-->
ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ...!

ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ...!

ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
     

      'ವಿಫಲತೆ ' ಯನ್ನು ‘ಯಶಸ್ಸು’ ಆಗಿ ಪರಿವರ್ತಿಸುವ ಪ್ರಬಲ ಅಸ್ತ್ರ ಆತ್ಮವಿಶ್ವಾಸ. ತನ್ನಲ್ಲಿರುವ ಅದ್ಭುತ ಶಕ್ತಿಯನ್ನು ಅರಿತುಕೊಳ್ಳುವುದೇ ಆತ್ಮವಿಶ್ವಾಸ. ಅದೊಂದು ತನ್ನೊಳಗೆ ಬಡಿದೆಬ್ಬಿಸಬೇಕಾದ ಅಗೋಚರ ಶಕ್ತಿ. ಆತ್ಮವಿಶ್ವಾಸಕ್ಕೆ ಬಾಹ್ಯ ಪ್ರೇರಣೆಗಳು ಪೂರಕ ಇಲ್ಲವೇ ಮಾರಕವಾಗಬಹುದು. ಆದರೆ ಅದು ಸೆಟೆದು ನಿಲ್ಲಬೇಕಾಗಿರುವುದು ನಮ್ಮೊಳಗೆ. ಕೆಟ್ಟ ಗಳಿಗೆಯಲ್ಲಿ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಅದೆಷ್ಟೋ ಮಂದಿಯ ಬದುಕನ್ನು ಬದಲಿಸಿದೆ. 

      ನೆಲದ ಮೇಲೆ ಇಟ್ಟಿರುವ ಹಲಗೆಯೊಂದರಲ್ಲಿ ನಾವು ಸರಾಗವಾಗಿ ನಡೆಯಬಲ್ಲೆವು. ಅಲ್ಲಿ ಯಾವುದೇ ಅಳುಕು ಅಥವಾ ಭಯವಿರದು. ಅದೇ ಹಲಗೆಯನ್ನು 15 ಅಡಿ ಎತ್ತರದಲ್ಲಿ ಇಟ್ಟಾಗ ನಾವು ನಡೆಯಲಾರೆವು. ಎಲ್ಲಾ ಪರಿಸ್ಥಿತಿಗಳು ಮೊದಲಿನಂತೆಯೇ ಇದೆ. ಆದರೆ ಎತ್ತರ ಮಾತ್ರ ಬದಲಾಗಿದೆ. ಬದಲಾದ ಎತ್ತರ ನಮ್ಮಲ್ಲಿ ಕೆಳಗೆ ಬೀಳುವ ಭಯ ಹುಟ್ಟಿಸಿದೆ. ಆ ಕಾರಣಕ್ಕಾಗಿ ನಾವು ಅದರ ಮೇಲೆ ನಡೆಯಲಾರೆವು ಅಥವಾ ನಡೆದರೂ ಕುಸಿದು ಬೀಳುವೆವು. ಇಲ್ಲಿ ಗಮನಿಸಬೇಕಾದದ್ದು ಬದಲಾದ ಎತ್ತರವು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕುಸಿಯುವಂತೆ ಮಾಡಿದೆ. 

      ಆತ್ಮವಿಶ್ವಾಸ ನಮ್ಮಲ್ಲಿ ಹಾಗೂ ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ಅಪೂರ್ವ ಬದಲಾವಣೆಯನ್ನು ತರುತ್ತದೆ. ಅವರನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಆತ್ಮವಿಶ್ವಾಸ ಮೂಡಿದಲ್ಲಿ ಪ್ರಯತ್ನ ಆರಂಭಗೊಳ್ಳುತ್ತದೆ. ಅದರಿಂದ ಯಶಸ್ಸು ನಮ್ಮದಾಗುತ್ತದೆ. ಆತ್ಮವಿಶ್ವಾಸದ ಕೊರತೆ ಕೇವಲ ವಿಫಲತೆಯನ್ನು ಮಾತ್ರವಲ್ಲ, ವ್ಯಕ್ತಿಯ ಆತ್ಮಹತ್ಯೆಗೂ ಕಾರಣವಾಗುತ್ತದೆ. 2021ರಲ್ಲಿ 48,183 ಸಾವುಗಳು ಆತ್ಮಹತ್ಯೆಯಿಂದ ಸಂಭವಿಸಿದೆ. ಇದು ಅಧಿಕೃತ. ಅಧಿಕೃತವಲ್ಲದ ಅದೆಷ್ಟೋ ಸಾವುಗಳಿರಬಹುದು. ಅಧಿಕೃತವಾಗಿಯೇ ಲೆಕ್ಕಾಚಾರ ಮಾಡಿದರೂ ಪ್ರತಿ 11 ನಿಮಿಷಕ್ಕೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಅಲ್ಲದೆ ಆತ್ಮಹತ್ಯೆಯ ಪ್ರಯತ್ನಗಳು ಅದೆಷ್ಟೋ ಹೆಚ್ಚಿದೆ.

