-->
ಸ್ಫೂರ್ತಿಯಾಗಿರುವ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 03

ಸ್ಫೂರ್ತಿಯಾಗಿರುವ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 03

ಶಿಕ್ಷಕರ ದಿನಾಚರಣೆಯ ವಿಶೇಷ - 2023
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು
ಹಿರಿಯರ ಬರಹಗಳು : ಸಂಚಿಕೆ - 03


      “Destiny of India is being shaped in our classrooms”.  ಅಂದರೆ  “ಭಾರತದ ಭವಿಷ್ಯವು (ಅದೃಷ್ಟ) ನಮ್ಮ  ಶಾಲಾ ಕೊಠಡಿಗಳಲ್ಲಿ  ರೂಪಿತವಾಗುತ್ತಿವೆ” ಎಂದರ್ಥ.
      ಯಾವುದೇ ದೇಶದ ಭವಿಷ್ಯವು ನಿಂತಿರುವುದು ಅಲ್ಲಿಯ ವಿದ್ಯಾವಂತ, ಪ್ರಜ್ಞಾವಂತ, ದೇಶಭಕ್ತ,  ಉತ್ತಮ ಸಂಸ್ಕಾರಯುತ ಹಾಗೂ ಮೌಲ್ಯಯುತ  ನಾಗರಿಕರಿಂದ. ಅಂತಹ ನಾಗರಿಕರನ್ನು ತಯಾರು ಮಾಡುವವರೇ ಶಾಲೆಯ ಶಿಕ್ಷಕರು. ಇಂತಹ  ಗುರುಶ್ರೇಷ್ಠರೆನಿಸಿ ನಮ್ಮ ದೇಶದ 2ನೇ ರಾಷ್ಟ್ರ ಪತಿಯಾಗಿ ಇಡೀ ದೇಶದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ರೂವಾರಿಯಾಗಿದ್ದ  ಎಸ್ ರಾಧಾಕೃಷ್ಣನ್ ರವರ ಹುಟ್ಟುಹಬ್ಬದ  ಸ್ಮರಣಾರ್ಥ  ಶಿಕ್ಷಕರ ದಿನಾಚರಣೆಯೆಂದು  ಪ್ರತಿ ವರ್ಷ  ಸೆಪ್ಟೆಂಬರ  5 ರಂದು ಆಚರಿಸಲಾಗುತ್ತದೆ.  ಹಾಗೆಯೇ  ಶಿಕ್ಷಣ  ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರನ್ನು  ಗುರುತಿಸಿ ಗೌರವಿಸಲಾಗುತ್ತದೆ.
     “ಮಕ್ಕಳಿಸ್ಕೂಲ್ ಮನೇಲಲ್ವೇ” ಎಂದವರು  ನಾಟಕದ ಪಿತಾಮಹ ರೆನಿಸಿದ  ಟಿ. ಪಿ .ಕೈಲಾಸಂ ರವರು. ಅವರಾಡುವ ಈ ಮಾತುಗಳು  ಎಲ್ಲಾ ಮಾತಾಪಿತರಿಗೆ ಹಾಗೂ ಹಿರಿಯರಿಗೆ ಒಂದು ಮಹತ್ವದ ಸಂದೇಶ ಮತ್ತು ಎಚ್ಚರಿಕೆ. ಹುಟ್ಟುತ್ತಾ  ಒಂದು ಮಾಂಸದ ಮುದ್ದೆಯಂತಿರುವ  ಮಗುವಿಗೆ  ‘ಅಮ್ಮಾ‘ ಎಂಬ ಮೊದಲಕ್ಷರವನ್ನು  ಕಲಿಸಿಕೊಟ್ಟ ಮೊದಲ ಗುರು ತಾಯಿಯಾದರೆ, ಭೂಮಿಯ ಹಾಗೆ ರಕ್ಷಣೆಯ ಆಸರೆ ನೀಡಿ ಜವಾಬ್ದಾರಿಯುತ, ಸ್ವಾಭಿಮಾನದ ಜೀವನದ ಪರಿಚಯ ತಂದೆಯಿಂದ ಕ್ರಮೇಣ ದೊರೆಯುವುದು. ಮುಂದೆ ಸರಿತಪ್ಪುಗಳೇನೆಂದು ತಿಳಿಯದ ಆ ಮಗುವಿಗೆ ಸಂಪೂರ್ಣ ಶಿಕ್ಷಣ ವೆಂಬ ಸಂಸ್ಕಾರ  ನೀಡಿ ಪರಿಪೂರ್ಣವಾದ ವ್ಯಕ್ತಿಯನ್ನಾಗಿ ರೂಪಿಸುವ ‘ಗುರು‘ ತರ ಜವಾಬ್ದಾರಿ  ಶಿಕ್ಷಕರದ್ದು.

