-->
ಆಧುನಿಕ ಶಿಕ್ಷಣ: ಬದಲಾವಣೆಗೆ ನಾವೇ ಹೊಣೆ.!

ಆಧುನಿಕ ಶಿಕ್ಷಣ: ಬದಲಾವಣೆಗೆ ನಾವೇ ಹೊಣೆ.!

ಲೇಖನ : ಆಧುನಿಕ ಶಿಕ್ಷಣ: ಬದಲಾವಣೆಗೆ ನಾವೇ ಹೊಣೆ.!
ಲೇಖಕರು : ಮಂಜುಳಾ ಪ್ರಸಾದ್
ಸಹ ಶಿಕ್ಷಕಿ, 
ಸ ಹಿ ಪ್ರಾ ಶಾಲೆ ಯಲುವಹಳ್ಳಿ, 
ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ.

        ಬದಲಾವಣೆ ಜಗದ ನಿಯಮ..... ಈ ನಿಯಮಕ್ಕೆ ಶಿಕ್ಷಣ ಕ್ಷೇತ್ರವೂ ಹೊರತೇನಲ್ಲ.......!! 
      ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯ ಕಾಲ ಕಾಲಕ್ಕೆ ಬದಲಾವಣೆಯನ್ನು ಅನುಸರಿಸಿಕೊಂಡು ಬಂದಿದೆ. ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯನ್ನು ನಾವು ಕಾಣಬಹುದಾಗಿತ್ತು. ಗುರುಕುಲ ಶಿಕ್ಷಣದಲ್ಲಿ ಶಾಸ್ತ್ರಗಳ ಅಭ್ಯಾಸದ ಜತಗೆ ಜೀವನಕ್ರಮದ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು.
    ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ವೃತ್ತಿ ವಿದ್ಯೆಗಳು ಕ್ರಿಯೆಯ ಅನುಕರಣೆಯ ಮೂಲಕ ಕಲಿತು ಬರುತ್ತಿದ್ದವೆಯೇ ವಿನಃ ಪುಸ್ತಕ ಜ್ಞಾನದಿಂದಲ್ಲ. ವೃತ್ತಿ ವಿದ್ಯೆಗಳನ್ನು ಆಯಾ ಕುಟುಂಬಗಳು ದಾಟಿಸಿಕೊಂಡು ಬರುತ್ತಿದ್ದವು. ಕಿರಿಯರು ಹಿರಿಯರಿಂದ ಕಲಿಯುತ್ತಿದ್ದರು. ಇದಕ್ಕೆ ಅಕ್ಷರಜ್ಞಾನವು ಅಪ್ರಸ್ತುತವಾಗಿತ್ತು. ಅಂದರೆ ಇವರು ಇಂದಿನ ಹಾಗೆ ಯಾವುದೋ ಶಿಕ್ಷಣ ಸಂಸ್ಥೆಗೆ ಬಂದು ಅಕ್ಷರ ಕಲಿತು ಡಿಗ್ರಿಗಳನ್ನು ಪಡೆಯಲಿಲ್ಲ. ಅಂದಾಕ್ಷಣ ಅವರಿಗೆ ಶಿಕ್ಷಣವೇ ಇರಲಿಲ್ಲ ಎನ್ನುವುದು ತಪ್ಪಾಗುತ್ತದೆ. ಅಂದಿನ ಶಿಕ್ಷಣದ ಸ್ವರೂಪವೇ ಬೇರೆ ಇತ್ತು ಎಂಬುದನ್ನು ಗಮನಿಸಬೇಕು.
       ಭಾರತೀಯರು ವಿಶ್ವದಲ್ಲಿ ತಮ್ಮ ಕುಶಲಕರ್ಮಕ್ಕೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದ್ದರು. ಭಾರತದಾದ್ಯಂತ ಇರುವ ದೇವಾಲಯಗಳು ಪ್ರಾಚೀನ ವಾಸ್ತುಶಿಲ್ಪಿಗಳ ಅಭಿಯಂತರ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಭಾರತದ ವಿವಿಧ ಶಾಸ್ತ್ರ ಸಂಪ್ರದಾಯಗಳೆಲ್ಲ ಮೂಲತಃ ಇಂಥ ಅನುಕರಣೆಯ ಕಲಿಕೆಯಿಂದಲೇ ದಾಟಿ ಬಂದಿದ್ದವು. ಇಂಥವರನ್ನು ಅಕ್ಷರ, ಪುಸ್ತಕಗಳ ಮಾನದಂಡವನ್ನಿಟ್ಟುಕೊಂಡು ಶಿಕ್ಷಣದಿಂದ ವಂಚಿತರು, ಅವಿದ್ಯಾವಂತರು ಎಂದು ಕರೆಯಬಲ್ಲೆವೆ ನಾವು....?? ವಿಪರ್ಯಾಸವೆಂದರೆ ಇದೊಂದು ಅನೌಪಚಾರಿಕ ಶಿಕ್ಷಣ ಪದ್ಧತಿಯಾಗಿತ್ತು. ಇಲ್ಲಿ ಯಾವುದೇ ಸೀಮಿತ ಅಂದರೆ ನಿರ್ದಿಷ್ಟ ಶಿಕ್ಷಣ ಇರಲಿಲ್ಲ.
       ಬಳಿಕ ಕಾಲ ಬದಲಾದಂತೆ ಜಗತ್ತು ಆಧುನಿಕರಣವಾದಾಗ ಔಪಚಾರಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಯಿತು.
ಇದರನ್ವಯ ತರಗತಿ, ತರಗತಿಗನುಗಣವಾಗಿ ಪಠ್ಯಗಳನ್ನು ಕೂಡ ಅಳವಡಿಸಲಾಯಿತು. ಪಠ್ಯದಲ್ಲಿರುವ ಪಾಠಗಳನ್ನು ಅಭ್ಯಸಿಸಿ ಅದಕ್ಕೆ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತಿತ್ತು. ಇದು ಲಾರ್ಡ್‌ ಮೆಕಾಲೆ ಶಿಕ್ಷಣದ ಒಂದು ಭಾಗವಾಗಿದೆ ಎಂದು ಹೇಳಬಹುದು. ತರುವಾಯ ಸದ್ಯ ಭಾರತದಲ್ಲಿ ನೂತನ ಶಿಕ್ಷಣ ಪದ್ಧತಿ-2020 ಎಂಬ ಕ್ರಮವನ್ನು ಘೋಷಿಸಲಾಗಿದೆ. ಇದು ಭಾರತದಲ್ಲಿ ಶಿಕ್ಷಣ ಕ್ರಾಂತಿಗೆ ಪೂರಕವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗೆ ದೇಶದ ಶಿಕ್ಷಣವೂ ಕಾಲ ಕಾಲಕ್ಕೆ ಬದಲಾವಣೆ ಕಂಡಿದೆ.

