-->
ಕಾಡುವ ಕಾಡುಗಳು...!

ಕಾಡುವ ಕಾಡುಗಳು...!

ಲೇಖನ : ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ
            

    ಅಂದು ನಾನು 8ನೇ ತರಗತಿಯಲ್ಲಿ ವಿಜ್ಞಾನ ಪಾಠ ಕೇಳುತ್ತಿದ್ದೆ. ವಿಜ್ಞಾನದ ಅಧ್ಯಾಪಕರು ರಾತ್ರಿ ಹೊಳೆಯುವ ಪಾಚಿಯ ಪ್ರಬೇಧವೊಂದು ಅವರ ಮನೆಗೆ ಹೋಗುವ ದಾರಿಯ ಸಮೀಪದಲ್ಲಿ ಮರದ ಮೇಲೆ ಬೆಳೆದ ಬಗ್ಗೆ ತರಗತಿಯ ಪಾಠದ ನಡುವೆ ಹೇಳುತ್ತಾ ಪಶ್ಚಿಮ ಘಟ್ಟದ ಮಳೆಕಾಡುಗಳ ರಮ್ಯಾದ್ಭುತ ಲೋಕದ ದರ್ಶನ ಮಾಡಿಸಿದ್ದರು. ಮಲೆನಾಡಿನ ಮಳೆಕಾಡುಗಳನ್ನು ಆಪ್ತವಾಗಿಸುವ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳು ಮನೆಯಲ್ಲೂ ಶಾಲೆಯಲ್ಲೂ ಬೊಗಸೆಗೆ ಬಿದ್ದಮೇಲೆ ಕಾಡಿನ ಬಗೆಗಿದ್ದ ಪ್ರೀತಿ ಇನ್ನಷ್ಟು ಹಿಗ್ಗಿತು.

      ಸಣ್ಣವಳಿದ್ದಾಗಲೇ ಅಪ್ಪನ ಕೈಬೆರಳು ಹಿಡಿದು ಕಾಡುದಾರಿಯಲ್ಲಿ ಕಾಲಿಟ್ಟ ನನಗೆ ಕಾಡೆಂದರೆ ಬೆರಗು! ಎಳೆಬಿಸಿಲಿನಲ್ಲಿ ಬಹು ಸಾಹಸದಿಂದ ಮಳೆಕಾಡಿನೊಳಗೆ ಇಳಿಯುವ ಸೂರ್ಯನ ಕಿರಣಗಳ ಚಿತ್ತಾರವೇ ಮನಮೋಹಕ..! ಅಪ್ಪನ ಹೆಜ್ಜೆ ಚುರುಕು - ಹಾಗಾಗಿ ಅವರ ನಡಿಗೆಯ ವೇಗಕ್ಕೆ ನಾನು ಸಮನಾದ ಹೆಜ್ಜೆ ಇಡಲಾಗದೇ ಓಡುನಡಿಗೆಯಲ್ಲಿ ಕಾಡು ದಾಟುತ್ತಿದ್ದಾಗಲೇ ಕಾಡು ಎಷ್ಟು ಸೆಳೆದಿತ್ತು..! ಕಾಡುದಾರಿಗಳೆಲ್ಲ ಅಂಗೈ ರೇಖೆಗಳಷ್ಟು ಪರಿಚಿತವಾದ ನಂತರ ಕಾಡಿನ ಅಂತರಂಗ ಶೋಧನೆ ಸುಲಭವಾಯ್ತು.

     ಮಲೆನಾಡಿನ ಮಡಿಲಿನಲ್ಲಿರುವ ಶೃಂಗೇರಿ ತಾಲೂಕಿನ ಹಳ್ಳಿಗಳಲ್ಲಿ ಬಾಲ್ಯದ ದಿನಗಳನ್ನು ಕಳೆಯುವ ಸುಯೋಗ ನನ್ನದಾಗಿತ್ತು. ಸರಕಾರಿ ಪ್ರೌಢಶಾಲೆ ತೊರೆಹಡಲು ಇಲ್ಲಿ ನನಗೆ ವಿಜ್ಞಾನದ ಅಧ್ಯಾಪಕರಾಗಿ ದೊರೆತವರು ಶ್ರೀ ಗುರುಮೂರ್ತಿ ಎಸ್. ಅವರು ಮಾಡುತ್ತಿದ್ದ ಪಾಠ ಹೇಗಿತ್ತೆಂದರೆ ಅದನ್ನು ಕೇಳಿದ ಮೇಲೆ ಕಾಡು ಅಚ್ಚರಿಯ ಲೋಕವಾಯ್ತು. ಪ್ರತಿ ಪಾಠಕ್ಕೂ ಪ್ರಯೋಗ, ಪ್ರತಿ ವೈಜ್ಞಾನಿಕ ನಿಯಮಕ್ಕೂ ನಿತ್ಯಜೀವನದ ಅನುಭವದ ಲೇಪ ನೀಡಿ ಅವರು ಮಾಡುತ್ತಿದ್ದ ಪಾಠ ಮರೆಯುವುದೆಂತು? ಅವರು ಕಾಡಿನ ವರ್ಣನೆ ಮಾಡಿದ ನಂತರ ನನ್ನ ನಡಿಗೆ ನಿಧಾನವಾಯ್ತು.. ಕಾಲಿನಡಿಯಲ್ಲಿ ಪುಡಿಯಾಗುವ ತರಗೆಲೆಯ ಸದ್ದನ್ನು ಕಡಿಮೆ ಮಾಡಿ ನಡೆಯುವ ಅಭ್ಯಾಸವಾಯ್ತು. ಎಲ್ಲೋ ಮರೆಯಲ್ಲಿ ಕೂಗುವ ಹಕ್ಕಿಯನ್ನು ಹುಡುಕಿ ನೋಡುವ ತಾದಾತ್ಮ್ಯ ಸಿದ್ಧಿಸಿತು. 

