-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 09

ನಿಷ್ಪಾಪಿ ಸಸ್ಯಗಳು : ಸಂಚಿಕೆ - 09

ನಿಷ್ಪಾಪಿ ಸಸ್ಯಗಳು : ಸಂಚಿಕೆ - 09
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
      ಪ್ರೀತಿಯ ಮಕ್ಕಳೇ, ಹೇಗಿರುವಿರಿ? 'ಧೋ' ಎಂದು ಸುರಿಯುತ್ತಿದ್ದ ಮಳೆ ಸ್ವಲ್ಪ ವಿರಾಮ ಪಡೆಯುತ್ತಿದೆ. ತರು, ಲತೆಗಳು ಉತ್ಸಾಹದಿಂದ ಮೈದುಂಬಿಕೊಳ್ಳುತ್ತಿವೆ. ಸಣ್ಣಪುಟ್ಟ ಗಿಡ ಬಳ್ಳಿಗಳು ಸಿಕ್ಕ ಅಲ್ಪ ಕಾಲದಲ್ಲಿ ಜೀವಿತದ ಬಹುಮುಖ್ಯ ಬೆಳವಣಿಗೆಗಳನ್ನು ಕಂಡು ಎಪ್ರಿಲ್, ಮೇ ತಿಂಗಳಲ್ಲಿ ಇರಲೇ ಇಲ್ಲವೇನೋ ಎಂಬಂತೆ ಕಣ್ಮರೆಯಾಗುತ್ತವೆ.

   ಪ್ರಕೃತಿಯಲ್ಲಿ ಸಮರ್ಥ ರಿಗೆ ಮಾತ್ರ ಬಾಳುವ ಅವಕಾಶವಿರುವುದು. ಅದು ಪ್ರಾಣಿವರ್ಗದಲ್ಲಾಗಲೀ ಸಸ್ಯವರ್ಗದಲ್ಲಾಗಲೀ ನಿತ್ಯ ಸತ್ಯ. ಎಷ್ಟೇ ತುಂಡುಮಾಡಿದರೂ ಮತ್ತೆ ಮತ್ತೆ ಬೆಳೆಯಬಲ್ಲ, ಹೊಸಹೊಸ ಜೀವಿಗಳಾಗಬಲ್ಲ ಸಾಹಸದ ಹಾದಿ ಪ್ರಾಣಿ ಪ್ರಪಂಚದಲ್ಲಿದೆ. ಸಸ್ಯ ಸಂಕುಲವೂ ಇದಕ್ಕೆ ಹೊರತಾಗಿಲ್ಲ. ಎಷ್ಟು ಕಿತ್ತರೂ ಮತ್ತೆ ಚಿಗುರುವ, ಮಳೆಯ ಆಗಮನವೇ ಇರದೆ ಎಲ್ಲವೂ ಒಣಗಿದೆ ಎಂದುಕೊಂಡಾಗ ನಾಲ್ಕು ಹನಿ ಉದುರಿದರೆ ವಸುಧೆಯನು ಹಸಿರಾಗಿಸುವ ಪುಟಾಣಿ ಸಸ್ಯ ಗರಿಕೆ.
          ಗರಿಕೆ ಒಂದು ಸುಂದರವಾದ, ಕೋಮಲವಾದ ಬಳ್ಳಿ. ತನ್ನ ಬದುಕನ್ನು ಗಂಟು ಗಂಟಿಗೂ ಭದ್ರವಾಗಿ ನೆಲಕ್ಕೆ ಒತ್ತಿಕೊಂಡು ಉಳಿಯಬೇಕು ಮಾತ್ರವಲ್ಲ ಸಂತಾನ ಬೆಳಯಬೇಕೆಂಬ ಹಂಬಲ ಹೊತ್ತು ಸಾಗುವ ಪುಟ್ಟ ಸಸ್ಯ. ನೆಲದ ಮೇಲೆ ಹರಡುವ ಇತರ ಹುಲ್ಲಿನಂತಹ ಸಸ್ಯರಾಶಿಗಳ ನಡುವೆ ಪ್ರತ್ಯೇಕವಾದ ರಚನೆ ಕಾಣುವ ಗರಿಕೆ, ಮುಷ್ಟಿ ಸೆಗಣಿಯ ಮೇಲೆ ಏರಿ ಕುಳಿತು ಸಹಸ್ರಾರು ವರ್ಷಗಳಿಂದ ಗಣಪನಿಗೆ ಪರ್ಯಾಯವಾಗಿ ಪೂಜೆಗೊಳ್ಳುತ್ತಿದೆ. ಮಕ್ಕಳೇ, ನಮ್ಮ ನೆಲದಲ್ಲಿ ಎಲ್ಲೆಂದರಲ್ಲಿ ಕಾಣಬರುವ ಗರಿಕೆ ಸಸ್ಯ ಸಂಕುಲದ ಪ್ರತೀಕವಾದರೆ ಸೆಗಣಿ ಫಲವತ್ತತೆಯ ಪ್ರತೀಕ. ಈ ಸಮತೂಕದ ಸಂಯೋಜನೆ ನಮ್ಮ ಹಿರಿಯರ ಪ್ರಕೃತಿಯೊಂದಿಗಿನ ಬದುಕನ್ನು ಅನಾವರಣಗೊಳಿಸುತ್ತದೆ ಅಲ್ಲವೇ?

