-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 14

ನಿಷ್ಪಾಪಿ ಸಸ್ಯಗಳು : ಸಂಚಿಕೆ - 14

ನಿಷ್ಪಾಪಿ ಸಸ್ಯಗಳು : ಸಂಚಿಕೆ - 14
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
     ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? ಎಲ್ಲೆಡೆ ಜ್ವರ, ನೆಗಡಿ ಕಾಡ್ತಾ ಇದೆ. ಆರೋಗ್ಯದ ಬಗ್ಗೆ ಕಾಳಜಿಯಿಂದ ಇದ್ದೀರಲ್ವಾ...
     ಮಕ್ಕಳೇ ನಾನು ಈ ಬಾರಿ ನಮ್ಮೂರಿನ ಬೆಟ್ಟ ಗುಡ್ಡಗಳಲ್ಲಿ, ತೋಟಗಳ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೊಟ್ಟೆ ಮುಳ್ಳಿನ ಗಿಡದ ಬಗ್ಗೆ ತಿಳಿಸೋಣಾಂತಿದ್ದೇನೆ. ನೀವೆಲ್ರೂ ಇದನ್ನ ನೋಡಿದ್ದೀರಿ ಎಂಬ ಭರವಸೆ ನನಗಿಲ್ಲ. ಹಳ್ಳಿಯಿಂದ ಒಂದಷ್ಟು ದೂರ ನಡೆದುಕೊಂಡು ಶಾಲೆಗೆ ಹೋಗುವವರು ನೀವಾಗಿದ್ದರೆ ಕಾಣ ಸಿಕ್ಕಿರಲೂ ಸಾಧ್ಯ. ಆದರೆ ಅದರ ಹಣ್ಣುಗಳನ್ನು ತಿಂದಿರುವಿರಾ ಎಂಬುದೇ ಬಹು ದೊಡ್ಡ ಪ್ರಶ್ನೆ.
      ನಾನು ಹೈಸ್ಕೂಲ್ ಓದುತ್ತಿರುವಾಗ ವರ್ಷಾಂತ್ಯದ ದಿನಗಳಲ್ಲಿ ಪರೀಕ್ಷೆಗಳ ಕಾರುಬಾರನ್ನು ತಣಿಸುತ್ತಿದ್ದುದೇ ಈ ಕೊಟ್ಟೆ ಹಣ್ಣುಗಳು. ಪರೀಕ್ಷೆಯ ಸಮಯದಲ್ಲಿ ಅಂದರೆ ಮಾರ್ಚ್‌ ಎಪ್ರಿಲ್ ತಿಂಗಳಲ್ಲಿ ಮಾತ್ರವೇ ಕೆಲ ಮಹಿಳೆಯರು ಈ ಹಣ್ಣನ್ನು ಸಣ್ಣ ಬುಟ್ಟಿಗಳಲ್ಲಿ ತಂದು ಸೇರು, ಪಾವುಗಳೆಂದು ಅವರು ಕರೆಯುತ್ತಿದ್ದ ಪುಟಾಣಿ ಮಾಪಕಗಳಲ್ಲಿ ಮಾರುತ್ತಿದ್ದರು. ಹತ್ತೋ ಇಪ್ಪತ್ತೋ ಪೈಸೆಗಳಿಗೆ ಅಂಗೈಯೊಳಗೆ ಹಿಡಿಯುವಷ್ಟೇ ಹಣ್ಣುಗಳು ದೊರೆಯುತ್ತಿತ್ತಾದರೂ ಈಗಲೂ ರುಚಿಯ ನೆನಪು ಮಾಸಿಲ್ಲ.
        ಕಿಸ್ಕಾರ ಅಥವಾ ಕೇಪಳ ಹಣ್ಣಿಗಿಂತ ಸ್ವಲ್ಪ ದೊಡ್ಡದಾದ ಕೆನೆ ಬಣ್ಣದ ಮುದ್ದಾದ ಹಣ್ಣುಗಳು. ಸಿಪ್ಪೆ ಸಹಿತ ಬಾಯೊಳಗಿಟ್ಟು ಚಪ್ಪರಿಸಿದರೆ ತರಿತರಿಯಾಗಿದ್ದು , ರಸವಿರದೆ ಇದ್ದರೂ ಸ್ವಾದಿಷ್ಟ ರುಚಿಯ ಜೊತೆ ಕರಗುವ ಈ ಕೊಟ್ಟೆಮುಳ್ಳಿನ ಹಣ್ಣಿಗೆ ಎಲ್ಲರೂ ಶರಣಾಗುತ್ತಿದ್ದ ಕಾಲವಿತ್ತು.
