-->
ಜೀವನ ಸಂಭ್ರಮ : ಸಂಚಿಕೆ - 101

ಜೀವನ ಸಂಭ್ರಮ : ಸಂಚಿಕೆ - 101

ಜೀವನ ಸಂಭ್ರಮ : ಸಂಚಿಕೆ - 101
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

           
         ಮಕ್ಕಳೇ, ಈ ದಿನ ಅಮ್ಮುಗೆಯ ರಾಯಮ್ಮಳ ವಚನಗಳ ಸಾರವನ್ನು ತಿಳಿದುಕೊಳ್ಳೋಣ..... 
     ಅಮ್ಮುಗೆಯ ರಾಯಮ್ಮ ನೇಯ್ಗೆಯ ಕೆಲಸ ಮಾಡಿಕೊಂಡಿದ್ದಳು. ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಾಲ್ಕು ಸಾಲಿನ ವಚನದಲ್ಲಿ ಸುಂದರವಾಗಿ ಹೇಳುತ್ತಾರೆ. ಅವರ ವಚನ ಅತ್ಯದ್ಭುತ.....!
        ಹರಿಯ ಬಲ್ಲಡೆ ವಿರಕ್ತ
        ಸದಾಚಾರದಲ್ಲಿ ಇರಬಲ್ಲಡೆ ಅಭೇಧ್ಯ.
        ಸ್ತುತಿ ನಿಂದನೆಗಳಿಗೆ ಹೊರಗಾಗದೆ  
        ನಿಲಬಲ್ಲಡೆ ಸುಮ್ಮಾನೆ ಸಮ್ಮಾನೆ.
        ಘನ ತತ್ವಗಳನ್ನು ಅರಿತು 
        ಅನುಭವಿಸ ಬಲ್ಲಡೆ 
        ಶಿವ ಜ್ಞಾನಿ ಅಮುಗೇಶ್ವರ.
ಆಕೆ ಹೇಳುತ್ತಾಳೆ ಜಗತ್ತಿನಲ್ಲಿ ನಾವು ವಿರಕ್ತರಾಗಿ, ಅಭೇದ್ಯರಾಗಿ, ಸಮ್ಮಾನೆಗಳಾಗಿ, ಪರಮಜ್ಞಾನಿಗಳಾಗಿ ಬಾಳಬೇಕು ಎಂದು. ಪ್ರತಿಯೊಂದನ್ನು ನೋಡೋಣ.
        ಅರಿಯ ಬಲ್ಲಡೆ ವಿರಕ್ತ: ಅಂದರೆ ನಾವು ಗೃಹಸ್ಥರು ಮತ್ತು ವಿರಕ್ತರು ಎಂದು ಭಾಗ ಮಾಡಿದ್ದೇವೆ. ವಿರಕ್ತರು ಅಂದರೆ ಎಲ್ಲವನ್ನು ತ್ಯಾಗ ಮಾಡುವುದು ಎಂದರ್ಥ ಎಂದು ಭಾವಿಸಿದ್ದೇವೆ. ಆದರೆ ಆಕೆ ಹೇಳುತ್ತಾಳೆ ನಾವೆಲ್ಲರೂ ವಿರಕ್ತರೆ, ಯಾಕೆಂದರೆ ಜಗತ್ತಿನಲ್ಲಿ ಯಾವುದೂ ಶಾಶ್ವತವಾಗಿ ಇರುವುದಿಲ್ಲ. ಬಿಡೋದು ವಿಭಕ್ತಿಯಲ್ಲ. ನಮ್ಮ ಹತ್ತಿರ ಯಾವುದು ಸ್ಥಿರವಾಗಿ ಇರೋದಿಲ್ಲ ಎಂದು ತಿಳಿದುಕೊಳ್ಳುವುದೇ ವಿರಕ್ತಿ. ಯಾವುದೇ ವಸ್ತು ನನ್ನ ಹತ್ತಿರವಾಗಲಿ ಬೇರೆಯವರ ಹತ್ತಿರವಾಗಲಿ ಶಾಶ್ವತವಾಗಿ ಇರುವುದಿಲ್ಲ. ನಮ್ಮ ಸೌಂದರ್ಯ, ನಮ್ಮ ಶಕ್ತಿ, ನಮ್ಮ ಮೆಚ್ಚಿಕೊಂಡ ಜನ, ಅಲ್ಲದೆ ಹೊಲ, ಮನೆ, ಆಸ್ತಿ ಯಾವುದು ಕೂಡ ನಮ್ಮ ಹತ್ತಿರ ಖಾಯಂ ಆಗಿ ಇರೋದಿಲ್ಲ. ಆದ್ದರಿಂದ ಅದಕ್ಕೆ ಬಹಳ ಅಂಟಿಕೊಳ್ಳಬಾರದು ಎನ್ನುವುದೇ ಇದರ ಅರ್ಥ. ಈ ವಿಚಾರ ಮೊದಲೇ ತಿಳಿದಿದ್ದಲ್ಲಿ ಯಾವುದಾದರೂ ವಸ್ತು ಹೋಯಿತು ಅಂದಾಗ ನಮಗೆ ಮೊದಲೇ ತಿಳಿದಿತ್ತು ಎನ್ನುವ ಭಾವ ಉಂಟಾಗಿ ಸಮಾಧಾನವಾಗುತ್ತದೆ.
       ಸದಾಚಾರದಲ್ಲಿ ಇರಬಲ್ಲಡೆ ಅಭೇದ್ಯ; ಅಂದರೆ ಹೊಲಸು ಬಾರದಂತೆ ನೋಡಿಕೊಳ್ಳುವುದೆ ಅಭೇದ್ಯ. ಏನು ಯೋಗ್ಯವಾಗಿದೆಯೋ ಅದನ್ನೇ ಮಾಡುವುದು. ಯಾವುದು ಹಿತವಾದದ್ದು ಅದನ್ನೇ ಮಾಡುವುದು. ಅಂದರೆ ಜಗತ್ತನ್ನ ಸಿರಿವಂತ ಮಾಡುವುದು, ಸುಂದರ ಮಾಡುವುದು, ಶಾಂತಿ ಪೂರ್ಣ ಮಾಡಬಹುದು. ನಾವು ಇರುವ ಸ್ಥಳವು ಜಗತ್ತಿನ ಒಂದು ಭಾಗ. ನಾವು ಇರುವ ಸ್ಥಳವನ್ನೇ ಶ್ರೀಮಂತ, ಸುಂದರ ಮತ್ತು ಶಾಂತಿ ಪೂರ್ಣ ಮಾಡುವುದು. ಅದು ನಮ್ಮ ಮನೆ ಆಗಿರಬಹುದು, ಕೆಲಸ ಮಾಡುವ ಸ್ಥಳ ಇರಬಹುದು ಅಥವಾ ಯಾವುದೇ ಆಗಿರಲಿ. ಮನೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಮನೆಯನ್ನು ಶ್ರೀಮಂತ ಮಾಡುವುದು ಅಂದರೆ ಉಣ್ಣಲು ತಿನ್ನಲು ಕುಡಿಯಲು ಕೊರತೆ ಇಲ್ಲದಂತೆ ಮಾಡುವುದು. ಅನ್ನ ನೀರು ಸಮೃದ್ಧವಾಗಿರಬೇಕು, ವಸ್ತುಗಳು ಅಸ್ತವ್ಯಸ್ತವಾಗಿರಬಾರದು. ಇರುವ ವಸ್ತುಗಳನ್ನೇ ಸ್ವಚ್ಛವಾಗಿ, ಸುಂದರವಾಗಿ ಜೋಡಿಸಿರಬೇಕು. ಸುಂದರ ಮಾಡಲು ಹೊರಗಿನ ವಸ್ತು ಬೇಕಾಗಿಲ್ಲ. ಇರುವುದನ್ನೇ ಅಚ್ಚುಕಟ್ಟಾಗಿ, ನೋಡಿದವರ ಮನಸ್ಸು ಅರಳುವಂತೆ ಜೋಡಿಸಬೇಕು. ಯಾರಾದರೂ ಬರುತ್ತಾರೆ ಎಂದಾಗ ಅಲ್ಲಿರುವ ವಸ್ತುಗಳನ್ನೇ ಬಟ್ಟೆಯಲ್ಲಿ ಮುಚ್ಚಿ ಬಾಗಿಲು ಹಾಕುವುದಲ್ಲ. ಯಾವಾಗಲೂ ಮನೆ ಸ್ವಚ್ಛವಾಗಿರಬೇಕು.    