    ಈ ಗರಿಕೆಯ ವೈಜ್ಞಾನಿಕ ಹೆಸರು ಸೈನೊಡಾನ್ ಡ್ಯಾಕ್ಟಲಾನ್ (Cynodan dactylon). ಸಸ್ಯದ ಕುಟುಂಬ ಪೊಯೇಸಿ (Poaceae). ಕರಿಕೆ, ಕರ್ಕೆರಿ, ಕಾಡುಗರಿಕೆ, ದೂಬ್ ಇತ್ಯಾದಿ ಕನ್ನಡದ ಹೆಸರುಗಳಿದ್ದರೂ ದೂರ್ವ ಎಂಬ ಸಂಸ್ಕೃತ ದ ಹೆಸರು ಕೂಡ ಹೆಚ್ಚು ಬಳಕೆಯಲ್ಲಿದೆ ಗೊತ್ತಾ. ಇದು ಸಾಮಾನ್ಯವಾಗಿ 12 ರಿಂದ 30 ಸೆಂ.ಮೀ.ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಗಿಡದ ಕಾಂಡವು ನೆಲದ ಮೇಲೆ ತೆವಳಿಕೊಂಡು ಬೆಳೆಯುತ್ತಾ ಕಾಂಡದ ಗೆಣ್ಣುಗಳಲ್ಲಿ ಬೇರುಗಳು ಮತ್ತು ಲಂಬವಾಗಿ ಬೆಳೆಯುವ ಹೊಸಕಾಂಡದ ಚಿಗುರುಗಳಿರುತ್ತವೆ. ನೀಳಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಕಾಂಡದ ತುದಿಯಲ್ಲಿ ಛತ್ರಿಯಾಕಾರದ ಹೂಗೊಂಚಲಿರುತ್ತದೆ.
       ಗರಿಕೆ ಹುಲ್ಲು ಹವಾಮಾನದ ಎಲ್ಲ ವೈಪರೀತ್ಯಗಳನ್ನೂ ಎದುರಿಸಿ ಹೊಂದಿಕೊಂಡು ಬೆಳೆಯುತ್ತದೆ. ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳ ನಡುವೆ ಕಳೆ ಸಸ್ಯವಾಗಿ ಕಾಡುವ ಪುಟಾಣಿ ಗರಿಕೆ ನಗರದ ಜನರಿಗೆ ಮೈಮನ ಹಗುರಗಳಿಸುವ ಹುಲ್ಲುಹಾಸು. ಗಿಡಮೂಲಿಕೆಗಳ ಪಟ್ಟಿಯಲ್ಲಿ ಗರಿಕೆಯನ್ನು ಸಂಜೀವಿನಿ ಎಂದು ಪರಿಗಣಿಸಲಾಗಿದೆ ಎಂದರೆ ಆಶ್ಚರ್ಯವಾಗುವುದಲ್ಲವೇ?. ಹೌದು ಗರಿಕೆ ಬರೀ ಒಂದು ಹುಲ್ಲಲ್ಲ. ಔಷಧಗಳ ಆಗರ. ರೋಗನಿರೋಧಕ ಶಕ್ತಿ ಹೆಚ್ಚಿಸುವ, ಸಕ್ಕರೆ ಕಾಯಿಲೆಗೆ ಆರೈಕೆ ನೀಡುವ ಈ ಸಸ್ಯ ರಕ್ತವೃದ್ಧಿಗೆ ಸಹಕರಿಸುತ್ತದೆ. ರಕ್ತಹೀನತೆಗೆ ವಿದೇಶಗಳಲ್ಲಿ ಇದರಿಂದ ತಯಾರಿಸಿದ ಚುಚ್ಚುಮದ್ದುಗಳ ಬಳಕೆ ಇದೆ. ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್‌, ಪ್ರೊಟೀನ್ ಹೇರಳವಾಗಿರುವ ಗರಿಕೆ ಹೊಟ್ಟೆಯೊಳಗಿನ ಹುಣ್ಣು, ಪದೇ ಪದೇ ಕಾಡುವ ಶೀತ, ಕಫ, ಬಾಯಿಯ ದುರ್ವಾಸನೆ, ಒಸಡಿನ ರಕ್ತಸ್ರಾವ, ಆಮಶಂಕೆ, ನಿದ್ರಾಹೀನತೆ, ತ್ವಚೆಯ ಶುಷ್ಕತೆ, ತುರಿಕೆ, ಮೂಗಿನ ರಕ್ತ ಸ್ರಾವ, ಬೆಂಕಿಯಿಂದಾದ ಗಾಯ, ವಾಂತಿ, ಉರಿಯೂತ, ಕುಷ್ಟರೋಗಗಳಿಗೆ ಔಷಧವಾಗಿದ್ದು ನಂಜು ನಿವಾರಕವಾಗಿದೆ. ನೈಸರ್ಗಿಕ ರಕ್ತ ಶುದ್ಧೀಕಾರಕವಾಗಿ ಕೆಲಸ ಮಾಡುವ ಈ ಹುಲ್ಲಿನ ರಸ ಸೇವನೆಯಿಂದ ಹಿಮೋಗ್ಲೋಬಿನ್ ಮಟ್ಟ ಏರುತ್ತದೆ. ಕೊಲೆಸ್ಟರಾಲ್‌ ಮಟ್ಟ ಕಡಿಮೆಯಾಗುತ್ತದೆ. ಮೆದುಳಿಗೆ ಹೆಚ್ಚಿನ ಚೈತನ್ಯ ನೀಡಿ ಹೃದಯದ ಕಾರ್ಯ ಸುಸೂತ್ರವಾಗಲು ನೆರವು ನೀಡುತ್ತದೆ. ಜೀರ್ಣ ಕ್ರಿಯೆಯ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುವ ಗರಿಕೆ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯಮಾಡುತ್ತದೆ.

