-->
ಜಗಲಿ ಕಟ್ಟೆ : ಸಂಚಿಕೆ - 18

ಜಗಲಿ ಕಟ್ಟೆ : ಸಂಚಿಕೆ - 18

ಜಗಲಿ ಕಟ್ಟೆ : ಸಂಚಿಕೆ - 18
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ       ಸಂಭ್ರಮದಿಂದ ಮಕ್ಕಳ ಜಗಲಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಮಕ್ಕಳು ಜಗಲಿಯ ಸೊಗಸಿಗೆ ಕಾರಣರಾಗುತ್ತಿದ್ದಾರೆ. ವೈವಿಧ್ಯ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಮಕ್ಕಳನ್ನು ಕಂಡಾಗ ಪ್ರತಿಯೊಂದು ಮಗುವಿನ ಅಂತರ್ಗತ ಪ್ರತಿಭೆಗೆ ಕಿಂಚಿತ್ತಾದರೂ ವೇದಿಕೆ ಕಲ್ಪಿಸುವ ಅವಕಾಶ ನಮ್ಮದೆಂದು ಹೆಮ್ಮೆಯಾಗುತ್ತಿದೆ. ಮಕ್ಕಳ ಜಗಲಿಯ ಆರಂಭಕ್ಕೂ ಮುನ್ನ ಕಲೆ ಸಾಹಿತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಆಸಕ್ತಿಗೆ ಪ್ರೋತ್ಸಾಹ ಕೊಟ್ಟು ಹಸ್ತಪ್ರತಿ, ಭಿತ್ತಿಪತ್ರಿಕೆಗಳ ಮೂಲಕ ಅವಕಾಶ ನೀಡಿ ಖುಷಿಪಡುತ್ತಿದ್ದೆ. ತುಂಬಾ ವಿದ್ಯಾರ್ಥಿಗಳ ಬರವಣಿಗೆಗೆ ಇದೊಂದು ಮೂಲಾಧಾರವಾಗಿತ್ತು.
      ಈ ಪರಿಕಲ್ಪನೆ ಹೊಸತಲ್ಲದಿದ್ದರೂ ಅತಿ ಸಣ್ಣ ಮಕ್ಕಳಿಂದ ಹಸ್ತ ಪ್ರತಿಯನ್ನು ರಚನೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆ ಕನಸು ಸಾಕಾರಗೊಂಡಿದ್ದು 2006ರಲ್ಲಿ. ಮಂಗಳೂರಿನ ಚಿನ್ಮಯ ವಿದ್ಯಾ ಸಂಸ್ಥೆಯಲ್ಲಿ ಆ ಶಾಲಾ 4ನೇ ಮತ್ತು 3 ನೇ ತರಗತಿ ಮಕ್ಕಳ ನೇಗಿಲು ಮತ್ತು ಶರಧಿ ಎನ್ನುವ ಹಸ್ತಪ್ರತಿಗಳನ್ನು ರಚನೆ ಮಾಡಲಾಯಿತು. ಸ್ವತಹ ರಚನೆ ಮಾಡಿದ ಬರಹಗಳು ಮತ್ತು ಚಿತ್ರಗಳ ಜೊತೆ ಸಂಪೂರ್ಣ ಹಸ್ತಾಕ್ಷರ ಮತ್ತು ಪುಸ್ತಕದ ಶೀರ್ಷಿಕೆಯೂ ಕೂಡ ಮಕ್ಕಳದೇ ಆಗಿತ್ತು...!! ಆ ಸಣ್ಣ ಪ್ರಾಯಕ್ಕೂ ಮಕ್ಕಳಲ್ಲಿ ಅದೆಂತಹ ಪ್ರತಿಕ್ರಿಯೆ.... ಮಕ್ಕಳ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಕಂಡು ಆಶ್ಚರ್ಯಗೊಂಡಿದ್ದೆ. ಇದಕ್ಕೆ ಸಾಕ್ಷಿಯಾದವರು ನನ್ನ ಆತ್ಮೀಯ ಮಿತ್ರ ಕೃಷ್ಣ ಮೋಹನ ತಲೆಂಗಳ ಇವರು. ಪ್ರತಿ ಬಾರಿ ನನ್ನ ಕರೆಗೆ ಸ್ಪಂದಿಸಿ ಮಕ್ಕಳ ಜೊತೆ ಬರಹಗಳ ಕುರಿತಾಗಿ ಮಾರ್ಗದರ್ಶನಕ್ಕೆ ಬರುತ್ತಿದ್ದುದು ನನ್ನ ಕಾರ್ಯಕ್ಕೆ ಇನ್ನಷ್ಟು ಸಹಕಾರವಾಗುತ್ತಿತ್ತು.
        2008ರಲ್ಲಿ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಗೆ ಚಿತ್ರಕಲಾ ಶಿಕ್ಷಕನಾಗಿ ನೇಮಕವಾಗಿ ಬಂದ ಮೇಲೆ ಪದದಂಗಳ ಸಂಚಿಕೆಯನ್ನು ಮಾಡುತ್ತಿರುವ ರಮೇಶ್ ನಾಯ್ಕ ಉಪ್ಪುಂದ ಇವರ ಪರಿಚಯವಾಯಿತು. ಇವರು ನಮ್ಮದೇ ನೆರೆಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇವರ ಸಾಹಿತ್ಯ ಪ್ರೇಮವನ್ನು ಮಕ್ಕಳಿಗೂ ಹಂಚಿ ಆದರ್ಶವಾಗಿದ್ದರು. ಮಕ್ಕಳಿಗಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಮಕ್ಕಳ ಹಸ್ತ ಪ್ರತಿ, ಭಿತ್ತಿ ಪತ್ರಿಕೆಗಳನ್ನು ರಚಿಸಿ ಸಾಹಿತ್ಯ ಕೃಷಿಯನ್ನು ಆ ಪರಿಸರದಲ್ಲಿ ಪಸರಿಸಿದ್ದರು. ಪ್ರಾಥಮಿಕ ಶಾಲೆಯನ್ನು ದಾಟಿ ಪ್ರೌಢಶಾಲೆಗೆ ನಮ್ಮ ಕಡೆ ಬರುತ್ತಿದ್ದ ಬರುತ್ತಿದ್ದ ಆ ಶಾಲೆಯ ಮಕ್ಕಳ ಸಾಹಿತ್ಯಾಸಕ್ತಿಯನ್ನು ಹಾಗೆ ಉಳಿಸುವ ಜವಾಬ್ದಾರಿಯನ್ನು ಬಹಳ ಆಸಕ್ತಿಯಿಂದ ನಿರ್ವಹಿಸಿದೆ.. ಪರಿಣಾಮ ನಾಲ್ಕು ವಿದ್ಯಾರ್ಥಿಗಳ ಪುಸ್ತಕಗಳ ಬಿಡುಗಡೆಗೆ ಸಾಧ್ಯವಾಯಿತು. ಹೀಗೆ ಸಾಹಿತ್ಯದ ಅಭಿರುಚಿಯನ್ನು ಮಕ್ಕಳಲ್ಲಿ ಬಿತ್ತುವ ಕಾಯಕವನ್ನು ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಮಾಡಲು ಸಾಧ್ಯವಾಗಿರುವುದು ಬೆಂಬಲ ನೀಡುತ್ತಿರುವ ಸಹೃದಯಿ ಮನಸ್ಸುಗಳಿಂದ....!!
      ಮಕ್ಕಳ ಜಗಲಿ ಆರಂಭವಾಗಿ ನವೆಂಬರ್ - 14 ರಂದು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ... 2ನೇ ವರ್ಷದ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜನೆ ಮಾಡುತ್ತಿದ್ದೇವೆ. ಈಗಾಗಲೇ ಈ ಬಗ್ಗೆ ಮಾಹಿತಿ ನಿಮಗೆ ಸಿಕ್ಕಿದೆ ಎಂದುಕೊಂಡಿದ್ದೇವೆ. ಈಗಾಗಲೇ ಕೆಲವು ಮಕ್ಕಳು ಬರೆದು ಅಂಚೆ ಮೂಲಕ ಕಳಿಸಿರುವ ಕವನ ಕಥೆಗಳು ತಲುಪಿದೆ. ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ಜಗಲಿಯಲ್ಲಿ ಬೆಳೆಯಬೇಕೆಂದು ನಮ್ಮ ಆಸೆ.... ನಮಸ್ಕಾರ...