        ಶಿಲ್ಪಿಯೊಬ್ಬ ಸುಂದರ ಶಿಲ್ಪವನ್ನು  ರಚಿಸಬೇಕಾದ್ರೆ  ತನಗೆ ಲಭ್ಯವಿರುವ ಶಿಲೆ (ಕಲ್ಲು) ಗಳಲ್ಲಿ ಅತ್ಯುತ್ತಮವಾದ  ಮೂರ್ತಿಮಾಡಲು ಸಾಧ್ಯವಿರುವ, ತಾನು ಕೊಡುವ ಉಳಿ ಏಟುಗಳನ್ನು ತಾಳಿ ಅದಕ್ಕೊಂದು ಮೂರ್ತ ರೂಪ ತರುವಂತಹ ಶಿಲೆಯನ್ನು ಆಯ್ಕೆ ಮಾಡುತ್ತಾನೆ. ಅದಕ್ಕೆ ಆತನಿಗೆ ಅವಕಾಶ, ಸ್ವಾತಂತ್ರ್ಯ ಎರಡೂ  ಇವೆ. ಆದರೆ ಶಿಕ್ಷಕರೆಂಬ ವಿದ್ಯಾರ್ಥಿಗಳನ್ನು ರೂಪಿಸುವ ಶಿಲ್ಪಿಗಳಿಗೆ ಶಿಲೆಗಳೆಂಬ  ವಿದ್ಯಾರ್ಥಿಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯ ವಾಗಲಿ, ಆಯ್ಕೆಯಾಗಲಿ ಇಲ್ಲ.   ತನ್ನ ಬಳಿಗೆ ಬರುವ ಎಲ್ಲಾ ತರದ ಮಕ್ಕಳಿಗೆ  ತಮ್ಮ  ಸಾಮರ್ಥ್ಯಗಳಿಗೆ  ಅನುಗುಣವಾಗಿ ಅವರ ಕೊರತೆಗಳನ್ನು ಸರಿಪಡಿಸಿ, ಅಜ್ಞಾನವೆಂಬ  ತಮಸ್ಸನ್ನು ಕಳೆದು ಶಿಕ್ಷಣ ವೆಂಬ ಬೆಳಕು ನೀಡುವ ಸಂದರ್ಭದಲ್ಲಿ  ಅವರ ‘ಶಿಕ್ಷೆ‘ ಗಳೆಂಬ  ಉಳಿಯ ಏಟುಗಳನ್ನು  ಕೊಡಬೇಕಾಗುತ್ತದೆ. ಅದನ್ನು ಅಪಮಾನವೆಂದು ತಿಳಿಯದೆ ತಡೆಯುವ, ಮೆಟ್ಟಿನಿಲ್ಲುವ, ಆತ್ಮ ಬಲ, ಮಾನಸಿಕ ದೃಢತೆಯನ್ನು, ದೈಹಿಕ ಶಕ್ತಿಯನ್ನೂ ಅವರಲ್ಲಿ  ಮೇಳೈಸುವಂತೆ  ಮಾಡಿ, ಉತ್ತಮ ಶಿಲ್ಪವನ್ನು ರಚಿಸಿ ಅದಕ್ಕೆ ಜೀವಂತಿಕೆಯನ್ನು ನೀಡುವವರು ನಿಜವಾದ ಶಿಕ್ಷಕರು.
     ಇಂತಹ ಅಪೂರ್ವ  ಶಿಕ್ಷಕರನ್ನು  ಪ್ರಾಥಮಿಕ  ಹಂತದಿಂದ  ಕಾಲೇಜು  ಹಂತದವರೆಗೂ  ಪಡೆದ  ಭಾಗ್ಯ ಶಾಲಿ ವಿದ್ಯಾರ್ಥಿನಿ ನಾನು ಎನ್ನಲು  ಹೆಮ್ಮೆಯೆನಿಸುತ್ತದೆ. ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಮುಡಿಪು, ಉಳ್ಳಾಲ  ತಾಲೂಕು (ಹಿಂದೆ ಬಂಟ್ವಾಳ  ತಾಲೂಕು), ಇಲ್ಲಿ ನಾಲ್ಕು ದಶಕಗಳ ಪೂರ್ವದಲ್ಲಿ  ನನ್ನ  ಪ್ರಾಥಮಿಕ  ಶಿಕ್ಷಣ ಪೂರೈಸಿದೆ. ಸುಮಾರು 5–6 ಹಳ್ಳಿಗಳಿಗಿದ್ದ  ಏಕೈಕ ಶಾಲೆ ಇದಾಗಿತ್ತು.  ಸರಿಯಾದ ರಸ್ತೆ  ಅಥವಾ ಬಸ್ಸಿನ ವ್ಯವಸ್ಥೆಗಳಿಲ್ಲದ ಕಾಲವಾಗಿದ್ದು   4–5 ಕಿ.