-->
ಜೀವನ ಸಂಭ್ರಮ : ಸಂಚಿಕೆ - 102

ಜೀವನ ಸಂಭ್ರಮ : ಸಂಚಿಕೆ - 102

ಜೀವನ ಸಂಭ್ರಮ : ಸಂಚಿಕೆ - 102
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

                    
     ಮಕ್ಕಳೇ, ಈ ಕೆಳಗಿನ ಘಟನೆ ಓದಿ..... 
ಮಲ್ಲಮ್ಮ ವಿಧವೆ. ಪತಿ ಸರ್ಕಾರಿ ಸೇವೆಯಲ್ಲಿ ಮೃತನಾಗಿದ್ದರಿಂದ ಪಿಂಚಣಿ ಬರುತ್ತಿತ್ತು. ಆಕೆಗೆ ಎರಡು ಗಂಡು ಒಂದು ಹೆಣ್ಣು ಮಗಳು. ಅವರಿಗೆಲ್ಲ ಮದುವೆಯಾಗಿ ಮಕ್ಕಳಿದ್ದರು. ಅಳಿಯ ಸರ್ಕಾರಿ ಸೇವೆಯಲ್ಲಿದ್ದನು.
     ಮಲ್ಲಮ್ಮನಿಗೆ ತಮ್ಮ ಮೂರು ಮಕ್ಕಳೇ ಜಗತ್ತು. ಅಳಿಯನಿಗೆ ದೂರದೂರಿನಲ್ಲಿ ಸರ್ಕಾರಿ ಕೆಲಸವಾಗಿದ್ದರಿಂದ ಮಗಳು ಮತ್ತು ಮೊಮ್ಮಗ ನಿತ್ಯ ಬಂದು ಹೋಗುವ ಪರಿಸ್ಥಿತಿ ಇರಲಿಲ್ಲ. ಹೀಗಿರಬೇಕಾದರೆ ಮಲ್ಲಮ್ಮನಿಗೆ ನೋವಿಲ್ಲದ ಗಂಟು ಕಂಡು ಬಂದಿದೆ. ಅದರ ಬಗ್ಗೆ ತಿರಸ್ಕಾರ ಮಾಡಿದ್ದಾರೆ. ಸುಮಾರು ಎರಡು ಮೂರು ವರ್ಷಗಳ ನಂತರ ಅದು ದೊಡ್ಡದಾಗುತ್ತಾ ನೋವು ಕಂಡು ಬಂದಿದೆ. ಮಲ್ಲಮ್ಮ ತಾನೊಬ್ಬಳೇ ಅವರಿಗೆ ಆತ್ಮೀಯರಾಗಿದ್ದ ವೈದ್ಯರಲ್ಲಿ ತೋರಿಸಿದ್ದಾರೆ. ಅವರಿಗೆ ಅನುಮಾನ ಬಂದು ಒಂದೆರಡು ದಿನ ಗಂಟು ಕರಗುವ ಔಷಧ ನೀಡಿದ್ದಾರೆ. ಗಂಟು ಕರಗದೆ ಇದ್ದಾಗ ವೈದ್ಯಕೀಯ ಪರೀಕ್ಷೆಯಲ್ಲಿ ಅದು ಕ್ಯಾನ್ಸರ್ ಗಂಟು ಎಂದು ತಿಳಿದುಬಂದಿತ್ತು.
     ಕ್ಯಾನ್ಸರ್ ತಪಾಸಣೆಗೆ ಮತ್ತು ಶುಶ್ರೂಷಗೆ ಬೆಂಗಳೂರಿನ ಕಿದ್ವಾಯಿ ಸಂಶೋಧನಾ ಕೇಂದ್ರ ಒಳ್ಳೆಯದೆಂದು ಹಲವಾರು ಜನರ ಅಭಿಪ್ರಾಯದಂತೆ ಕರೆದುಕೊಂಡು ಹೋಗಲಾಯಿತು. ಕಿರಿಯ ಮಗ ಬೆಂಗಳೂರಿನಲ್ಲಿ ಖಾಸಗಿಯಾಗಿ ಸಂಸ್ಥೆ ತೆರೆದು ಕೆಲಸ ಮಾಡುತ್ತಿದ್ದನು. ಹಿರಿಯ ಮಗ ಸರ್ಕಾರಿ ಸೇವೆಯಲ್ಲಿದ್ದು, ಒಂದು ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಇದ್ದನು. ಆದರೆ ಇಬ್ಬರು ಗಂಡು ಮಕ್ಕಳು ಮಾತನಾಡುತ್ತಿರಲಿಲ್ಲ, ಜಗಳ ಮಾಡಿಕೊಂಡಿದ್ದರು. ಕಿರಿಯ ಮಗ ಹಣದ ಮುಗ್ಗಟ್ಟು ಎದುರಿಸುತ್ತಿದ್ದನು. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಬೆಂಗಳೂರಿಗೆ ಬರುವುದು, ಪರೀಕ್ಷೆ ಮಾಡಿಸಿಕೊಂಡು ವಾಪಾಸ್ ನಗರಕ್ಕೆ ಬರುತ್ತಿದ್ದರು. ಅದಕ್ಕಾಗಿ ಅಳಿಯ ತನ್ನ ಕಾರ್ ನೀಡಿ ಸಹಕರಿಸಿದ. ತನ್ನ ಪತ್ನಿ ಹಾಗೂ ಮಗನನ್ನು ಕಳುಹಿಸಿಕೊಟ್ಟು ಮಲ್ಲಮ್ಮನ ಆರೋಗ್ಯ ವಿಚಾರದಲ್ಲಿ ಸಹಾಯ ಮಾಡುವಂತೆ ತಿಳಿಸಿದ. ಕೀಮ ಥೆರಪಿ ಶುರುವಾಯಿತು. 74 ವರ್ಷ ವಯಸ್ಸಾಗಿದ್ದರಿಂದ ಕಡಿಮೆ ಪ್ರಮಾಣದಲ್ಲಿ ವಾರಕ್ಕೊಂದರಂತೆ 12 ಬಾರಿ ನೀಡಬೇಕೆಂದು ತಿಳಿಸಿದರು.  
    ಕಿರಿಯ ಮಗನ ಮನೆಯಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇದ್ದುದರಿಂದ ಆ ಮನೆಗೆ ಬೇಕಾದ ತರಕಾರಿ, ಹಣ್ಣು, ಹಂಪಲು, ಮಾಂಸ, ಮೀನು , ಅಕ್ಕಿ ಹೀಗೆ ಎಲ್ಲವನ್ನು ಅಳಿಯ ಕೊಡಿಸುತ್ತಿದ್ದನು. ಖರ್ಚಿಗೂ ಹಣ ನೀಡಿ ಸಹಕರಿಸುತ್ತಿದ್ದನು. ಸಾಲ ತೀರಿಸಲು ಹಣಕಾಸು ನೆರವು ನೀಡಿದ್ದನು. ಆದರೆ ಇದು ಯಾವುದೂ ಕಿರಿಯ ಮಗನ ಪತ್ನಿಗೆ ಗೊತ್ತಿರಲಿಲ್ಲ. ಹಾಗಾಂತ ಕಿರಿಯ ಮಗ ತನ್ನ ಪತ್ನಿಗೂ ಈ ವಿಷಯವನ್ನು ಹೇಳುತ್ತಿರಲಿಲ್ಲ. ಆದರೆ ಎಲ್ಲಾ ಖರ್ಚು ಪತಿಯೇ ಮಾಡುತ್ತಿದ್ದಾರೆ ಎಂಬುವುದು ಕಿರಿಯ ಮಗನ ಪತ್ನಿಯ ಅನಿಸಿಕೆಯಾಗಿತ್ತು. ಮನೆಗೆ ಹೋದಾಗ ಎಲ್ಲರನೂ ತಾತ್ಸಾರ ಮನೋಭಾವದಿಂದ ನೋಡಿಕೊಳ್ಳುತ್ತಿದ್ದಳು. 