         ವೈಜ್ಞಾನಿಕವಾಗಿ Zizyphus rugosa ಎಂಬ ನಾಮಧೇಯದ ಈ ಸಸ್ಯ Rhamnaceae ಕುಟುಂಬಕ್ಕೆ ಸೇರಿದೆ. ಭಾರತದ ಎಲ್ಲೆಡೆ ಕಂಡು ಬರುವ ಈ ಸಸ್ಯವು ಮಲೇಶ್ಯಾ, ಸಿಂಗಾಪುರ, ಶ್ರೀಲಂಕಾ, ಅಂಡಮಾನ್ ನಿಕೋಬಾರ್ ಸೇರಿದಂತೆ ಭಾರತದ ಸುತ್ತಲಿನ ಎಲ್ಲಾ ದೇಶಗಳಲ್ಲಿ ಕಾಣಸಿಗುತ್ತದೆ. ಈ ಗಿಡವು ಏಕಾಂಗಿಯಾಗಿ ಪೊದೆಯಂತೆ ಬೆಳೆಯಬಲ್ಲದು ಅಲ್ಲದೆ ಇತರ ಮರಗಿಡಗಳ ನಡುವೆ ಬಳ್ಳಿಯಂತೆ ಒಂದಿಷ್ಟು ಓಲಾಡಿಕೊಂಡು ಸಂಧಿಗೊಂದಿಗಳ ನಡುವೆ ಮೇಲೇರಿ ಸಾದ್ಯವಿದ್ದಲ್ಲೆಲ್ಲಾ ಗಡುಸಾಗಿ ಹೊರಚಾಚಬಲ್ಲದು.
       ಕೊಟ್ಟೆ ಮಳ್ಳಿನ ಗಿಡದಲ್ಲಿ ಹೆಸರೇ ಹೇಳುವಂತೆ ಗಿಡದ ತುಂಬಾ ಚೂಪು ತುದಿಯ ಗಟ್ಟಿಯಾದ ಮುಳ್ಳುಗಳು ಆವರಿಸಿರುತ್ತವೆ. ಪ್ರತಿ ಎಲೆಯ ತೊಟ್ಟಿನ ಬುಡದಲ್ಲಿ ಮುಳ್ಳಿನ ರಕ್ಷಣೆ ಇರುತ್ತದೆ. ಗಿಡ ಬೆಳೆಯುತ್ತಾ ಎಲೆಗಳು ಹಣ್ಣಾಗಿ ಉದುರಿದರೂ ಮುಳ್ಳುಗಳು ಇನ್ನಷ್ಟು ಗಟ್ಟಿಯಾಗಿ ಕಾಂಡದಲ್ಲಿ ಬೆಳೆದು ನಿಲ್ಲುತ್ತವೆ. ರೆಂಬೆಗಳ ತುದಿಗಳಲ್ಲಿ ಮುತ್ತುಗಳಂತೆ ಗೊಂಚಲು ಗೊಂಚಲಾಗಿರುವ ಹಣ್ಣುಗಳನ್ನು ಕೊಯ್ಯಬೇಕಾದರೆ ಒಂದಿಷ್ಟು ಚಾಕಚಕ್ಯತೆ ಬೇಕೇಬೇಕು.
      ಎಲೆಗಳು ಪುಟ್ಟಪುಟ್ಟ ರೆಂಬೆಗಳಲ್ಲಿ ಸುಮಾರು ಅರವತ್ತು ಡಿಗ್ರಿ ಗಳಷ್ಷು ಮೇಲ್ಭಾಗಕ್ಕೆ ವಾಲಿರುತ್ತವೆ. ಸಾಮಾನ್ಯವಾಗಿ ಇವುಗಳ ಎಲೆಗಳನ್ನು ಕೀಟಗಳು ಅಲ್ಪಸ್ವಲ್ಪ ತಿಂದಿರುತ್ತವೆ. ಚಿಗುರುಗಳು ನಸುಗೆಂಪು ಬಣ್ಣವಾಗಿದ್ದು ನಿಧಾನಕ್ಕೆ ತಿಳಿ ಹಸಿರು ಬಣ್ಣಕ್ಕೆ ತಿರುಗಿ ಬಲಿತಂತೆ ಗಾಢ ಹಸಿರಾಗುತ್ತವೆ. ಹಕ್ಕಿಗಳಿಗೆ ಔತಣ ನೀಡುವ ಈ ನಿಷ್ಪಾಪಿ ಸಸ್ಯದ ಕಾಂಡವು ಮನುಷ್ಯನ ಹಾವಳಿ ಇರದ ಕಡೆ ಸ್ವಲ್ಪ ದಪ್ಪವಾಗಿ ಬೆಳೆಯುತ್ತದೆ. ಅದರ ಬುಡವನ್ನು ತಲುಪಬೇಕೆಂದರೆ ಹರಸಾಹಸ ಪಡಬೇಕಾಗುತ್ತದೆ. ಆದರೆ ಇಂದು ಮಾನವ ಯಾವುದನ್ನೂ ಬಿಟ್ಟಿಲ್ಲ. ರಾಕ್ಷಸ ಗಾತ್ರದ ಯಂತ್ರಗಳಿಗೆ ಕೊಟ್ಟೆ ಮುಳ್ಳಿನ ಗಿಡ ತನ್ನ ಮುಳ್ಳುಗಳಿಂದ ಮಾಡುವುದಾದರೂ ಏನು!