     ಸಾಕ್ರೆಟಿಸ್ ನ ಒಂದು ಘಟನೆ ನೆನಪಿಗೆ ಬರುತ್ತದೆ. ಒಬ್ಬ ವ್ಯಕ್ತಿ ಒಂದು ಸಂಗತಿಯನ್ನು ಆತನ ಮುಂದೆ ಹೇಳಲು ಬರುತ್ತಾನೆ. ಆಗ ಸಾಕ್ರೆಟಿಸ್ ಕೇಳುತ್ತಾನೆ. ಈ ಸಂಗತಿ ನನಗೆ ಉಪಯೋಗವಿದೆಯೇ?. ಆ ವ್ಯಕ್ತಿ ಹೇಳುತ್ತಾನೆ, ಇಲ್ಲ. ಹಾಗಾದರೆ ನಿನಗಾದರೂ ಉಪಯೋಗವಿದೆಯೇ?. ಇಲ್ಲ ಎಂದು ಆ ವ್ಯಕ್ತಿ ಹೇಳುತ್ತಾನೆ. ಹಾಗಾದರೆ ಆ ಸಂಗತಿಯನ್ನು ನೀನು ಏಕೆ ತಲೆಗೆ ಹಾಕಿಕೊಂಡೆ ..? ಮತ್ತೆ ನನ್ನ ತಲೆಗೆ ಹಾಕಲು ನೀನು ಯಾಕೆ ಬಂದೆ..? 
     ಅಂದರೆ ಜಗತ್ತಿನಲ್ಲಿ ನೋಡಿದಾಗ, ಕೇಳಿದಾಗ ಕಸ ಮನಸ್ಸನ್ನು ಪ್ರವೇಶಿಸುತ್ತದೆ. ಪ್ರತಿನಿತ್ಯ ಅದನ್ನ ಸ್ವಚ್ಛಗೊಳಿಸಬೇಕು. ಹಾಗೂ ಸವಿ ಸವಿಯಾದ ಮಾತನ್ನ ಆಡಬೇಕು. ಅದನ್ನ ಕೇಳಿದವರ ಮನಸ್ಸು ಅರಳಬೇಕು. ಶಾಂತಿಯನ್ನು ಅನುಭವಿಸಬೇಕು. ಹೀಗೆ ಬದುಕುವುದಕ್ಕೆ ಅಭೇಧ್ಯ ಬದುಕು ಎನ್ನುವರು.
     ಸ್ತುತಿ ನಿಂದನೆಗಳಿಗೆ ಹೊರಗಾಗಿ ನಿಲಬಲ್ಲಡೆ ಸುಮ್ಮಾನೆ ಸಮ್ಮಾನೆ: ಜಗತ್ತಿನಲ್ಲಿ ಸ್ತುತಿ ಮತ್ತು ನಿಂದನೆ ಇರೋದೆ. ನಾವು ದೇವರಿಗೂ ಕೂಡ ಬಯ್ಯುತ್ತೇವೆ. ನಾವು ಎಡವಿ ಬಿದ್ದು ಕಾಲು ಮುರಿದುಕೊಂಡು, ದೇವರು ನಮ್ಮ ಬೀಳುವಂತೆ ಮಾಡಿದ. ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲ ಎಂದು ಆರೋಪ ಮಾಡುತ್ತೇವೆ. ಸಾಗರದೊಳಗೆ ಒಂದು ಮೀನು ಬೈದರೆ ಸಾಗರಕ್ಕೆ ಏನು ನಷ್ಟವಿಲ್ಲ. ಅದೇ ರೀತಿ ಸಾಗರದಲ್ಲಿರುವ ಇನ್ನೊಂದು ಮೀನು ಹೊಗಳಿದರೆ ಸಾಗರಕ್ಕೆ ನಷ್ಟಇಲ್ಲ. ದೇವರು ಅಂದರೆ ಜ್ಞಾನದ ಸಾಗರ. ಸತ್ಯದ ಸಾಗರ. ಶಾಂತಿಯ ಸಾಗರ. ಯಾರೋ ಒಬ್ಬ ವ್ಯಕ್ತಿ ತಾನು ಕಷ್ಟಪಟ್ಟು ಬೆಳೆದ ಗಿಡದ ಒಂದು ಹೂವನ್ನು ತಂದು ಕೊಟ್ಟಾಗ, ಅದನ್ನು ಪ್ರೀತಿಯಿಂದ ಸ್ವಾಗತಿಸಬೇಕೆ ವಿನಹ ಇದೊಂದು ಹೂವು ಏನು ಮಾಡಲು ಬರುತ್ತೆ ಅಂತ ಭಾವಿಸಬಾರದು. ಜಗತ್ತಿನಲ್ಲಿ ಎಲ್ಲರನ್ನೂ ಎಲ್ಲರೂ ಹೊಗಳುವುದಿಲ್ಲ ಹಾಗೆ ತೆಗಳುವುದಿಲ್ಲ. ನಾನು ಹೇಗಿದ್ದೇನೆ ಅಂತ ಬೇರೆಯವರನ್ನು ಕೇಳಬಾರದು. 
