಸಮಯಕ್ಕಾಗಲೇ ಆ ಹುಡುಗನ ಸಮಸ್ಯೆಗೆ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆಗಳನ್ನು ನಡೆಸಲಾಗಿ ಅದರಲ್ಲಿ ತೃಪ್ತಿ ಸಿಗದೆ ಪೂಜೆ, ತಾಯಿತಗಳ ಪ್ರಯೋಗಗಳು ಪ್ರಾರಂಭವಾಗಿದ್ದವು. ನನ್ನ ಕೋರಿಕೆಯಂತೆ ಮರುದಿನ ತಂದೆತಾಯಿಗಳು ಹುಡುಗನನ್ನು ಶಾಲೆಗೆ ಕರೆತಂದರು. ಯಥಾ ಪ್ರಕಾರ ಶಾಲಾ ಆವರಣದೊಳಕ್ಕೆ ಪ್ರವೇಶಿಸುತ್ತಿದ್ದಂತೆ ಹುಡುಗನಿಗೆ ವಾಂತಿಯ ಸಮಸ್ಯೆ ಪ್ರಾರಂಭವಾಯಿತು. ಬಳಿಕ ಆತನನ್ನು ಪ್ರತ್ಯೇಕ ಕೊಠಡಿಗೆ ಕರೆತಂದು ಮಲಗಿಸಿ, ಆತನ ಪೋಷಕರನ್ನು ಕೆಲಹೊತ್ತು ಶಾಲೆಯಿಂದ ಹೊರಗಿರುವಂತೆ ವಿನಂತಿಸಿದೆ. ಬಳಲಿ ಮಲಗಿದ್ದ ಹುಡುಗನ ತಲೆಯನ್ನು ಎತ್ತಿ ನನ್ನ ಮಡಿಲಲ್ಲಿ ಇರಿಸಿ "ಶಶಾಂಕ್" ಎಂದು ಕರೆದೆ. "ಯಾಕೆ ನಿನಗೆ ಇಂತಹ ಸಮಸ್ಯೆ ಉಂಟಾಗುತ್ತಿದೆ? " ಎಂದು ಕೇಳಿದೆ. ಆತನಲ್ಲಿ ಉತ್ತರವಿರಲಿಲ್ಲ. "ಶಾಲೆಗೆ ಬರಲು ಇಷ್ಟವಿಲ್ಲವೇ?" ಎಂದು ಕೇಳುತ್ತಿದ್ದಂತೆ ಆತನ ಮೈಯಲ್ಲಿ ನಡುಕ ಬರಲಾರಂಭಿಸಿತು. ಅಂತೂ ಪ್ರತಿಕ್ರಿಯೆ ಇದೆಯೆಂದೆನಿಸಿ, ಶಾಲೆಗೆ ಬರುವ ಕುರಿತಾದ ರಮಿಸುವಿಕೆಯ ಮಾತುಗಳು, ಬಣ್ಣಬಣ್ಣದ ದಿನಗಳ ಚೆಂದದ ವರ್ಣನೆಯನ್ನು ಆತನ ಮುಂದೆ ತೆರೆದಿಟ್ಟರೂ ಆತನ ಮುಖದಲ್ಲಿ ಹೊಳಪು ಕಾಣಲೇ ಇಲ್ಲ!" ನೀನು ಶಾಲೆಗೆ ಬಾರದಿದ್ರೆ ತಾಯಿ, ತಂದೆ ನೊಂದುಕೊಳ್ಳುತ್ತಾರೆ" ಎಂಬ ಭಾವನಾತ್ಮಕ ಕಾರ್ಡ್ ಪ್ಲೇ ಮಾಡಿದರೂ ನಿರ್ಲಿಪ್ತತೆ!