    ಶಾಲೆಗೆ ಹೋಗುವಾಗ - ಬರುವಾಗ ಅಷ್ಟಗಲದ ರಾಜ್ಯ ಹೆದ್ದಾರಿ ಇದ್ದರೂ ನಾನು & ನನ್ನ ಸ್ನೇಹಿತರು ಕಾಡುದಾರಿಯಲ್ಲೇ ಸಂಚರಿಸುತ್ತಿದ್ದೆವು. ಯಾವ ಮರ/ಗಿಡ/ಬಳ್ಳಿಯ ಹಣ್ಣು ಯಾವ ಕಾಲಕ್ಕೆ ನಮಗೆ ಒದಗುವುದೆಂಬ ಸೂಕ್ಷ್ಮ ನಮ್ಮನ್ನು ಸೆಳೆಯುತ್ತಿತ್ತು. ಗಾಯವಾದರೆ ಯಾವ ಎಲೆಗಳ ರಸ ಹಚ್ಚಿದರೆ ಎಷ್ಟು ಬೇಗ ಗುಣವಾಗುವುದೆಂಬ ಜ್ಞಾನ ಅಂತಹಾ ಸ್ನೇಹಿತರ ಸಹವಾಸದ ಫಲ! ಇಂಬಳ ಎಂಬ ಮಳೆಗಾಲದ ಅತಿಥಿಯನ್ನು ಅಲಕ್ಷ್ಯ ಮಾಡುವುದನ್ನೂ ಕಲಿಸಿದವರು ಇವರೇ. ರಕ್ತ ಹೀರಲು ಕೈಕಾಲಿಗೆ ಹತ್ತುವ ಇಂಬಳಕ್ಕೆ ಉಪ್ಪು- ಹೊಗೆಸೊಪ್ಪಿನ ಬ್ರಹ್ಮಾಸ್ತ್ರ ಪ್ರಯೋಗ ನಿಪುಣರ ತಂಡ ಹೆದರದೇ ಮಳೆಗಾಲದಲ್ಲೂ ಕಾಡು ಸುತ್ತುವ ತನ್ನ ಸಾಹಸ ಮುಂದುವರಿಸುತ್ತಿತ್ತು. 

     ಮಲೆನಾಡಿನ ಮನೆಗಳೆಲ್ಲ ಕಾಡಿನ ನಡುವೆ 2-3 ಕಿಲೋಮೀಟರ್ ದೂರದ ಏಕಾಂತದಲ್ಲಿದ್ದ ಕಾಲ. ಯಾವುದೇ ಸಮಾರಂಭಕ್ಕೆ ಯಾರ ಮನೆಗೆ ಹೋಗಬೇಕಿದ್ದರೂ ಕಾಡಿನ ಮಡಿಲಿನಲ್ಲಿ ನಡಿಗೆ ಅನಿವಾರ್ಯ. ತುಂಗಾ ನದಿ ದಾಟಿ ಕೊಡೂರಿನ ಅಜ್ಜಿಮನೆಗೆ ಹೋಗುವ ದಾರಿಯಂತೂ ನನ್ನ ಅಚ್ಚುಮೆಚ್ಚಿನದು. ಕಾರಣ- ಅಲ್ಲಿನ ಕಾಡಿನಲ್ಲಿದ್ದ ಎತ್ತರೆತ್ತರದ ಮರಗಳು. ಹೂವು ತಳೆದು ನಿಂತಾಗ ಅದ್ಭುತವೆನಿಸುವ ನೂರಾರು ವರ್ಷ ಹಳೆಯ ಧೂಪದ, ಹೊಳೆ ದಾಸವಾಳದ ಮರಗಳು. ಅವುಗಳ ಮೇಲೆ ತೇಲುವ ಕಾಗದದಂತೆ ಅವಸರವಿಲ್ಲದೇ ಹಾರುವ ಮಲಬಾರ್ ನಿಂಫ್ ಎಂಬ ಚಿಟ್ಟೆ ಪ್ರಬೇಧ. ಕುತ್ತಿಗೆ ನೋವಾಗುವವರೆಗೆ ಆ ಚಂದ ಸವಿಯುವ ಆನಂದದ ಅನುಭವ!

