-->
ಜೀವನ ಸಂಭ್ರಮ : ಸಂಚಿಕೆ - 104

ಜೀವನ ಸಂಭ್ರಮ : ಸಂಚಿಕೆ - 104

ಜೀವನ ಸಂಭ್ರಮ : ಸಂಚಿಕೆ - 104
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

                  

     ಮಕ್ಕಳೇ, ಈ ಘಟನೆ ಓದಿ... 
   ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು. ಒಳ್ಳೆಯ ಸ್ನೇಹಿತರು. ಮನೆಯೂ ಅಕ್ಕ ಪಕ್ಕ ಇತ್ತು. ಇಬ್ಬರೂ ಜೊತೆಯಾಗಿ ಅಕ್ಕಪಕ್ಕ ಅಂಗಡಿ ಮಾಡಲು ನಿರ್ಧರಿಸಿದ್ದರು. ಇಬ್ಬರು ಜೊತೆಗೂಡಿ ಅಕ್ಕ ಪಕ್ಕ ಅಂಗಡಿ ಶುರು ಮಾಡಿದರು. ಒಬ್ಬನದು ಬಟ್ಟೆ ಸ್ವಚ್ಛ ಮಾಡಿ, ಇಸ್ತ್ರಿ ಮಾಡಿಕೊಡುವುದು. ಇನ್ನೊಬ್ಬನದ್ದು ಇದ್ದಿಲು ಮಾಡುವುದು. ಬಟ್ಟೆ ಒಗೆದು ಇಸ್ತ್ರಿ ಮಾಡಿ ಇಟ್ಟರೆ, ಅದರ ಮೇಲೆ ಇದ್ದಿಲ ಧೂಳು ಬಂದು ಕೂರುತ್ತಿತ್ತು. ಇದರಿಂದ ಬಟ್ಟೆ ತೊಳೆಯುವವನ ಆದಾಯ ಕಡಿಮೆ ಆಯಿತು. ಇದ್ದಿಲ ವ್ಯಾಪಾರ ಹೆಚ್ಚಾಗಿತ್ತು. ಅಂದರೆ ಗೆಳೆತನ ಎಲ್ಲಿರಬೇಕು ಎನ್ನುವ ಜ್ಞಾನ ಇರಲಿಲ್ಲ. ಕೆಲಸದ ವಿರೋಧವಿದ್ದಾಗ ಅಲ್ಲಿ ಗೆಳೆತನ ಸಲ್ಲದು. ಸ್ವಚ್ಛ ಬಟ್ಟೆ ಹಾಕಿಕೊಂಡು ಹೋಲಿ ಹುಣ್ಣಿಮೆಯ ದಿನ ಬಣ್ಣ ಹಚ್ಚಿಕೊಂಡವರ ಜೊತೆ ಹೋದರೆ ಸ್ವಚ್ಛ ಬಟ್ಟೆ ಕೂಡಾ ಹೊಲಸಾಗುತ್ತದೆ.
     ಇನ್ನೊಂದು ಪೌರಾಣಿಕ ಕಥೆ ಅಜಾಮಿಳ ಎನ್ನುವ 25 ರಿಂದ 30 ವರ್ಷದ ತರುಣ ಇದ್ದನು. ಒಳ್ಳೆ ಸದ್ಗುಣ ಸಂಪನ್ನ. ಈತನನ್ನು ಕಂಡರೆ ಊರಿನವರಿಗೆಲ್ಲ ಅಚ್ಚುಮೆಚ್ಚು. ತುಂಬಾ ಸ್ವಚ್ಛವಾಗಿದ್ದ. ತನ್ನ ನಡೆ ನುಡಿ ಅಚ್ಚು ಮೆಚ್ಚು. ಮನೆಯಲ್ಲಿ ಸಾಕಷ್ಟು ಇತ್ತು. ಜೀವನಕ್ಕೆ ಕೊರತೆ ಇರಲಿಲ್ಲ. ಒಮ್ಮೆ ನದಿ ಸ್ನಾನ ಮಾಡಿ ಬಾಯಲ್ಲಿ ಮಂತ್ರ ಹೇಳುತ್ತಾ ಬರುತ್ತಿದ್ದ. ಬರುವ ದಾರಿಯಲ್ಲಿ ಒಂದು ಮಹಡಿ ಮನೆ, ಅದರಲ್ಲಿ ಒಬ್ಬಳು ಸಂಗೀತಗಾರ್ತಿ ಮತ್ತು ನೃತ್ಯಗಾರ್ತಿ ವಾಸವಾಗಿದ್ದಳು. ಅವಳಿಗೆ 18ರ ವಯಸ್ಸಿನ ಸುಂದರ ಮಗಳಿದ್ದಳು. ಆಕೆ ಮನೆ ಕಸ ತಂದು ಮಹಡಿಯ ಮೇಲಿಂದ ಚೆಲ್ಲಿದಳು. ಆ ಕಸ ಬೀಳುವ ಸಮಯಕ್ಕೆ ಸರಿಯಾಗಿ ಆಜಾಮಿಳ ದಾರಿಯಲ್ಲಿ ಬಂದನು. ಆತನ ಮೇಲೆ ಕಸ ಬಿತ್ತು. ದೇಹ ಹೊಲಸಾಗಿತ್ತು. ಅಜಾಮಿಳ ಮೇಲೆ ನೋಡಿದ. ಆತನಿಗೆ ಕಸ ಕಾಣಲಿಲ್ಲ, ಕಸ ಚೆಲ್ಲಿದ ಕೈ ಮತ್ತು ರೂಪ ನೋಡಿದ. ಆ ರೂಪ ಆತನ ಮನಸ್ಸನ್ನು ಹೊಕ್ಕಿತ್ತು. ದೇಹ ಹೊಲಸಾದದ್ದು ಕಾಣಲಿಲ್ಲ. ಕುಳಿತಾಗ, ನಿಂತಾಗ ಅದೇ ಚಿಂತೆ. ಊಟ ಸೇರಲಿಲ್ಲ. ನಿದ್ರೆ ಬರಲಿಲ್ಲ. ಮನೆಯಲ್ಲಿ ಪುಸ್ತಕ, ಬಾಯಲ್ಲಿ ಮಂತ್ರ, ಮೈ ಸ್ವಚ್ಛತೆ, ಮನಸ್ಸು ಹೊಲಸಾಗಿತ್ತು. ಬೆಳಿಗ್ಗೆ ಎದ್ದು ನೇರವಾಗಿ ನರ್ತಕಿ ಮನೆಗೆ ಬಂದ. ತಮ್ಮ ಮಗಳನ್ನು ವಿವಾಹವಾಗುವುದಾಗಿ ಕೇಳಿದ. ಆಗ ನರ್ತಕಿ ಹೇಳಿದಳು, ನೀವು ದೊಡ್ಡವರು, ಪಂಡಿತರು ಈ ರೀತಿ ವಿಚಾರ ಮಾಡುವುದು ಸರಿಯಲ್ಲ ಎಂದಳು. ನರ್ತಕಿ ಮತ್ತು ನರ್ತಕಿ ಮಗಳ ಮನಸ್ಸು ಹೊಲಸಾಗಿರಲಿಲ್ಲ. ಅವರಿಗೆ ಕಸ ಚೆಲ್ಲಿದ ಪಶ್ಚತಾಪವಾಗಿತ್ತು.
     ಈ ಎರಡು ಘಟನೆಗಳನ್ನು ವಿಶ್ಲೇಷಣೆ ಮಾಡಿದರೆ ಯಾವುದರಿಂದ ರಕ್ಷಣೆ ಮತ್ತು ಪೋಷಣೆ ಆಗುವುದಿಲ್ಲ ಅದರಿಂದ ದೂರ ಇರಬೇಕು. ಬಾಲ್ಯಾವಸ್ಥೆಯಲ್ಲಿ ಮತ್ತು ಸಾಧನೆ ಮಾಡುವಾಗ ದುಸ್ಸಂಗ ಮಾಡಬಾರದು. ಇದರಿಂದ ಸರ್ವನಾಶವಾಗುತ್ತದೆ. ದುಸ್ಸಂಗದಿಂದ ಕಾಮ, ಕ್ರೋಧ, ಮೋಹ ಉಂಟಾಗಿ ಸ್ಮೃತಿನಾಶ ಮತ್ತು