-->
ಹಕ್ಕಿ ಕಥೆ : ಸಂಚಿಕೆ - 116

ಹಕ್ಕಿ ಕಥೆ : ಸಂಚಿಕೆ - 116

ಹಕ್ಕಿ ಕಥೆ : ಸಂಚಿಕೆ - 116
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
    ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಕಳೆದವಾರ ಶೋಭಾ ಮೇಡಂ ಒಂದು ಹಕ್ಕಿಯ ಫೋಟೋ ಕಳುಹಿಸಿಕೊಟ್ಟಿದ್ದರು. ಎಲ್ಲಿ ನೋಡ್ಲಿಕ್ಕೆ ಸಿಕ್ಕಿತು ಮೇಡಂ ಅಂತ ಕೇಳಿದೆ. ನಮ್ಮ ಊರಾದ ಮಡಿಕೇರಿಗೆ ಹೋಗಿದ್ದೆ, ಅಲ್ಲಿ ನಮ್ಮ ಮನೆಯಲ್ಲಿ ಇತ್ತು ಅಂತ ಹೇಳಿದ್ರು. ನೋಡಲು ಗುಬ್ಬಚ್ಚಿ ಗಾತ್ರದ ಹಕ್ಕಿ. ಮೈಪೂರ್ತಿ ಕಂದು ಬಣ್ಣ. ಎಂತಹ ಕಂದು ಬಣ್ಣ ಅಂದರೆ ಮಣ್ಣು ಮೆತ್ತಿದ ಗೋಡೆಗೆ ಒಲೆಯಿಂದ ಬರುವ ಹೊಗೆ ತಾಗಿ ಕಪ್ಪು ಲೇಪ ಉಂಟಾದಾಗ ಬರುವ ಕಂದು ಬಣ್ಣ, ಪುಟ್ಟ ಬಾಲ. ಅವರು ಕಳಿಸಿದ ಹಕ್ಕಿಯ ಫೋಟೋ ನೋಡಿದಾಗ ನಾನು ಮೊದಲನೆಯ ಬಾರಿ ಆ ಹಕ್ಕಿಯನ್ನು ನೋಡಿದ ನೆನಪಾಯ್ತು.
     ಕುದುರೆಮುಖ ಶಿಖರಕ್ಕೆ ಚಾರಣ ಹೋಗಬೇಕಾದರೆ ಕಳಸದ ಹತ್ತಿರ ಸಂಸೆಗೆ ಹೋಗಬೇಕು. ಅಲ್ಲಿಂದ ಮುಳ್ಳೋಡಿ ಎಂಬ ಹಳ್ಳಿಗೆ ಹೋಗಿ ಅಲ್ಲಿಂದ ಚಾರಣ ಆರಂಭಿಸಬೇಕು. ಅದೇ ದಾರಿಯಲ್ಲಿ ಬಾಮಿಕೊಂಡ ಎಂಬ ಒಂದು ಸುಂದರವಾದ ಜಾಗ ಇದೆ. ಬಾಮಿಕೊಂಡದಲ್ಲಿ ನನ್ನ ಸ್ನೇಹಿತರಾದ ಅಭಿನಂದನರು, ಶೋಲಾ ಹೈಟ್ಸ್ ಎಂಬ ತಮ್ಮದೇ ಹೋಂಸ್ಟೇ ನಡೆಸುತ್ತಾರೆ. ಶೋಲಾ ಅರಣ್ಯದ ಬುಡದಲ್ಲೇ ಇರುವ ಅವರ ಜಾಗದಲ್ಲಿ ಚಂದದ ಮನೆಯನ್ನು ಕಟ್ಟಿ ಪರಿಸರವನ್ನು ಸವಿಯುವ ಆಸಕ್ತರಿಗೆ ಉಳಿಯುವ ಅವಕಾಶ ಕಲ್ಪಿಸುತ್ತಾರೆ. ಒಮ್ಮೆ ಅಕ್ಟೋಬರ್ ರಜೆಯಲ್ಲಿ ನಾನು ಕುಟುಂಬ ಸಮೇತನಾಗಿ ಅಲ್ಲಿ ಹೋಗಿ ಉಳಿದುಕೊಂಡಿದ್ದೆ. ಸುತ್ತಲೂ ಗುಡ್ಡಗಳಲ್ಲಿ ಆವರಿಸಿದ ಹುಲ್ಲುಗಾವಲು, ಮುಂದೆ ಸೋಮಾವತೀ ನದಿಯ ಕಣಿವೆ, ಸೂರ್ಯೋದಯದ ಹೊತ್ತು ಕಣಿವೆಯಲ್ಲಿ ತುಂಬಿದ ಮಂಜು ನಿಧಾನವಾಗಿ ಮುಂದೆ ಸಾಗುವುದನ್ನು ನೋಡುತ್ತಾ ನಿಲ್ಲುವುದೇ ಚಂದದ ಅನುಭವ.