ಮೀ. ನಡೆದುಕೊಂಡು ಶಾಲೆಗೆ  ಹೋಗುತ್ತಿದ್ದರೂ ಅದು ದೂರ  ಅಥವಾ ಆಯಾಸ ಎನಿಸುತ್ತಿರಲಿಲ್ಲ. ಕಾರಣ ಅಲ್ಲಿ ನಮ್ಮನ್ನು ಹೆತ್ತವರಂತೆ  ಪ್ರೀತಿಸಿ,  ಕಾಳಜಿ  ತೋರಿಸುತ್ತಿದ್ದ  ಅತ್ಯುತ್ತಮ ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆ. ಶಿಸ್ತಿನ ಸಿಪಾಯಿಯಂತಿದ್ದು ಇಂಗ್ಲಿಷ್ ಬೋಧಿಸುತ್ಯಿದ್ದ  ಹೆಡ್ ಮಾಸ್ತರ್ ಪಿ. ರಾಮ ಮೇಸ್ಟರು, ಸದಾ ನಗು  ಮೊಗದ, ತಾಳ್ಮೆಯಿಂದ  ಹಿಂದಿ ಕಲಿಸುತ್ತಿದ್ದ  ಲೀಲಾ ಟೀಚರ್, ಕಿವಿ ಹಿಂಡಿಯಾದರೂ ಕನ್ನಡ ಅಕ್ಷರಗಳನ್ನು  ಬರೆಯಲು, ಓದಲು  ಕಲಿಸಿದ ಶಂಕರಮೇಸ್ಟರು,  ತಪ್ಪು ಮಾಡಿದ್ರೆ  ತಲೆಗೆ ಕುಟ್ಟಿಕೊಟ್ಟು ವಿಜ್ಞಾನ ಪಾಠ ಗಟ್ಟಿ ಮಾಡುತ್ತಿದ್ದ  ತಿಮ್ಮಪ್ಪ ಸರ್, ಹಾಗೂ ಇತರ ಎಲ್ಲಾ ಶಿಕ್ಷಕರೂ  ಸ್ಪೂರ್ತಿಯ ಚಿಲುಮೆ. ಅದರೆ ಇವರೆಲ್ಲರ ಜೊತೆಗೆ ನನ್ನ  ಮೇಲೆ ತುಂಬಾ ಸ್ಪೂರ್ತಿ  ಹಾಗೂ  ಪ್ರಭಾವ ಬೀರಿದವರು ಗಣಿತ ಶಿಕ್ಷಕರಾದ ಕೆ.ರಾಮ ಮಾಸ್ಟರ್ ಮತ್ತು ಸಮಾಜ ಕಲಿಸುತ್ತಿದ್ದ  ಸುಧಾ  ಟೀಚರು. ನಾನು ಶಿಕ್ಷಕಿಯಾಗುವ ಕನಸು  ಮೂಡಲು ಇವರೇ ಪ್ರೇರಣೆ ಎನ್ನಬಹುದು.
ಬಾಲ್ಯ ಸಹಜವಾಗಿ ನನ್ನಲ್ಲಿ ಅತಿ ತುಂಟತನವಿತ್ತು.  ಐವರು ಗೆಳತಿಯರ ಗುಂಪಿಗೆ ನಾನೇ ನಾಯಕಿ. ಹಲವು ಬಾರಿ ಈ ಕಾರಣಕ್ಕಾಗಿಯೇ ಗಣಿತದ ಮೇಸ್ಟರಿಂದ  ಬೆತ್ತದ ರುಚಿ  ನೋಡಿದ್ದಿದೆ.  ನಾಲ್ಕನೆಯ ತರಗತಿಯಲ್ಲಿರುವಾಗ ಒಂದು ದಿನ ಬೆಳಗ್ಗಿನ 2ನೇ ಅವಧಿಯ ನಂತರ ರೀಸಸ್ ಗೆ ಹೋಗಲು ಸಣ್ಣ ಬ್ರೇಕ್ ಇತ್ತು. ಶಾಲೆಯಿಂದ ಸ್ವಲ್ಪ  ದೂರ ಬಾಗಿಲು ಇಲ್ಲದ ಎರಡು ಕಡೆ ಮಾತ್ರ  ಸಾಲು ಇರುವ, ಮೇಲ್ಛಾವಣಿ ಇಲ್ಲದ  ಶೌಚಾಲಯ. ಇಂಟರ್ವಲ್  ಕಡಿಮೆ ಇದ್ದು ಕೆಲವು ಹೆಣ್ಣು ಮಕ್ಕಳು ಅಲ್ಲಿಯೇ ಹತ್ತಿರ ಇರುವ ಮಾವು, ಗೇರು ಮರ ಗಿಡಗಳ ಸಂದಿಯಲ್ಲಿ ತಮ್ಮ  ‘ಕಾರ್ಯ‘ ಮುಗಿಸುತ್ತಿದ್ದರು. ಅಲ್ಲಿದ್ದ  ಮಾವಿನ ಮರದಲ್ಲಿದ್ದ  ಕಾಯಿಗಳಿಂದ  ಆಕರ್ಷಿತರಾಗಿ  ನಾವು ಕಾಯಿ ಕೀಳಲು ನಿರ್ಧರಿಸಿದೆವು. ಮರ ಸ್ವಲ್ಪ  ದೊಡ್ಡದಿದ್ದರಿಂದ ಗೆಳತಿಯರು ಯಾರೂ ಮರ ಏರಲಿಲ್ಲ. ನಾನೇ ಕಷ್ಟ ಪಟ್ಟು  ಏರಿ ಕಾಯಿಗಳನ್ನು ಕಿತ್ತಾಕುತ್ತಿದ್ದೆ. ಅವರು ಹೆಕ್ಕುತ್ತಿದ್ದರು. ಸಮಯ ಸರಿದದ್ದೇ ಗೊತ್ತಾಗಲಿಲ್ಲ . ಮುಂದಿನ  ತರಗತಿ ಗಣಿತದ ಕೆ. ರಾಮ ಮೇಸ್ಟರದ್ದು. ಕ್ಲಾಸಿನಲ್ಲಿ ನಾವಿಲ್ಲದ್ದು ನೋಡಿ ಚಬುಕಿನ ಅಡರಿ ನೊಂದಿಗೆ ಬಂದಾಗ ಕೆಳಗಿದ್ದ ಗೆಳತಿಯರು ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದರು.   ‘ಗಂಡುಬೀರಿ’ ಎಂದು ಬಂದು ಎರಡು ಏಟು ಕೊಟ್ಟಾಗ ನಾನು ಕ್ಲಾಸಲ್ಲಿ.  ಅಲ್ಲಿ ಬೆಂಚಿನ ಮೇಲೆ ಪ್ರತಿಷ್ಠಾಪನೆ  ಜೊತೆಗೆ ಸಹಸ್ರ ನಾಮಾರ್ಚನೆ. ಇಡೀ ಕ್ಲಾಸ್ ನನ್ನನ್ನೇ ನೋಡುತ್ತಿತ್ತು. ಆದಿನ ತುಂಬ ದುಃಖ, ಅವಮಾನ ಆಯಿತು. ಸಂಜೆ ಸ್ಟಾಫ್ ರೂಮಿಗೆ ಕರೆಸಿ ನನಗೆ ಶಿಸ್ತು, ಸಮಯಪ್ರಜ್ಞೆ, ನಡತೆ ಮತ್ತು ಕಲಿಕೆಯ ಮಹತ್ವದ  ಬಗ್ಗೆ ಕೆ. ರಾಮ ಮಾಸ್ಟರ್ ನಯವಾಗಿಯೇ  ತಿಳಿಹೇಳಿದರು. ಅಂದೇ  ಇನ್ನು ಮುಂದೆ ಇಂತಹ  ತಪ್ಪು ಮಾಡುವುದಿಲ್ಲ ಎಂದು ನಿರ್ಧರಿಸಿದೆ.  ಮುಂದೆ ಕ್ಲಾಸ್ ಲೀಡರ್  ಮಾಡಿದ್ದು, ಶಾಲಾ ಸಂಸತ್ತಿನಲ್ಲಿ  ಆರೋಗ್ಯ  ಮಂತ್ರಿಯಾದದ್ದು,  ಆಟೋಟಗಳಲ್ಲಿ  ಸದಾ ಮುಂದಿದ್ದು  ಟೀಮ್ ಲೀಡರ್ ಆದದ್ದು  ಎಲ್ಲವೂ ನಂಗೆ  ಶಿಸ್ತು , ನಾಯಕತ್ವ ಗುಣ ಮತ್ತು ಜವಾಬ್ದಾರಿಯುತವಾಗಿ  ವರ್ತಿಸಲು ಪ್ರೇರಣೆಯಾಯಿತು.                                                     
       ಹಾಗೆಯೇ ಸುಧಾ  ಟೀಚರ್ ಬಹಳ ಚೆನ್ನಾಗಿ ಸಮಾಜ ಪಾಠ ಮಾಡುತ್ತಿದ್ದರು. ಮರುದಿನ ಅವರು ಕೇಳುವ ಪ್ರಶ್ನೆಗೆ ಸರಿ ಉತ್ತರ ನೀಡದಿದ್ದರೆ  ಉಚಿತ ಏಟುಗಳು ಮತ್ತು 10 ಬಾರಿ ಬರೆಯಲು  ಆರಂಭದಲ್ಲಿ. ಅದೇ ತಪ್ಪು ಮರುಕಳಿಸಿದ್ದರೆ 20 ಸಲ. ಅದನ್ನು ತಪ್ಪಿಸಲು ಓದಿ ರೆಡಿಯಾಗಿ   ಹೋಗುತ್ತಿದ್ದೆ. ನಾನು, ನನ್ನ  ಅಕ್ಕ ಮತ್ತು ಸುಧಾ ಟೀಚರ್ ಒಟ್ಟಿಗೇ ಸಂಜೆ ಮನೆಗೆ  ಹೋಗುವುದು . ಆಗ ಐಸ್ ಕ್ಯಾಂಡಿ, ತಿಂಡಿ ತೆಗೆಸಿಕೊಡುತ್ತಿದ್ದರು. ದಿನಾ ಮುಡಿಪು ಬಸ್ಟಾಂಡ್  ಹತ್ತಿರ ವಾಸಣ್ಣನ ಅಂಗಡಿಯಿಂದ ಉದಯವಾಣಿ ಪತ್ರಿಕೆ ನಾನೇ ತಂದು ಕೊಡುವುದು ಅವರಿಗೆ. ಇದೆಲ್ಲಾ ನನಗೆ   ಓದುವ ಹವ್ಯಾಸ ಬೆಳೆಸಿದವು. ಎಲ್ಲಾ ಸ್ಪರ್ಧೆಗಳಲ್ಲಿ  ಸ್ಪರ್ಧಿಸಲು ಪ್ರೋತ್ಸಾಹಿಸುತ್ತಿದ್ದರು. 