     ಹಿಂತಿರುಗಿ ಬರುವಾಗ ಕತ್ತಲಾದರೆ ನನ್ನ ತಂದೆ ಕಾಡಿನ ಕತ್ತಲೆಯಲ್ಲೂ ಅಷ್ಟೆಲ್ಲ ಮರಬೇರುಗಳ ನಡುವೆ ಎಡವದೇ ಹೆಜ್ಜೆ ತಪ್ಪದೆ ನಡೆಯುವುದನ್ನು ನೋಡಿ ಅಚ್ಚರಿಪಡುತ್ತಲೇ ಕಲಿತುಬಿಟ್ಟೆ! ಅಲ್ಲಿಂದೀಚೆಗೆ ಕಾಡು ಇನ್ನಷ್ಟು ಆಪ್ತವಾಯಿತು. ನಿಧಾನಕ್ಕೆ ನಡೆಯುತ್ತಾ ಗಿಡ- ಮರ- ಬಳ್ಳಿಗಳ ಪರಿಚಯ ಮಾಡಿಕೊಳ್ಳುತ್ತಾ ಬೆಳೆದೆ. ಅವೆಷ್ಟೋ ಅಪರೂಪದ ಆರ್ಕಿಡ್ ಗಳು, ಮಳೆಗಾಲದಲ್ಲಷ್ಟೇ ಮುಖ ತೋರಿಸುವ ಸಸ್ಯಪ್ರಬೇಧಗಳನ್ನು ಆಸಕ್ತಿಯಿಂದ ಗಮನಿಸತೊಡಗಿದೆ. ಪಶ್ಚಿಮ ಘಟ್ಟದ ಸಸ್ಯವರ್ಗವನ್ನು ಅವಲಂಬಿಸಿದ ವಿವಿಧ ಪ್ರಬೇಧಗಳ ಹಕ್ಕಿಗಳು, ಚಿಟ್ಟೆಗಳು, ಉರಗಗಳು ಕಾಡಿನ ಪ್ರತಿ ಭೇಟಿಯನ್ನೂ ಅದ್ಭುತವೆನ್ನಿಸುವಂತೆ ಮಾಡಿದವು. 

     ಅಂಡಮಾನ್ ಪ್ರವಾಸಕ್ಕೆ ಬಂಟ್ವಾಳ ತಾಲೂಕಿನ ಶಿಕ್ಷಕ ಮಿತ್ರರ ಜೊತೆ ಹೊರಟಾಗಲೂ ನನ್ನೊಳಗೆ ಅಲ್ಲಿನ ಮ್ಯಂಗ್ರೋವ್ ಕಾಡುಗಳು & ನಿಬಿಡ ಅರಣ್ಯದೊಳಗೆ ಬಲವಾಗಿ ಊರುವಂತೆ ಬೇರುಗಳನ್ನಿಳಿಸಿ ನಿಂತ ಹೆಮ್ಮರಗಳನ್ನು ಕಣ್ತುಂಬಿಕೊಳ್ಳುವ ಆಸೆಯೇ ಮೂಲ ಪ್ರೇರಣೆಯಾಗಿತ್ತು. ಅಲ್ಲಿನ ಕಾಡುಗಳನ್ನು ನೋಡುತ್ತಿದ್ದಂತೆ ಮಾತು ಮರೆತು ಹೃದಯ ತುಂಬಿತ್ತು. ಗಿಡ- ಮರಗಳ ಬಗೆಗಿನ ಈ ಆಸಕ್ತಿಗಳನ್ನು ಇನ್ನಷ್ಟು ಬೆಳೆಸುವ ಸ್ನೇಹಿತರು- ವಿದ್ಯಾರ್ಥಿಗಳು ಲಭಿಸಿದ್ದು ಈಗಲೂ ಈ ಹವ್ಯಾಸಕ್ಕೆ ಪ್ರತಿದಿನವೂ ನವಚೇತನ ತುಂಬುಂವತಾಗಿದೆ. 

