-->
ಜೀವನ ಸಂಭ್ರಮ : ಸಂಚಿಕೆ - 98

ಜೀವನ ಸಂಭ್ರಮ : ಸಂಚಿಕೆ - 98

ಜೀವನ ಸಂಭ್ರಮ : ಸಂಚಿಕೆ - 98
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

                            
      ಮಕ್ಕಳೇ, ಇನ್ನೇನು ಆಗಸ್ಟ್ 15 ಬರುತ್ತಿದೆ. ಆ ದಿನವನ್ನು ಸ್ವಾತಂತ್ರೋತ್ಸವವನ್ನಾಗಿ ಆಚರಿಸುತ್ತೇವೆ. ನಾವೆಲ್ಲ ಸ್ವಾತಂತ್ರ್ಯ ಎಂದರೆ ಪರಕೀಯರ ಬಂಧನದಿಂದ ದೇಶ ಬಿಡುಗಡೆಯಾದ ದಿನ ಎಂದು ಎಲ್ಲೆಡೆ ಧ್ವಜಾರೋಹಣ, ಸ್ವಾತಂತ್ರ ಹೋರಾಟಗಾರರ ಗುಣಗಾನ ಮಾಡುತ್ತೇವೆ. ಈ ದಿನ ಸ್ವಾತಂತ್ರದ ಬಗ್ಗೆ ವಿಭಿನ್ನವಾಗಿ ಚಿಂತಿಸೋಣ. ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ನೋಡೋಣ. ನಾವೆಲ್ಲರೂ ಸ್ವತಂತ್ರರೇ....? ಈ ಲೇಖನ ಓದಿ.
      ಜಗತ್ತಿನೆಲ್ಲಡೆ ನಾವೆಲ್ಲರೂ ನಾನು, ನನ್ನದು ಎನ್ನುವ ಅಹಂ ಭಾವದಿಂದ ಬದುಕುತ್ತಿದ್ದೇವೆ. ನಾನೇ ಶ್ರೇಷ್ಠ. ನನ್ನಿಂದಲೇ ಎಲ್ಲಾ. ನಾನಿಲ್ಲದಿದ್ದರೆ ಯಾವುದು ನಡೆಯುವುದಿಲ್ಲ ಎನ್ನುವ ಅಹಂ ಇದೆ. ನಾನು ಪ್ರಕೃತಿಯ ಒಂದು ಅಂಶ ಎನ್ನುವುದನ್ನು ಮರೆತಿದ್ದೇವೆ. ನಾನಿಲ್ಲದಿದ್ದರೂ ಜಗತ್ತಿಗೆ ಯಾವುದೇ ಹಾನಿ ಇಲ್ಲ ಎನ್ನುವುದನ್ನು ನಾವು ಮರೆತಿದ್ದೇವೆ. ನನ್ನದನ್ನು ಹೆಚ್ಚು ಮಾಡಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಾವು ಶ್ರಮ ಪಡುತ್ತಿದ್ದೇವೆ. ಶ್ರಮಪಟ್ಟು ಹಣ, ಆಸ್ತಿ, ಒಡವೆ ಮತ್ತು ವಸ್ತುಗಳನ್ನು ಸಂಗ್ರಹಿಸುತ್ತೇವೆ. ಅದು ಹೆಚ್ಚಾದಂತೆ ನನ್ನದು ಎನ್ನುವ ಅಹಂ ಹೆಚ್ಚಾಗುತ್ತದೆ. ಅಂದರೆ ನಾವು ಅದರ ಬಂಧನಗೊಳಗಾಗುತ್ತೇವೆ. ಯಾವಾಗ ನಾವು ಬಂಧನಕ್ಕೆ ಒಳಗಾದೆವೋ ಅಂದೆ ಸ್ವಾತಂತ್ರ ಕಳೆದುಕೊಳ್ಳುತ್ತೇವೆ. ಸದಾ ಅದರ ರಕ್ಷಣೆ ಮತ್ತು ಪೋಷಣೆ ಬಗ್ಗೆ ಚಿಂತಿಸುತ್ತೇವೆ.
      ನನ್ನದು ಅನ್ನುವುದು ಇಷ್ಟಕ್ಕೆ ಸೀಮಿತವಾಗಿಲ್ಲ. ನನ್ನ ಪತ್ನಿ, ನನ್ನ ಮಗ, ನನ್ನ ಮಗಳು, ನನ್ನ ಊರು, ನನ್ನ ಜನ, ನನ್ನ ತಾಲೂಕು, ನನ್ನ ಜಿಲ್ಲೆ, ನನ್ನ ರಾಜ್ಯ, ನನ್ನ ದೇಶ, ನನ್ನ ಜಾತಿ, ನನ್ನ ಧರ್ಮ, ನನ್ನ ಭಾಷೆ ಮತ್ತು ನನ್ನಲಿಂಗ ಹೀಗೆ ಬಂಧನದ ಗೋಡೆಯೊಳಗೆ ವಾಸ ಮಾಡುತ್ತಿದ್ದೇವೆ. ಇದಕ್ಕೆ ಸಮಾಜ ನೀರೆರೆದು ಪೋಷಣೆ ಮಾಡುತ್ತಿದೆ. ಇಷ್ಟೊಂದು ಬಂಧನದ ಗೋಡೆ ಒಳಗೆ ಇರುವಾಗ ನಾವು ಸ್ವಾತಂತ್ರ್ಯವನ್ನು ಹೇಗೆ ಅನುಭವಿಸುತ್ತೇವೆ...? 