   ನಾವು ನಮ್ಮ ಮಕ್ಕಳಲ್ಲಿ ಮುಖ್ಯವಾಗಿ ಬೆಳೆಸಬೇಕಾಗಿರುವುದು ಆತ್ಮವಿಶ್ವಾಸ. ನಮ್ಮ ಮಗು ಎತ್ತರದ ಕಿಟಕಿಗೆ ಹತ್ತಿದರೆ ನಾವು ಭಯ ಹೊಂದುತ್ತೇವೆ. ಮಗು ಬೀಳಬಹುದೆಂಬ ಭಯ. ಅದರಿಂದಾಗಿಯೇ ನಾವು ಮಕ್ಕಳನ್ನು ಎತ್ತರಕ್ಕೆ ಹತ್ತಲು ಬಿಡಲಾರೆವು. ನಂತರ ಆತ ಮತ್ತೆಂದೂ ಎತ್ತರಕ್ಕೆ ಹತ್ತುವ ಪ್ರಯತ್ನ ಮಾಡಲಾರ. ರಸ್ತೆ ದಾಟುವಾಗ ಮಗನನ್ನು ಕೈಹಿಡಿದು ಎಳೆಯುವ ಅಪ್ಪ, ಒಂಟಿಯಾಗಿ ರಸ್ತೆ ದಾಟುವ ಧೈರ್ಯವನ್ನು ಮಗನಿಂದ ಕಸಿದುಕೊಳ್ಳುತ್ತಾನೆ. 

    ಒಮ್ಮೆ ಅಪ್ಪ ಮತ್ತು ಮಗ ಸರ್ಕಸ್ ನೋಡಲು ತೆರಳುತ್ತಾರೆ. ಈ ಸಂದರ್ಭ ಮಗ ಕಂಬಕ್ಕೆ ಹಗ್ಗದಿಂದ ಕಟ್ಟಿದ ಆನೆಯನ್ನು ಗಮನಿಸುತ್ತಾನೆ. ಅಪ್ಪನಲ್ಲಿ ಮಗ ‘ಅಪ್ಪಾ ಆನೆಗೆ ಅದೆಷ್ಟು ಶಕ್ತಿಯಿದೆ. ಆದರೂ ಕಟ್ಟಿದ ಆ ಹಗ್ಗದಿಂದ ಬಿಡಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ?’ ಎಂದು ಸಹಜವಾಗಿ ಪ್ರಶ್ನಿಸುತ್ತಾನೆ. ಅದಕ್ಕೆ ಅಪ್ಪ, "ಮಗ ಆನೆ ಚಿಕ್ಕ ಮರಿಯಿದ್ದಾಗ ಅದನ್ನು ಹಗ್ಗದಿಂದ ಕಟ್ಟಿ ಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಬಹಳನೇ ಪ್ರಯತ್ನಿಸಿದೆ. ಆದರೆ ಮರಿಯಾಗಿದ್ದ ಆನೆಗೆ ಅದು ಸಾಧ್ಯವಾಗಿಲ್ಲ. ಇಂದು ಅದು ಬೆಳೆದು ಶಕ್ತಿಶಾಲಿಯಾಗಿದೆ. ಆದರೆ ಅದಕ್ಕೆ ಆ ಹಗ್ಗದಿಂದ ಬಿಡಿಸಿಕೊಳ್ಳಲು ಸಾಧ್ಯ ಎಂಬ ಅರಿವಿಲ್ಲ. ಆದ್ದರಿಂದ ಅದೆಂದೂ ಬಿಡಿಸಿಕೊಳ್ಳುವ ಪ್ರಯತ್ನ ಮಾಡದು" ಎಂದನು. ಹೌದು ಈ ಕಥೆಯಿಂದ ನಮಗೆ ಆತ್ಮವಿಶ್ವಾಸ ಕಳೆದು ಕೊಂಡರೆ ಬಲಶಾಲಿ ಆನೆಯೂ ಬಲಹೀನವಾಗುತ್ತದೆ ಎಂಬುವುದು ವೇದ್ಯವಾಗುತ್ತದೆ.

