-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 16

ನಿಷ್ಪಾಪಿ ಸಸ್ಯಗಳು : ಸಂಚಿಕೆ - 16

ನಿಷ್ಪಾಪಿ ಸಸ್ಯಗಳು : ಸಂಚಿಕೆ - 16
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
      ಪ್ರೀತಿಯ ಮಕ್ಕಳೇ ಹೇಗಿದ್ದೀರಿ...? ಗಣೇಶನ ಹಬ್ಬ ಮುಗೀತು ಅಲ್ವಾ... ಸಿಹಿ ತಿನಿಸುಗಳನ್ನು ಇಷ್ಟ ಪಡೋ ನಮ್ಮ ಗಣಪನಿಗೆ ಕಬ್ಬು , ಗರಿಕೆಗಳೂ ಬಹಳ ಇಷ್ಟವಂತೆ. ಸಿಕ್ಕಾಪಟ್ಟೆ ತಿಂದಾಗ ಆರೋಗ್ಯ ಕಾಪಾಡೋಕೆ ಭಗವಂತನಿಗೂ ಸಸ್ಯಗಳು ಸಹಾಯ ಮಾಡ್ತವೆ ಎನ್ನೋಣವೇ...?
       ಸಸ್ಯಗಳಲ್ಲಿ ಸಿಹಿ, ಒಗರು, ಹುಳಿ, ಖಾರ ರುಚಿಗಳಿರುವಂತೆಯೇ ಬಹಳ ಕಹಿಯಾಗಿರುವ ಸಸ್ಯಗಳೂ ಇವೆ ಎಂಬುದು ಗೊತ್ತೇ....? ನಿಮ್ಮಲ್ಲಿ ಈ ಪುಟಾಣಿ ಸಸ್ಯದ ಪರಿಚಯವಿರಬಹುದು. ಜಗತ್ತಿನಾದ್ಯಂತ ಇದನ್ನು 'ಕಹಿಯ ರಾಜ' ಎನ್ನುತ್ತಾರೆ ! ತಂಪು ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ಈ ಸಸ್ಯ ಹೆಚ್ಚೇನೂ ಆರೈಕೆ ಬೇಡದು. ಮನೆಯ ಕೈತೋಟದ ಸೌಂದರ್ಯ ಹೆಚ್ಚಿಸಲು, ತರಕಾರಿ ಹಾಗೂ ಅಡಿಕೆ ತೋಟದಲ್ಲಿ ಗಿಡಗಳ ಬೇರುಗಳಿಗೆ ಒದಗಬಹುದಾದ ಕೀಟ ಬಾಧೆಯಿಂದ ರಕ್ಷಣೆ ಪಡೆಯಲೂ ಔಷಧೀಯ ಬಳಕೆಗಾಗಿಯೂ ಇದನ್ನು ಬೆಳೆಸುತ್ತಾರೆ. ಈ ಅಮೂಲ್ಯ ಸಸ್ಯದ ಹೆಸರು ನೆಲಬೇವು. ಇದಕ್ಕೆ ಕಾಲಮೇಘ, ಊರಕಿರಿಯಾತು, ಭೂನಿಂಬ ಮೊದಲಾದ ಹೆಸರಿದ್ದು ನಾವು ಸಾಮಾನ್ಯವಾಗಿ ಕಿರಾತಕಡ್ಡಿಯೆಂದೂ ಕರೆಯುತ್ತೇವೆ. 
      ಕಳ್ಳಿ, ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದಲ್ಲಿ, ಪಾಳು ಭೂಮಿಯಲ್ಲಿ, ಕಲ್ಲುಗುಡ್ಡಗಳ ಸಂದುಗೊಂದುಗಳಲ್ಲಿ ನೆಲವನ್ನು ಗಂಟುಗಂಟುಗಳಲ್ಲಿ ಬೇರಿಳಿಸಿ ಅವಚಿ ಹಿಡಿದು ಸಣ್ಣ ಪೊದೆಯಂತೆ ಹಬ್ಬಿದರೆ ಕೆಲವೊಮ್ಮೆ ಜೊತೆ ಸಿಕ್ಕ ಸಣ್ಣಪುಟ್ಟ ಗಿಡಗಳ ನಡುವೆ ಮೂಗು ತೂರಿಸಿ ಬೆಳೆವ ಈ ನಿಷ್ಪಾಪಿ ಸಸ್ಯ ಬಹಳ ಮುದ್ದಾಗಿರುತ್ತದೆ. ಹೂವನ್ನು ಮಾತ್ರ ಗಿಡದ ಸುಂದರ ಭಾಗವೆಂದು ಗುರುತಿಸುವ ನಾವು ಗಿಡಗಳ ಸೌಂದರ್ಯವನ್ನೂ ಅಲ್ಲಗಳೆಯುವಂತಿಲ್ಲ. ಗುಲಾಬಿ ಹಾಗೂ ನೇರಳೆ ಬಣ್ಣ ಮಿಶ್ರಣದ ಪುಷ್ಪಮಂಜರಿಯಿರುತ್ತದೆ. ಅಭಿಮುಖವಾಗಿ ಜೋಡಣೆಯಾಗುವ ಎಲೆಗಳು, ಬಲಿತಾಗ ಎಳೆಹಸಿರಿನಿಂದ ಗಾಢ ಹಸಿರಿಗೆ ತಿರುಗುವ ಬಣ್ಣ, ಬೇರು, ಕಾಂಡ, ಎಲೆ, ಹೂ, ಕಾಯಿಗಳೊಳಗೆ ಹಬ್ಬಿರುವ ಕಹಿ ರುಚಿ ಇದನ್ನು ಉಳಿದ ಸಸ್ಯಗಳಿಂದ ಪ್ರತ್ಯೇಕಿಸುತ್ತದೆ.
      ಆ್ಯಂಡ್ರೋಗ್ರಾಫಿಸ್ ಪ್ಯಾನಿಕುಲಾಟ (Andrographis paniculata Nees) ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಮೂಲಿಕೆ ಆಕ್ಯಾಂಥೇಸಿ (Acanthaceaa) ಕುಟುಂಬಕ್ಕೆ ಸೇರಿದೆ.
         ಈ ಗಿಡವು ಬಹು ಕಹಿಯಾದ ಗುಣವನ್ನು ಹೊಂದಿದ್ದರೂ ಕೂಡ ಮಾನವನ ಅನಾರೋಗ್ಯ ಸಮಸ್ಯೆಗಳಿಗೆ ಬಹು ಪ್ರಯೊಜನಕಾರಿಯಾಗಿರುವ ಸಸ್ಯವಾಗಿದೆ. ನಮ್ಮ ಹಿರಿಯರಿಗೆ ಮಲೇರಿಯಾ, ಆಮಶಂಕೆ ರೋಗಗಳಿಗೆ, ಸಿಡುಬಿನ ಕಲೆ ನಿವಾರಣೆಗೂ ಇದು ಬಹು ಪ್ರಯೋಜನಕ್ಕೆ ಬರುತ್ತಿದ್ದ ಮನೆ ಮದ್ದಾಗಿತ್ತು. ಇದುಶೀತ, ಕೆಮ್ಮು, ಗಂಟಲು ನೋವು, ಜ್ವರ, ಅಜೀರ್ಣ, ಯಕೃತ್ತಿನ ಸಮಸ್ಯೆಗಳಿಗೆ, ಚರ್ಮದ ಸಮಸ್ಯೆಗಳಿಗೆ, ಗಾಯಗಳನ್ನು ಗುಣ ಪಡಿಸಲು, ಅಲರ್ಜಿ, ಬಿಕ್ಕಳಿಕೆ ನಿವಾರಕವಾಗಿ ಬಳಸಲ್ಪಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ನೆಲಬೇವು ಮಧುಮೇಹಕ್ಕೆ ಅತ್ಯುತ್ತಮ ಔಷಧವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ಕ ಶುದ್ಧಿಕಾರಕವಾಗಿ, ಅಧಿಕ ರಕ್ತದೊತ್ತಡ, ಹುಣ್ಣು, ಶ್ವಾಸನಾಳಗಳ ಉರಿಯೂತ, ಹೊಟ್ಟೆಯ ಉರಿಯೂತಗಳ ಉಪಶಮನಕ್ಕೆ ಸಹಕರಿಸುವುದಲ್ಲದೇ ಕ್ಯಾನ್ಸರ್ ಬರದಂತೆ ಕಾಪಾಡಬಲ್ಲದು. ಜಂತುಹುಳು ನಿವಾರಕ ಹಾಗೂ ಹೃದ್ರೋಗಕ್ಕೂ ಉಪಯುಕ್ತ ಸಸ್ಯವಾಗಿದೆ.