"ಅರೆ! ನಿನ್ನಲ್ಲೊಂದು ಬಹಳ ವಿಶೇಷತೆಯಿದೆ ಗೊತ್ತಾ? ನೀನು ಬಹಳ ಪಾಪದ ಹುಡುಗ. ನಿನ್ನ ಮುಖದಲ್ಲಿನ ನಗು ನಮಗೆಲ್ಲರಿಗೂ ಬಹಳ ಇಷ್ಟವಾಗಿದೆ. ನೀನು ಪ್ರತಿದಿನ ಶಾಲೆಗೆ ಬಂದರೆ ನಿನ್ನ ಚಂದದ ನಗುವನ್ನು ನೋಡಲು ನಮಗೆ ಸಾಧ್ಯವಾಗುತ್ತದೆ. ಮತ್ತು ನಾವೆಲ್ಲ ಖುಷಿ ಪಡುತ್ತೇವೆ. ನೀನು ಶಾಲೆಗೆ ಬಂದ ತಕ್ಷಣ ಶಿಕ್ಷಕರ ಕೊಠಡಿಯ ಬಳಿ ಬಂದು ನಮಗೆಲ್ಲ ನಿನ್ನ ನಗು ತೋರಿಸಿ ಹೋಗ್ಬೇಕು.." ಹೀಗೆ ಬಹಳಷ್ಟು ಹೊತ್ತು ನಮ್ಮ ಮಾತುಗಳು ಸಾಗಿದ್ದವು. ಶಶಾಂಕ್ ನನ್ನ ಮುಖವನ್ನೇ ನೋಡಲಾರಂಭಿಸಿದ. ಇವತ್ತಿಗೆ ಸಾಕೆನಿಸಿ ಆತನ ತಾಯಿಗೆ ಫೋನ್ ಮಾಡಿದೆ "ಇವತ್ತು ಶಶಾಂಕ್ ನನ್ನು ಕರೆದುಕೊಂಡು ಹೋಗಿ. ನಾಳೆ ಕಳಿಸಿ" ಅಂದೆ.
ಆ ದಿನ ಸಂಜೆ ಆತನ ಮನೆಗೆ ಫೋನ್ ಮಾಡಿ "ಶಶಾಂಕ್ ಬಳಿ ಮಾತಾಡಬೇಕು" ಅಂದೆ. ಆವತ್ತು ಫೋನ್ ನಲ್ಲಿ ಮಾತಾಡಲು ಬಂದ. ಒಂದಷ್ಟು ಆತ್ಮೀಯತೆಯ ಮಾತುಗಳ ನಂತರ 'ನಾಳೆ ಶಾಲೆಗೆ ಬರ್ತೀಯಲ್ಲಾ, ನಿನ್ನ ನಗು ನೋಡ್ಬೇಕು' ಅಂದೆ. "ಆಯ್ತು ಬರ್ತೇನೆ" ಅಂದ. "ನಾಳೆ ಬರುವಾಗ ನಿನಗೆ ವಾಂತಿಯಾಗುವುದಿಲ್ಲ" ಅಂದೆ! "ಆಯ್ತು" ಅಂದ! ಮರುದಿನ ಶಾಲೆಗೆ ಬಂದ ಶಶಾಂಕ್ ನಲ್ಲಿ ಒಂದಷ್ಟು ಬದಲಾವಣೆ ಇತ್ತು. ಕಣ್ಣಲ್ಲಿ ಹೊಳಪಿತ್ತು. ನಿಧಾನಕ್ಕೆ ಶಿಕ್ಷಕರ ಕೊಠಡಿಗೆ ಬಂದು ಎಲ್ಲರ ಮುಖನೋಡಿ ನಗು ಚೆಲ್ಲಿ ಹೋದ. ಹೀಗೆ ಹಲವಾರು ದಿನಗಳ ನಿರಂತರವಾದ ಮಾತುಕತೆಗಳ ನಂತರ ಆ ಹುಡುಗ ಎಲ್ಲರೊಳಗೊಂದಾಗಿ ಬೆರೆತ. ಆತನ ತರಗತಿಯಲ್ಲಿ ಒಬ್ಬ ಪ್ರೀತಿಯ ಮಾತುಗಳ ಹುಡುಗನನ್ನು ಅವನ ಜೊತೆಯಾಗಿಸಿದೆ. ಮುಂದೆ ನಡೆದುದೆಲ್ಲವೂ ಸೋಜಿಗವೇ! ನನ್ನ ಆ ವರ್ಷದ ನಾಟಕ ತಂಡದಲ್ಲಿ ಶಶಾಂಕ್ ಸೇರಿಕೊಂಡಿದ್ದ. ಆತನಿಗೆ ಸಿಕ್ಕಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಲ್ಲದೆ ತಂಡದ ಎರಡನೇ ಜವಾಬ್ದಾರಿಯ ಹುಡುಗನಾಗಿ ಕರ್ತವ್ಯ ನಿರ್ವಹಿಸಿದ. ನಾಟಕ ತಂಡವನ್ನು ಕಟ್ಟಿಕೊಂಡು ನಾವು ಊರೂರು ಸುತ್ತಿದ್ದೆವು. ಬಹುಶಃ ಶಶಾಂಕ್ ಗೆ ಅಲ್ಲೆಲ್ಲ ದೊರೆತ ಆಪ್ಯಾಯಮಾನತೆಗಳು, ಒಡನಾಟಗಳು ಆತನ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದ್ದವು. ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಕೆಲವು ದಿನಗಳ ಹಿಂದೆ ಕಾರ್ಯನಿಮಿತ್ತ ಆತನ ಶಾಲೆಗೆ ಭೇಟಿನೀಡಿದ್ದ ಸಂದರ್ಭದಲ್ಲಿ ನನ್ನೆಲ್ಲ ಪ್ರೀತಿಯ ವಿದ್ಯಾರ್ಥಿಗಳು ಹತ್ತಿರ ಓಡಿ ಬಂದಿದ್ದರು. ಶಶಾಂಕ್ ಮಾತ್ರ ಎಲ್ಲರಿಗಿಂತಲೂ ಹತ್ತಿರ ಬಂದು ನನಗೆ ಒರಗಿ ನಿಂತಿದ್ದ! ಮತ್ತು ಹಾಗೆ ನಿಲ್ಲುವುದು ಆತನ ಹಕ್ಕು ಎಂಬುದಾಗಿ ಆತ ಭಾವಿಸಿರುವಂತೆ ನನಗನಿಸಿತ್ತು!
ಖ್ಯಾತ ಮನಶಾಸ್ತ್ರಜ್ಞ ಡಾ.ಮೀನಗುಂಡಿ ಸುಬ್ರಹ್ಮಣ್ಯಂ ರವರು ಹೇಳುವ Positive Stroke ಗಳ ಅಗತ್ಯತೆಯ ಒಟ್ಟು ಚಿತ್ರಣವನ್ನು ಆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ತೆರೆದಿಟ್ಟ ಹುಡುಗ ಈ ಶಶಾಂಕ್. ಶಿಕ್ಷಕರು ಶಾಲೆಯಲ್ಲಿ Second Parent ಗಳಾಗಬೇಕಾದ ಅನಿವಾರ್ಯತೆಗಳನ್ನು ಬಹಳ ಸ್ಫುಟವಾಗಿ ವಿಶದಪಡಿಸಿದ ಶಶಾಂಕ್ ನ ಪ್ರಕರಣ ನನಗೂ ಬಹಳಷ್ಟು ಕಲಿಯುವಂತೆ ಮಾಡಿತು ಮತ್ತು ಮಕ್ಕಳ ಹಲವಾರು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಸಂದರ್ಭಗಳಿಗೆ ಮಾರ್ಗದರ್ಶೀ ರೂಪವಾಗಿ ನಿಂತಿದೆ.
ಆಂಗ್ಲಭಾಷಾ ಶಿಕ್ಷಕರು
ಸ.ಪ.ಪೂ.ಕಾ.ಕಡಬ (ಪ್ರೌಢಶಾಲಾ ವಿಭಾಗ)
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 97416 69646
*******************************************