-->
ಹಕ್ಕಿ ಕಥೆ : ಸಂಚಿಕೆ - 113

ಹಕ್ಕಿ ಕಥೆ : ಸಂಚಿಕೆ - 113

ಹಕ್ಕಿ ಕಥೆ : ಸಂಚಿಕೆ - 113
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
              
              
     ಎಲ್ಲರಿಗೂ ನಮಸ್ಕಾರ.. ಚಾರಣದೊಂದಿಗೆ ಹಕ್ಕಿ ಕಥೆ ಸರಣಿಯ ಹೊಸದೊಂದು ಹಕ್ಕಿ ಪರಿಚಯಕ್ಕೆ ಸ್ವಾಗತ.
     ಉತ್ತರಾಖಂಡದ ಜೋಶೀಮಠ ಇತ್ತೀಚೆಗೆ ಬಹಳ ಸುದ್ದಿಯಲ್ಲಿತ್ತು. ಜೋಶಿಮಠ ಕುಸಿಯುತ್ತಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ನೀವೂ ಓದಿದ ನೆನಪು ಇರಬಹುದು. ಮೂಲತಃ ಈ ಊರಿನ ಹೆಸರು ಜ್ಯೋತಿರ್ಮಠ. ಜನರ ಆಡುಮಾತಿನಲ್ಲಿ ಜೋಶೀಮಠ ಎಂದು ಬದಲಾಗಿದೆ. ಇದೇ ಜೋಶೀಮಠದಿಂದ ಬದರೀನಾಥಕ್ಕೆ ಹೋಗುವ ದಾರಿಯಲ್ಲಿ ಗೋವಿಂದಘಾಟ್ ಎಂಬ ಊರು ಸಿಗುತ್ತದೆ. ಯುನೆಸ್ಕೋ ಜೀವವೈವಿಧ್ಯ ತಾಣ ಗುರುತಿಸಿರುವ ಹೂವಿನ ಕಣಿವೆ ಮತ್ತು ಹೇಮಕುಂಡ್ ಸಾಹಿಬ್ ಎಂಬ ಎಂಬ ಎರಡು ಪ್ರಸಿದ್ಧ ಚಾರಣ ಸ್ಥಳಗಳು ನಮ್ಮ ಮುಂದಿನ ಗುರಿಯಾಗಿದ್ದವು. 
ಅನಸೂಯಾ ಚಾರಣ ಮುಗಿಸಿ, ಮೊದಲೇ ಗೊತ್ತುಮಾಡಿಕೊಂಡ ಜೀಪ್ ನಲ್ಲಿ ಗೋಪೇಶ್ವರ, ಚಮೋಲೀ, ಹೇಲಾಂಗ್, ಲ್ಯಾರೀಥಾನ್, ಉರ್ಗಾಮ್ ಮಾರ್ಗವಾಗಿ ಕಲ್ಪೇಶ್ವರ ಎಂಬಲ್ಲಿ ತಲುಪಿದೆವು. ಅಲ್ಲಿ ನಮ್ಮ ಪಂಚಕೇದಾರಗಳಲ್ಲಿ ಕೊನೆಯದಾದ ಕಲ್ಪೇಶ್ವರ ಮಂದಿರದ ದರ್ಶನ ಮಾಡಿಕೊಂಡು ಅಂದು ರಾತ್ರಿ ಅಲ್ಲೇ ಉಳಿದುಕೊಂಡೆವು. ನಾವು ಉಳಿದುಕೊಂಡಿದ್ದ ಹೋಂಸ್ಟೇ ಮುಂದೆ ಸಣ್ಣದೊಂದು ಕೈತೋಟದಲ್ಲಿ ಹಲವಾರು ಬಗೆಯ ತರಕಾರಿಗಳನ್ನು ಬೆಳೆದಿದ್ದರು. ಬೆಳಗಿನ ಚಹಾ ಕುಡಿದು ನಮ್ಮ ಪ್ರಯಾಣ ಮುಂದುವರೆಸಿದೆವು. ನಮ್ಮ ಈ ದಿನದ ಗುರಿ ಗೋವಿಂದಘಾಟ್ ತಲುಪುವುದಾಗಿತ್ತು. ಕಲ್ಪೇಶ್ವರದಿಂದ ಗೋವಿಂದಘಾಟ್ ಹೋಗುವ ದಾರಿಯಲ್ಲಿ ಧ್ಯಾನ್ ಬದ್ರಿ, ವೃದ್ಧ ಬದ್ರಿ, ಭವಿಷ್ಯ ಬದ್ರಿ, ಯೋಗ ಬದ್ರಿ ಎಂಬ ನಾಲ್ಕು ದೇವಾಲಯಗಳನ್ನು ನೋಡಿಕೊಂಡು ಹೋದೆವು. (ಇನ್ನೊಂದು ದೇವಾಲಯ ಆದಿ ಬದ್ರಿಯನ್ನು ಮೊದಲೇ ನೋಡಿಕೊಂಡು ಬಂದಿದ್ದೆವು) ಪಂಚಕೇದಾರಗಳೆಂಬ ಶಿವಾಲಯಗಳಂತೆ, ಪಂಚಬದ್ರಿಗಳೆಂದು ಕರೆಯಲ್ಪಡುವ ಐದು ವಿಷ್ಣುವಿನ ದೇವಾಲಯಗಳು ಇವು. ಹಿಮಾಲಯದಲ್ಲಿ ಕಾಣಸಿಗುವ ನಾಗರ ಶೈಲಿಯ ದೇವಾಲಯಗಳು. ಹಿಮ ಮತ್ತು ಮಳೆಯನ್ನು ತಡೆದುಕೊಂಡು ಇಂದಿಗೂ ನಿಂತಿರುವ ಈ ವಾಸ್ತುಶಿಲ್ಪಗಳನ್ನು ನೋಡುವುದು ಬಹಳ ಸಂತಸದಾಯಕವಾಗಿತ್ತು. ಬರುವಾಗ ದಾರಿಯಲ್ಲಿ ಜ್ಯೋತಿರ್ಮಠದ ನರಸಿಂಹ ದೇವಾಲಯವನ್ನು ನೋಡಿಕೊಂಡು ನಮ್ಮ ಬೇಸ್ ಕ್ಯಾಂಪ್ ಗೋವಿಂದಘಾಟ್ ತಲುಪಿ ಹೋಟೆಲ್ ಒಂದರಲ್ಲಿ ಉಳಿದುಕೊಂಡೆವು. ಪಕ್ಕದಲ್ಲೇ ಅಲಕನಂದಾ ನದಿ ಹರಿಯುತ್ತಿತ್ತು. ಆ ಕಡೆಯಿಂದ ಲಕ್ಷ್ಮಣಗಂಗಾ ಎಂಬ ಸಣ್ಣ ನದಿಯೊಂದು ಹರಿದುಕೊಂಡು ಬಂದು ಅಲಕನಂದಾ ನದಿಯನ್ನು ಸೇರುತ್ತಿತ್ತು. ನದಿಯ ಹರಿವಿನ ಶಬ್ದವನ್ನು ಕೇಳುತ್ತಾ ಊಟ ಮಾಡಿ ಮಲಗಿಕೊಂಡೆವು.  
        ಮರುದಿನ ಬೆಳಗ್ಗೆ ಬೇಗನೆ ಎದ್ದು ಮೂರು ದಿನಗಳಿಗೆ ಅಗತ್ಯವಾದಷ್ಟು ವಸ್ತುಗಳನ್ನು ಮಾತ್ರ ಹಿಡಿದುಕೊಂಡು ನಮ್ಮ ಈ ದಿನದ ಚಾರಣ ಪ್ರಾರಂಭಿಸಿದೆವು. ಗೋವಿಂದಘಾಟ್ ನಿಂದ ಪುಲ್ನಾ ಎಂಬ ಹಳ್ಳಿಯವರೆಗೆ ಸ್ಥಳೀಯ ಜೀಪುಗಳು ಮಾತ್ರ ಓಡಾಡುತ್ತವೆ. ನಾವೂ ಒಂದು ಜೀಪು ಹಿಡಿದು ಪುಲ್ನಾ ತಲುಪಿದೆವು. ಅಲ್ಲಿ ಎಲ್ಲರೂ ಚಹಾ ಮತ್ತು ಬಿಸ್ಕೆಟ್ ಸೇವಿಸಿ ಚಾರಣ ಪ್ರಾರಂಭ ಮಾಡಿದೆವು. ಈ ದಾರಿಯಲ್ಲಿ ಸಿಖ್ಖರ ಪವಿತ್ರ ಗುರುದ್ವಾರಗಳಲ್ಲಿ ಒಂದಾದ ಹೇಮಕುಂಡ್ ಸಾಹಿಬ್ ಇರುವುದರಿಂದ ಅಧಿಕ ಸಂಖ್ಯೆಯಲ್ಲಿ ಸಿಖ್ ಯಾತ್ರಾರ್ಥಿಗಳು ಓಡಾಡುತ್ತಿದ್ದರು. ನಮ್ಮ ದಾರಿಯ ಒಂದು ಬದಿಯಲ್ಲಿ ಲಕ್ಷ್ಮಣಗಂಗಾ ನದಿ ಹರಿಯುತ್ತಿತ್ತು. ದಿನಕ್ಕೆ ಸಾವಿರಾರು ಯಾತ್ರಿಕರು ಬರುವ ಕಾರಣ ಕಲ್ಲು, ಸಿಮೆಂಟುಗಳಿಂದ ಅಗಲವಾದ ಸರ್ವಋತು ದಾರಿಯನ್ನೇ ಮಾಡಿದ್ದರು. ವಸ್ತುಗಳನ್ನು ಸಾಗಿಸಲು, ವಯಸ್ಸಾದವರು ಮತ್ತು ಮಕ್ಕಳ ಅನುಕೂಲಕ್ಕಾಗಿ ಹೇಸರಗತ್ತೆಗಳನ್ನು ಬಳಸುತ್ತಿದ್ದರು. ಗಟ್ಟಿಮುಟ್ಟಾದ ಯುವಕರೂ ಅವುಗಳ ಮೇಲೆ ಸವಾರಿ ಹೋಗುವುದನ್ನು ನೋಡಿದಾಗ, ಇವರಿಗೆ ನಡೆದುಕೊಂಡು ಹೋಗಲಾಗದಿದ್ದರೆ ಇಲ್ಲಿಗೆ ಯಾಕಾದರೂ ಬರಬೇಕು ಎಂದು ಅನಿಸಿದ್ದಂತೂ ನಿಜ.