ಕಳೆದ ಸಂಚಿಕೆಯ ಜಗಲಿಕಟ್ಟೆ - 17 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು , ಕವಿತಾ ಶ್ರೀನಿವಾಸ ದೈಪಲ ಮತ್ತು ವಿದ್ಯಾಗಣೇಶ್ ಚಾಮೆತ್ತಮೂಲೆ.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ತೇ,
      ಶಿಕ್ಷಣಧಿಕಾರಿ ಜ್ಞಾನೇಶ್ ರವರ ಈ ಸಲದ ಜೀವನ ಸಂಭ್ರಮ ಸಂಚಿಕೆಯಲ್ಲಿ ಗುರಿ ತಲುಪುವ ಸಾಮರ್ಥ್ಯವಿದ್ದರೂ ಯಾವುದೋ ಆಕರ್ಷಣೆಗೊಳಗಾಗಿ ಅಥವಾ ಅನ್ಯ ಕಾರಣಗಳಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಇರುವುದನ್ನು ಕಥೆಯ ಮೂಲಕ ತುಂಬಾ ಸೊಗಸಾಗಿ ವಿವರಿಸಿದ್ದಾರೆ.
     ಯಶಸ್ಸು ಸುಲಭವಾಗಿ ದಕ್ಕುವಂತದ್ದಲ್ಲ. ಅದಕ್ಕೆ ಸತತ ಪ್ರಯತ್ನ. ಕೆಲವೊಂದು ಸಲ ಜೀವನದಲ್ಲಿ ಸೋಲುವುದು ಸಹಜ. ಸತತ ಸೋಲುಗಳು ವ್ಯಕ್ತಿಯನ್ನು ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತವೆ. ಅನೇಕ ಬಾರಿ ಸೋಲುಂಡರೂ ಧೃತಿಗೆಡದೆ ಧೈರ್ಯದಿಂದ ಎದುರಿಸಿ ಕೊನೆಗೆ ಗೆದ್ದ ಜಿ.ಕೆ. ರೋಲಿಂಗ್ ರವರ ಉದಾಹರಣೆಯೊಂದಿಗೆ ಸೋಲೇ ಗೆಲುವಿನ ಸೋಪಾನ ಎನ್ನುವುದನ್ನು ಸುಂದರವಾಗಿ ನಿರೂಪಿಸಿದ್ದಾರೆ ರಮೇಶ್ ಸರ್.
     ದೇವರೊಂದಿಗಿನ ಆತ್ಮಾನುಭೂತಿಯೊಂದಿಗೆ ಎಲ್ಲದರಲ್ಲೂ ದೇವರನ್ನು ಕಾಣುವ ಹಾಗೂ ಒಳ್ಳೆಯ ಸಂಸ್ಕಾರವನ್ನು ಬೆಳೆಸುವ ಪರಿಯೊಂದಿಗೆ ಗಣೇಶ ಹಬ್ಬದ ಕುರಿತಾದ ಸಂದೇಶ ಸಾರುವ ಚಿತ್ರಾಶ್ರೀಯವರ ವಿಶೇಷ ಲೇಖನ ಮನಸ್ಸಿಗೆ ಬಹಳಷ್ಟು ಮುದ ನೀಡಿತು. 
     ಅರವಿಂದರ ಹಕ್ಕಿ ಕಥೆಯಲ್ಲಿ ಬೂದು ಅಂಬರದ ಗೀಜುಗ ಹಕ್ಕಿಯ ಪರಿಚಯ ಸೊಗಸಾಗಿತ್ತು. ಹಕ್ಕಿಯ ಮರಿಗಳು ಸಾಲಾಗಿ ಶಿಸ್ತಿನಿಂದ ಮರದ ಮೇಲೆ ಕುಳಿತ ದೃಶ್ಯ ಅದ್ಭುತವಾಗಿತ್ತು.
     ಮಕ್ಕಳ ಚಿತ್ರಗಳ ಎಲ್ಲಾ ಸಂಚಿಕೆಗಳು ಚೆನ್ನಾಗಿವೆ. ವೈಷ್ಣವಿಯವರ ಹಾಗೂ ಪ್ರಥ್ವಿಯವರ ಕವನಗಳು ಕೂಡಾ ಚೆನ್ನಾಗಿವೆ. ಎಲ್ಲಾ ಮಕ್ಕಳಿಗೆ ನನ್ನ ಅಭಿನಂದನೆಗಳು. 
     ವಿಜಯಾ ಮೇಡಂರವರ ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ಬಹು ಉಪಯೋಗಿ ಚಿಕ್ಕದಾದ ಸುಂದರ ಸಸ್ಯ ಕಿರಾತಕಡ್ಡಿಯ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
     ಆನ್ ಲೈನ್ ಆಟಗಳಿಗೆ ಮಾರುಹೋಗಿ ಅದರ ದಾಸರಾಗಿ ಹಣ ಕಳೆದುಕೊಂಡು ಕೊನೆಗೆ ತಮ್ಮ ಜೀವನವನ್ನು ಅಂತ್ಯಗೊಳಿಸುವ ಮಟ್ಟಕ್ಕೆ ಹೋಗುವುದು ದೇಶದ ದುರಂತ. ಅದರಲ್ಲೂ ಯುವ ಜನತೆ ಇದಕ್ಕೆ ಬಲಿಯಾಗುವುದು ಇನ್ನಷ್ಟು ಬೇಸರ. ಸಕಾಲಿಕ ಲೇಖನ ಯಾಕೂಬ್ ಸರ್ ರವರಿಂದ.
      ಈ ವಾರದ ವಾಣಿಯಕ್ಕನವರ ಪುಸ್ತಕ ಪರಿಚಯ ಸೋಗಸಾಗಿತ್ತು. ಯಾವನೇ ವಿದ್ಯಾರ್ಥಿ ಕಲಿಕೆಯಲ್ಲಿ ಮುಂದಿರಲಿ ಅಥವಾ ಹಿಂದಿರಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾದಾಗ ಆತನ ಸಾಧನೆ ಇನ್ನಷ್ಟು ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ. ಇಲ್ಲಿ ನನ್ನ ಆತ್ಮೀಯ ಮಿತ್ರರಾದ ಚಿನ್ನಪ್ಪ ಸರ್ ರವರು ಶಿಕ್ಷಕರ ಡೈರಿಯಲ್ಲಿ ಹಂಚಿಕೊಂಡ ಅನುಭವ ಸುಂದರವಾಗಿತ್ತು. ಈ ವಾರದ ರಮೇಶ್ ಉಪ್ಪಂದರವರ ಪದದಂಗಳ ಚೆನ್ನಾಗಿ ಮೂಡಿ ಬಂದಿದೆ.
      ಈ ವಾರದ ಸಂಚಿಕೆ ಸುಂದರವಾಗಿ ಮೂಡಿ ಬರಲು ಕಾರಣರಾದ ಎಲ್ಲಾ ಲೇಖಕರಿಗೆ ಮಕ್ಕಳಿಗೆ ನನ್ನ ನಮನಗಳು. ಜಗಲಿ ಇನ್ನಷ್ಟು ಬೆಳಗಲಿ ಎಂದು ಹಾರೈಸುತ್ತಾ ಎಲ್ಲರಿಗೂ ಮಗದೊಮ್ಮೆ ನನ್ನ ಪ್ರೀತಿಯ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