     ಕಿರಿಯ ಮಗನಿಗೆ ನಾಲ್ಕು ವರ್ಷದ ಒಂದು ಗಂಡು ಮಗು ಇತ್ತು. ಆ ಮಗು ಎಲ್ಲರನ್ನೂ ಪ್ರೀತಿಸುತ್ತಿತ್ತು. ಆದರೆ ಆ ಮಗುವಿನ ಅಮ್ಮ ಮಾತ್ರ ಹೋದವರಿಗೆ ಹರಿದ ಚಾಪೆ, ಹಳೆಯ ಹೊದಿಕೆ ನೀಡುವುದು, ಹೊಟ್ಟೆ ತುಂಬಾ ಊಟ ನೀಡುತ್ತಿರಲಿಲ್ಲ. ಇದನ್ನು ಮಲ್ಲಮ್ಮನ ಮಗಳು ಮತ್ತು ಮೊಮ್ಮಗ ಗಮನಿಸಿದ್ದರು, ಆ ಕಾರಣದಿಂದ ಅಲ್ಲಿರಲು ಆಸಕ್ತಿ ತೋರಿಸುತ್ತಿರಲಿಲ್ಲ.
    ಎರಡನೇ ಕೀಮ ಥೆರಪಿ ಆದ ನಂತರ ಮಲ್ಲಮ್ಮನ ಮಗಳು ಮತ್ತು ಮೊಮ್ಮಗ ತನ್ನ ಊರಿಗೆ ವಾಪಾಸ್ ಬಂದರು. ಬರುವಾಗ ಮಲ್ಲಮ್ಮನನ್ನು ಎರಡನೇ ಮಗನ ಮನೆಯಲ್ಲಿ ಬಿಟ್ಟು ಬಂದರು. ಹಣ್ಣು ಮತ್ತು ಒಣ ಬೀಜಗಳನ್ನು ಖರೀದಿಸಿ ಮಲ್ಲಮ್ಮನಿಗೆ ಕೊಟ್ಟು ಬಂದರು. ಆಗ ಬಯಪ್ಸಿಗೆ ತೆಗೆದ ಜಾಗ ಕೀವಿನಿಂದ ವಾಸನೆ ಬರಲು ಶುರುವಾಯಿತು. ಮನೆ ಕೆಲಸದವಳು ಮಲ್ಲಮ್ಮನ ಬಟ್ಟೆ ಒಗೆಯಲು ನಿರಾಕರಿಸಿದಳು. ತನ್ನ ಸೊಸೆ ಮಾಡುತ್ತಿರುವ ಭೇದ ಭಾವದ ವಿಚಾರವನ್ನು ಮಲ್ಲಮ್ಮ ತನ್ನ ಮಗಳಿಗೆ ತಿಳಿಸಿದಳು. 
     ಮಲ್ಲಮ್ಮನನ್ನು ವಾಸನೆ ಬರುತ್ತಿರುವ ಕುರಿತು ವೈದ್ಯರಲ್ಲಿ ತೋರಿಸಿದಾಗ, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕು ಕೂಡಲೇ ಒಳರೋಗಿಯಾಗಿ ದಾಖಲಿಸಿ ಎಂದು ಶಸ್ತ್ರ ಚಿಕಿತ್ಸಕ ವೈದ್ಯರಿಗೆ ವರದಿ ಮಾಡಿದರು. ಈ ವಿಚಾರ ತಿಳಿದು ದುಃಖಿತರಾಗಿ ಮಗಳು ಮತ್ತು ಅಳಿಯನ ನಡೆದ ಚರ್ಚೆಯ ವಿವರ.....
 ಮಗಳು -  ನಾವು ನನ್ನ ತಾಯಿ ನೋಡಿಕೊಳ್ಳಲು ಹೋಗುತ್ತೇವೆ. ಆದರೆ ಎರಡನೇ ತಮ್ಮನ ಮನೆಗೆ ಹೋಗುವುದಿಲ್ಲ.
ಅಳಿಯ - ಏಕೆ,?.
ಮಗಳು - ನಿಮಗೆ ಗೊತ್ತಿದೆಯಲ್ಲ ಹೊಟ್ಟೆ ತುಂಬಾ ಊಟ ನೀಡಲ್ಲ, ಮಲಗಲು ಸರಿಯಾದ ಹಾಸಿಗೆ, ಹೊದಿಕೆ ಕೊಡಲ್ಲ, ಹೀಗೆ ಕೊರತೆ ಮತ್ತು ದೋಷಗಳ ಪಟ್ಟಿ ಹೇಳಿದರು....
ಅಳಿಯ - ನಿಮಗೆ ಅವಳು ಸತ್ಕಾರ ಮಾಡುವುದಿಲ್ಲ ಅಂತ ಗೊತ್ತು ತಾನೆ.....
ಮಗಳು - ಹೌದು.....
ಅಳಿಯ - ಅದನ್ನು ಒಪ್ಪಿಕೊಳ್ಳಿ.