6ನೇ ಕ್ಲಾಸಿನಲ್ಲಿರುವಾಗ  ಅವರು ‘ಮಕ್ಕಳ ದಿನಾಚರಣೆ‘ ಗೆ  ಇಂಗ್ಲಿಷ್ ನಲ್ಲಿ ಭಾಷಣ ಬರೆದು ಕೊಟ್ಟಿದ್ದು,  ನನಗೆ ಎಲ್ಲಾ ಮರೆತು ಒಂದು ವಾಕ್ಯವು ಹೇಳಿರಲಿಲ್ಲ. ಆದರೆ ಅವರು ಒಂದು ಮಾತೂ  ಹೇಳದೇ “ಮುಂದಿನ ವರ್ಷ ಚೆನ್ನಾಗಿ  ಮಾಡು “  ಎಂದಾಗ ನಂಗೆ ನನ್ನ ಬಗ್ಗೆ ಬೇಸರವಾಗಿತ್ತು. ಆದರೆ ಹಠ ಹಿಡಿದು ಮುಂದಿನ  ವರ್ಷ  ಚೆನ್ನಾಗಿ ಭಾಷಣ ಮಾಡಿ  ಬಹುಮಾನ ಪಡೆದಿದ್ದೆ ಸುಧಾ ಟೀಚರ್  ಪ್ರೇರಣೆಯಿಂದ. ಶಾಲೆಯಲ್ಲಿ ಅತಿ ಏಟುಗಳನ್ನು  ತಿಂದದ್ದು  ಹಾಗೂ ಬುದ್ಧಿಮಾತು ಕೇಳಿಸಿಕೊಂಡಿದ್ದೂ , ಕಾಳಜಿ , ಪ್ರೀತಿ, ಸ್ಪೂರ್ತಿ  ಪಡೆದದ್ದೂ ಈ ಇಬ್ಬರು ಶಿಕ್ಷಕರಿಂದ. ನಮಗೆ ಪರೀಕ್ಷೆಗಾಗಿ ಮಾತ್ರ ಪಾಠ ಮಾಡದೆ ಬದುಕಿಗಾಗಿ  ಪಾಠ ಮಾಡಿದವರು. ಹಾಗೆಯೆ ಶಿಕ್ಷಣ ಎನ್ನುವುದು ಕೇವಲ ಅಂಕ ತೆಗೆದುಕೊಂಡು ಪಾಸಾಗುವುದಲ್ಲ.  ದೈಹಿಕ( Hand),  ಬೌದ್ಧಿಕ (Head), ನೈತಿಕ ,   ಆಧ್ಯಾತ್ಮಿಕ ಹಾಗೂ ಹೃದಯವಂತಿಕೆ  (Heart)  ವಿಕಸನ ಹೊಂದಿ  ನಮ್ಮ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಯಾಗುವುದೂ  ಮುಖ್ಯ.. ಬದುಕಿನಲ್ಲಿ  ಸದ್ವರ್ತನೆ,  ಸತ್ಯ, ಪ್ರೇಮ, ಅಹಿಂಸೆ, ತ್ಯಾಗ, ಶಾಂತಿ, ಗೌರವ, ದಯೆ, ವಿಧೇಯತೆ, ಕ್ಷಮೆ , ಪರೋಪಕಾರಗಳಂತಹ  ಉನ್ನತವಾದ  ಮೌಲ್ಯಗಳನ್ನು  ಕೇವಲ ಉಪದೇಶಿಸದೇ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತೋರಿಸಿಕೊಟ್ಟವರು.  ವಿದ್ಯಾಭ್ಯಾಸ ಮುಗಿಸಿ ಶಿಕ್ಷಣಕ್ಷೇತ್ರದಿಂದ  ಹೊರಗಿನ ಸಮಾಜಕ್ಕೆ  ಬಂದ  ಮೇಲೆ ನಿಸ್ವಾರ್ಥತೆಯಿಂದ, ಸೇವಾ  ಮನೋಭಾವದಿಂದ  ದುಡಿದರೆ ಮಾತ್ರ  ಕಲಿತ ವಿದ್ಯೆಯೂ ಸಾರ್ಥಕ ಎಂದು ತೋರಿಸಿಕೊಟ್ಟವರು  ನನ್ನ ಹೆಮ್ಮೆಯ  ಗುರುಗಳು. ಅವರಿಗೆ ಯಾವುದೇ ಪ್ರಶಸ್ತಿಗಳು ಬರದೇ ಇದ್ದರೂ ಸಾವಿರಾರು  ಉತ್ತಮ ಪ್ರಜೆಗಳನ್ನು  ರೂಪಿಸಿ  ಈ ದೇಶಕ್ಕೆ  ಆರ್ಪಿಸಿದ ತೃಪ್ತಿ , ಕೀರ್ತಿ ಅವರಿಗಿದೆ.  ದೇಹ ಅಳಿದರೂ  ಎಂದೆಂದಿಗೂ ಶಿಷ್ಯವರ್ಗದ  ಹೃದಯದಲ್ಲಿ  ಶಾಶ್ವತ ಸ್ಥಾನ ಪಡೆಯುವುದು ಎಲ್ಲಾ ಪ್ರಶಸ್ತಿ , ಪುರಸ್ಕಾರಗಳಿಗಿಂತಲೂ   ಮಿಗಿಲು. ಶ್ರೀ ಗುರುಭ್ಯೋ  ನಮಃ            