      ಅವರ ಮನೆಯ ಮುಂದಿನ ಅಂಗಳದಲ್ಲಿ ಒಂದು ಜೊತೆ ಪುಟಾಣಿ ಹಕ್ಕಿಗಳು ಹಗಲಿಡೀ ಹಾರಾಡುತ್ತಿದ್ದವು. ಸುಮಾರು ಹೊತ್ತು ಅವುಗಳನ್ನೇ ನೋಡುತ್ತಿದ್ದ ಮಗಳು ಹೇಳಿದ್ಲು ಅಪ್ಪಾ ಅವು ಅಲ್ಲಿ ಮಾಡಿನ ಕೆಳಗೆ ಆಗಾಗ ಹೋಗಿ ಕುಳಿತು ಬರುತ್ತವೆ. ಮಾಡಿನ ಕೆಳಗೆ ಅವಳು ತೋರಿಸಿದ ಜಾಗ ನೋಡಿದಾಗ ಒಂದು ಪುಟಾಣಿ ಬುಟ್ಟಿಯನ್ನು ಅರ್ಧಕ್ಕೆ ಕತ್ತರಿಸಿ ಗೋಡೆಗೆ ಅಂಟಿಸಿದಂತೆ ಕಾಣುತ್ತಿತ್ತು. ಆದರೆ ಬುಟ್ಟಿ ಬಿದಿರಿನಿಂದ ಮಾಡಿದ್ದು ಅಂದುಕೊಳ್ಳಬೇಡಿ. ಈ ಹಕ್ಕಿ ಗೂಡು ಮಾಡುವ ವಿಧಾನ ಬಹಳ ವಿಶೇಷ. ಇದು ಮಳೆಗಾಲದಲ್ಲಿ ಸಿಗುವ ಒದ್ದೆಮಣ್ಣನ್ನು ತನ್ನ ಕೊಕ್ಕಿನಲ್ಲಿ ತಂದು ಅದನ್ನು ಹುಲ್ಲು, ನಾರು ಅಥವಾ ಗರಿಗಳನ್ನು ಬಳಸಿ ಸ್ವಲ್ಪ ಸ್ವಲ್ಪವೇ ಗೋಡೆಗೆ ಅಂಟಿಸಿ ಅರ್ಧಬುಟ್ಟಿಯ ಆಕಾರದ ಗೂಡನ್ನು ಮಾಡುತ್ತವೆ. ನೋಡ್ಲಿಕ್ಕೆ ಒಂದೇ ರೀತಿ ಕಾಣುವ ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಸೇರಿ ಎತ್ತರವಾದ ಪರ್ವತದ ತುದಿಯ ಬಂಡೆಗಳ ಕೆಳಗೆ, ಗುಹೆಗಳಲ್ಲಿ, ಪಾಳುಬಿದ್ದ ಕೋಟೆಗಳಲ್ಲಿ ಮಾತ್ರವಲ್ಲ ಮನೆಗಳ ಮಾಡಿನ ಅಡಿಯಲ್ಲಿ ನೀರುಬೀಳದ ಜಾಗ ನೋಡಿ ಗೂಡನ್ನು ಮಾಡುತ್ತವೆ. ಸದಾ ಕಾಲ ಹಾರಾಡುತ್ತಲೇ ಸಣ್ಣ ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನುವ ಬಾನಾಡಿ ಮತ್ತು ಕವಲುತೋಕೆ ಹಕ್ಕಿಗಳಿಗೆ ಹತ್ತಿರದ ಸಂಬಂಧಿಗಳು. ಹಿಂದೆ ಮಣ್ಣನ್ನು ಹದಮಾಡಿ, ಅದಕ್ಕೆ ಚೂರುಚೂರು ಮಾಡಿದ ಹುಲ್ಲನ್ನು ಸೇರಿಸಿ ಮಣ್ಣಿನ ದೊಡ್ಡ ದೊಡ್ಡ ಗಡಿಗೆಗಳನ್ನು ತಯಾರು ಮಾಡುತ್ತಿದ್ದರಂತೆ. ಈ ರೀತಿ ಪಾತ್ರೆ ಮಾಡುವ ವಿಧಾನವನ್ನು ಮಾನವ ಈ ಹಕ್ಕಿಗಳಿಂದಲೇ ಕಲಿತಿರಬಹುದು.
      ಜೋರಾಗಿ ಮಳೆ ಬಂದಾಗ ಮಾಡಿನ ಕೆಳಗೆ ಒದ್ದೆಯಾಗದಂತೆ ಕುಳಿತ ಈ ಪುಟಾಣಿ ಹಕ್ಕಿಗಳು ಅಂತೂ ಸರಿಯಾಗಿ ನೋಡ್ಲಿಕ್ಕೆ ಸಿಕ್ಕಿದವು. ಅವುಗಳ ಸೋದರ ಸಂಬಂಧಿಗಳು ನಿಮ್ಮ ಆಸುಪಾಸಿನಲ್ಲೂ ಗೂಡುಕಟ್ಟುತ್ತಿರಬಹುದು. 
ಕನ್ನಡದ ಹೆಸರು: ಕಂದುಗಪ್ಪು ಕಮರಿತೋಕೆ
ಇಂಗ್ಲೀಷ್ ಹೆಸರು: Dusky Crag Martin 
ವೈಜ್ಞಾನಿಕ ಹೆಸರು: Ptyonoprogne concolor
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.           
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article