     ಸ್ವಾತಂತ್ರ್ಯ ಎಂದರೆ ಬಂಧನದಿಂದ ಬಿಡುಗಡೆಯಾಗುವುದು. ಇಷ್ಟೊಂದು ಬಂಧನದ ಗೋಡೆಗಳ ನಡುವೆ ಇರುವ ನಾವು ಬಂಧಿಗಳೇ ವಿನಹ ಸ್ವಾತಂತ್ರ್ಯ ಪಡೆದವರಲ್ಲ. ಸ್ವಾತಂತ್ರ್ಯ ಇರುವಲ್ಲಿ ಸಂತೋಷ, ಶಾಂತಿ ಮತ್ತು ಸಮಾಧಾನ ಇರುತ್ತದೆ. ಶಾಂತಿ, ಸಮಾಧಾನ ಮತ್ತು ಸಂತೋಷ ಹೊಂದುವುದು ಎಂದರೆ ಮುಕ್ತಾವಸ್ಥೆ ಎನ್ನುತ್ತೇವೆ. ಇಷ್ಟು ಬಂಧನಗಳೊಳಗೆ ಇರುವಾಗ ಸಂತೋಷ ಎಲ್ಲಿ? ಶಾಂತಿ ಎಲ್ಲಿ? ಸಮಾಧಾನ ಎಲ್ಲಿ? ಶಾಂತಿ ಸಮಾಧಾನ, ಸಂತೋಷ ಇಲ್ಲದಿದ್ದರೆ ಸ್ವಾತಂತ್ರ್ಯ ಪಡೆದಿದ್ದೇವೆ ಅನ್ನುವುದಾದರೂ ಹೇಗೆ...? ಇದಕ್ಕೆ ಪರಿಹಾರ ಸ್ವಾತಂತ್ರ್ಯ ಅನುಭವಿಸುವುದು.
      ಸ್ವಾತಂತ್ರ ಅನುಭವಿಸಬೇಕಾದರೆ ನಾವು ಅನೇಕ ಬಂಧನದ ಕೋಟೆಯಲ್ಲಿ ಇದ್ದೇವೆ ಅಲ್ಲ ಅದರಿಂದ ಬಿಡುಗಡೆ ಹೊಂದುವುದು. ಅಂದರೆ ತ್ಯಾಗ ಮಾಡುವುದು. ಗೌತಮ ಬುದ್ಧ ಪರಿನಿರ್ವಾಹಣ ಹೊಂದಿದ ಎನ್ನುತ್ತೇವೆ. ಪರಿನಿರ್ವಾಣ ಎಂದರೆ ಎಲ್ಲವನ್ನು ತ್ಯಜಿಸುವುದು ಎಂದರ್ಥ. ಹಾಗಾದರೆ ನಾನು, ನನ್ನದು ಬೇಡವೇ? ಬೇಕು. ಎಷ್ಟು ಬೇಕೋ ಅಷ್ಟು ಇರಬೇಕು. ಎಲ್ಲಾ ಇರಬೇಕು. ಪ್ರತಿಯೊಂದನ್ನು ಪ್ರೀತಿಸಬೇಕು. ಬಂಧನ ಇರಬಾರದು. 
