-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 24

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 24

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 24
ಲೇಖಕರು : ಪ್ರೇಮನಾಥ ಮರ್ಣೆ
ಸಹ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ಬೈಕಂಪಾಡಿ, 
ಮೀನಕಳಿಯ. ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ                 
              

     ಮಗುವೊಂದು ಪಠ್ಯ ಕಲಿಕೆಯಲ್ಲಿ ಹಿಂದೆ ಉಳಿದ ತಕ್ಷಣ ಅಥವಾ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಪಡೆಯದೆ ಇದ್ದಾಗ ನೀನು ಕೈಲಾಗದವ, ಪ್ರಯೋಜನವಿಲ್ಲದವ, ನಾಲಾಯಕ್ ಎಂದು ನಿರ್ಧರಿಸಿ ಬಿಡುತ್ತೇವೆ. ಬಹುತೇಕ ಶಿಕ್ಷಕರು ಮತ್ತು ಪೋಷಕರು ಇಲ್ಲಿಯೇ ಎಡವುತ್ತಾರೆ. ಆದರೆ ಅವರಲ್ಲಿ ಇರುವ ಆಂತರಿಕ ಗುಣ ಮತ್ತು ವಿಭಿನ್ನ ಸಾಮರ್ಥ್ಯವನ್ನು ಗುರುತಿಸುವ, ಗೌರವಿಸುವ ಮತ್ತು ಪ್ರಶಂಸಿಸುವ ಮಾತುಗಳು ಅದೇ ಮಗುವಿನಲ್ಲಿ ಬದಲಾವಣೆಯ ಆರಂಭಕ್ಕೂ ಕಾರಣವಾಗಬಹುದು ಎಂದು ನನಗನ್ನಿಸಿದ್ದು ಹೀಗೆ. 
     ಆತ ಒಂಭತ್ತನೇ ತರಗತಿ. ಹೆಸರು ಭರತ. ದೂರದ ತಮಿಳುನಾಡಿನಿಂದ ಮಂಗಳೂರಿಗೆ ಬಂದು ನೆಲೆಯೂರಿರುವ, ಕೂಲಿ ಕಾರ್ಮಿಕರಾಗಿ ದುಡಿಯುವ, ಬಡ ಕುಟುಂಬದ ಬಾಲಕ. ತರಗತಿಗೆ ಆಗಾಗ ಗೈರು ಹಾಜರಾಗುವ ಆತ ಕಲಿಕೆಯ ಕಡೆಗೆ ಸ್ವಲ್ಪವೂ ಗಮನ ಕೊಡದೆ ನಿರ್ಲಕ್ಷ್ಯ ತೋರುತ್ತಿದ್ದ. ತರಗತಿಯಲ್ಲಿ ಮುಂದಿನ ಬೆಂಚಿನಲ್ಲಿ ಕುಳಿತವನ ತಲೆಯ ಮರೆಯಲ್ಲಿ ತಾನು ಅಧ್ಯಾಪಕರಿಗೆ ಕಾಣದಂತೆ ಕುಳಿತು ಬಿಡುತ್ತಿದ್ದ. ಇದರಿಂದಾಗಿಯೇ ಆತ ಎಲ್ಲಾ ಶಿಕ್ಷಕರ "ವಿಶೇಷ ಅಗತ್ಯವುಳ್ಳ" ವಿದ್ಯಾರ್ಥಿಯಾಗಿದ್ದ. ಆತನಿಗೆ ಅಕ್ಷರ ಕಲಿಸುವ ನಮ್ಮ ಬಹುತೇಕ ತಂತ್ರಗಳೂ ವಿಫಲವಾಗಿವೆ ಏನೋ ಎಂದು ಅನಿಸಲಾರಂಭಿಸಿತ್ತು. ನೋಡಲು ಆರಡಿ ಎತ್ತರಕ್ಕೆ ಬೆಳೆದಿದ್ದ ಆತನನ್ನು ನಮ್ಮ ದೈಹಿಕ ಶಿಕ್ಷಕಿಯವರು "ಆಟೋಟದಲ್ಲಾದ್ರೂ ತೊಡಗಿಸಿಕೋ ಮಹಾರಾಯ" ಎಂದು ಪುಸಲಾಯಿಸಿ ಶಾಲಾ ಕಬಡ್ಡಿ ತಂಡಕ್ಕೆ ಸೇರಿಸಿದರು. ಯಾರಲ್ಲೂ ಹೆಚ್ಚು ಮಾತನಾಡದೆ, ಶಾಂತವಾಗಿಯೇ ಇರುವ ಆತನ ಕಬಡ್ಡಿ ರೈಡ್ ಕೂಡಾ ಕೂಲ್ ಆಗಿಯೇ ಇತ್ತು. ಮೊನ್ನೆ ತಾನೇ ನಮ್ಮ ಹೋಬಳಿ ಮಟ್ಟದ ಕಬಡ್ಡಿ ಮ್ಯಾಚ್ ಗೆ ವಿದ್ಯಾರ್ಥಿಗಳೊಂದಿಗೆ ಹೋಗುವ ಅವಕಾಶ ನನ್ನ ಪಾಲಿಗೆ ಸಿಕ್ಕಿತ್ತು. ಕಬಡ್ಡಿ ಆಟ ಆಡಿ ಅನುಭವವಿಲ್ಲದಿದ್ದರೂ ಮಕ್ಕಳಲ್ಲಿ ಮಾನಸಿಕ ಧೈರ್ಯ ಮತ್ತು ಶಕ್ತಿಯನ್ನು ತುಂಬುವ ಕೆಲಸ ಮಾಡ್ತಾ ಇದ್ದೆ. 
      ಆಡುತ್ತಾ ಆಡುತ್ತಾ ನಮ್ಮ ಮಕ್ಕಳು ನಿರ್ಣಾಯಕ ಸೆಮಿ ಫೈನಲ್ ತಲುಪಿದರು. ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಿತ್ತು. ಇದ್ದಕ್ಕಿದ್ದ ಹಾಗೆ ಉತ್ತಮ ಅಂಕದ ಲೀಡ್ ನಲ್ಲಿದ್ದ ನಮ್ಮ ಬಾಲಕರಿಗೆ ಒಂದು ಅಂಕದ ಹಿನ್ನಡೆಯಾಯ್ತು. ತಂಡದ ಬಲಿಷ್ಠ ರೈಡರ್ ಕುಮಾರ ಸಹಿತ ಇಬ್ಬರು ಆಟಗಾರರು ಔಟ್ ಆಗಿ ಅಂಗಣದ ಹೊರಗೆ ಚಿಂತಾಕ್ರಾಂತರಾಗಿ ಕೂತಿದ್ದರು.
      ಆ ಕ್ಷಣಕ್ಕೆ ಟೈಮ್ ಔಟ್ ತಗೊಂಡು ನಮ್ಮ ಕೋಚ್, ಶಾಂತಲಾ ಮೇಡಂ ನಾನೂ ಸೇರಿ ಈ ನಮ್ಮ ಆರಡಿಯ ಭರತನನ್ನು ಹುರಿದುಂಬಿಸಿದೆವು. "ಭರತ್.. ನಿನ್ನ ಸಾಮರ್ಥ್ಯ ಏನು ಎನ್ನುವುದನ್ನು ಈಗ ತೋರಿಸು. ಈಗ ಇದು ನಿನ್ನಿಂದ ಮಾತ್ರ ಸಾಧ್ಯ. ನಿನ್ನ ಬೆಸ್ಟ್ ರೈಡಿಂಗ್ ನಾವು ನೋಡಬೇಕು" ಆತ ಹೊಸ ಹುರುಪಿನಿಂದ ರೈಡ್ ಹೋದವನೇ ಇಬ್ಬರನ್ನು ಏಕಕಾಲಕ್ಕೆ ಔಟ್ ಮಾಡಿ ಪಂದ್ಯವನ್ನು ಜೀವಂತವಾಗಿರಿಸಿದ. ಮತ್ತೆ ಇಬ್ಬರು ನಿರಂತರವಾಗಿ ಔಟ್ ಆಗ್ತಾ ಇದ್ದ ಹಾಗೇ ಈತನೇ ರೈಡ್ ಮಾಡಿ ಮತ್ತೆ ಅಂಕ ಗಳಿಸಿ ಪಂದ್ಯವನ್ನು ಗೆಲ್ಲಿಸಿದ. 
      ಫೈನಲ್ ಪಂದ್ಯ ಮತ್ತೆ ಬಲಿಷ್ಠ ಖಾಸಗಿ ಶಾಲಾ ತಂಡದೊಂದಿಗೆ. ದಷ್ಟ ಪುಷ್ಟವಾಗಿ ಬೆಳೆದಿದ್ದ ಆ ಮಕ್ಕಳ ಮುಂದೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಕುಬ್ಜರಾಗಿ ಕಂಡರೂ ನಮ್ಮ ವಿದ್ಯಾರ್ಥಿಗಳ ಟೀಮ್ ವರ್ಕ್ ಮುಂದೆ ಅವರು ಸೋಲಲೇ ಬೇಕಾಯಿತು. ಈ ಪಂದ್ಯವೂ ಕೈ ತಪ್ಪುವ ಆತಂಕವಿದ್ದಾಗಲೂ ಮತ್ತೆ ಮತ್ತೆ ರೈಡ್ ಮಾಡಿ ಪಾಯಿಂಟ್ ಪಡೆದ ಭರತ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಹೋಬಳಿ ಚಾಂಪಿಯನ್ ನಮಗೇ ಸಿಕ್ಕಿತ್ತು. 