............................ ಎ. ಪೂರ್ಣಿಮಾ  ಕಾಮತ್ ಇತಿಹಾಸ ಉಪನ್ಯಾಸಕಿ           
ಸರಕಾರಿ ಪದವಿಪೂರ್ವ ಕಾಲೇಜು
ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ  ಜಿಲ್ಲೆ
ಮೊ. ನಂ.  9535337035    
*****************************************

       ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರುತ್ತಾ, ನನ ಬದುಕಿನಲ್ಲಿ ಸುಮಾರು ಹತ್ತು ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕನಾಗಿರಲು ಕಾರಣ ನನ ಪ್ರಾಥಮಿಕ ಶಾಲಾ ಶಿಕ್ಷಕರು. ಅದರಲ್ಲೂ ಅಕ್ಷರ ಜ್ಞಾನ ನೀಡಿದ ಒಂದನೇ ತರಗತಿ ಶಿಕ್ಷಕರಾದ ವಸಂತಿ ಟೀಚರ್, ಪ್ರಬಂಧ ಲೇಖನ ಹಾಗೂ ಕಲೆಗೆ ಪ್ರೋತ್ಸಾಹ ನೀಡಿದ ಮೂರನೇ ತರಗತಿ ಶಿಕ್ಷಕರಾದ ಕುಸುಮ ಟೀಚರ್, ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಕಾರಣರಾದ ಏಳನೇ ತರಗತಿ ಜ್ಯೋತಿ ಟೀಚರ್, ಹಾಗೂ ಏಳನೇ ಇಂಗ್ಲಿಷ್ ಶಿಕ್ಷಕಿಯಾದ ಜೋಯಿಸ್ ಟೀಚರ್. ಇಂಗ್ಲಿಷ್ ಕೋಪಿಗೆ ಕೈಗಂಟಿ ಗೆ ಹೊಡೆದ ಪರಿಣಾಮವಾಗಿ ಇಂದು ನಾನು  ಇಂಗ್ಲಿಷ್ ಶಿಕ್ಷಕನಾದೆ. ಗಣಿತ ವಿಷಯದಲ್ಲಿ ಬೋರ್ಡ್ ನಲ್ಲಿ ಲೆಕ್ಕ ಮಾಡಿಸುತ್ತಾ ಹೊಡೆಯುತ್ತಿದ್ದ ಲಿಲ್ಲಿ ಟೀಚರ್, ಹೈಸ್ಕೂಲ್ ನಲ್ಲಿ ಅಕ್ಷರ ಸುಂದರತೆ ಹಾಗೂ ಅವರು ಪಾಲಿಸುತ್ತಿದ್ದ ನಿಯಮಗಳು ಅಂತಹ ಕನ್ನಡ ಶಿಕ್ಷಕರಾದ ಲಕ್ಷ್ಮಣ ಸರ್ ಹಾಗೂ ಜೀವಶಾಸ್ತ್ರ ಶಿಕ್ಷಕಿಯಾದ ನನ್ನ ನೆಚ್ಚಿನ ಶಿಕ್ಷಕಿಯಾದ ಚಂಚಲಾಕ್ಷಿ ಟೀಚರ್ ಹಾಗೂ ನನ್ನ ಇಡೀ ಬದುಕಿನಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಪ್ರತಿ ದಿನ ರಾತ್ರಿ ಕಥೆಯ ಮೂಲಕ ಸಂಸ್ಕಾರ ಕಲಿಸಿದ ನನ್ನ ಅಮ್ಮನೂ ನನ್ನ ನೆಚ್ಚಿನ ಶಿಕ್ಷಕಿ. ಹೀಗೆ ಶಾಲಾ ಶಿಕ್ಷಕರಲ್ಲದೆ ನನ್ನ ವಿದ್ಯಾರ್ಥಿಗಳೂ ಕೂಡ ಶಿಕ್ಷಕರಾಗಿ ಅನೇಕ ಅನುಭವಗಳನ್ನು ನೀಡಿದರಲ್ಲದೆ, ಇಂದು ನನ್ನ ಪಾಠ ಮಗುವಿಗೆ ತುಂಬಾ ಇಷ್ಟ ಆಗಲು ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಹಾಗೂ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು  ನನ್ನ ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ತೋರಿಸಿದ ಆ ಶಿಕ್ಷಣವೇ ಕಾರಣ ಆಗಿರುವುದು ನಿಜಕ್ಕೂ ಸಂತಸದ ಕ್ಷಣ. ಮಾತ್ರವಲ್ಲದೆ  ನನ್ನ ಬದುಕಿನಲ್ಲಿ ತುಂಬಾನೇ ಆಶ್ಚರ್ಯ ಪಡುವಂತಹ ವಿಷಯವಾಗಿದೆ. ಇವತ್ತು ನಾನು ಬೋಧಿಸುವ ಪಾಠದಲ್ಲಿ ಅವರ ಎಲ್ಲಾ ವಿಚಾರಧಾರೆಗಳನ್ನು ಹಾಗೂ ಕಲಿಸುವ ಶೈಲಿಗಳನ್ನು ಅಳವಡಿಸಿರುವುದರಿಂದ ಇಂದು ನಾನು ಶಿಕ್ಷಕ ವೃತ್ತಿಯಲ್ಲಿ ಅತೀ ಹೆಚ್ಚಿನ ತೃಪ್ತಿ ಹೊಂದಲು ಸಹಕಾರಿಯಾಗಿದೆ. ನನ್ನ ಬದುಕಿನಲ್ಲಿ ಬಂದು ನನ್ನ ಬದುಕಿಗೆ ಬೆಳಕಿನ ಹಾದಿಯನ್ನು ತೋರಿಸಲು ಕಾರಣೀಭೂತರಾದ ಮೊಂಟೆಪದವು ಶಾಲೆಯ ಎಲ್ಲಾ ಶಿಕ್ಷಕರಿಗೂ ಶಿರಸಾ ನಮಿಸುತಿದ್ದೇನೆ. ನನ್ನ ಬದುಕಿನಲ್ಲಿ ಸ್ವಂತ ಶಕ್ತಿಯನ್ನು ತುಂಬಿ ಸ್ವಾಭಿಮಾನ ಮತ್ತು ಕಷ್ಟವನ್ನು ಎದುರಿಸಬಲ್ಲ ಶಕ್ತಿ ಹಾಗೂ ಉತ್ತಮ ಹಾದಿ ತೋರಿದ ಅಂತಹ ಶಿಕ್ಷಕರನ್ನು ಪಡೆದ ನಾನೇ ಪುಣ್ಯವಂತ.     

