ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 23
Sunday, August 20, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 23
ಲೇಖಕರು : ಲೋಕೇಶ್ ಸರ್ಕುಡೇಲು
ಸಹಶಿಕ್ಷಕರು
ಸರಕಾರಿ ಪದವಿ ಪೂರ್ವ ಕಾಲೇಜು
ಬೆಳಿಯೂರುಕಟ್ಟೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅವನ ಹೆಸರು ರಕ್ಷಣ್. ತಾಯಿಯ ಆರೋಗ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಮನೆಯ ಸ್ಥಿತಿ ಮರುಕ ಬರುವಷ್ಟು ಚಿಂತಾಜನಕ. ತಂದೆ ಜೊತೆಗೆ ಅಕ್ಕ, ತಮ್ಮ ಮತ್ತು ತಂಗಿ. ನೆರೆ ಮನೆಯಲ್ಲಿ ಮಾವನೇ ಇದ್ದರೂ ಜಗಳ ನಿತ್ಯ ನಿರಂತರ. ದೂರು ಫೋಲೀಸ್ ಸ್ಟೇಷನ್ ವರೆಗೂ ಹೋಗಿತ್ತು. ಮಾವನನ್ನು ಕಂಡರೆ ಉರಿದು ಬೀಳುತ್ತಿದ್ದ ಹುಡುಗ. ಮಾವನ ಮನೆಗೆ ಕಲ್ಲೆಸೆಯುವಷ್ಟು ನಿಷ್ಠುರ ಸ್ವಭಾವ. ಈ ಎಲ್ಲಾ ಕಾರಣಗಳಿಂದ ಶಾಲೆಗೆ ಅನಿಯಮಿತ ಗೈರುಹಾಜರಿ. ಏನೇ ಆದರೂ ಶಾಲೆಯವರಿಗೆ ಬಿಡುವಂತಿಲ್ಲ. ಮನೆ ಭೇಟಿ ನಡೆದೇ ಇತ್ತು. ಶಿಕ್ಷಕರು ಹೋದಾಗಲೇ ಮನೆಯ ಸ್ಥಿತಿಯ ಅರಿವಾದದ್ದು. ಅವನನ್ನು ಒಪ್ಪಿಸಿ ಶಾಲೆಗೆ ಕರೆ ತರಲು ಶಿಕ್ಷಕರು ತಮ್ಮೆಲ್ಲಾ ಜಾಣತನ ತೋರಿಸಿದರು. ಕೊನೆಗೂ ಚಿಕ್ಕಪ್ಪನ ಮನೆಯಿಂದ ಹುಡುಗ ಶಾಲೆಗೆ ಬರತೊಡಗಿದ. ಕ್ರಮೇಣ ಬಾಲಕನ ವರ್ತನೆಯಲ್ಲಿ ಪರಿವರ್ತನೆ ಕಾಣತೊಡಗಿತು. ಕಲಿಕೆಯಲ್ಲಿ ಆಸಕ್ತಿ ಕಂಡುಬಂತು. ಉಳಿದ ವಿದ್ಯಾರ್ಥಿಗಳಿಗೆ ಅವನಲ್ಲಾದ ಶೈಕ್ಷಣಿಕ ಪ್ರಗತಿ ಉದಾಹರಣೆಯಾಗಿ ಹೇಳುವಷ್ಟು ಆಗಿತ್ತು. ಕರೆತಂದ ಶಿಕ್ಷಕರಿಗೆ ಧನ್ಯತೆಯ ಭಾವ.
