ನಿಷ್ಪಾಪಿ ಸಸ್ಯಗಳು : ಸಂಚಿಕೆ - 12
Thursday, August 24, 2023
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 12
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೆಚ್ಚೇನೂ ಮಳೆ ಸುರಿಯದೆ ವರ್ಷಕಾಲ ಸರಿದು ಹೋಗುತ್ತಿದ್ದರೂ ಹಬ್ಬಗಳ ಸಾಲು ನಮ್ಮೆದುರು ನಿಂತು ಮುಗುಳು ನಗುವಿನೊಂದಿಗೆ ಮುಖಾಮುಖಿ ಯಾಗತೊಡಗಿದೆ.
'ನಾಡಿಗೆ ದೊಡ್ಡದು ನಾಗರಪಂಚಮಿ' ಎಂಬ ಮಾತಿದೆ. ಹಬ್ಬಗಳ ಸಾಲು ಆರಂಭಗೊಳ್ಳುವುದೇ ಈ ನಾಗರ ಪಂಚಮಿಯಿಂದ. ಅಂದು ನಮ್ಮ ನಾಡಿನಲ್ಲಿ ವಿಶೇಷವಾದ ತಿನಿಸೊಂದನ್ನು ಮಾಡುತ್ತಾರೆ. ನೀವೂ ಇದರ ರುಚಿ ಸವಿದಿರಬೇಕಲ್ಲ. ಹ್ಹಾ.. ಹೌದು, ಅದೇ ಅರಶಿನ ಎಲೆಯ ಪತೊಳಿ. ಅಕ್ಕಿ ಹಿಟ್ಟನ್ನು ಅರಶಿನದೆಲೆಗೆ ಹಚ್ಚಿ ನಡುವಿಗೆ ಬೆಲ್ಲ ಕಾಯಿ ಇಟ್ಟು ಮಡಚಿ ಬೇಯಿಸಿದರೆ ಪತೊಳಿಯಾಗುತ್ತದೆ. ಇದರ ರುಚಿ ಮತ್ತು ಪರಿಮಳ ಅನುಭವಿಸಿಯೇ ತಿಳಿಯಬೇಕು. ಈಗ ನಿಮಗೆ ಈ ಬಾರಿಯ ನಮ್ಮ ವಿಶೇಷ ಸಸ್ಯ ಯಾವುದೆಂದು ಅಂದಾಜಾಗಿರಬೇಕಲ್ಲವೇ? ಹೌದು ಮಕ್ಕಳೇ, ಅರಶಿನದ ಬಗ್ಗೆ ಈ ಬಾರಿಯ ಮಾತುಕತೆ.
ಟರ್ಮೆರಿಕ್ ಎಂದೇ ವಿಶ್ವದಾದ್ಯಂತ ಪರಿಚಯಗೊಳ್ಳೋ ಈ ಸಸ್ಯ ದಕ್ಷಿಣ ಏಷ್ಯಾದಲ್ಲಿ ಕೃಷಿಯಾಗಿ ಬೆಳೆಯುವ ಒಂದು ಸಾಮಾನ್ಯ ಸಸ್ಯ. ಪೂರ್ವ ಭಾರತದಲ್ಲಿ ಉಷ್ಣವಲಯದ ಮೂಲಿಕೆ. ಭಾರತದಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಳು ಹೆಚ್ಚು ಬೆಳೆಯುವ ಪ್ರದೇಶಗಳು. ಕಡಿಮೆ ತಾಪಮಾನದಲ್ಲಿ ಇಳುವರಿ ಕಡಿಮೆ. ನೀರಾವರಿ, ಮಳೆಯಾಶ್ರಿತವಾಗಿಯೂ ಬೆಳೆಯಬಲ್ಲದು.
ಮುಂಗಾರು ಪೂರ್ವದಲ್ಲಿ ಬೇರು, ಕಾಂಡಗಳ ಮೂಲಕ ಬಿತ್ತನೆ ಮಾಡಿದರೆ ಎಪ್ರಿಲ್, ಮೇ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ನಾಗರ ಪಂಚಮಿಯ ಸಮಯಕ್ಕೆ ಗಿಡಗಳು ಹದವಾಗಿ ಬೆಳೆದು ಎಲೆಗಳನ್ನು ಮಾರಾಟ ಮಾಡಿಯೂ ರೈತರು ದುಡ್ಡು ಸಂಪಾದಿಸಲು ಕಾರಣವಾಗುತ್ತದೆ. ಎಲೆಗಳನ್ನು ಒಣಗಿಸಿ ಪುಡಿಮಾಡಿಕೊಂಡಿಟ್ಟು ಬಳಕೆ ಮಾಡುವ ಕ್ರಮವೂ ಇದೆ. ಬೇರಿನಲ್ಲಿರುವ ಸಂಪೂರ್ಣ ಗುಣ ಅದರೆಲೆಗಳಲ್ಲೂ ಇದೆ. ಸೌಂದರ್ಯವರ್ಧಕಕ್ಕಾಗಿ ಬೇರೆಯೇ ತಳಿ ಅರಶಿನದಲ್ಲಿದೆ. ಅದರ ಎಲೆಗಳ ನಡುವೆ ಕಂದುವರ್ಣವಿದ್ದು ಉಳಿದ ಭಾಗ ತಿಳಿ ಹಸಿರಾಗಿರುತ್ತದೆ.
ವೈಜ್ಞಾನಿಕವಾಗಿ ಕುರ್ಕುಮಾಲಾಂಗಾ ಎನಿಸಿಕೊಳ್ಳುವ ಅರಶಿನ ಶುಂಠಿ ಜಾತಿಗೆ ಸೇರಿದೆ. ಒಂದು ಮೀಟರ್ ನಷ್ಟೆತ್ತರ ಬೆಳೆಯಬಲ್ಲ ಈ ಸಸ್ಯಕ್ಕೆ ಸ್ವಲ್ಪ ಉದ್ದ ತೊಟ್ಟಿನ ಅಗಲವಾದ ಒಂದು ಅಡಿಗೂ ಉದ್ದದ ಎಲೆಗಳಿರುತ್ತವೆ. ಚೆನ್ನಾಗಿ ಬೆಳೆದ ಗಿಡದ ಎಲೆಗಳ ನಡುಭಾಗ ಅರ್ದ ಅಡಿಯಷ್ಟು ಅಗಲವಿದ್ದು ತುದಿಭಾಗ ಹಾಗೂ ತೊಟ್ಟಿನಭಾಗಗಳು ಚೂಪಾಗಿರುತ್ತದೆ. ಇದರಲ್ಲಿ ದಕ್ಷಿಣ ಒಣಪ್ರದೇಶ, ಗುಡ್ಡಗಾಡು ಹಾಗೂ ಕರಾವಳಿ ಪ್ರದೇಶಗಳಿಗೆಂದು ಪ್ರತ್ಯೇಕವಾದ ಹಲವಾರು ತಳಿಗಳಿವೆ. ಅಧಿಕ ಇಳುವರಿ ಹಾಗೂ ಉತ್ತಮ ಗುಣಮಟ್ಟಕ್ಕಾಗಿ ಅರಶಿನದ ವಿಭಿನ್ನ ತಳಿಗಳನ್ನು ವಾಣಿಜ್ಯ ಕೃಷಿಯಾಗಿ ಬಳಸಲಾಗುತ್ತದೆ. ಏಕೆಂದರೆ ಅರಶಿನ 'ಮಸಾಲೆಗಳ ರಾಜ ' ಎನಿಸಿಕೊಂಡಿದೆ. ಅರಶಿನವನ್ಙು ಧಾರ್ಮಿಕ ಸಮಾರಂಭಗಳಿಗೆ, ಸೌಂದರ್ಯವರ್ಧಕವಾಗಿ ಬಳಸುವುದಷ್ಟೇ ಅಲ್ಲದೆ ಏಷ್ಯಾದಲ್ಲಿ ಭಕ್ಷ್ಯಗಳಿಗೆ ಸೇರಿಸಲ್ಪಡುವ ಪ್ರಮುಖ ವಸ್ತುವಾಗಿದೆ.