     ಮಕ್ಕಳಿಗೆ ಅವರ ಶಕ್ತಿಯ ಅರಿವಿರಬೇಕು. “ನೀನು ಈ ಜಗತ್ತಿನ ಅನನ್ಯ ಸೃಷ್ಟಿ” ಎಂಬ ಜ್ಞಾನ ಅವರಿಗಿರಬೇಕು. ತಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡದೆ ತನ್ನ ಶಕ್ತಿಯಿಂದ ಪ್ರಪಂಚದಲ್ಲಿ ಎದ್ದು ನಿಲ್ಲುವ ಪ್ರಯತ್ನ ಮಾಡಬೇಕು. ಹುಟ್ಟು ದರಿದ್ರವಿರಬಹುದು. ಆದರೆ ಸಾವು ಚರಿತ್ರೆಯಾಗುವ ರೀತಿ ಬದುಕಬೇಕು. ಆತ್ಮವಿಶ್ವಾಸವು ವ್ಯಕ್ತಿಯನ್ನು ಭಯಮುಕ್ತಗೊಳಿಸುತ್ತದೆ. ಆಗ ಮಾತ್ರ ಸಾಧಕನಾಗಬಹುದು. ಭಯಪಟ್ಟರೆ ಅಲ್ಸಾರ್ ರೋಗಿಯೂ ಸಾಯಬಲ್ಲ, ಭಯಬಿಟ್ಟರೆ ಕ್ಯಾನ್ಸರ್ ರೋಗಿಯೂ ಬದುಕಬಲ್ಲ.

