-->
ಯಶಸ್ವಿ ಚಂದ್ರಯಾನ -3

ಯಶಸ್ವಿ ಚಂದ್ರಯಾನ -3

ಲೇಖನ : ಯಶಸ್ವಿ ಚಂದ್ರಯಾನ -3
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


      ಚಂದ್ರನ ಮೇಲೊಂದು ಹೆಜ್ಜೆಯನ್ನಿಟ್ಟು
ಇದು ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಹ ಸಂದರ್ಭ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ತಂಡ ಮಾಡಿರುವ ಈ ಸಾಧನೆಗೆ ಭಾರತೀಯರಾದ ನಾವೆಲ್ಲಾ ಅಭಿನಂದನೆ ಹೇಳಲೇಬೇಕು. ನಮ್ಮ ಭೂಮಿಯ ಏಕಮಾತ್ರ ಉಪಗ್ರಹವಾದ ಚಂದ್ರನ ಮೇಲೆ ಕೃತಕ ಉಪಗ್ರಹವೊಂದನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ನಾಲ್ಕನೆಯ ದೇಶ ಎಂಬ ಗೌರವ ಭಾರತೀಯರಾದ ನಮ್ಮ ಪಾಲಿಗೆ ಒದಗಿ ಬಂದಿದೆ. ಈ ವರೆಗೆ ಕೇವಲ ರಷ್ಯಾ, ಅಮೇರಿಕಾ ಮತ್ತು ಚೈನಾ ದೇಶಗಳಷ್ಟೇ ಈ ಸಾಧನೆಯನ್ನು ಮಾಡಿವೆ. ಹಾಗಿದ್ದರೆ ಈ ಚಂದ್ರಯಾನ-3 ಯೋಜನೆಯ ಬಗ್ಗೆ ಒಂದಿಷ್ಟು ತಿಳಿಯೋಣ ಬನ್ನಿ.
      ಚಂದ್ರನ ಅಧ್ಯಯನಕ್ಕಾಗಿ ಬೇರೆಬೇರೆ ದೇಶಗಳು ಸುಮಾರು ಆರು ಬಗೆಯ ಅಧ್ಯಯನಗಳನ್ನು ಕೈಗೊಂಡಿವೆ. 

◾ಮೊದಲನೆಯದ್ದು FLY BY MISSION. ಚಂದ್ರನ ಬದಿಯಿಂದ ಹಾದುಹೋಗುವ ಉಪಗ್ರಹವೊಂದನ್ನು ಕಳಿಸಿ ಆ ಮೂಲಕ ಚಂದ್ರನ ಮೇಲ್ಮೈ ಕುರಿತಾದ ಅಧ್ಯಯನವನ್ನು ಮಾಡುವುದು.

◾ ಎರಡನೆಯದ್ದು ORBITAL MISSION. ಉಪಗ್ರಹವೊಂದನ್ನು ಕಳುಹಿಸಿ ಅದು ಚಂದ್ರನ ಸುತ್ತ ನಿರ್ದಿಷ್ಟವಾದ ಕಕ್ಷೆಯಲ್ಲಿ ಸುತ್ತುವರೆಯುತ್ತಾ ಚಂದ್ರನ ಮೇಲ್ಮೈಯ ಅಧ್ಯಯನವನ್ನು ಮಾಡುವುದು. ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಈ ರೀತಿಯ ಯಶಸ್ವೀ ಪ್ರಯೋಗಗಳು ನಡೆದಿವೆ.

◾ಮೂರನೆಯದ್ದು IMPACT MISSION. 
ಚಂದ್ರನ ಸುತ್ತಲೂ ಸುತ್ತುವ ಉಪಗ್ರಹವೊಂದನ್ನು ಹಾರಿಬಿಟ್ಟು, ಅದರ ಮೂಲಕ ಇನ್ನೊಂದು ಸಣ್ಣ ಯಂತ್ರವನ್ನು ಚಂದ್ರನ ಮೇಲೆ ಅಪ್ಪಳಿಸುವಂತೆ ಮಾಡಿ, ಆ ಯಂತ್ರ ಅಪ್ಪಳಿಸುವ ಮೊದಲು ಚಂದ್ರನ ಅತೀ ಸಮೀಪಕ್ಕೆ ಹೋಗುವಾಗ ಅದರ ಮೂಲಕ ಅಧ್ಯಯನ ಮಾಡುವುದು. ಮಾತ್ರವಲ್ಲ ಅಪ್ಪಳಿಸಿದ ನಂತರ ಏಳುವ ಧೂಳನ್ನು ಅಧ್ಯಯನ ಮಾಡಿ ಅದರ ಮೂಲಕ ವಿಷಯಗಳನ್ನು ಕಂಡುಕೊಳ್ಳುವುದು. 2008ನೇ ಇಸವಿ ಅಕ್ಟೋಬರ್ 22 ರಂದು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲು ಇಂತಹುದೇ ಚಂದ್ರಯಾನ-1 ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಯಶಸ್ವಿಯಾಗಿ ಹಾರಿಬಿಟ್ಟಿತು. ಈ ಉಪಗ್ರಹ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ನೀರಿನ ಅಂಶ ಇರುವುದನ್ನು ಪತ್ತೆ ಮಾಡಿತ್ತು. 