.......................... ಬಾಲಕೃಷ್ಣ  ಮೊಂಟೆಪದವು          
ಶಿಕ್ಷಕರು
ಶ್ರೀ ರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


ಗುರು ಬ್ರಹ್ಮಾ ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಹಿಂದಿನ ಕಾಲದಲ್ಲಿ ಶ್ಲೋಕಗಳನ್ನು ಹಾಡಿ ಹೊಗಳುತ್ತಾ ಗುರುಗಳಿಗೆ ಮಹತ್ವ ಸ್ಥಾನವನ್ನು ಕೊಟ್ಟಿದ್ದಾರೆ. ಶಿಕ್ಷಕರು ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವವರು. ಒಬ್ಬ ಒಳ್ಳೆಯ ವ್ಯಕ್ತಿಯಾಗಲು ಹೇಗೆ ಎಂದು ಶಿಕ್ಷಕನು ನಮಗೆ ಕಲಿಸುತ್ತಾನೆ. ಆತನು ನಮ್ಮ ತಂದೆ ತಾಯಿಯಂತೆ ನಮಗೆ ಮಾರ್ಗದರ್ಶನ ನೀಡುತ್ತಾನೆ.
       ನಾನು ನನ್ನ ಎಲ್ಲಾ ಶಿಕ್ಷಕರನ್ನು ಪ್ರೀತಿಸುತ್ತೇನೆ, ಆದರೆ ಅವರಲ್ಲಿ ನನ್ನ ನೆಚ್ಚಿನ ಶಿಕ್ಷಕಿ ನನ್ನ ತಾಯಿ. ಅವಳು ಮೊದಲು ನನಗೆ ಹೇಗೆ ಮಾತನಾಡಬೇಕೆಂದು ಕಲಿಸಿದಳು. ಹಿರಿಯರನ್ನು ಹೇಗೆ ಗೌರವಿಸಬೇಕು ಮತ್ತು ಚಿಕ್ಕವರನ್ನು ಹೇಗೆ ಪ್ರೀತಿಸಬೇಕು ಎಂದು ಅವರು ನನಗೆ ಕಲಿಸಿದರು.
      ಅವರು ಮಾಡುವ ತ್ಯಾಗ ಎಲ್ಲಾ ಹೇಳೋಕ್ಕೆ ಆಗೋದಿಲ್ಲ. ಅವರು ನನಗೆ ಪರಿಪೂರ್ಣ ಮತ್ತು ಆದರ್ಶ ಶಿಕ್ಷಕಿ. ಶಿಕ್ಷಕರು ನಮ್ಮ ಜೀವನದ ಪ್ರಮುಖ ಭಾಗವಾಗಿದ್ದಾರೆ. ಏಕೆಂದರೆ ಅವರು ನಮಗೆ ಜ್ಞಾನವನ್ನು ದಯಪಾಲಿಸುತ್ತಾರೆ, ಮತ್ತು ನಮ್ಮ ಜೀವನದಲ್ಲಿ ಪರಿಪೂರ್ಣ ವ್ಯಕ್ತಿಯಾಗಲು ನಮಗೆ ಮಾರ್ಗದರ್ಶನ ನೀಡುತ್ತಾರೆ. ಅವರು ನಮ್ಮ ಮೂರನೇ ಫೋಷಕರು. ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯಕ್ಕೆ ಯಾವ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ.
      ನನ್ನ ಜೀವನದಲ್ಲಿ ಹಲವಾರು ಶಿಕ್ಷಕರು ಸ್ಫೂರ್ತಿಯಾಗಿದ್ದಾರೆ. ನನಗೆ ಎಲ್ಲರೂ ನೆಚ್ಚಿನವರೆ, ಅವರಲ್ಲಿ ಮೊದಲನೆಯದಾಗಿ ನನ್ನ ಜೀವನದ ಮೊದಲ ತರಗತಿಯಲ್ಲಿ ನೋಡಿದ  ನೂತನ ಶಿಕ್ಷಕಿ, ಅವರೆಂದರೆ ಪಂಚಪ್ರಾಣ. ನನ್ನ ಎರಡನೇ ತಾಯಿ. ಅವರನ್ನು ನೋಡಿದ ತಕ್ಷಣ ನಾನು ಅವರಂತೆಯೇ ಆಗಬೇಕು ಎಂದು ಆಸೆಯಾಯಿತು. ಅವರು ನೋಡಿಕೊಳ್ಳುವ ಶೈಲಿ, ಮಾತು ಎಲ್ಲವೂ ಇಷ್ಟ. ಅವರ ಮಾತು ತುಂಬಾ ಸೊಗಸಾಗಿರುತ್ತದೆ. ಅವರು ಹೇಳಿದ ಹಾಗೆ ಕೇಳೋಣ ಅನ್ನಿಸುತ್ತದೆ. ಅವರೊಂದಿಗೆ ಇದ್ದ ದಿನಗಳೆಲ್ಲ ನನ್ನ ಸುಂದರ ಕ್ಷಣಗಳು. ನಂತರ ಪ್ರಥಮ ದರ್ಜೆಗೆ ಬಂದ ಮೇಲೆ ಶಾಂತಿ ಶಿಕ್ಷಕಿ. ಅವರ ಮಾತು ಕೇಳಿದರೆ ಕೇಳುತ್ತಾನೆ ಇರೋಣ ಅನ್ನಿಸುತ್ತದೆ. ಇದ್ದರೆ ಅವರ ತರ ಇರಬೇಕು ಅನ್ನಿಸುತ್ತದೆ. ಮುಂದೆ ಒಂದು ದಿನ ಅವರ ಮಾತು ಮತ್ತು ಅವರ ನಡತೆಯಿಂದಲೇ ನಾನು ಬದಲಾಗಬಹುದು. ನನ್ನ ಜೀವನಕ್ಕೆ ಸ್ಪೂರ್ತಿಯಾಗಿರುವ ಶಿಕ್ಷಕರ ಬಗ್ಗೆ ಹೇಳಲು ಪದಗಳೇ ಸಾಲದು. ಅವರ ಬಗ್ಗೆ ಪುಸ್ತಕವೇ ಬರೆಯಬಹುದು.. ಧನ್ಯವಾದಗಳು...
............................. ಹೇಮಲತಾ ಹೆಚ್. ಎಮ್
ದ್ವಿತೀಯ ದರ್ಜೆ ಸಹಾಯಕಿ
ಡಾ. ಪಿ ದಯಾನಂದ ಪೈ ಡಾ. ಸತೀಶ್ ಪೈ
ಪ್ರಥಮ ದರ್ಜೆ ಕಾಲೇಜು, ಕಾರ್ ಸ್ಟ್ರೀಟ್
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