    ವೈಷ್ಣವಿ ಎಸ್. ತುಂಗಾಳ ಕವಿತೆಗಳು ಚೇತೋಹಾರಿಯಾಗಿವೆ. ಪದಗಳ ಜೋಡಣೆ ಕಾವ್ಯವಸ್ತುವಿಗೆ ಶೋಭೆ ನೀಡಿವೆ. ಭರವಸೆಯ ಬೆಳಕು ಈ ಕವಯತ್ರಿಯಲ್ಲಿ ಮೂಡಿದೆ.
.......................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************     ಮಕ್ಕಳ ಜಗಲಿ ನಿಜವಾಗಲೂ ಒಳ್ಳೆ ಅಂದ್ರೆ ಒಳ್ಳೆ ಇದೆ. ಇಲ್ಲಿ ಬರೋ ಪ್ರತಿ ಲೇಖನ ಗಳು ತುಂಬಾ ಅರ್ಥ ಪೂರ್ಣ ಆಗಿರುತ್ತದೆ... ತುಂಬಾ ಒಳ್ಳೆಯ ಅಂಕಣ ಬರಹಗಳನ್ನು ಇಟ್ಟಿದ್ದೀರಿ. ದೊಡ್ಡವರಾದ ನಮಗೂ ಓದಲು ಖುಷಿ ಇದೆ.. ಉತ್ತಮ ಪ್ರಯತ್ನ... ಸದಾ ಮುಂದುವರಿಯಲಿ. ನಿಷ್ಪಾಪಿ ಸಸ್ಯಗಳು ಇದು ಮಲೆನಾಡಿಗರಾದ ನಮಗೆ ನೋಡಿರುವ ಸಸ್ಯಗಳೇ ಆಗಿದ್ದರೂ ಹೆಸರು ಗೊತ್ತಿರಲಿಲ್ಲ... ಒಳ್ಳೆಯ ಮಾಹಿತಿ ಸಿಕ್ತಾ ಇದೆ.
.............................. ಶ್ರೀಮತಿ ನಂದನ ಜೋಶಿ
ಶಿರಸಿ, ಉತ್ತರ ಕನ್ನಡ ಜಿಲ್ಲೆ
******************************************    ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು , ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಮತ್ತು ಶ್ರೀಮತಿ ನಂದನ ಜೋಶಿ .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
..................................... ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************
Ads on article

Advertise in articles 1

advertising articles 2

Advertise under the article