◾ನಾಲ್ಕನೆಯದ್ದು LANDER MISSION. 
ಚಂದ್ರನ ಮೇಲೆ ನಿಧಾನವಾಗಿ ಉಪಗ್ರಹವೊಂದನ್ನು ಇಳಿಸುವ ಯೋಜನೆ. ಚಂದ್ರಯಾನ-2 ಹಾಗೂ ಚಂದ್ರಯಾನ-3 ಯೋಜನೆಗಳು ಇಂತಹ ಯೋಜನೆಗಳು. ಇದಕ್ಕಾಗಿ ಸ್ವದೇಶಿಯಾಗಿ ತಯಾರಿಸಿ ಬಳಸಲಾದ ಲ್ಯಾಂಡರ್ ನ ಹೆಸರು ವಿಕ್ರಂ ಲ್ಯಾಂಡರ್. ಈ ರೀತಿ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಮಾಡಿದ ಮೊದಲ ದೇಶ ರಷ್ಯಾ. ಆದರೆ ರಷ್ಯಾ ಮತ್ತು ಅಮೇರಿಕಾದಂತಹ ದೇಶಗಳು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಸುಮಾರು ಹದಿನೈದು ಬಾರಿ ಪ್ರಯತ್ನಿಸಿದ ನಂತರ ಯಶಸ್ಸು ಕಂಡಿದ್ದವು. ಭಾರತ ತನ್ನ ಎರಡನೇ ಪ್ರಯತ್ನದಲ್ಲೇ ಯಶಸ್ವಿಯಾಗಿರುವುದು ವಿಶೇಷ.

◾ಐದನೆಯದ್ದು ROVER MISSION. 
ಚಲಿಸುವ ವಾಹನದಂತಹ ರೋಬೋಟ್ ಒಂದನ್ನು ಚಂದ್ರನ ಮೇಲೆ ಚಲಿಸುವಂತೆ ಮಾಡಿ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವ ವಿಧಾನ. ಚಂದ್ರಯಾನ-2 ಇಂತಹ ರೋವರ್ ಮಿಶನ್ ಆಗಿತ್ತು. ವಿಕ್ರಂ ಹೆಸರಿನ ಲ್ಯಾಂಡರ್ ಚಂದ್ರನ ಮೇಲೆ ಇಳಿದು, ಪ್ರಗ್ಯಾ ಎಂಬ ರೋವರ್ ಅದರಿಂದಿಳಿದು ಚಂದ್ರನ ಮೇಲೆ ಚಲಿಸಿ ಅಧ್ಯಯನ ಮಾಡುವುದು ಅದರ ಗುರಿಯಾಗಿತ್ತು. ಆದರೆ ಸಪ್ಟೆಂಬರ್ 6, 2019 ರಂದು ಅದು ಚಂದ್ರನ ಮೇಲೆ ಇಳಿಯುತ್ತಿದ್ದಾಗ ಉಂಟಾದ ತಾಂತ್ರಿಕ ದೋಷದಿಂದಾಗಿ ಪತನಗೊಂಡು ನಾಶವಾಯಿತು. ಆದರೆ ಈ ಬಾರಿ ಆಗಿನ ವೈಫಲ್ಯಗಳಿಂದ ಪಾಠ ಕಲಿತ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉತ್ತಮ ಇಳಿಯುವ ಜಾಗದ ಆಯ್ಕೆ, ಹೆಚ್ಚುವರಿ ಇಂಧನ ಮತ್ತು ಉತ್ತಮ ಸಾಫ್ಟ್ ವೇರ್ ತಂತ್ರಜ್ಞಾನಗಳ ಸಹಾಯದಿಂದ ಚಂದ್ರನ ಮೇಲೆ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಚಂದ್ರಯಾನ -2 ರ ORBITER ನ ಕೊಡುಗೆಯೂ ಇದೆ. ಇನ್ನೂ ಚಂದ್ರನನ್ನು ಸುತ್ತು ಹಾಕುತ್ತಿರುವ ಇದು ಮಹತ್ವದ ಮಾಹಿತಿಯನ್ನು ಕಲೆಹಾಕುತ್ತಿದೆ ಮತ್ತು ಚಂದ್ರಯಾನ -3 ರ ಯಶಸ್ಸಿಗೆ ತನ್ನ ಕೊಡುಗೆಯನ್ನು ನೀಡಿದೆ.