     ಪ್ರತಿಯೊಬ್ಬ ಮನುಷ್ಯನ ಹುಟ್ಟೇ ಒಂದು ಅತ್ಯದ್ಭುತ. ಸುಮಾರು 30 ರಿಂದ 40 ಲಕ್ಷದಷ್ಟು ತನ್ನ ಸಹೋದರರನ್ನು ಸ್ಪರ್ಧೆಯಲ್ಲಿ ಸೋಲಿಸಿ ಅಂಡಾಶಯ ಪ್ರವೇಶಿಸಿ ಗೆದ್ದು, ಈ ಪ್ರಪಂಚಕ್ಕೆ ಕಾಲಿಟ್ಟವರು ನಾವು. ತಾನಾಗಿ ಸೋಲನ್ನು ಒಪ್ಪಿಕೊಳ್ಳುವ ತನಕ ಸೋಲಲು ಸಾಧ್ಯವೇ ಇಲ್ಲ. ಸುನೀತಾ ಕೃಷ್ಣನ್ ಎಂಬ ಹೆಣ್ಣು ಮಗಳು ಶಾಲೆಯಿಂದ ಮನೆಕಡೆ ಹೊರಟಿದ್ದಾಳೆ. ಆಕೆಗೆ ಹದಿನಾರರ ಹರೆಯ. ಜೀವನದಲ್ಲಿ ನೂರಾರು ಕನಸು ಹೊತ್ತ ಹೆಣ್ಣುಮಗಳು. ಆದರೆ ದಾರಿ ಮಧ್ಯೆ 8 ಮಂದಿ ಯುವಕರು ಆಕೆಯ ಮೇಲೆ ಮೃಗದಂತೆ ಎರಗುತ್ತಾರೆ. ಆಕೆಯನ್ನು ಅತ್ಯಾಚಾರ ಮಾಡಿ ತಿಪ್ಪೆಗೆಸೆಯುತ್ತಾರೆ. ಮಾಂಸದ ಮುದ್ದೆಯಂತಾಗಿದ್ದ ಸುನೀತಾ ಮನೆಯ ಕೋಣೆಯೊಳಗೆ ಬಿದ್ದುಕೊಳ್ಳುತ್ತಾಳೆ. ಅಪ್ಪ- ಅಮ್ಮ ಹತಾಶರಾಗುತ್ತಾರೆ. ನೆರೆಕರೆಯವರು ಇವರ ಮನೆಕಡೆ ಮರ್ಯಾದೆಗೆ ಅಂಜಿ ಹೆಜ್ಜೆ ಹಾಕುವುದನ್ನು ಬಿಡುತ್ತಾರೆ. ಸಂಬಂಧಿಕರು ದೂರವಾಗುತ್ತಾರೆ. ಹೀಗೇ ದಿನಗಳು ಕಳೆದವು. ಸುನೀತಾ ಮಾತನಾಡದೆ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದ ದೃಶ್ಯ ಕಾಣಲು ಅಪ್ಪನಿಂದ ಸಾಧ್ಯವಾಗುತ್ತಿರಲಿಲ್ಲ. ಆತ ಒಂದು ದಿನ ಮನೋವೇದನೆ ತಾಳಲಾರದೆ ಮಗಳ ಬಳಿ ಬಂದು “ಮಗಳೇ ಎಷ್ಟು ದಿನಾಂತ ಹೀಗೆ ಇರುತ್ತಿ, ಏನಾದರೂ ಮಾಡು” ಅಂದಾಗ ಸುನೀತಾ ಅಪ್ಪನಿಗೆ, “ಅಪ್ಪಾ ನಾನು ಕಾಲೇಜಿಗೆ ತೆರಳುತ್ತೇನೆ” ಎನ್ನುತ್ತಾಳೆ. ಅಪ್ಪನಿಗೆ ಸಂತೋಷವಾಗುತ್ತದೆ. ಒಪ್ಪಿಗೆ ಸೂಚಿಸುತ್ತಾನೆ. ಆದರೆ ಯಾವ ಕಾಲೇಜು ಆಕೆಯನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ವಿದ್ಯಾಭ್ಯಾಸದ ಕನಸು ತೊರೆದ ಆಕೆ ಕೆಲಸಕ್ಕಾಗಿ ಪ್ರತ್ನಿಸುತ್ತಾಳೆ. ಆದರೆ ಅತ್ಯಾಚಾರಕ್ಕೆ ಒಳಗಾಗಿದ್ದ ಆಕೆಗೆ ಯಾರೊಬ್ಬರೂ ಕೆಲಸಕೊಡಲು ಮುಂದೆ ಬರಲಿಲ್ಲ. ವಿಷಯ ತಿಳಿದ ಅಪ್ಪ ಕುಸಿದು ಹೋಗುತ್ತಾನೆ. ಮನಸ್ಸಿನಲ್ಲಿ ಯೋಚಿಸಿ ಒಂದು ದಿನ ಅಪ್ಪನ ಬಳಿಗೆ ಬಂದ ಮಗಳು ಧೈರ್ಯ ತುಂಬುತ್ತಾಳೆ. “ಅಪ್ಪಾ ನನ್ನ ಜೀವನದಲ್ಲಿ ಮೂರು ಆಯ್ಕೆಗಳಿದ್ದವು. ಒಂದು ಸಾವು. ಮತ್ತೊಂದು ಜೀವಂತವಾಗಿರುವುದು. ಮೂರನೆಯದು ಜೀವನ ಸಾಗಿಸುವುದು. ಸಾಯುವುದಿದ್ದರೆ ನಾನು ಅಂದೇ ಸಾಯುತ್ತಿದ್ದೆ. ಆದರೆ ನಾನು ಸಾಯಲಾರೆ. ಇನ್ನು ಜೀವಂತವಾಗಿರುವುದು ನನ್ನಿಂದ ಸಾಧ್ಯವಿಲ್ಲ. ಮೂರುಹೊತ್ತು ತಿಂದೋ ತಿನ್ನದೆಯೋ ನಾಯಿಕೂಡಾ ಜೀವಂತವಿರಬಲ್ಲದು. ನಾನು ಹಾಗಾಗಲಾರೆ. ನಾನು ಜೀವನ ಸಾಗಿಸಬೇಕು. ಅದಕ್ಕಾಗಿ ಸ್ವಂತ ಸಂಸ್ಥೆಯೊಂದನ್ನು ಆರಂಭಿಸುತ್ತೇನೆ. ನನ್ನಂತಹ ನತದೃಷ್ಟರಿಗೆ ಆಶ್ರಯ ಕೊಡುತ್ತೇನೆ.” ಅಂದಾಗ ಅಪ್ಪನ ಕಣ್ಣುಗಳು ತೇವಗೊಂಡವು. ಆತ ಸಮ್ಮತಿ ಸೂಚಿಸಿದ. ಏಕೆಂದರೆ ಆತನಿಗೆ ಮಗಳು ಎದ್ದು ನಿಲ್ಲಬೇಕಿತ್ತು.

