-->
ಹೃದಯದ ಮಾತು : ಸಂಚಿಕೆ - 02

ಹೃದಯದ ಮಾತು : ಸಂಚಿಕೆ - 02

ಹೃದಯದ ಮಾತು : ಸಂಚಿಕೆ - 02
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

     ಅದೊಂದು ತರಗತಿ. ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಆತನಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಉತ್ತರ ಗೊತ್ತಿದ್ದೂ ತಟ್ಟನೆ ಉತ್ತರಿಸಲಾಗುತ್ತಿಲ್ಲ. ಬಹಳನೇ ಕಷ್ಟಪಟ್ಟು ಉತ್ತರಿಸಿದ. ಉಗ್ಗುವಿಕೆ ಆತನಿಗಿದ್ದ ನ್ಯೂನ್ಯತೆ. ಉಳಿದ ವಿದ್ಯಾರ್ಥಿಗಳು ಆತನನ್ನು ಗೇಲಿ ಮಾಡುತ್ತಿದ್ದರು. ಆತ ನೋಡಲು ಅಷ್ಟೊಂದು ಸುಂದರನೂ ಆಗಿರಲಿಲ್ಲ. ಅವನ ಮೈನೋಟ ಹಾಗೂ ಉಗ್ಗುವಿಕೆ ನೋಡಿ ಆತನ ಸ್ನೇಹ ಮಾಡಲು ಯಾರೂ ಮುಂದೆ ಬಾರದೆ ಆತ ಏಕಾಂಗಿಯಾಗಿದ್ದ. ಸಹವಿದ್ಯಾರ್ಥಿಗಳ ಟೀಕೆಗಳಿಂದ ಆತ ಜರ್ಝರಿತನಾಗಿದ್ದ. ಆತನ ರೂಪ ನೋಡಿ ‘ಏಲಿಯನ್’ ಎಂದು ಕುಟುಕುತಿದ್ದರು. ರೋವನ್ ಅಟ್ಕಿನ್ಸನ್ ಎಂಬ ವಿದ್ಯಾರ್ಥಿ ಎಲ್ಲರಿಂದ ಬೇರ್ಪಟ್ಟ ನತದೃಷ್ಟನಂತೆ ತೋರುತ್ತಿದ್ದ.

      ದೇವರು ಎಲ್ಲರನ್ನೂ ಒಂದೇ ರೀತಿ ಸೃಷ್ಟಿಸಿಲ್ಲ. ಕೈ ಇಲ್ಲದವರು, ಕಾಲಿಲ್ಲದವರು, ಅಂಧರು, ಕಿವುಡರು, ಮೂಗರು, ಬುದ್ಧಿಮಾಂದ್ಯರು, ಇವೆಲ್ಲಾ ಸೃಷ್ಟಿಯಲ್ಲಿನ ನ್ಯೂನ್ಯತೆಗಳು. ಇವರೆಲ್ಲರಿಗೂ ಎಲ್ಲವನ್ನು ಕ್ರಮಬದ್ಧವಾಗಿ ಹೊಂದಿರುವ ನಮ್ಮಂತೆಯೇ ಬದುಕುವ ಹಕ್ಕಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರ ಹಕ್ಕುಗಳನ್ನು, ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಈ ರೀತಿಯ ತೀರಾ ನ್ಯೂನ್ಯತೆಯಿಲ್ಲದಿದ್ದರೂ, ಸ್ವಲ್ಪ ಮಟ್ಟಿನ ನ್ಯೂನ್ಯತೆಯಲ್ಲಿ ಹುಟ್ಟಿ ಬೆಳೆದ ಹುಡುಗನಾಗಿದ್ದ ರೋವನ್ ಆಟ್ಕಿನ್ಸನ್. ಆದರೂ ಆತ ಅನುಭವಿಸಿದ ವೇದನೆ ಕಡಿಮೆಯೇನಲ್ಲ. ರೋವನ್ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡ. ಶಾಲೆಯ ಶಿಕ್ಷಕಿಯೊಬ್ಬಳು ಈತನನ್ನು ಬುದ್ಧಿವಂತನಲ್ಲದ ಹುಡುಗ ಎಂದು ತೀರ್ಮಾನಿಸಿದ್ದಳು. “ಆತ ವಿಜ್ಞಾನದಲ್ಲಿ ವಿಶೇಷವಾದುದ್ದೇನೂ ಸಾಧಿಸಲಾರ” ಎಂದು ಶಿಕ್ಷಕಿ ಹೇಳಿಯೇ ಬಿಟ್ಟಿದ್ದಳು. ಆದರೆ ಆತ ಆಕೆಯ ಹಾಗೂ ಅದೇ ಅಭಿಪ್ರಾಯ ಹೊಂದಿದ್ದ ಬಹುತೇಕ ಮಂದಿಯ ಮಾತುಗಳನ್ನು ಸುಳ್ಳಾಗಿಸಿ, ತನ್ನ ಸ್ವ ಸಾಮರ್ಥ್ಯದಿಂದ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರವೇಶ ಪಡೆದಿದ್ದ. 
ರೋವನ್ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ನಟನೆಯತ್ತ ಆಸಕ್ತನಾದ. ಆದರೆ ಆತನ ಮಾತಾಡುವ ನ್ಯೂನ್ಯತೆಯಿಂದಾಗಿ ಅವಕಾಶ ಪಡೆಯುವಲ್ಲಿ ವಿಫಲನಾಗಿದ್ದ. ಎಲೆಕ್ಟ್ರಿಕಲ್ ಇಂಜಿನಿಯರ್ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಪಡೆದರೂ ಆತನ ಆಸಕ್ತಿ ನಟನೆಯ ಕಡೆಗೇ ಇತ್ತು. ಅನೇಕ ಟಿವಿ ಚಾನೆಲ್ ಗಳನ್ನು ಸಂಪರ್ಕಿಸಿದ. ಅವರ್ಯಾರೂ ಇವನನ್ನು ಸ್ವೀಕರಿಸಲಿಲ್ಲ. ಸಿನೇಮಾದವರೂ ಈತನನ್ನು ಸೇರಿಸಿಕೊಳ್ಳಲಿಲ್ಲ. ಅನೇಕ ಕಾಮೆಡಿ ಶೋ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೂ, ಅವಕಾಶ ಕೊಡಲೇ ಇಲ್ಲ. ತೀರಾ ನಿರಾಸನಾದ ರೋವನ್ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಆತನಿಗೆ ತನ್ನ ಮೇಲೆ ಅಪಾರ ನಂಬಿಕೆ ಹಾಗೂ ಭರವಸೆ ಇತ್ತು. 