       ಮಕ್ಕಳೇ, ಗರಿಕೆಯನ್ನು ನಮ್ಮ ಜನಪದ ಹಾಡುಗಳಲ್ಲೂ ಕಾಣಬಹುದು.
      ಹಾಲುಂಡ ತವರೀಗೆ ಏನೆಂದು ಹರಸಲಿ
      ಹೊಳೆದಂಡೆಲಿರುವ ಕರಕೀಯ 
      ಕುಡಿಹಂಗ
      ಹಬ್ಬಾಲಿ ಅವರ ರಸಬಳ್ಳಿ.. 
ಎಂದು ಹರಸುವ ಮಾತಿಗೆಷ್ಟು ಶಕ್ತಿಯಿದೆಯಲ್ಲವೇ..? ಬೇರೆ ಯಾವ ಬೆಲೆಬಾಳುವ ಗಿಡಮರಗಳನ್ನೂ ಹೋಲಿಸದೆ ತನ್ನ ತವರುಮನೆ ಗರಿಕೆ ಹುಲ್ಲಿನಂತೆ ಬೆಳೆಯಲಿ ಎಂದು ಆಶಿಸುವಲ್ಲಿ ಅದರ ಸಾಮರ್ಥ್ಯವನ್ನು ಗುರುತಿಸಬಹುದು.
      ಕೆಲವು ಬುಡಕಟ್ಟುಗಳಲ್ಲಿ ಮರಣವಾದ ವ್ಯಕ್ತಿಯನ್ನು ಮಣ್ಣು ಮಾಡಿ ಹಿಂದೆ ಬರುವಾಗ ಗರಿಕೆ ಹುಲ್ಲನ್ನು ಹಿಡಿದುಕೊಳ್ಳುತ್ತಾರೆ. ಅದನ್ನು ಮರಣವಾದ ವ್ಯಕ್ತಿಯ ಮನೆಯೊಳಗೆ ಎಸೆದು ಉರಿಸಿಟ್ಟ ದೀಪ ನೋಡಿ ಹಿಂತಿರುಗುತ್ತಾರೆ. ಅಂದರೆ ನೋವನ್ನು ನಿಧಾನಕ್ಕೆ ಮರೆತು ಮತ್ತೆ ಈ ಕುಟುಂಬ ಚಂದದ ಬದುಕ ಕಟ್ಟಿಕೊಳ್ಳುವಂತಾಗಲೀ ಎಂಬ ಆಶಯವೇ ಕಾಣುತ್ತದೆ.

       ಗರಿಕೆಯಲ್ಲೀಗ ಅನೇಕ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನಗರಗಳಗೆ ವಲಸೆ ಹೋದ ಜನ ಅದರ ಎಸಳಿನ ಕಚಗುಳಿಯ ನೆನಪಲ್ಲಿ ಅಂಗಳವಿದ್ದರೆ ಅಂಗಳದಲ್ಲಿ ಅಥವಾ ಪಾರ್ಕ್ ಗಳಲ್ಲೂ ಸ್ಥಾನ ನೀಡಿ ನಡೆದಾಡಿ ಖುಷಿಪಡುತ್ತಾರೆ. ಕೌಟಿಲ್ಯನು ಚಾಣಕ್ಯನಾಗಲೂ ಈ ಗರಿಕೆ ಹುಲ್ಲು ಕಾರಣವಾಗಿತ್ತೆಂದು ಕೇಳುವಾಗ ಈ ನಿಷ್ಪಾಪಿ ಸಸ್ಯದ ಒಂದೆಸಳಾದರೂ ನಮ್ಮಂಗಳದಲ್ಲಿರಬೇಕೆಂದನಿಸುತ್ತದೆಯಲ್ಲವೇ...
        ಸರಿ ಮಕ್ಕಳೇ, ಮುಂದಿನವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ... 
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article