        ಇನ್ನೂ ವಿಪರ್ಯಾಸವೆಂದರೆ ಈ ಕೊಟ್ಟೆ ಮುಳ್ಳಿನ ಸಸ್ಯದಲ್ಲಿ ಮಾನವನ ಅನಾರೋಗ್ಯಗಳಿಗೆ ಔಷಧಿಯಿರುವುದು. ಅದಕ್ಕಾಗಿಯೂ ಇಂದು ಈ ಗಿಡಗಳು ಸದ್ದಿಲ್ಲದೆ ಜೀವಜಗತ್ತಿನಿಂದ ಮರೆಯಾಗುತ್ತಿದೆ. ಬಾಯಿ ಹುಣ್ಣಿಗೆ, ಚರ್ಮದ ರೋಗಗಳಿಗೆ ಈ ಸಸ್ಯದ ತೊಗಟೆಯ ಕಷಾಯ ರಾಮಬಾಣವಾಗಿದೆ ಎಂದರಿತ ಕ್ಷುದ್ರ ಜಂತುವಾದ ಮಾನವ ಅದರ ಗೆಲ್ಲುಗಳನ್ನು ಸವರಿ ಬುಡದ ಸಿಪ್ಪೆಯನ್ನು ಮನಸೋ ಇಚ್ಛೆ ಕೆತ್ತಿ ಕೆತ್ತಿ ಗಿಡವೇ ಸಾಯುವಂತೆ ಮಾಡುತ್ತಾನೆ. ಮತ್ತೆ ಇನ್ನೊಂದು ಗಿಡ ಹುಡುಕುತ್ತಾ ಮುಂದರಿಯುತ್ತಾನೆ. ಈ ಔಷಧೀಯ ಸಸ್ಯದ ಬದುಕುವ ಹಕ್ಕನ್ನೇ ಕಸಿದುಕೊಂಡು ಇಂದು ಅದರ ಹಣ್ಣುಗಳನ್ನು ಚಿತ್ರದಲ್ಲಿ ಕಾಣುವಂತಹ ಭಾಗ್ಯ ಪಡೆದಿರುವುದು ಶೋಚನೀಯವೇ ಸರಿ.
      ಈ ಸಸ್ಯದ ಬಟಾಣಿ ಕಾಳಿನಂತಿರುವ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ತೊಗಟೆಯು ಪಿತ್ತಬಾಧೆ, ಮಲಬದ್ಧತೆ, ಮೈ ತುರಿಕೆಗಳಿಗೂ ಶಮನಕಾರಿಯಾಗಿದೆ. ಅತಿಯಾದ ಬಳಕೆ ಅಡ್ಡಪರಿಣಾಮಗಳನ್ನೂ ಉಂಟುಮಾಡಬಹುದು. ಆದ್ದರಿಂದ ಮಿತವಾದ ಬಳಕೆ ಅಥವಾ ಪರಿಣತರ ಸಲಹೆಯೂ ಅತ್ಯಗತ್ಯ ಅಲ್ಲವೇ..?
    ಹಕ್ಕಿಗಳ ಮೂಲಕ ಈ ಸಸ್ಯದ ಸಂತಾನವೃದ್ಧಿ ಯಾದರೂ ನಾವು ಜತನದಿಂದ ಕಾಪಾಡುವುದೂ ಅಷ್ಟೇ ಮುಖ್ಯವಾಗಿದೆ. ಎಲ್ಲಾದರೂ ನೀವು ಗಿಡವನ್ನು ಗುರುತಿಸಿದರೆ ಹಣ್ಣುಗಳನ್ನು ತಿನ್ನಲು ಮರೆಯದಿರಿ. ಮಳೆ ಹನಿಗಳು ಬಿದ್ದರೆ ಗಿಡದ ಎಲ್ಲಾ ಕಾಯಿಗಳು ಹಣ್ಣಾಗಿ ಒಂದು ವಾರದೊಳಗೆ ಮುಗಿಯಬಹುದು. ಹಣ್ಣು ತಿನ್ನಬೇಕೆನ್ನುವವರು ಪ್ರಕೃತಿಯ ಮೇಲೆ ಗಮನವಿಟ್ಟಿರಬೇಕು.
      ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಭೇಟಿಯಾಗೋಣ.. ಏನಂತೀರಾ?
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article