ಮಕ್ಕಳೇ, ಚೇಳು, ಜೇನು, ಕಣಜದ ಹುಳು, ಕೆಲವು ಜಾತಿಯ ಇರುವೆಗಳು ಕಚ್ಚಿದರೆ ತುಂಬಾ ಉರಿ ಮತ್ತು ತುರಿಕೆ ಉಂಟಾಗುತ್ತದೆ ಗೊತ್ತಾ?ಅದರ ಉಪಶಮನಕ್ಕಾಗಿ ತಕ್ಷಣ ಕೈಗೆ ಸಿಗುವ ಮನೆಮದ್ದು ಈ ಅರಶಿನ. ಇದೊಂದು ನೈಸರ್ಗಿಕ ನಂಜು ನಿರೋಧಕ. ಬ್ಯಾಕ್ಟೀರಿಯಾ, ವೈರಸ್ ಗಳಿಗೂ ವಿರೋಧಿ. ರೋಗ ನಿರೋಧಕ, ರೋಗ ನಿವಾರಕ, ರೋಗ ನಿಯಂತ್ರಕವಾಗಿಯೂ ಕೆಲಸಮಾಡುತ್ತದೆ. ಮೊನ್ನೆ ಮೊನ್ನೆಯ ಕೊರೋನಾ ಕಾಲದಲ್ಲಿ ಇದಕ್ಕೆ ರಾಜಾತಿಥ್ಯವೇ ದೊರಕಿತ್ತು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಇದನ್ನು ಬಳಸುತ್ತಿದ್ದರೂ 'ಇದು ನಮ್ಮ ಸಸ್ಯ ಎಂದು ಕೆಲವು ದೇಶಗಳು ಪ್ರಭುತ್ವ ಸಾಧಿಸಲು ಹವಣಿಸುವುದನ್ನು ಕಂಡರೆ ಅರಶಿನದ ಮಹತ್ವದ ಅರಿವಾಗುವುದು. ಅರಶಿನ ಬೆಳೆಯುವ ಚೀನಾ, ಬಾಂಗ್ಲಾ, ಇಂಡೋನೇಷ್ಯ ಮೊದಲಾದ ಹತ್ತು ದೇಶಗಳಲ್ಲಿ ಭಾರತವೇ ಪ್ರಥಮ ಸ್ಥಾನದಲ್ಲಿದೆ. ಇದನ್ನು ತೆಂಗು, ಅಡಿಕೆ, ಈರುಳ್ಳಿ, ಬೆಳ್ಳುಳ್ಳಿಗಳ ನಡುವೆ ಉಪಬೆಳೆಯಾಗಿಯೂ ಬೆಳೆಯುತ್ತಾರೆ.
ಅರಶಿನವನ್ನು ತಾಜಾ ಅಥವಾ ಒಣಗಿಸಿಯೂ ಬಳಸಲಾಗುತ್ತದೆ. ಬಟ್ಟೆ ಕಾರ್ಖಾನೆಗಳಲ್ಲಿ ಬಣ್ಣ ಹಾಕಲು, ಸುಗಂಧ ತಯಾರಿಯಲ್ಲಿ, ತಿನಿಸುಗಳಲ್ಲಿ , ಮಸಾಲೆ, ಔಷಧವಾಗಿ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿ, ಕೀಟನಾಶಕವಾಗಿಯೂ ಬಳಸಲ್ಪಡುತ್ತದೆ.
ಗಾಯವಾದಾಗ ತಕ್ಷಣ ನೆರವಿಗೆ ಬರುವ ಅರಶಿನವು ಸಾಂಪ್ರದಾಯಿಕವಾಗಿ 'ತಾಳಿ' ಗೆ ಪರ್ಯಾಯವಾಗಿ ಅಥವಾ ಅದಕ್ಕಿಂತಲೂ ಒಂದಿಷ್ಟು ಹೆಚ್ಚಿನ ಮೌಲ್ಯದಿಂದ ಮದುವೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅರಶಿನ ಶಾಸ್ತ್ರ ಇಂದಿಗೂ ಮಹತ್ವ ಉಳಿಸಿಕೊಂಡಿದೆ. ಇರುವೆಗಳನ್ನು ಓಡಿಸಲೂ ಅರಶಿನದ ಹುಡಿ ಬಳಸುತ್ತಾರೆ. ಮಾತ್ರವಲ್ಲದೆ ಮೃತದೇಹಕ್ಕೆ ಅಂತ್ಯವಿಧಿಯಾಗಿ ಅರಶಿನ ಹಚ್ಚಿ ಸ್ನಾನ ಮಾಡಿಸುವ ಕ್ರಮವಿದೆ. ಶವವು ಬ್ಯಾಕ್ಟೀರಿಯಾಗಳಿಗೆ ತುತ್ತಾಗದಿರಲಿ ಎಂಬ ದೂರದೃಷ್ಟಿ ಇದರಲ್ಲಿರಬಹುದು.
