-->
ಹಕ್ಕಿ ಕಥೆ : ಸಂಚಿಕೆ - 107

ಹಕ್ಕಿ ಕಥೆ : ಸಂಚಿಕೆ - 107

ಹಕ್ಕಿ ಕಥೆ : ಸಂಚಿಕೆ - 107
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
      ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಈ ಬಾರಿ ಹಿಮಾಲಯ ಚಾರಣ ಹೋಗಿದ್ದಾಗ ಕೆಲವು ಹೊಸ ಹಕ್ಕಿಗಳ ಜೊತೆಗೆ ಪರಿಚಿತವಾದ ಹಕ್ಕಿಗಳೂ ನೋಡಲು ಸಿಕ್ಕಿದವು. ಹಾಗಾಗಿ ಈ ಬಾರಿಯೂ ಹಿಮಾಲಯದಲ್ಲಿ ಕಂಡ ಇನ್ನೊಂದು ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ. 
      ಈ ಬಾರಿ ರುದ್ರನಾಥ ಎಂಬ ಹಿಮಾಲಯದ ಬುಡದಲ್ಲಿರುವ ಸುಂದರ ಶಿವ ದೇವಾಲಯ ಇರುವಲ್ಲಿಗೆ ನಮ್ಮ ಮೊದಲ ಚಾರಣ ಎಂದು ನಿಗದಿಯಾಗಿತ್ತು. ರುದ್ರನಾಥ ತಲುಪಲು ಮೂರು ದಾರಿಗಳು. ಒಂದು ಮಂಡಲ್ ಎಂಬ ಹಳ್ಳಿಯಿಂದ ಅನುಸೂಯಾ ದೇವಿ ಎಂಬ ಹಳ್ಳಿಯ ಮೂಲಕ ರುದ್ರನಾಥ ತಲಪುವ ದಾರಿ. ಇನ್ನೊಂದು ಉರ್ಗಾಂವ್ ಎಂಬ ಹಳ್ಳಿಯಿಂದ ಆರಂಭಿಸಿ ಢುಮಕ್ ಎಂಬ ಹಳ್ಳಿಯ ಮೂಲಕ ರುದ್ರನಾಥ ತಲುಪುವ ದೀರ್ಘವಾದ ದಾರಿ. ಮೂರನೆಯದು ಅತೀಹೆಚ್ಚು ಚಾರಣಿಗರು ಆರಿಸಿಕೊಳ್ಳುವ ಸಗರ್ ಎಂಬ ಹಳ್ಳಿಯ ಮೂಲಕ ಪನಾರ್ ಎಂಬ ಸುಂದರ ಹುಲ್ಲುಗಾವಲು ಪ್ರದೇಶವನ್ನು ದಾಟುತ್ತಾ ರುದ್ರನಾಥ ತಲುಪುವ ದಾರಿ. ಆಹಾರ ಮತ್ತು ವಸತಿ ಲಭ್ಯತೆಯ ದೃಷ್ಟಿಯಿಂದ ನಾವು ಪನಾರ್ ಮೂಲಕ ಸಾಗುವ ದಾರಿಯನ್ನು ಆರಿಸಿಕೊಂಡಿದ್ದೆವು. ಹಿಂದಿನ ದಿನವೇ ನಾವು ಸಗರ್ ಹಳ್ಳಿಯನ್ನು ತಲುಪಿ ವಿಶ್ರಾಂತಿ ಪಡೆದು ಮರುದಿನಕ್ಕೆ ಸಜ್ಜಾದೆವು.
      ಶ್ರೀರಾಮಚಂದ್ರನ ಪೂರ್ವಜ, ಭಗೀರಥ ಮಹಾರಾಜನ ಅಜ್ಜ, ದಿಲೀಪ ಮಹಾರಾಜನ ಪಿಜ್ಜ ಸೂರ್ಯವಂಶದ ಪ್ರಮುಖ ದೊರೆಯಾದ ರಾಜಾ ಸಗರನು ಜನಿಸಿದ ಸ್ಥಳವಾದ್ದರಿಂದ ಈ ಹಳ್ಳಿಯ ಹೆಸರೂ ಸಗರ್ ಎಂದಾಗಿದೆ. ಸಗರ ಮಹಾರಾಜ ಅಶ್ವಮೇಧ ಮಾಡಿದ್ದು, ಅದರ ರಕ್ಷಣೆಗೆ ಹೋದ ಅವನ ಸಾವಿರ ಮಕ್ಕಳು ಮುನಿಯ ಕೋಪದಿಂದ ಭಸ್ಮವಾದದ್ದು, ಅವರ ಸದ್ಗತಿಗಾಗಿ ದೇವಲೋಕದ ಗಂಗೆಯನ್ನು ಭಗೀರಥ ಭೂಮಿಗೆ ಇಳಿಸಿದ ಕಥೆ ನೀವೆಲ್ಲ ಕೇಳಿರಬಹುದು. ಇಲ್ಲವೆಂದಾದರೆ ಕೇಳಿ ತಿಳಿದುಕೊಳ್ಳಿ. ಬಹಳ ಸ್ವಾರಸ್ಯಕರವಾದ ಕಥೆಯದು. ಸಗರ ಮಹಾರಾಜನ ಬಗ್ಗೆ ಊರಿನ ದೇವಸ್ಥಾನದ ಅರ್ಚಕರು ಹೇಳಿದ ಕಥೆಯನ್ನು ಕೇಳಿ ಹಿಂದಿರುಗುವಾಗ ಸಮಯ ಏಳುಗಂಟೆಯಾದರೂ ಕತ್ತಲಾಗಿರಲಿಲ್ಲ. ಜೂನ್ 21 ಸೂರ್ಯ ತನ್ನ ದಾರಿಯನ್ನು ಮತ್ತೆ ದಕ್ಷಿಣದತ್ತ ಬದಲಾಯಿಸುವ ದಿನ ಮಾತ್ರವಲ್ಲ ಅತ್ಯಂತ ದೀರ್ಘಹಗಲಿನ ದಿನವೂ ಹೌದು.