     ಪ್ರತಿ ವರ್ಷವೂ ಕರ್ನಾಟಕದ- ಭಾರತದ ಅರಣ್ಯಗಳ ಬಗೆಗೆ ತರಗತಿಯಲ್ಲಿ ಪಾಠ ಮಾಡುವಾಗ ಈ ಪಾಠವನ್ನು ತರಗತಿ ಕೋಣೆಗೆ ಸೀಮಿತಗೊಳಿಸದೇ ಕಾಡಿಗೆ ಮಕ್ಕಳನ್ನು ಕರೆದೊಯ್ಯಬೇಕೆನ್ನಿಸುತ್ತದೆ. ನನ್ನ ಅನುಭವಗಳನ್ನು ಕೇಳಿದ ಅವರೂ 'ಹೋಗೋಣ ಟೀಚರ್' ಎಂದು ದನಿಗೂಡಿಸುತ್ತಾರೆ. ಅತ್ಯಂತ ಆಸಕ್ತಿ ತೋರಿದ್ದ ವಿದ್ಯಾರ್ಥಿಗಳು ಇದ್ದ ಸಮೂಹ ದೊರೆತಾಗ ಒಂದೆರಡು ಬಾರಿ ಹಾಗೆ ಕಾಡಿನ ಗರ್ಭಕ್ಕೆ ಕರೆದೊಯ್ದಿದ್ದು ಅವರಿಗೂ ನನಗೂ ಅಚ್ಚಳಿಯದ ನೆನಪಾಗಿ ಉಳಿದಿದೆ. ಹಾಗೆ ಹೋದಾಗೆಲ್ಲ ಮಲೆನಾಡಿನ ಕಾಡು ನೆನಪಾಗಿ ಕಾಡುತ್ತದೆ. ಇಂದು ಕಾಡು ಕಾಡಾಗಿ ಉಳಿದಿಲ್ಲ. ಅರಣ್ಯ ನಾಶದ ಕರಾಳ ಹಸ್ತ ನಮ್ಮೂರಿನ ಕಾಡುಗಳನ್ನೂ ಕಬಳಿಸುತ್ತಿರುವುದನ್ನು ನೋಡುವಾಗ ಮನ ನೋಯುತ್ತದೆ. 

      ಈ ವರ್ಷದ ನನ್ನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಾಡು ಬಹಳ ಆಪ್ತ ಎಂಬುದನ್ನು ಅವರು ಎಂಟನೇ ತರಗತಿಗೆ ಬಂದಾಗಲೇ ಗುರುತಿಸಿದ್ದೆ. ಅದರ ಬಗೆಗೆ ಪಾಠದಲ್ಲಿ ಉಲ್ಲೇಖ ಬಂದಾಗ ಅವರ ಕಣ್ಣಿನ ಹೊಳಪು, ಮಾತಿನ ಉತ್ಸಾಹ ನೂರ್ಮಡಿ ಹೆಚ್ಚುವುದನ್ನು ಕಂಡು ಅವರ ಜೊತೆಗೊಮ್ಮೆ ನಮ್ಮ ಸಮೀಪದ ಅಳಿದುಳಿದ ಕಾಡು ಸುತ್ತಬೇಕಿದೆ. ಅರಣ್ಯ ಸಂರಕ್ಷಣೆಯಾಗುವುದು ತಮ್ಮ ಸುತ್ತಲಿನ ಅರಣ್ಯದ ಬಗ್ಗೆ ನಮ್ಮ ವಿದ್ಯಾರ್ಥಿಗಳ ಹೃದಯದಲ್ಲಿ ಪ್ರೀತಿ, ಅಭಿಮಾನ ಹುಟ್ಟಿದಾಗ. ಸಸ್ಯಗಳ ಸ್ಥಳೀಯ ಹೆಸರುಗಳು ಅವುಗಳ ಬಳಕೆಯ ಉದ್ದೇಶಗಳ ಜ್ಞಾನವನ್ನು ಅವರು ತಮ್ಮ ಮನೆಯ ಹಿರಿಯರಿಂದ ಮತ್ತು ಶಿಕ್ಷಕರಿಂದ ಕಲಿತು ಉಳಿಸಿ- ಬೆಳೆಸಿ- ಬಳಸುವಂತಾದಾಗ. ಪ್ರಕೃತಿ ಪ್ರೀತಿ ಅವರೊಳಗೆ ನೈಜವಾಗಿ ಮೊಳೆತು ಹೆಮ್ಮರವಾದಾಗಲಿ ಎಂಬ ಆಶಯ ನನ್ನದು.
........................................ ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
Mob : 9449946810
********************************************





Ads on article

Advertise in articles 1

advertising articles 2

Advertise under the article