    ಸಮ್ಮಾನೆ ಎಂದರೆ ಆತ್ಮಾಭಿಮಾನಿಯಾಗಿ ಬದುಕುವುದು. ಯಾರು ಏನೇ ಅನ್ನಲಿ ನಮ್ಮ ದಾರಿಯಲ್ಲಿ ನಾವಿರೋದು. ನಮ್ಮ ಕೆಲಸ ನಾವು ಮಾಡಿಕೊಳ್ಳುತ್ತಾ ಇರೋದು. ಅವರ ಇವರ ಕಡೆ ಲಕ್ಷ್ಯ ಕೊಡಬಾರದು. ಯಾರಾದರೂ ಏನಾದರೂ ಹೇಳಿದರೆ ಕೇಳಿಸಿಕೊಳ್ಳುವುದು. ಆದರೆ ಮುದ್ದಾಂ ಕೇಳುವಂತಿಲ್ಲ. ಏಕೆಂದರೆ ಈ ಜಗತ್ತು ಹೀಗೆ ಅಂತ ಮೊದಲೇ ತಿಳಿದುಕೊಂಡಿದ್ದರೆ ನಮಗೆ ಬೇಸರ ಆಗೋದಿಲ್ಲ. ಅಂದರೆ ನಾವು ಹೀಗೆ ಇರ್ತೀವಿ ಅಂತ ಅಲ್ಲ. ಒಳ್ಳೆಯ ದಾರಿಯಲ್ಲಿ ನಡೆಯುವಾಗ ಯಾರಾದರೂ ಏನಾದರೂ ಅಂದರೆ ಅದರ ಕಡೆ ಗಮನ ಹರಿಸಬಾರದು. ಕಸದಂತಹ ಮಾತನ್ನು ಯಾರಾದರೂ ಹೇಳಲು ಬಂದರೆ ಅದನ್ನು ನೀನೆ ಇಟ್ಟುಕೋ ಎನ್ನುವುದು. ಒಳ್ಳೆಯದಾದರೆ ನನಗೆ ಕೊಡು ಎನ್ನುವುದು. ಇದೆ ಸಮ್ಮಾನೆ.
     ಘನ ತತ್ವವನ್ನು ಅರಿತು ಅನುಭವಿಸ ಬಲ್ಲಡೆ ಶಿವ ಜ್ಞಾನಿ ಅಮುಗೇಶ್ವರ: ನಾವು ಜ್ಞಾನಿಗಳಾಗಿ ಬದುಕಬೇಕು ಎನ್ನುವುದೇ ರಾಯಮ್ಮಳ ಅನಿಸಿಕೆ. ವಿಶ್ವ ಸತ್ಯವನ್ನು ತಿಳಿದುಕೊಳ್ಳಬೇಕು. ಆತ್ಮ ಜ್ಞಾನಿಗಳಾಗಿ ಬದುಕಬೇಕು. ಎಲ್ಲವೂ ನಾಶವಾದರೂ ಒಂದು ನಾಶವಾಗುವುದಿಲ್ಲ... ಅದೇ ಸತ್ಯ, ಅದೇ ನಾನು, ಅದೇ ದೇವರು. ಈ ಜ್ಞಾನ ಇದ್ದಲ್ಲಿ ಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಎಷ್ಟು ಸುಂದರವಾದ ವಚನ ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************

Ads on article

Advertise in articles 1

advertising articles 2

Advertise under the article