    ಭರತನ ಆಟ ನನಗೆ ಖುಶಿ ಕೊಟ್ಟಿತ್ತು. ಆತನ ಬಗ್ಗೆ ನನಗಿದ್ದ ತಾತ್ಸಾರ ಭಾವನೆ ಕರಗಿಹೋಗಿತ್ತು. ನನ್ನ ಮನದಲ್ಲಿ ಆತನ ಬಗ್ಗೆ ಗೌರವಭಾವ ಮೂಡಿತ್ತು. ಗೆದ್ದ ಕಪ್ಪನ್ನು ನೇರವಾಗಿ ತಂದು ನನ್ನ ಕೈಗೆ ಇತ್ತ ಆತನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದೆ. "ಮೈದಾನದಲ್ಲಿ ಗೆಲ್ಲಬಲ್ಲ ಸಾಮರ್ಥ್ಯವಿರುವ ನಿನಗೆ ತರಗತಿಯ ಒಳಗೂ ಖಂಡಿತಾ ಗೆಲ್ಲುವ ಸಾಮರ್ಥ್ಯವಿದೆ. ನಿನ್ನ ಇಂದಿನ ಛಲವನ್ನು ತರಗತಿಯ ಒಳಗೂ ನೋಡಲು ಬಯಸುತ್ತೇವೆ. ನಿನ್ನಿಂದ ಖಂಡಿತಾ ಸಾಧ್ಯವಿದೆ" ಅಂದೆ. ಆತನಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ. ಮುಗುಳ್ನಗುತ್ತಾ "ಥ್ಯಾಂಕ್ಸ್ ಸರ್" ಅಂದ.
       ಮರುದಿನದ ತರಗತಿಯಲ್ಲಿ ವಿದ್ಯಾರ್ಥಿಗಳ ಮುಂದೆ ಆತನ ಆಟದ ಶೈಲಿಯನ್ನು ವರ್ಣಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ಇರುವ ಅವಕಾಶಗಳು, ಸಾಧನೆಯ ಸಾಧ್ಯತೆಗಳ ಕುರಿತು ತಿಳಿಸಿದೆ. ಅಧ್ಯಾಪಕ ವೃಂದಕ್ಕೂ ಆತನ ವಿಚಾರ ಹಂಚಿಕೊಂಡೆ. ಅಧ್ಯಾಪಕರ ಅಭಿನಂದನೆಗಳಿಗೂ ಪಾತ್ರವಾದ ಆತ ಏನೋ ನಿರ್ಧರಿಸಿಕೊಂಡವನಂತೆ ಈಗ ತರಗತಿಯಲ್ಲಿ ತಲೆ ಎತ್ತಿ ಕುಳಿತುಕೊಳ್ಳುತ್ತಿದ್ದಾನೆ. ಪ್ರತಿದಿನವೂ ಶಾಲೆಗೆ ಬರುತ್ತಿದ್ದಾನೆ. ನಾಳೆಯ ತಾಲೂಕು ಮಟ್ಟದ ಪಂದ್ಯಕ್ಕೂ ತಯಾರಿ ನಡೆಸುತ್ತಾ, "ಸಾರ್... ನಾಳೆ ನಮ್ಮ ಆಟ ನೋಡ್ಲಿಕ್ಕೆ ಬರ್ತೀರಲ್ವಾ...?" ಅನ್ನುತ್ತಾ ಮತ್ತೆ ಅಭ್ಯಾಸದಲ್ಲಿ ತೊಡಗಿಕೊಂಡ.
................................... ಪ್ರೇಮನಾಥ ಮರ್ಣೆ
ಸಹ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ಬೈಕಂಪಾಡಿ, 
ಮೀನಕಳಿಯ. ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob : +91 99642 14605
*******************************************
Ads on article

Advertise in articles 1

advertising articles 2

Advertise under the article