◾ಇನ್ನು ಆರನೆಯದ್ದು ಸ್ವತಃ ಜೀವಂತ ಮನುಷ್ಯನೇ ಚಂದ್ರನ ಮೇಲಿಳಿದು ಚಂದ್ರನ ಮೇಲ್ಮೈ ಅಧ್ಯಯನ ಮಾಡುವುದು. 
       ಭಾರತ ಇದೀಗ ಕಳುಹಿಸಿರುವ ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಇದೀಗ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದಿದೆ. ಇಲ್ಲಿ ಅತಿಯಾದ ಬಿಸಿಲು ಇರುವುದಿಲ್ಲ, ಆದ್ದರಿಂದ ಮಂಜಿನ ರೂಪದಲ್ಲಿ ಇರಬಹುದಾದ ನೀರನ್ನು ಪತ್ತೆ ಮಾಡುವುದೇ ಇದರ ಮುಖ್ಯ ಉದ್ದೇಶ. 
        ಇನ್ನು ಇದರ ಒಳಗಿನಿಂದ ಇಳಿಯುವ ಪ್ರಗ್ಯಾ ಎಂಬ ಹೆಸರಿನ ರೋವರ್ಗೆ ಚಂದ್ರನ ಮೇಲೆ ಇಳಿದು ಅಧ್ಯಯನ ಮಾಡಲು ಚಂದ್ರನ ಒಂದು ದಿನ ಮಾತ್ರ ಸಿಗಲಿದೆ. ಆ ಒಂದು ದಿನದಲ್ಲಿಯೂ ಹಗಲಿನ ಅವಧಿ ಮಾತ್ರ ಸಿಗಲಿದೆ. ಒಂದು ದಿನದಲ್ಲಿ ಏನನ್ನು ಮಾಡಲು ಸಾಧ್ಯ ಎಂದು ಹುಬ್ಬೇರಿಸಬೇಡಿ. ಚಂದ್ರನ ಮೇಲೆ ಒಂದು ದಿನ ಎಂಬುದು ಭೂಮಿಯ ಮೇಲಿನ ಒಂದು ತಿಂಗಳು ಅಂದರೆ ಸುಮಾರು 29 ದಿನಗಳಿಗೆ ಸಮ. ಚಂದ್ರನ ಮೇಲೆ ಒಂದು ಹಗಲಿನ ಅವಧಿ ಎಂದರೆ ಅದು ಭೂಮಿಯ ಮೇಲಿನ ಸುಮಾರು 14 ದಿನಗಳಿಗೆ ಸಮ. ಚಂದ್ರನ ಮೇಲೆ ರಾತ್ರಿಯಾದಾಗ ಉಷ್ಣತೆಯು -232 ಡಿಗ್ರಿ ಸೆಲ್ಸಿಯಸ್ ವರೆಗೆ ಹೋಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ರೀತಿಯ ಯಂತ್ರಗಳು ಕೆಲಸ ಮಾಡುವುದಿಲ್ಲ. ಅದಕ್ಕಾಗಿಯೇ ಚಂದ್ರನ ಮೇಲೆ ಹಗಲು ಪ್ರಾರಂಭವಾಗುವ 23ನೇ ತಾರೀಕಿನಂದು ವಿಕ್ರಂ ಲ್ಯಾಂಡರ್ ಇಳಿಯುವಂತೆ ಲೆಕ್ಕಾಚಾರ ಮಾಡಿ, ಅದನ್ನು ಇಳಿಸುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಮುಂದಿನ 14 ದಿನಗಳವರೆಗೆ ಚಂದ್ರನ ಮೇಲೆ ಹಗಲು ಇರಲಿದೆ. ಈ ಸಮಯದಲ್ಲಿ ರೋವರ್ ಚಂದ್ರನ ಮೇಲೆ ಓಡಾಡಿ, ಪ್ರಯೋಗಗಳನ್ನು ಕೈಗೊಂಡು ನಮಗೆ ಮಾಹಿತಿ ಕಳುಹಿಸಿ ಕೊಡಲಿದೆ. 
      ಪ್ರಗ್ಯಾನ್ ಎಂಬ ಹೆಸರಿನ ಈ ರೋವರ್ ನಲ್ಲಿ ಎರಡು ಪ್ರಮುಖ ಯಂತ್ರಗಳಿವೆ. 
1. LIBS (Laser Induced Breakdown Spectroscope) ಇದು ಚಂದ್ರನ ಮಣ್ಣಿನ ರಾಸಾಯನಿಕ ಅಧ್ಯಯನ ಮಾಡಿ ಅದರ ಬಗೆಗಿನ ಮಾಹಿತಿಗಳನ್ನು ಕಳುಹಿಸಿಕೊಡಲಿದೆ.
2. APXS (Alpha Particle X-ray Spectrometer) ಈ ಉಪಕರಣ ಚಂದ್ರನ ಮೇಲಿರುವ ಕಲ್ಲುಗಳ ರಾಸಾಯನಿಕ ಅಧ್ಯಯನ ಮಾಡಿ ನಮಗೆ ಮಾಹಿತಿ ಕಳುಹಿಸಿ ಕೊಡಲಿದೆ. 
       ಇನ್ನು ವಿಕ್ರಂ ಲ್ಯಾಂಡರ್ ನಲ್ಲಿ ಅಳವಡಿಸಲಾದ ಕ್ಯಾಮರಾ ಪ್ರಗ್ಯಾನ್ ರೋವರ್ ನ ಓಡಾಟ ಮತ್ತು ಸುತ್ತಮುತ್ತಲಿನ ಚಿತ್ರಗಳನ್ನು ತೆಗೆದು ನಮಗೆ ಕಳುಹಿಸಿಕೊಡಲಿದೆ. ಈ ವಿಕ್ರಂ ಲ್ಯಾಂಡರ್ ನಲ್ಲಿಯೂ ನಾಲ್ಕು ರೀತಿಯ ಯಂತ್ರಗಳು ಜೋಡಿಸಲ್ಪಟ್ಟಿವೆ. ಅವುಗಳೆಂದರೆ....