         ಹೀಗೆ ಹಿಂದೆ ಬರುವಾಗ ದಾರಿಯಂಚಿನ ಮರದಲ್ಲೊಂದು ಹಕ್ಕಿ ಕಾಣಿಸಿತು. ಅರೆ ಈ ಹಕ್ಕಿಯನ್ನು ಚಳಿಗಾಲದಲ್ಲಿ ದಕ್ಷಿಣ ಭಾರತದ ನಮ್ಮೂರಿನಲ್ಲಿ ನೋಡಿದ್ದೆನಲ್ಲಾ ಅನಿಸಿತು. ಸರಿಯಾಗಿ ಗಮನಿಸುತ್ತಿರುವಾಗಲೇ ಇನ್ನೊಂದು ಹಕ್ಕಿ ಹಾರಿ ಬಂದು ಆ ಹಕ್ಕಿಗೊಂದು ಗುಟುಕು ತಿನ್ನಿಸಿತು. ತಾಯಿ ಹಕ್ಕಿಯನ್ನು ನೋಡಿದಾಗ ಥಟ್ಟನೆ ಪರಿಚಯ ಸಿಕ್ಕಿಬಿಟ್ಟಿತು. ಈ ಹಕ್ಕಿ ಭಾರತದಾದ್ಯಂತ ಕಾಣಸಿಗುತ್ತದೆ. ಚಳಿಗಾಲದಲ್ಲಿ ದಕ್ಷಿಣದ ಪ್ರದೇಶಗಳಿಗೆ ವಲಸೆಬರುವ ಈ ಹಕ್ಕಿ ಬೇಸಗೆಯಲ್ಲಿ ಉತ್ತರದ ಹಿಮಾಲಯದ ತಪ್ಪಲು ಪ್ರದೇಶಗಳಿಗೆ ವಲಸೆ ಹೋಗಿ ಅಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಫೆಬ್ರವರಿಯಿಂದ ಜುಲೈ ತಿಂಗಳವರೆಗೆ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲವಂತೆ. ದಕ್ಷಿಣ ಭಾರತದಲ್ಲಿ ನೋಡಲು ಸಿಗದ ಇದರ ಮರಿಹಕ್ಕಿಯನ್ನು ನೋಡಿ ಸಂತೋಷವಾಯಿತು. ಮಿಡತೆಗಳು, ದೊಡ್ಡ ಕೀಟಗಳು, ಓತಿಕ್ಯಾತ ಮತ್ತು ಇಲಿಮರಿಗಳು ಇದರ ಆಹಾರವಂತೆ. ಮರಿಹಕ್ಕಿಗೆ ಮಿಡತೆ ತಂದು ಕೊಡುವುದನ್ನು ನೋಡಿ ಇದಕ್ಕೂ ಪುರಾವೆ ಸಿಕ್ಕಿತು. ರೆಕ್ಕೆ ಬಲಿತ ಮೇಲೆ ಈ ಬಾರಿ ಚಳಿಗಾಲದಲ್ಲಿ ನಮ್ಮೂರಿಗೆ ನಿನ್ನ ಮರಿಯನ್ನೂ ಕರೆದುಕೊಂಡು ಬರಲು ಮರೆಯಬೇಡ, ನಿಮಗಾಗಿ ಕಾದಿರುತ್ತೇನೆ ಎಂದು ಹೇಳಿ ಇಬ್ಬರಿಂದಲೂ ಬೀಳ್ಕೊಂಡು ನಮ್ಮ ವಸತಿ ಸೇರಿದಾಗ ಕತ್ತಲಾಗಿತ್ತು.
ಕನ್ನಡ ಹೆಸರು: ಕಳಿಂಗ ಪಕ್ಷಿ
ಇಂಗ್ಲೀಷ್ ಹೆಸರು: Long-Tailed Shrike
ವೈಜ್ಞಾನಿಕ ಹೆಸರು: Lanius schach
ಚಿತ್ರ : ಅರವಿಂದ ಕುಡ್ಲ 
      ಮುಂದಿನ ವಾರ ಇನ್ನೊಂದು ಹೊಸ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.           
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article