ಮೂಲೆಗಲ್ಲು , ಪ್ರೀತಿಯ ಜಯಂತಿ ಮೇಡಂ


ತಾಯಿಯೇ ಮೊದಲ ಗುರು ಎನ್ನುವರು
ನೀವು ಗುರುವಾದರೂ
ಮೊದಲು ತಾಯಿ ಎನಿಸಿದವರು....
ತಾಯಿಗೆ ಹೇಳಬೇಕಿಲ್ಲ ಮನದ ವ್ಯಥೆ-ಕಥೆ
ಅದು ಕರುಳ ಸಂಬಂಧ
ಹೇಳುವ ಮೊದಲೇ ನೋವ ಅರಿತು
ಪರಿಹಾರ ಕೊಟ್ಟವರು ನೀವು....
ಅದು ಕರುಳ ಸಂಬಂಧವನೇ ಮೀರಿದ ಬಂಧ..!!

ಯಾರಿಗೂ ಗೊತ್ತಾಗದ್ದು ಮನಸ್ಸಿನ ಮಾತು
ನನ್ನ ಮನಸ್ಸೆ ನೀವಾಗಿದ್ದಾಗ ಮಾತನ್ನು ಬಚ್ಚಿಡುವುದೆಂತು...?
ಹದಿಮೂರು ವರ್ಷದ ಈ ಬಂಧ
ನೂರು ವರುಷ ಉರಳಿದರೂ ಸವಿಯುವ ಸವಿ

ನೀವು ಕೊಟ್ಟ ಧೈರ್ಯ, ಪ್ರೇರಣೆ
ಈ ಜನ್ಮಕ್ಕೆ ಸಾಕಾಗಿ
ಇನ್ನೂ ಮಿಕ್ಕಿದೆ ಸಿಕ್ಕವರಿಗೆ ಹಂಚಲು
ನಿಮ್ಮೊಡನೆ ಕಳೆದ ಸಮಯ
ನೆನಪಿನ ಬುತ್ತಿಯಲ್ಲಿ ಹಚ್ಚೆಯಂತೆ ಉಳಿದಿದೆ...!!

ನೀವು ಮಾಡಿದ ಉಪಕಾರ, ಸಹಕಾರ
ಈ ಜನುಮ ಇರುವವರೆಗೂ ತೀರಿಸಲಾಗದು
ನೀವು ತೋರಿದ ಪ್ರೀತಿ, ಔದಾರ್ಯ
ಈ ಜನ್ಮ ಕಳೆದರೂ ತೀರದು...

ಮಕ್ಕಳ ಪಾಲಿಗೆ ಮಳೆಮೋಡ ನೀವು
ಸದಾ ತುಂತುರು ನಗೆ, ಹಚ್ಚನೆ ಹಿಗ್ಗಿದ ಮನಸ್ಸು
ಮನೆಯವರ ಪಾಲಿನ ಕಾಮಧೇನು
ಬಯಸಿದ್ದೆಲ್ಲ ಮಾಡಿಕೊಡುವ ನೀಲಬಾನು

ನಂದಿಯ ತ್ಯಾಗ, ಬೆಟ್ಟದ ಅಚಲ ವಿಶ್ವಾಸ ಮೇಳೈಸಿದೆ ನಿಮ್ಮೊಳಗೆ
ಅದು ವೇಣೂರಿಗೂ ಬಂದಿತ್ತು
ನಮ್ಮೆಲ್ಲರನ್ನು ತುಂಬಿತ್ತು
ಯುವರಾಜರ ರಾಣಿಗೆ ವ್ಯಕ್ತಿತ್ವವೇ ಆಭರಣ
ವೈಷ್ಟವಿ, ವೈಶಾಖ್‌ ಚೆನ್ನಡತೆಯ ತೂಗುದೀಪಗಳು

ಸೆಳೆದಿತ್ತು ಸ್ನಿಗ್ಧ ಸೂಜಿಗಲ್ಲು
ನಿಮ್ಮೆಡೆಗೆ ನನ್ನನ್ನು....
ನಾನು ಆಗ ಬಯಸುವೆ ನಿಮ್ಮಂತೆ
ಇನ್ನು ನನ್ನ ಪಾಲಿನ ಸಾಕ್ಷಾತ್‌ ದೇವತೆ ನೀವೆ
ಅರ್ಪಿಸುವೆ ನನ್ನನ್ನೇ ನಿಮ್ಮ ಅಡಿದಾವರೆಗೆ
ನಿಮ್ಮ ಪ್ರೀತಿಯ ವಿದ್ಯಾರ್ಥಿನಿ

..................................  ಸುಶ್ಮಿತಾ ವೇಣೂರು
ಕಂಬಳದಡ್ಡ ಮನೆ,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************






Ads on article

Advertise in articles 1

advertising articles 2

Advertise under the article