     ಉದಾಹರಣೆಗೆ ಒಂದು ಟೇಬಲ್ ತಂದಿದ್ದೇವೆ ಎಂದುಕೊಳ್ಳೋಣ. ಅದು ನನ್ನದು ಎಂದರೆ ಅದು ಬಂಧನವಾಯಿತು. ನಮಗೆ ಸರಿಯಾದ ಜ್ಞಾನವಿದ್ದರೆ ಬಂಧನ ವಾಗುವುದಿಲ್ಲ, ನಿಸರ್ಗದ ಮರ ಬಳಸಿ ಟೇಬಲ್ ಮಾಡಿದ್ದೇವೆ. ಅದನ್ನು ಬಳಸಲು ಬಂದಿದ್ದೇವೆ ಎಂದರೆ ಅದನ್ನು ಪ್ರೀತಿಸಿ ಸುಂದರವಾಗಿ ಬಳಸುತ್ತೇವೆ. ಆನಂದ ಪಡುತ್ತೇವೆ. ಆದರೆ ನಾವು ಮಾಲೀಕರಾಗಿ ನೋಡುವುದರಿಂದ ಬಂಧನಕ್ಕೆ ಒಳಪಡುತ್ತೇವೆ. ಇದು ನಿಸರ್ಗದ್ದು ಇದನ್ನು ಬಳಸಲು ಖರೀದಿಸಿದ್ದೇವೆ ಎಂದರೆ ಬಂಧನವಿಲ್ಲ. ನಾವು ಬಳಕೆದಾರರು ಮತ್ತು ತಾತ್ಕಾಲಿಕ ಮಾಲೀಕರು, ಶಾಶ್ವತ ಮಾಲೀಕರಲ್ಲ. ಅಂದರೆ ವಸ್ತುವಿನ ಸರಿಯಾದ ಜ್ಞಾನ ನಮಗಿದ್ದಲ್ಲಿ ಬಂಧನವಾಗುವುದಿಲ್ಲ. ಇದಕ್ಕಾಗಿ ನಮ್ಮ ಸಂವಿಧಾನದಲ್ಲಿ ಒಂದು ವಿಧಿ ಇದೆ. ಇದನ್ನು ಉಲ್ಲಂಘಿಸಿದರೆ ದಂಡನೆ ಇದೆ. ಅದೇನೆಂದರೆ ಯಾರೊಬ್ಬರು ಭಾಷೆ, ಜಾತಿ, ಲಿಂಗ, ಧರ್ಮ, ಬಣ್ಣ ಮತ್ತು ಹುಟ್ಟಿದ ಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಮತ್ತೊಂದು ವಿಧಿ ಕಾನೂನಿನ ಮುಂದೆ ಎಲ್ಲರೂ ಸಮಾನರು. ಈ ಎರಡು ವಿಧಿಯನ್ನು ಸರಿಯಾಗಿ ಗಮನಿಸಿದರೆ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ಸ್ವಾತಂತ್ರ್ಯ ಅನುಭವಿಸಬೇಕು ಎನ್ನುವುದರ ಅರ್ಥವಲ್ಲವೇ? ಈ ನಿಯಮ ತತ್ವ ಶಾಸ್ತ್ರದ ನೆಲೆಗಟ್ಟಿನಲ್ಲಿ ರಚನೆಯಾಗಿದೆ ಅನಿಸುವುದಿಲ್ಲವೇ...? ಇದರ ಅರ್ಥ - ಭಾಷೆ, ಜಾತಿ, ಲಿಂಗ, ಧರ್ಮ, ಬಣ್ಣ ಮತ್ತು ಹುಟ್ಟಿದ ಸ್ಥಳ ಎನ್ನುವ ಬಂಧನದಿಂದ ಹೊರಬನ್ನಿ ಎನ್ನುವುದರ ಸಂಕೇತ ಅಲ್ಲವೇ...? ಕಾನೂನಿನ ಮುಂದೆ ನಾವೆಲ್ಲರೂ ಸಮಾನರು ಅಂದರೆ ಜಗತ್ತಿನಲ್ಲಿ ನಾವೆಲ್ಲ ಒಂದು ಅಂಶ. ಇಲ್ಲಿರುವ ಪ್ರತಿಯೊಂದು ವಸ್ತು, ಜೀವಿ, ಕ್ರಿಮಿ, ಕೀಟ ಎಲ್ಲರೂ ಸ್ವತಂತ್ರವಾಗಿ ಬದುಕಬೇಕು. ಇವೆಲ್ಲ ಜಗತ್ತಿನ ಒಂದೊಂದು ಅಂಶ. ನಾವು ಒಬ್ಬರೇ ಹೇಗೆ ಶ್ರೇಷ್ಠ. ಆದ್ದರಿಂದ ನಾವು ಶಾಂತಿ ಸಮಾಧಾನ ಮತ್ತು ಸಂತೋಷದಿಂದ ಅನುಭವಿಸಬೇಕಾದರೆ ಬಂಧನದಿಂದ ಬಿಡುಗಡೆ ಹೊಂದುವುದೇ ಸ್ವಾತಂತ್ರ್ಯ. ಬಂಧನದಿಂದ ಬಿಡುಗಡೆ ಎಂದರೆ ಮನಸ್ಸು ವಿಶಾಲವಾಗುವುದು ಮತ್ತು ವಿಕಸಿತಗೊಳ್ಳುವುದು. ಮನಸ್ಸು ವಿಕಾಸಗೊಂಡಷ್ಟು ಬಂಧನದಿಂದ ಮುಕ್ತವಾಗುತ್ತದೆ. ಸ್ವಾತಂತ್ರವನ್ನು ಅನುಭವಿಸುತ್ತೇವೆ ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article