-->
ಜಗಲಿ ಕಟ್ಟೆ : ಸಂಚಿಕೆ - 16

ಜಗಲಿ ಕಟ್ಟೆ : ಸಂಚಿಕೆ - 16

ಜಗಲಿ ಕಟ್ಟೆ : ಸಂಚಿಕೆ - 16
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ    ಮಕ್ಕಳಲ್ಲಿ ಕಲಾಪ್ರಜ್ಞೆಯನ್ನು ಬೆಳೆಸುವುದಕ್ಕೋಸ್ಕರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೆ. ಅದೇ ರೀತಿ "ಭಿತ್ತಿ ಚಿತ್ತಾರ - ಬೀದಿ ಶೃಂಗಾರ" ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು 2006ರಲ್ಲಿ ಆಯೋಜಿಸಲಾಯಿತು. 17 ವರ್ಷಗಳ ಹಿಂದೆ ಅದು ಹೊಸ ಪ್ರಯೋಗವೂ ಆಗಿತ್ತು. ಈ ಬಗ್ಗೆ ಮಂಗಳೂರಿನ ಎಲ್ಲಾ ಪತ್ರಿಕೆಯವರು ಹಾಗೂ ದೃಶ್ಯ ಮಾಧ್ಯಮದವರು ವರದಿ ಪ್ರಕಟಿಸಿ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ನೀಡಿದ್ದರು. ಈ ಕಾರ್ಯಕ್ರಮ ಸಂಘಟಿಸಲು ಒಂದು ಬಲವಾದ ಕಾರಣವೂ ಇತ್ತು. 
    ನಾನು ಮಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಇದ್ದಂತಹ ಸಂದರ್ಭ. ಶಾಲೆಗೆ ಪ್ರವೇಶಿಸಬೇಕಾದರೆ ಮುಖ್ಯ ರಸ್ತೆಯಿಂದ 100 ಮೀಟರ್ ಬೀದಿ ದಾಟಿ ಬರಬೇಕಾಗಿತ್ತು. ದಾರಿಯುದ್ದಕ್ಕೂ ತಿಂಡಿಯ ಪ್ಯಾಕೆಟ್, ಕಾಗದದ ಚೂರುಗಳನ್ನು ಮಕ್ಕಳು ಬಿಸಾಡುತ್ತಿರುವುದನ್ನು ಗಮನಿಸಿದ ಶಾಲಾ ಆಡಳಿತ ಮಂಡಳಿ ಮಕ್ಕಳಿಂದಲೇ ಸ್ವಚ್ಛತೆ ಕಾರ್ಯ ಕೈಗೊಂಡರೆ ವಿದ್ಯಾರ್ಥಿಗಳಲ್ಲಿ ಸ್ವಯಂಶಿಸ್ತು ಬರಬಹುದೆಂದು ಅಂದಾಜಿಸಿತು. ಪ್ರಯೋಗಕ್ಕೆ ಸಿದ್ಧತೆಯೂ ನಡೆಯಿತು. ಆದರೆ ಆಕ್ಷೇಪವೆತ್ತಿದ ಪೋಷಕರು, "ದೊಡ್ಡ ಮೊತ್ತದ ಫೀಸ್ ಸಂಗ್ರಹಿಸುವ ಶಾಲೆಯಲ್ಲಿ ಸ್ವಚ್ಛತೆಗೆಂದು ಜನ ಇಟ್ಟುಕೊಳ್ಳಬೇಕು. ಮಕ್ಕಳಿಂದ ಸ್ವಚ್ಛತೆ ಕಾರ್ಯ ಮಾಡಿಸುವುದು ತಪ್ಪು" ಎಂದು ವಿರೋಧವನ್ನು ವ್ಯಕ್ತಪಡಿಸಿದರು.
      ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸ್ವಯಂ ಅರಿವನ್ನು ಹೇಗೆ ಮೂಡಿಸುವುದು..? ಎಂಬುದುನ್ನು ಯೋಚನೆ ಮಾಡಿದೆ.... ಈ ಸಂದರ್ಭದಲ್ಲಿ ಯೋಚನೆಯಾದಂತೆ ಶಾಲೆಯವರಲ್ಲಿ ಚರ್ಚಿಸಿ ಬೀದಿಯ ಇಕ್ಕೆಲಗಳ ಗೋಡೆಯಲ್ಲಿ ಮಕ್ಕಳಿಂದಲೇ ಚಿತ್ರ ಬಿಡಿಸುವ ಯೋಜನೆಯನ್ನು ಹಾಕಿಕೊಂಡೆವು. ಈ ಒಂದು ವಿಶಿಷ್ಟ ಪರಿಕಲ್ಪನೆಗೆ ಶಾಲೆಯ ತುಂಬು ಹೃದಯದ ಸಹಕಾರ ಸಿಕ್ಕಿತು. ಶಾಲಾ ಆಡಳಿತ ಮಂಡಳಿಯಲ್ಲಿದ್ದ ಶಿಕ್ಷಣ ಚಿಂತಕ ಪ್ರೊಫೆಸರ್ ರಾಘವೇಂದ್ರ ಪ್ರಭುಗಳ ಮುತುವರ್ಜಿಯಿಂದ ಪ್ರಾಯೋಜಕರ ಮೂಲಕ ಗೋಡೆಗೆ ಗಾರೆಯನ್ನು ಮಾಡಿಸಲಾಯಿತು. ಗೋಡೆಗೆ ಇಟ್ಟಿಗೆ ಬಣ್ಣವನ್ನು ನೀಡಿ ಸಿದ್ಧಗೊಳಿಸಲಾಯಿತು. ಶಾಲೆಯ ಅಷ್ಟೂ ಮಕ್ಕಳಿಗೆ ಸರಳವಾಗಿ ರಚಿಸಬಹುದಾದ ವರ್ಲಿ ಕಲಾ ಶೈಲಿಯನ್ನು ಪರಿಚಯಿಸಿ ತರಬೇತಿ ನೀಡಲಾಯಿತು.     
     ಕಾರ್ಯಕ್ರಮದ ದಿನ ಬಂದೇ ಬಿಟ್ಟಿತ್ತು. ಎಲ್ಲಾ ಮಕ್ಕಳಲ್ಲಿ ಸಂತಸ ಸಂಭ್ರಮ. ಕಲಾನಿಧಿ ಗೋಪಾಡ್ಕರ್ ಅವರ ಪ್ರೋತ್ಸಾಹದ ನುಡಿಗಳು... "ಮುಂದಿನ ದಿನಗಳಲ್ಲಿ ಇದು ಪ್ರತಿ ಶಾಲೆ, ಕಾಲೇಜು, ಮನೆ , ಆಫೀಸು , ಸಭಾಂಗಣಗಳಲ್ಲಿ ಶೃಂಗಾರ ಗೊಳ್ಳಲಿದೆ" ಎಂದ ಮಾತುಗಳು ಎಲ್ಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಿತ್ತು. ಖ್ಯಾತ ಕಲಾವಿದ ಪಿ ಎನ್ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಕೈಯಲ್ಲಿ ಬಿಳಿ ಬಣ್ಣ ಮತ್ತು ಕುಂಚ ಹಿಡಿದುಕೊಂಡು ಗೋಡೆಚಿತ್ತಾರಕ್ಕೆ ಶುರುವಿತ್ತರು. 
     ಸುಮಾರು ನೂರು ಮೀಟರ್ ಉದ್ದದ ಗೋಡೆ ಮೇಲೆ ಅಂದಾಜು 300 ರಿಂದ 350 ವಿದ್ಯಾರ್ಥಿಗಳು ಚಿತ್ರರಚಿಸಿದರು. ಪತ್ರಿಕೆ ಮತ್ತು ದೃಶ್ಯ ಮಾಧ್ಯಮದವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ , ಸಂದರ್ಶನಗಳನ್ನು ಮಾಡುತ್ತಾ ಫೋಟೋ ಕ್ಲಿಕ್ಕಿಸಿ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೊಂದು ಅವಿಸ್ಮರಣೆಯೂ ಆಗಿತ್ತು....!! 