     ಒಪ್ಪಿಕೊಳ್ಳಲು ತಯಾರಿಲ್ಲದೆ....... ಅವಳಲ್ಲಿ ಪರಿವರ್ತನೆ ತರಬೇಕು ಎನ್ನುವುದು ಅವರ ವಾದ. 
ಮಗಳು - ಸೊಸೆಯಾಗಿ ಅತ್ತೆಯನ್ನು, ಅತಿಥಿಗಳನ್ನು ಪ್ರೀತಿಯಿಂದ ನೋಡಬೇಕಲ್ಲ ಅಂದರು. 
ಅದಕ್ಕೆ ಅಳಿಯ- ನೋಡಿಕೊಳ್ಳುವುದಿಲ್ಲ ಅನ್ನುವುದನ್ನು ಒಪ್ಪಿಕೊಂಡು ಪರಿಹಾರ ಚಿಂತಿಸಿ....
 ಮಗಳು -  ಅವಳನ್ನು ಹೇಗೆ ಬದಲಾಯಿಸುವುದು...?
ಅಳಿಯ - ಅವಳನ್ನು ಬದಲಾಯಿಸುವ ಬದಲು ನಾವೇ ಬದಲಾಗೋಣ. ಮಗನ ಮನೆಗೆ ಹೋಗದೆ ಇದ್ದರೆ ಮಲ್ಲಮ್ಮನಿಗೆ ನೋವು. ನಾವು ಹೋಗಬೇಕು. ಆದರೆ ನಮ್ಮ ಉದ್ದೇಶ ತಾಯಿ ನೋಡಿಕೊಳ್ಳುವುದು. ಅದರ ಕಡೆ ಗಮನಹರಿಸು. ಸೊಸೆಯ ತಾತ್ಸಾರ, ಕೊರತೆ, ಲೋಪದ ಕಡೆ ಗಮನ ಹರಿಸುವುದು ಬೇಡ. ಅವಳು ಅರ್ಧ ಊಟ ನೀಡಿದರೆ ತಿರುಗಾಡಿಕೊಂಡು ಬರುವುದಾಗಿ ಹೇಳಿ ಹೊರಗೆ ಹೋಗಿ ತಿನ್ನಿ. ತಾಯಿಗೆ ಏನು ಇಷ್ಟು ಗೊತ್ತಿದೆಯಲ್ಲ, ಅದನ್ನ ತಂದು ನಿನಗೆ ಇಷ್ಟ ಅದಕ್ಕೆ ತಂದೆ ಎಂದು ಹೇಳಿ ನೀಡಿ. ಆಗ ಅವರಿಗೂ ಹೊಟ್ಟೆ ತುಂಬುತ್ತದೆ. ಹಾಸಿಗೆ ಹೋದಿಕೆ ನೀವೇ ಖರೀದಿಸಿ. ಸಮಸ್ಯೆಗೆ ಪರಿಹಾರ ಆಯ್ತಲ್ಲ. ಅವರಲ್ಲಿ ಪರಿವರ್ತನೆ ತರುವ ಬದಲು ನಾವೇ ಪರಿವರ್ತಿತರಾಗುವುದು. ಅತಿಯಾಗಿ ಯಾರನ್ನೂ ಯಾವುದನ್ನು ಆಶ್ರಯಿಸಬಾರದು. ನಮಗೆ ಸಾಧ್ಯವಾದಷ್ಟು ಮಾಡುವುದು. ಸಿಕ್ಕಿದ್ರಲ್ಲಿ ಆನಂದವಾಗಿರೋದು. ದೇವರು ನಮಗೆ ನೀಡಿರುವುದನ್ನು ಸುಂದರವಾಗಿ ಬಳಸಿ ಆನಂದ ಪಡೋದು. ಬದಲಾವಣೆ ಒಪ್ಪಿಕೊಂಡು ನಾವು ಬದಲಾವಣೆ ಹೊಂದುವುದು. ಅದೇ ಜೀವನ ಅಲ್ಲವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************




Ads on article

Advertise in articles 1

advertising articles 2

Advertise under the article