-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 21

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 21

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 21
ಲೇಖಕರು : ಪ್ರೇಮಲತಾ ಡಬ್ಲ್ಯೂ.ಎಂ.
ಸಹಶಿಕ್ಷಕಿ(PCM) 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                       

       ನಾನು ಮಂಚಿ ಶಾಲೆಯಲ್ಲಿ ಗಣಿತ ವಿಷಯದಲ್ಲಿ ಸಹಶಿಕ್ಷಕಿಯಾಗಿ ಸುಮಾರು 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಕರಾಗಿ ಒಂದಲ್ಲ ಒಂದು ಘಟನೆಗಳು ನಡೆಯುವುದು ಸಹಜ. ಅದು ಸಿಹಿಯೂ ಆಗಿರಬಹುದು, ಅಥವಾ ಕಹಿಯೂ ಆಗಿರಬಹುದು. ಹೀಗೆ ನನ್ನ ಜೀವನದಲ್ಲಿ ನನಗೆ ಖುಷಿ ನೀಡಿದ ಒಂದು ಘಟನೆಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.  
     ಕೆಲಸಕ್ಕೆ ಸೇರಿ ಸ್ವಲ್ಪ ಸಮಯದ ನಂತರ ಅನಿವಾರ್ಯ ಕಾರಣಗಳಿಗಾಗಿ ಮಂಗಳೂರಿನ ಸದಾಶಿವನಗರ ಸರಕಾರಿ ಶಾಲೆಗೆ ನಾಲ್ಕು ತಿಂಗಳ ಸಮಯ ನಿಯೋಜನೆಗೊಂಡಿದ್ದೆ. ಆ ಸಮಯದಲ್ಲಿ ನಡೆದಿರುವ ಘಟನೆ. 
     ಆ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ. ಆ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶಿವರಾಜ್ (ಹೆಸರು ಬದಲಿಸಲಾಗಿದೆ). ಆತ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದನು. ನಿತ್ಯ ಅವನ ತಾಯಿ ಶಾಲೆಗೆ ವೀಲ್ ಚೇರ್ ನಲ್ಲಿ ಕರೆದುಕೊಂಡು ಬರುತ್ತಿದ್ದರು. ಮನೆಗೆ ಹೋಗುವಾಗ ತನ್ನ ಗೆಳೆಯನೊಂದಿಗೆ ಮನೆಗೆ ಹೋಗುತ್ತಿದ್ದನು. ಕಲಿಯಲು ಕೂಡ ಅಷ್ಟಕ್ಕಷ್ಟೆ. ಅವನು ಗಣಿತ ಪರೀಕ್ಷೆಯಲ್ಲಿ ಯಾವಾಗಲೂ 5 ಅಥವಾ 6 ಅಂಕಗಳನ್ನು ತರುತ್ತಿದ್ದನು. 10 ಅಂಕಿಗಳನ್ನು ಮೀರಿದವನಲ್ಲ. ಆದರೆ ಉತ್ಸಾಹಿ ಹುಡುಗ. ಬದುಕಿನಲ್ಲಿ ಏನೋ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡವನು.