       ರೋವನ್ ಜನರನ್ನು ಬಹಳಷ್ಟು ನಗಿಸುತ್ತಿದ್ದ. ಅದು ಆತನ ಹವ್ಯಾಸವಾಗಿತ್ತು. ಇದರಲ್ಲಿ ತನಗೇನೋ ಶಕ್ತಿಯಿದೆ ಎಂದು ಆತ ಭಾವಿಸಿದ್ದ. ಆ ಕಾರಣಕ್ಕಾಗಿಯೇ ತನ್ನದೇ ಆದ ಕಾಮೆಡಿ ಸ್ಕ್ರಿಪ್ಟ್ ತಯಾರಿಸಿ, ಪ್ರದರ್ಶಿಸ ತೊಡಗಿದ. ನಟನೆಯಲ್ಲಿರುವಾಗ ಆತನ ಉಗ್ಗುವಿಕೆ ಮರೆಯಾಗುತ್ತಿರುವುದು ಗಮನಿಸಿದ. ಉಗ್ಗುವಿಕೆಯಿಂದ ಹೊರಬರಲು ನಿರಂತರ ಪ್ರಯತ್ನಪಡುತ್ತಿದ್ದ. ಈ ಮಧ್ಯೆ ತನ್ನ ಉಗ್ಗುವಿಕೆಯನ್ನೇ ಅಸ್ತ್ರ ಮಾಡಿಕೊಳ್ಳುವ ಯೋಚನೆ ಮಾಡಿದ. ರೋವನ್ ಈ ಸಮಯದಲ್ಲಿ ಮಾತಿಲ್ಲದ ನಟನೆಯನ್ನು ಮೈಗೂಡಿಸಿಕೊಂಡ. ಆ ನಟನೆಯಿಂದ ಜಗತ್ತಿನ ಅದ್ಭುತ ನಟನಾಗಿ ರೂಪುಗೊಂಡ. ಮುಂದೆ ನಡೆದದ್ದು ಎಲ್ಲವೂ ಇತಿಹಾಸ. ‘ಮಿಸ್ಟರ್ ಬೀನ್’ ಎಂಬ ಹೆಸರು ನಟನಾ ಲೋಕದಲ್ಲಿ ಸಂಚಲನ ಮೂಡಿಸಿತು. ತನ್ನ ಮಾತಾಡುವ ಅಸಮರ್ಥತೆ, ತನ್ನ ರೂಪ, ಇವೆಲ್ಲಾ ತಡೆಗಳನ್ನು ಮೆಟ್ಟಿನಿಂತು, ಮೇರು ವ್ಯಕ್ತಿಯಾಗಿ ಬೆಳೆದು ನಿಂತ ರೀತಿ ಪ್ರತಿಯೊಬ್ಬ ಸಾಧಕನಿಗೂ ಪ್ರೇರಣೆಯಾಗಿದೆ. ಇಂದು 130 ಮಿಲಿಯನ್ ಡಾಲರ್ಸ್ ಒಡೆಯನಾಗಿರುವ ಆತ ಜಗತ್ತಿನ ಶ್ರೇಷ್ಠ ನಟನಲ್ಲೊಬ್ಬನಾಗಿ ಗುರುತಿಸಿಕೊಂಡಿದ್ದಾನೆ. ಸೋಲಿಲ್ಲದೆ ಯಶಸ್ಸು ಗಳಿಸಿದ ಉದಾಹರಣೆಗಳು ಸಿಗದು. ತನ್ನಲ್ಲಿರುವ ಕೊರತೆಗಳಿಗೆ ಮರುಕ ಪಡದೆ, ಕೊರತೆಗಳನ್ನೇ ಬಂಡವಾಳವನ್ನಾಗಿಸಿ ಸಫಲರಾದ ಅನೇಕ ಸಾಧಕರ ಮಧ್ಯೆ ಗುರುತಿಸಿಕೊಂಡ ಮಿಸ್ಟರ್ ಬೀನ್ ಸಾವಿರಾರು ಮಂದಿಗೆ ಸಂಜೀವಿನಿಯಾಗಬಲ್ಲ ವ್ಯಕ್ತಿಯಾಗಿ ಬೆಳೆದು ನಿಂತ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************




Ads on article

Advertise in articles 1

advertising articles 2

Advertise under the article