     ಬೀಜಗಳನ್ನು ನೇರವಾಗಿ ಬಿತ್ತನೆ ಮಾಡುವ ಮೂಲಕ ಅಥವಾ ಸಸಿಮಡಿಗಳಲ್ಲಿ ಸಸಿ ಬೆಳೆಸಿಯೂ ನಾಟಿ ಮಾಡಲು ಕೃಷಿ ಇಲಾಖೆಯಿಂದಲೂ ಮಾಹಿತಿ ದೊರೆಯುತ್ತದೆ. ಬ್ಯಾಕ್ಟೀರಿಯಾ, ವೈರಾಣು ನಿವಾರಕವಾದ ಈ ಬೆಳೆಯಲ್ಲಿ ತೊಂದರೆ ಕೊಡುವ ಯಾವುದೇ ಕೀಟಜೀವಿಗಳಿಲ್ಲ. ಇದರ ರೋಗ ನಿರೋಧಕ ಶಕ್ತಿಯ ಉದ್ದೀಪನ ಗುಣಗಳಿಂದಾಗಿ ಭಾರತೀಯ ಔಷಧ ಪದ್ದತಿಯಲ್ಲಿ ವ್ಯಾಪಕವಾಗಿ ಇದನ್ನು ಬಳಸಲಾಗುತ್ತದೆ. 
      ಮಕ್ಕಳೇ, 'ಅಮೃತವೇ ಆದರೂ ಹೆಚ್ಚಾದರೆ ವಿಷವಾಗುವುದು' ಎಂಬ ಮಾತಿದೆ. ನೆಲಬೇವು ಬಹಳ ಶ್ರೇಷ್ಠ ಔಷಧಿಯೆಂದು ನಮಗೆ ನಾವೇ ವೈದ್ಯರಾಗಲು ಪ್ರಯತ್ನಿಸಬಾರದು. ಏಕೆಂದರೆ ಅತೀ ಬಳಕೆಯಿಂದ ತೊಂದರೆಗಳಾಗಬಹುದು. ಕಿಡ್ನಿಯಂತಹ ದೇಹದ ಸೂಕ್ಷ್ಮ ಭಾಗಗಳು ತೊಂದರೆಗೊಳಗಾಗುವ ಅಪಾಯಗಳೂ ಉಂಟಾಗಬಹುದು ಅಲ್ಲವೇ...? ನಾವು ಸಸ್ಯಗಳ ಪರಿಚಯ, ಪ್ರಾಮುಖ್ಯತೆ, ಔಷಧೀಯ ಗುಣಗಳನ್ನು ಅರಿತುಕೊಳ್ಳುವ ಜೊತೆಗೆ ಇಂತಹ ಸುಲಭಸಾಧ್ಯವಾದ ಗಿಡಗಳನ್ನು ಅಂದಕ್ಕೋ ಚಂದಕ್ಕೋ.. ಮುಂದಿನ ಪೀಳಿಗೆಗೋ ಅಥವಾ ಪರಿಸರ ರಕ್ಷಣೆಗೋ ಬೆಳೆಸಿಕೊಳ್ಳೋಣ... ಏನಂತೀರಾ?
        ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ನಿಮ್ಮನ್ನು ಭೇಟಿಯಾಗುವೆ... ನಮಸ್ತೆ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************Ads on article

Advertise in articles 1

advertising articles 2

Advertise under the article