ಇಷ್ಟೆಲ್ಲಾ ಉಪಕಾರಿಯಾದ ಅರಶಿನ ಆಯುರ್ವೇದ ದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ. ಗಂಟಲು ಕೆರೆತ, ರಕ್ತಶುದ್ಧಿ, ಚರ್ಮದಹೊಳಪು, ಕ್ಯಾನ್ಸರ್ ನಿವಾರಕ, ಚರ್ಮದ ನೆರಿಗೆ ನಿವಾರಕ, ನಂಜು ನಿರೋಧಕ, ಮಲಬದ್ಧತೆ, ಹಸಿವಿನ ಕೊರತೆ, ಬಾಯಿ ದುರ್ವಾಸನೆ, ಮಂಡಿನೋವು, ಮಧುಮೇಹ, ನಿದ್ರಾಹೀನತೆ ಇತ್ಯಾದಿಗಳಿಗೆ ಅರಶಿನ ಪಾರಂಪರಿಕ ಔಷಧವಾಗಿದೆ. ಸೊಳ್ಳೆಗಳನ್ನು ಓಡಿಸಲು ಒಣ ಅರಶಿನವನ್ನು ಒಲೆಯ ಕೆಂಡದ ಮೇಲೆ ಹಾಕಿ ಹೊಗೆ ಎಬ್ಬಿಸುವುದುಂಟು. ಅರಶಿನ ಅಡುಗೆ ಮನೆಯ ಸಂಗಾತಿ. ಆರೋಗ್ಯವೃದ್ದಿಗೆಂದು ನಾವು ಅರಶಿನವನ್ನು ಬಳಸುವಾಗ ಅತ್ಯಂತ ಎಚ್ಚರವಹಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಇದರ ಅತಿಯಾದ ಬಳಕೆಯಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇದ್ದೇ ಇದೆ. ಚರ್ಮದ ದದ್ದು, ಮೂತ್ರ ಪಿಂಡದಲ್ಲಿ ಕಲ್ಲು, ರಕ್ತಹೀನತೆ, ವಾಂತಿ ಭೇದಿ, ತಲೆನೋವುಗಳೂ ತಲೆದೋರಬಹುದು. ಕಲ್ಪವೃಕ್ಷದಂತೆ ಅರಶಿನದ ಪ್ರತಿ ಭಾಗ ಉಪಯೋಗವಾದರೂ ಹದವರಿತು ಬಳಸುವುದುತ್ತಮ.
ಮಕ್ಕಳೇ, ಈ ನಿಷ್ಪಾಪಿ ಸಸ್ಯ ಮಾನವನಿಗೆ ಅದೆಷ್ಟು ಉಪಕಾರಿಯಾಗಿದೆಯಲ್ಲವೇ? ಇದು ನಮ್ಮಿಂದ ಯಾವ ಪ್ರತಿಫಲವನ್ನೂ ಬಯಸುವುದಿಲ್ಲ. ನಾವೆಲ್ಲರೂ ನಮ್ಮ ನಮ್ಮ ಮನೆಗಳಿಗೆ ಬೇಕಾದಷ್ಟು ಅರಶಿನವನ್ನು ಚಟ್ಟಿಯಲ್ಲೂ ಬೆಳೆಯಬಹುದು. ಅಂಗಡಿಯಲ್ಲಿ ದೊರೆಯುವ ಅರಶಿನದ ಹುಡಿಯಲ್ಲಿ ಬಣ್ಣಗಳ ಬಳಕೆ ಇರಬಹುದು. ಅದರ ಸಾರವನ್ನು ತೆಗೆದು ಕೇವಲ ಹಳದಿ ಕಾಣುವ ಹುಡಿ ಮಾತ್ರವೇ ಇರಬಹುದು. ಕಲಬೆರಕೆಯ ಕಾಲದಲ್ಲಿ ನಮ್ಮ ಅಂಗಳವೇ ನಮ್ಮ ರಕ್ಷಕ... ಅಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ. ನೀವೂ ಒಂದು ಅರಶಿನ ಗಿಡ ನೆಡ್ತೀರಲ್ವಾ...
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************