     100 ಮೀಟರ್ ಉದ್ದದ ಬೀದಿ ವರ್ಲಿ ಶೈಲಿಯ ಚಿತ್ರಗಳಿಂದ ಶೃಂಗಾರಗೊಂಡಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಾನು ಮಾಡಿದ ಚಿತ್ರ ಎಂಬುದಾಗಿ ಸಂಭ್ರಮಿಸ ತೊಡಗಿದರು. ದಾರಿಯುದ್ಧಕ್ಕೂ ಮತ್ತೊಮ್ಮೆ ಮತ್ತೊಮ್ಮೆ ನಡೆದು ಚಿತ್ರಗಳ ಸೊಬಗನ್ನು ಕಣ್ತುಂಬಿಕೊಂಡರು. ತಾನು ಮಾಡಿದ ಚಿತ್ರಗಳಿಗೆ ದಿನಾ ಕಾವ್ಯ ಕಟ್ಟುತ್ತಾ ಮಕ್ಕಳು ನಡೆದುಕೊಂಡು ಬರುವ ದೃಶ್ಯವೇ ನೋಡಲು ಸೊಗಸಾಗಿತ್ತು....!!
     ಬೀದಿಯ ಒಟ್ಟು ಅಂದದ ಮುಂದೆ ಪ್ಲಾಸ್ಟಿಕ್, ಕಸಗಳು ಬೀಳಲಿಲ್ಲ.... ಮಕ್ಕಳಲ್ಲಿ ಸ್ವಯಂಶಿಸ್ತು, ಕಲಾಪ್ರಜ್ಞೆಯ ಮೂಲಕ ತನ್ನಿಂತಾನೆ ಬೆಳಗಿ ನಿಂತದ್ದು ನನ್ನಲ್ಲಿ ಅಪೂರ್ವ ಸಂತಸ ಮೂಡಿಸಿತ್ತು...!! ಮುಂದೆ ನಡೆದ ಎಲ್ಲಾ ಬೀದಿಬದಿಯ ಚಿತ್ರಗಳಿಗೂ... ಗೋಡೆ , ಕಾಂಪೌಂಡು , ಜಿಲ್ಲೆ , ರಾಜ್ಯ ಮೀರಿ ಈಗಲೂ ವಿಸ್ತಾರವಾಗುತ್ತಿರುವುದು ನನ್ನನ್ನು ಇನ್ನೂ ಚಕಿತಗೊಳಿಸಿತ್ತಿದೆ...!!
    
       ಅಂದ ಹಾಗೆ ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆಯಲ್ಲಿ ತನಗೆ ಸ್ಪೂರ್ತಿಯಾದ ಶಿಕ್ಷಕರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಬರೆದಿರುವ ಲೇಖನಗಳು ತುಂಬಾ ಸೊಗಸಾಗಿತ್ತು. ಬಾಲ್ಯದ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಂತಾಯಿತು. ತಮ್ಮ ಮೆಚ್ಚಿನ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ ಸ್ಮರಿಸಿದ ಸ್ಮರಣೀಯ ದಿನವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಹಿರಿಯರ ವಿಭಾಗದಲ್ಲಿ ಶಿಕ್ಷಕರು, ಜಗಲಿಯ ಓದುಗರು ಬರೆದು ಕಳಿಸಿರುವುದು ತುಂಬಾ ಸಂತೋಷ. ನಿಮ್ಮ ಸಹಕಾರ ಬೆಂಬಲ ಇದೇ ರೀತಿ ಇರಲಿ ಎನ್ನುವುದೇ ನಮ್ಮ ಆಶಯ.