       “ಪ್ರಜ್ವಲ” ಎಂಬ ಸಂಸ್ಥೆ ಸ್ಥಾಪಿಸಿದ ಸುನೀತಾ ಕೃಷ್ಣನ್, ಈ ತನಕ ತನ್ನಂತೆ ಅದೃಷ್ಟಹೀನವಾಗಿ ಬದುಕಿದ ಸುಮಾರು 10,000 ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದ ಮಹಾತಾಯಿಯಾದಳು. ಅವರಿಗೆ ಶಾಲೆಗಳಿಗೆ ಪ್ರವೇಶ ದೊರೆಯುವುದು ಕಷ್ಟ ಎಂದು ತನ್ನ ಅನುಭವದಿಂದ ಅರಿತಿದ್ದ ಆಕೆ ಅವರಿಗಾಗಿಯೇ 16 ಶಾಲೆಗಳನ್ನು ತೆರೆದು ಸಾಧಕಿಯಾದಳು. ಅವಳ ಅಪ್ರತಿಮ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಆಕೆಗೆ “ಪದ್ಮಶ್ರೀ” ಪ್ರಶಸ್ತಿ ನೀಡಿ ಗೌರವಿಸಿತು.

     ಸುನೀತಾ ಕೃಷ್ಣನ್ ಜೀವನದಲ್ಲಿ ತೋರಿದ್ದು ಆತ್ಮವಿಶ್ವಾಸ. ಅದೇ ಆಕೆಯನ್ನು ಎದ್ದು ನಿಲ್ಲಿಸಿದ್ದು. ಆತ್ಮವಿಶ್ವಾಸ ಮೂಡಿದಾಗ, ಪ್ರಯತ್ನ ತನ್ನಿಂತಾನೆ ಹೊರಹೊಮ್ಮುತ್ತದೆ. ಪ್ರಯತ್ನ ಮಾಡದೆ ಸಾಧಕನಾದ ಇತಿಹಾಸ ಜಗತ್ತಿನಲ್ಲಿ ಕಾಣದು. ಪ್ರಯತ್ನ ಪಡದೇ ಹೋದರೆ ದೊಡ್ಡ ಸಾಧನೆ ಬದಿಗಿರಲಿ, ತಾನು ಧರಿಸುವ ಶೂ ನ ಲೇಷನ್ನೂ ಕಟ್ಟಲಾಗದು. ಸರಿಯಾಗಿ ಟೈ ಕಟ್ಟಲಾಗದು, ದಿನ ನಿತ್ಯ ಹೆಣೆಯುವ ಜಡೆಯನ್ನೂ ಹೆಣೆಯಲಾಗದು. ಇವುಗಳನ್ನು ದಿನ ನಿತ್ಯ ಅಭ್ಯಾಸ ಮಾಡುವುದರಿಂದ ಸುಲಭದಲ್ಲಿ ನಿರ್ವಹಿಸಬಹುದು. ತನ್ನಿಂದ ಸಾಧ್ಯ ಎಂಬ ಒಂದು ಅಂತರಾಳದ ತೀರ್ಮಾನ ನಮ್ಮನ್ನು ಅದೆಷ್ಟೋ ಎತ್ತರಕ್ಕೆ ಕೊಂಡೊಯ್ಯಬಹುದು.

    ವಿದ್ಯಾರ್ಥಿಗಳು ಅದೆಷ್ಟೋ ವ್ಯಕ್ತಿಗಳಿಂದ ಬಾಹ್ಯಪ್ರೇರಣೆ ಪಡೆಯಬಹುದು. ಆದರೆ ಬದಲಾವಣೆ ಘಟಿಸಬೇಕಾಗಿದ್ದು ತನ್ನೊಳಗೆ. ತಾನು ಸಾಧಿಸಬೇಕಾದ ವಿಷಯದ ಸ್ಪಷ್ಟತೆ ತನ್ನಲ್ಲಿರಲಿ. ಅದನ್ನು ಸಾಧಿಸಿಯೇ ತೀರುತ್ತೇನೆ, ನನ್ನಿಂದ ಅದು ಖಂಡಿತಾ ಸಾಧ್ಯ ಎಂಬ ಒಂದು ಸಣ್ಣ ನಿರ್ಧಾರ ನಿಮ್ಮ ಬದುಕನ್ನೇ ಬದಲಿಸಬಹುದು. ಆಗ ಮಾತ್ರ ನಾವು ಹೆತ್ತ ತಾಯಿ, ತನ್ನಾಸೆ ಪೂರೈಸಿದ ತಂದೆ, ವಿದ್ಯೆ ಕೊಟ್ಟ ಗುರು, ಹೊತ್ತ ಭೂಮಿಯ ಋಣವನ್ನು ತೀರಿಸಬಹುದು.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
Ads on article

Advertise in articles 1

advertising articles 2

Advertise under the article