ಅಂದು ಅವನ ಹುಟ್ಟಿದ ದಿನ. ಸಂಜೆಯ ತನಕ ಯಾರಿಗೂ ತಿಳಿದಿರಲಿಲ್ಲ. ಹುಟ್ಟು ದಿನಕ್ಕೆ ಶುಭ ಕೋರುವ ಸಂಪ್ರದಾಯ ಶಾಲೆಯಲ್ಲಿದ್ದರೂ ಅವನು ಯಾರಲ್ಲೂ ಹೇಳಿರಲಿಲ್ಲ. ಆ ದಿನ ಅವನ ಮುಖ ಕಳೆಗುಂದಿತ್ತು. ಯಾರೋ ಹುಡುಗ ಬಂದು ಹೇಳಿದ ಇವತ್ತು ಅವನ ಹುಟ್ಟಿದ ಹಬ್ಬ ಅವನು ಯಾರಿಗೂ ಹೇಳಿಲ್ಲ. ಶುಭಾಶಯವನ್ನೂ ಹೇಳಿಲ್ಲ, ಹೊಸ ಬಟ್ಟೆ ಧರಿಸಿಲ್ಲ. ಚಾಕಲೇಟು ಕೊಟ್ಟಿಲ್ಲ. ನಾನು ಹುಡುಗನನ್ನು ಕರೆದು ವಿಚಾರಿಸಿದೆ. ಮಾತನಾಡಿ ಶುಭಾಶಯ ಹೇಳಿದೆ. ಸ್ವಲ್ಪ ಹಣವನ್ನು ಕೈಗಿತ್ತು ನಾಳೆ ಚಾಕೊಲೇಟ್ ಹಂಚುವಂತೆ ಹೇಳಿದೆ. ಒಲ್ಲದ ಮನಸ್ಸಿನಿಂದಲೇ ಹಣವನ್ನು ಜೇಬಿಗಿಳಿಸಿ ಹೊರಹೋದ. ಮರುದಿನ ಬೆಳಿಗ್ಗೆ ಬಂದವನೇ ಅಧ್ಯಾಪಕರ ಕೊಠಡಿಗೆ ಮುಗಳ್ನಗುತ್ತಾ ಬಂದವನೇ ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಒಂದು ಕ್ಷಣ ನನ್ನ ಕಣ್ಣಾಲಿಗಳು ತುಂಬಿ ಬಂತು. ಒಂದು ಸಣ್ಣ ಗುರುತಿಸುವಿಕೆ ಮತ್ತು ಸಹಾಯ ಆ ಹುಡುಗನ ಮನಸ್ಸಿನಲ್ಲಿ ಎಂತಹ ಪರಿಣಾಮ ಬೀರಿದೆ...? ಆ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುವಲ್ಲಿ ಅವನಿಗೆ ಯಾವ ಸಂಕೋಚವೂ ಇರಲಿಲ್ಲ.
ದಿನಗಳು ಕಳೆದವು, ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಕಾರ್ಯಕ್ರಮ. ಕೆಲವು ಮಕ್ಕಳು ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದರು. ಇವನೂ ವೇದಿಕೆಯಲ್ಲಿ ನಮ್ಮ ಶಾಲೆಯ ಶಿಕ್ಷಕರಿಂದಾಗಿ ತಾನು ಇವತ್ತು ಇಲ್ಲಿರುವುದು ಸಾಧ್ಯವಾಯಿತು ಎನ್ನುತ್ತಲೇ ಕಣ್ಣಂಚಲ್ಲಿ ನೀರು ಜಿನುಗಿತು. ಶಿಕ್ಷಕರೆಲ್ಲರೂ ತಮ್ಮ ಮಾತಿನಲ್ಲಿ ಅವನ ಬಗ್ಗೆ ಹೊಗಳಲು ಮರೆಯಲಿಲ್ಲ.
ಇದೆಲ್ಲ ನಡೆದು ಎರಡು ತಿಂಗಳಷ್ಟೇ ಕಳೆದಿದೆ. ಆಘಾತಕಾರಿ ಸುದ್ದಿಯೊಂದು ಬಂದಾಗ ನಾನು ದೂರದೂರಿನಲ್ಲಿದ್ದೆ. ದುಃಖ ಉಮ್ಮಳಿಸಿ ಬಂತು. ನಮ್ಮೆಲ್ಲರ ಮೆಚ್ಚಿನ ಹುಡುಗ ನೇತ್ರಾವತಿ ನದಿಯಲ್ಲಿ ಮುಳುಗಿದ್ದ. ಮಳೆಗಾಲದ ತುಂಬಿ ಹರಿಯುವ ನದಿಯಲ್ಲಿ ಮೀನು ಹಿಡಿಯುವ ಸಾಹಸಕ್ಕೆ ಯಾಕೆ ಕೈ ಹಾಕಿದನೋ ಗೊತ್ತಿಲ್ಲ. ಬಾರದ ಲೋಕ ಸೇರಿ ಬಿಟ್ಟ. ಅಂತೂ ಮರೆಯಲಾಗದ, ಮರೆಯಬಾರದ ನೆನಪನ್ನು ಉಳಿಸಿ ಹೋದ, ಅವನ ಬಗ್ಗೆ ಹೇಳುವಾಗ ಧ್ವನಿ ಗದ್ಗದಿತವಾಗುತ್ತದೆ. ಬರೆಯುವಾಗ ಕೈ ಕಂಪಿಸುತ್ತದೆ.
ಸಹಶಿಕ್ಷಕರು
ಸರಕಾರಿ ಪದವಿ ಪೂರ್ವ ಕಾಲೇಜು
ಬೆಳಿಯೂರುಕಟ್ಟೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99018 57627
*******************************************