     ಹೀಗಿರುವಾಗ ಒಂದು ದಿನ ಅವನು ನನ್ನಲ್ಲಿಗೆ ಬಂದು, "ನನಗೆ ಗಣಿತ ಅಂದರೆ ತುಂಬಾ ಕಷ್ಟ. ತಲೆಗೆ ಹತ್ತೋದಿಲ್ಲ ಮೇಡಮ್" ಎಂದು ಬಹಳ ವಿನಯದಿಂದಲೇ ಹೇಳಿಕೊಂಡನು. ಹುಡುಗನ ಸಮಸ್ಯೆ, ಹಿನ್ನೆಲೆ, ಕಲಿಯುವ ಕಾಳಜಿಯನ್ನು ಮನನ ಮಾಡಲು ನನಗೆ ತುಂಬಾ ಸಮಯ ಬೇಕಾಗಿರಲಿಲ್ಲ. ಕಲಿಯುವ ತುಡಿತ ಆತನಲ್ಲಿತ್ತು. ಅವನಿಗೆ ಬೇಕಾಗಿರುವುದು ಧೈರ್ಯದ ಮಾತು ಮಾತ್ರ ಎಂಬುದಾಗಿ ಅರಿತೆ. ನಾನು ಅವನಿಗೆ ತಾಯಿಯ ಸ್ಥಾನದಲ್ಲಿ.... "ಅದೆಷ್ಟೋ ದೈಹಿಕ ಸಮಸ್ಯೆ ಇರುವ ಅನೇಕ ವಿದ್ಯಾರ್ಥಿಗಳು ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ನಿನಗೆ ಏನೇ ಸಮಸ್ಯೆ ಇದ್ದರೂ ಧೈರ್ಯ ಕಳೆದುಕೊಳ್ಳಬೇಡ. ನಾನು ನಿನಗೆ ಹೇಳಿ ಕೊಡುತ್ತೇನೆ" ಎಂದು ಅವನಿಗೆ ಬಹಳ ಪ್ರೀತಿಯಿಂದ ಕಲಿಯಲು ಸಲಹೆಯನ್ನು ಕೊಟ್ಟೆ.
       ಆ ಧೈರ್ಯ ತುಂಬುವ ಮಾತು ಬಹಳಷ್ಟು ಪರಿಣಾಮ ಬೀರಿತು. ಕೇಳಿ ಕಲಿಯುವ ಕುತೂಹಲ ಮೂಡಿಸಿತು. ತಾನು ಕಲಿಯಬೇಕು ತನ್ನಿಂದ ಸಾಧ್ಯವಿದೆ ಎಂಬುದಾಗಿ ಅರಿತುಕೊಂಡನು. ನನ್ನ ಹತ್ತಿರ ಬಂದು ಗಣಿತದ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳುವುದನ್ನು ತಪ್ಪದೆ ಮಾಡುತ್ತಿದ್ದನು. ಹೀಗೆ ನಿರಂತರ ಸತತ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಸಾಮರ್ಥ್ಯವನ್ನು ಪಡೆದುಕೊಂಡನು. ಆ ಸಾಮರ್ಥ್ಯದಿಂದ ಅಂದಿನ ವಾರ್ಷಿಕ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 88 ಅಂಕಗಳನ್ನು ತೆಗೆದುಕೊಂಡನು. ಒಂದಂಕಿ ಸಾಮರ್ಥ್ಯದಿಂದ ಬದಲಾದ ಆತನ ಕಲಿಕೆಯ ಸಾಮರ್ಥ್ಯ ಆತನಲ್ಲಿ ಅದೆಷ್ಟೋ ಕನಸುಗಳನ್ನು ತುಂಬಿತು. ಅವನು ಪಟ್ಟ ಸಂಭ್ರಮ ನನಗೆ ನೀಡಿದ ಅತಿ ದೊಡ್ಡ ಪ್ರಶಸ್ತಿಯಾಗಿತ್ತು. 
       ಎಷ್ಟೋ ಮಕ್ಕಳು ಕೈಕಾಲು ಸರಿ ಇದ್ದರೂ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳದೆ ಹಿಂದುಳಿಯುತ್ತಾರೆ. ಮನಸ್ಸು ಮಾಡಿದರೆ ಯಾವುದೇ ಕೆಲಸವು ಯಶಸ್ವಿಯಾಗಿ ನಮ್ಮ ಜೀವನದಲ್ಲಿ ಮಾಡಬಹುದೆನ್ನುವುದಕ್ಕೆ ಈ ಘಟನೆಯು ಒಂದು ಸಾಕ್ಷಿ. ಆದಕಾರಣ ಹಿರಿಯರು ನುಡಿದ "ಮನಸಿದ್ದರೆ ಮಾರ್ಗ" ಎಂಬ ಈ ಗಾದೆ ನಮ್ಮೆಲ್ಲರ ಜೀವನದಲ್ಲಿ ತುಂಬಾನೇ ಮುಖ್ಯವಾದದ್ದು. ಧನ್ಯವಾದಗಳು.
........................... ಪ್ರೇಮಲತಾ ಡಬ್ಲ್ಯೂ.ಎಂ.
ಸಹಶಿಕ್ಷಕಿ(PCM) 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article