ಬುದ್ದಿನಾಶವಾಗುತ್ತದೆ. ಯಾವುದೇ ವಸ್ತು ನೋಡಿದಾಗ ಭಾವನೆ ಉಂಟಾಗುತ್ತದೆ. ಆ ಭಾವನೆ ಪೋಷಕ ಆಗಿರಬಹುದು ಅಥವಾ ನಾಶಕ ಆಗಿರಬಹುದು. ಪೋಷಕ ಇದ್ದರೆ ಬೆಳವಣಿಗೆಯಾಗುತ್ತದೆ. ನಾಶಕ ಇದ್ದರೆ ನಾಶವಾಗುತ್ತದೆ. ಯಾವುದರ ಗೆಳೆತನ ಮಾಡಿದರೆ ದೇಹ, ಮನಸ್ಸು ಮತ್ತು ಬುದ್ಧಿ ಹೊಲಸಾಗುತ್ತದೆ ಅದರಿಂದ ದೂರ ಇರಬೇಕು. ಯಾವುದರಿಂದ ಮನಸ್ಸು ಕೆಡುತ್ತದೆ, ಯಾವುದರಿಂದ ದೇಹ ಕೆಡುತ್ತದೆ, ಯಾವುದರಿಂದ ಬುದ್ಧಿ ಸರಿಯಾಗಿ ಉಳಿಯುವುದಿಲ್ಲ, ಅದು ದುಸ್ಸಂಗ. ಯಾವುದೇ ಇರಬಹುದು. ಮನಸ್ಸಿನ ಸೌಂದರ್ಯ ನಾಶ ಮಾಡುವುದೇ ದುಸ್ಸಂಗ. ಅವುಗಳನ್ನು ಗುರುತಿಸಿ ದೂರ ಮಾಡಬೇಕು. ದೂರ ಮಾಡದಿದ್ದರೆ ಐದು ರೀತಿಯ ಮಲಿನತೆ ಉಂಟಾಗುತ್ತದೆ.
1. ಮನಸ್ಸಿನಲ್ಲಿ ಬೇಡದ ಕಾಮನೆಗಳು ಶುರುವಾಗುತ್ತದೆ.
2. ಮನಸ್ಸಿನಲ್ಲಿ ದ್ವೇಷ ಶುರುವಾಗುತ್ತದೆ.
3. ಮನಸ್ಸಿನಲ್ಲಿ ವ್ಯಾಮೋಹ ಉಂಟಾಗುತ್ತದೆ.
4. ಸ್ಮೃತಿ ಹೋಗುತ್ತದೆ.
5. ಬುದ್ಧಿ ನಾಶವಾಗುತ್ತದೆ.
      ಇದರಿಂದ ಸರಿ ತಪ್ಪು ಗುರುತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಳ್ಳೆಯ ಸಂಗ ಮಾಡಬೇಕು. ಒಳ್ಳೆಯ ಸಂಗ ಎಂದರೆ ಒಳ್ಳೆಯ ವಿಚಾರ ಮಾಡುವುದು, ಒಳ್ಳೆಯದನ್ನು ನೋಡುವುದು, ಒಳ್ಳೆಯ ಮಾತನ್ನು ಹೇಳುವುದು ಮತ್ತು ಕೇಳುವುದು, ಒಳ್ಳೆಯ ಕೆಲಸ ಮಾಡುವುದು. ಇದೇ ಸತ್ಸಂಗ ಅಲ್ಲವೇ ಮಕ್ಕಳೆ
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************Ads on article

Advertise in articles 1

advertising articles 2

Advertise under the article