     ಅಲ್ಲಿ ಎಲ್ಲರೂ ಓಡಾಡುವ ಎರಡು ಸೇತುವೆಗಳಿವೆ. ಕಡಿಮೆ ಜನರು ಓಡಾಡುತ್ತಿದ್ದ ಹಳೆಯ ಸೇತುವೆಯನ್ನು ಆಯ್ಕೆಮಾಡಿಕೊಂಡೆ. ಸೇತುವೆಯ ಬಳಿ ಕಲ್ಲಿನ ಮೇಲೆ ಕುಳಿತು ಎಳೆಬಿಸಿಲಿಗೆ ಮೈ ಒಡ್ಡಿ ದಣಿವಾರಿಸಿ ಕೊಳ್ಳುವಾಗ ಪಕ್ಕದ ಬಂಡೆಗಳ ಮೇಲೆ ಕುಪ್ಪಳಿಸುತ್ತಾ ಸಿಳ್ಳೆಕಾಕುವ ಹಕ್ಕಿಯೊಂದು ಕಾಣಿಸಿತು. ತಕ್ಷಣ ನೋಡಿದರೆ ಕಪ್ಪು ಬಣ್ಣದಂತೆ ಕಂಡರೂ, ಕಪ್ಪು ಬಣ್ಣ ಅಲ್ಲ. ನೇರಳೆಮಿಶ್ರಿತ ಕಡುನೀಲಿ ಬಣ್ಣ. ಹಳದಿ ಬಣ್ಣದ ಕೊಕ್ಕು, ಹೆಗಲು ಮತ್ತು ರೆಕ್ಕೆಯ ಭಾಗಗಳಲ್ಲಿ ಬಿಳಿ ಬಣ್ಣದ ಚುಕ್ಕೆಗಳು. ಪಾರಿವಾಳ ಗಾತ್ರದ ಈ ಹಕ್ಕಿ ಬಂಡೆಗಳ ಮೇಲೆ ಕುಪ್ಪಳಿಸುತ್ತಾ, ನೀರಿನ ಬದಿಯಲ್ಲಿ ಎರೆಹುಳುಗಳನ್ನು ಹುಡುಕಿ ತಿನ್ನುತ್ತಿತ್ತು. ಶಂಕುಹುಳು ಮತ್ತು ಏಡಿಗಳೂ ಇದರ ಆಹಾರವಂತೆ. ಮನುಷ್ಯರಂತೆಯೇ ಸಿಳ್ಳೆ (ವಿಶಲ್) ಹೊಡೆಯುತ್ತಾ ಓಡಾಡುತ್ತಿತ್ತು. ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಸಿಳ್ಳೇಕ್ಯಾತ (Malabar Whistling Thrush) ಹಕ್ಕಿಯ ಹತ್ತಿರದ ಸಂಬಂಧಿ ಇದು. ಹಿಮಾಲಯದ ದಟ್ಟ ಅರಣ್ಯಗಳ ನಡುವೆ ಹರಿಯುವ ಹೊಳೆಗಳ ಸುತ್ತಮುತ್ತಲೂ ಈ ಹಕ್ಕಿಯ ವಾಸಸ್ಥಾನ. ಹೊಳೆಯ ನಡುವಿನ ಬಂಡೆಗಳ ಸಂದಿಯಲ್ಲೇ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆಯಂತೆ. ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಹಿಮಾಲಯದ ತಪ್ಪಲಿನಲ್ಲಿ ಮಾತ್ರ ಕಾಣಸಿಗುವ ಈ ಹಕ್ಕಿಯನ್ನು ನೋಡಿ ಅಷ್ಟು ಹೊತ್ತು ನಡೆದ ಸುಸ್ತೆಲ್ಲ ಮಾಯವಾಯಿತು.
ಕನ್ನಡದಲ್ಲಿ ಹಿಮಾಲಯದ ನೀಲಿ ಸಿಳ್ಳಾರ ಎಂದು ಕರೆಯಬಹುದು 
ಇಂಗ್ಲೀಷ್ ಹೆಸರು: Blue Whistling Thrush
ವೈಜ್ಞಾನಿಕ ಹೆಸರು: Myophonus caeruleus
ಚಿತ್ರ : ಅರವಿಂದ ಕುಡ್ಲ
ನಾನು ನನ್ನ ಚಾರಣ ಮುಂದುವರೆಸುತ್ತೇನೆ.
ಮುಂದಿನ ವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.           
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article