          

ಕಳೆದ ಸಂಚಿಕೆಯ ಜಗಲಿಕಟ್ಟೆ - 15 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ಚಂದ್ರಶೇಖರ ಗಟ್ಟಿ ನರಿಕೊಂಬು.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

        ಸ್ಫೂರ್ತಿಯಾಗಿರುವ ಶಿಕ್ಷಕರು.. ಮಕ್ಕಳ ಜಗಲಿಯ ಬರಹದಲ್ಲಿ ನಮ್ಮ ಸಿದ್ಧಕಟ್ಟೆಯ ನಾರಾಯಣ ಮೇಷ್ಟ್ರ ಬಗ್ಗೆ ಓದಿದೆ. ಗೃಹಿಣಿ ಕವಿತಾರವರು ಉಲ್ಲೇಖಿಸಿರುವ ಯೂಟ್ಯೂಬ್ ವಿಡಿಯೋ ಮಾಡಿರುವುದು ನಮ್ಮ ಹಿತೈಷಿಗಳಾದ ವಾರ್ತಾಭಾರತಿಯ ಅವಿನಾಶ್ ಕಾಮತ್. ಈ ವಿಡಿಯೋ ಲಿಂಕ್ ಅವರ ಮೊದಲ ವಿದ್ಯಾರ್ಥಿಗಳನ್ನೂ ತಲುಪಿದೆ ಎನ್ನುವುದು ವಿಡಿಯೋದ ಸಾರ್ಥಕತೆ. ನಾರಾಯಣ ಮೇಷ್ಟ್ರ ವಿದ್ಯಾರ್ಥಿನಿಯಾದ ಗೃಹಿಣಿ ಕವಿತಾ ಇವರು ಮಕ್ಕಳ ಜಗಲಿಗೆ ಕನೆಕ್ಟ್ ಆಗಿ ಇಲ್ಲಿ ಪ್ರಕಟವಾಗಿರುವ ಈ ಸಂಗತಿ ಓದಲು ತುಂಬ ಖುಷಿಯಾಗುತ್ತಿದೆ. 80 ವರ್ಷ ವಯಸ್ಸಿನ ಹಿರಿಯರಾದ ನಾರಾಯಣ ಮೇಷ್ಟ್ರ ಬಗ್ಗೆ ಅವರನ್ನು ಶಿಕ್ಷಕರಾಗಿ ತಮ್ಮ ಶಾಲಾಜೀವನದಲ್ಲಿ ಪಡೆದ ವಿದ್ಯಾರ್ಥಿನಿಯೇ ಬರೆದ ಈ ಬರಹದ ಓದು ಬಹಳ ಸಂತೋಷದ ಅನುಭವ. ಅಪರೂಪದ ನಿಸ್ವಾರ್ಥ ಸಾಮಾಜಿಕ ಕಾಳಜಿಯುಳ್ಳ ಹಿರಿಯ ಶಿಕ್ಷಕರ ಬಗೆಗೆ ಇದೊಂದು ಅಪರೂಪದ ಶಾಶ್ವತ ಬರಹರೂಪದ ಕೃತಜ್ಞತೆಯ ದಾಖಲೆ.
............................................ ವಿದ್ಯಾ ಕಾರ್ಕಳ
ಸಹಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************       ನಮಸ್ತೇ..... ವಿರಕ್ತರಾಗಿ, ಒಳ್ಳೆಯ ಕೆಲಸಗಳನ್ನು ಮಾಡುತ್ತಾ, ಸ್ತುತಿಗೆ ಹಿಗ್ಗದೆ ನಿಂದನೆಗಳಿಗೆ ಕುಗ್ಗದೆ, ಅತ್ಮಾಭಿಮಾನಿಗಳಾಗಿ, ಜ್ಞಾನಿಗಳಾಗಿ ಬಾಳಿದರೆ ಬದುಕು ಸುಂದರ ಎಂಬುದನ್ನು ಸಾರುವ ಅಮ್ಮುಗೆಯ ರಾಯಮ್ಮ ರ ವಚನದ ಸಾರವನ್ನು ಈ ಸಲದ ಸಂಚಿಕೆಯಲ್ಲಿ ಬಹಳ ಸುಂದರವಾಗಿ ನಿರೂಪಿಸಿದ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ರವರ ಲೇಖನ ಚೆನ್ನಾಗಿತ್ತು. ಧನ್ಯವಾದಗಳು ಸರ್.
      ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾದುದು. ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ದೊಡ್ಡದು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಮೇಶ್ ಬಾಯಾರು ಇವರಿಂದ ಉಪಯುಕ್ತ ಲೇಖನ ಮೂಡಿ ಬಂದಿದೆ. ಧನ್ಯವಾದಗಳು ಸರ್ ತಮಗೆ.
     ಈ ಸಲದ ಹಕ್ಕಿ ಕಥೆ ಸಂಚಿಕೆಯಲ್ಲಿ ಈ ಹಿಂದೆ ಮನುಷ್ಯರ ಧ್ವನಿಯನ್ನು ಅನುಕರಿಸಲು ಬಳಸಲಾದ ಕಾಮಳ್ಳಿ ಹಕ್ಕಿಯ ಪರಿಚಯ ತುಂಬಾ ಸೊಗಸಾಗಿ ಬಂದಿದೆ. ಛಾಯಾಚಿತ್ರವೂ ಚೆನ್ನಾಗಿದೆ. ಧನ್ಯವಾದಗಳು ಅರವಿಂದರಿಗೆ.
     ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಹ್ವಾನಿಸಲಾದ ಲೇಖನಕ್ಕೆ ಬಹಳಷ್ಟು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆ. ತಮ್ಮ ನೆಚ್ಚಿನ ಗುರುಗಳ ಕುರಿತು ತಮ್ಮ ಅನುಭವವನ್ನು ಸೊಗಸಾಗಿ ಹಂಚಿಕೊಂಡು ಜಗಲಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಎಲ್ಲರಿಗೂ ವಂದನೆಗಳು.
     ವಿಜಯಾ ಮೇಡಂರವರು ಈ ಸಲದ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ಕೊಟ್ಟೆ ಮುಳ್ಳಿನ ಗಿಡದ ಕುರಿತು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ವಿಜಯಾ ಮೇಡಂ ರವರಿಗೆ ನನ್ನ ನಮನಗಳು.
     ಜೀವನದಲ್ಲಿ ಕಷ್ಟ ಸುಖಗಳು ಸರ್ವೇ ಸಾಮಾನ್ಯ. ಒಬ್ಬ ಸಾಮಾನ್ಯ ಹೆಣ್ಣು ಮಗಳು - ಜಿ ಕೆ. ರೋವ್ಲಿಂಗ್ ರವರ ಸಾಹಸಗಾಥೆಯ ಮೂಲಕ ಜೀವನದಲ್ಲಿ ಬರಬಹುದಾದ ಕಷ್ಟಸುಖಗಳನ್ನು ಹೇಗೆ ಎದುರಿಸಿ ಬದುಕಬಹುದು ಎನ್ನುವುದನ್ನು ಯಾಕೂಬ್ ಸರ್ ಬಹಳ ಸೊಗಸಾಗಿ ತಿಳಿಸಿದ್ದಾರೆ. ಧನ್ಯವಾದಗಳು ಸರ್ ತಮಗೆ.
     ತಂಬಿಯೊಂದಿಗಿನ ತಿರುಗಾಟ ಪುಸ್ತಕ ಪರಿಚಯ ಸೊಗಸಾಗಿದೆ. ಧನ್ಯವಾದಳು ವಾಣಿಯಕ್ಕನವರಿಗೆ. ಕಲಿಕೆ ಆಸಕ್ತಿದಾಯಕವಾಗಿದ್ದಾಗ ಶಾಲೆಯಿಂದ ಹೊರಗುಳಿದ ಮಗು ಮತ್ತೆ ನಿರಂತರವಾಗಿ ಶಾಲೆಗೆ ಹಾಜರಾಗುವ ಸನ್ನಿವೇಶದ ತಮ್ಮ ಅನುಭವ ಚೆನ್ನಾಗಿತ್ತು. ರಾಜೇಶ್ ನೆಲ್ಯಾಡಿ ಯವರಿಗೆ ವಂದನೆಗಳು. 
       ಪದದಂಗಳ 83 ನೇ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಸರ್. ಈ ಸಲದ ಮಕ್ಕಳ ಚಿತ್ರಗಳ 2 ಸಂಚಿಕೆಗಳಲ್ಲಿ ಮಕ್ಕಳ ಚಿತ್ರಗಳು ಸೊಗಸಾಗಿವೆ. ಎಲ್ಲಾ ಮಕ್ಕಳಿಗೆ ಅಭಿನಂದನೆಗಳು.
     ಇಡೀ ವಾರದ ಸಂಚಿಕೆ ಬಹಳ ಅರ್ಥ ಪೂರ್ಣವಾಗಿ ಮೂಡಿ ಬರಲು ಕಾರಣರಾದ ಹಿರಿಯರಿಗೆ ಮಕ್ಕಳಿಗೆ ಹಾಗೂ ಜಗಲಿಯ ರೂವಾರಿ ತಾರಾನಾಥ್ ಕೈರಂಗಳರಿಗೆ ತುಂಬು ಹೃದಯದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
******************************************ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ವಿದ್ಯಾ ಕಾರ್ಕಳ, ಸಹಶಿಕ್ಷಕಿ..... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************
Ads on article

Advertise in articles 1

advertising articles 2

Advertise under the article