1. RAMBA (Radio Anatomy of Moon Bound Hypersensitive Ionosphere and Atmosphere) ಇದು ಲೇಸರ್ ಬೀಮ್ ಮೂಲಕ ಚಂದ್ರನ ಮೇಲಿರುವ ಕಲ್ಲುಗಳನ್ನು ಕರಗಿಸಿ ಅಧ್ಯಯನ ಮಾಡಲಿದೆ.

2. ChaSTE (Chandra’s Surface Thermo Physical Experiment) ಇದು ಚಂದ್ರನ ದಕ್ಷಿಣ ಧ್ರುವದ ಮೇಲಿನ ತಾಪಮಾನದ ಅಧ್ಯಯನ ಮಾಡಲಿದೆ.

3. ILSA ( Instrument for Lunar Seismic Activity) ಇದು ಚಂದ್ರನ ಮೇಲಿನ ಭೂಕಂಪನ ಅಥವಾ ಚಂದ್ರಕಂಪನಗಳ ಅಧ್ಯಯನ ಮಾಡಲಿದೆ.

4. LRA (Laser Retroreflector Aray) ಈ ಉಪಕರಣದಿಂದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಾವ ಜಾಗದಲ್ಲಿ ಇಳಿದಿದೆ ಎಂಬ ಸರಿಯಾದ ಮಾಹಿತಿ ಸಿಗಲಿದೆ. 

      ಈ ಎಲ್ಲ ಮಾಹಿತಿಗಳಿಂದಾಗಿ ಚಂದ್ರ ಮತ್ತು ಆತನ ಮೇಲ್ಮೈ ಕುರಿತಾದ ಹಲವಾರು ಹೊಸ ಮಾಹಿತಿಗಳು ನಮಗೆ ಲಭ್ಯವಾಗಲಿವೆ. ಒಂದು ಕಾಲದಲ್ಲಿ ಭೂಮಿಯದ್ದೇ ಒಂದು ಭಾಗವಾಗಿರಬಹುದಾದ ಚಂದ್ರನ ಬಗೆಗಿನ ಅಧ್ಯಯನ ಭೂಮಿಯ ಬಗೆಗೂ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಇನ್ನಷ್ಟು ಸಹಕಾರಿ ಆಗಬಲ್ಲದು. ಇನ್ನು ಮುಂದಿನ ವರ್ಷಗಳಲ್ಲಿ ಭಾರತದ ಗಗನಯಾತ್ರಿಗಳು ಸಜೀವವಾಗಿ ಚಂದ್ರನ ಮೇಲೆ ಇಳಿದು ಅಧ್ಯಯನ ಮಾಡಿ ಮರಳುವ ಮಹತ್ವದ ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ರೂಪಿಸುತ್ತಿದೆಯಂತೆ. ಅದೂ ಆಗಲಿ. ಏನಂತೀರಿ?
ಚಿತ್ರಗಳು : ಅಂತರ್ಜಾಲ ಕೃಪೆ
............................................. ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article