      ಇಂದು ಅಕ್ಷರಕ್ಕೆ ಸಿಕ್ಕಿರುವ ಈ ಮಹತ್ವದಿಂದಾಗಿ ಒಂದು ಅನಕ್ಷರಸ್ಥ ವ್ಯಕ್ತಿ ಹಾಗೂ ಅಶಿಕ್ಷಿತನು ಅಜ್ಞಾನಿ ಎಂಬ ಸಮೀಕರಣ ಕೂಡ ಬೆಳೆದಿದೆ.  ಹಾಗೂ ಅಂಥವನನ್ನು ಹಿಡಿದು ಅವನಿಗೆ ಅವನ ಹೆಸರನ್ನು ಬರೆದು ಸಹಿ ಹಾಕಲಿಕ್ಕೆ ಕಲಿಸಿಬಿಟ್ಟರೆ ಏನೋ ಸಾಮಾಜಿಕ ಕ್ರಾಂತಿ ನಡೆದುಬಿಡುತ್ತದೆ ಎಂಬಂತೆ ಸಾಕ್ಷರತಾ ಆಂದೋಲನವು ಬಿಂಬಿಸುತ್ತದೆ. ಅದು ಹೇಗೆ ಒಬ್ಬನು ಹೆಬ್ಬೆಟ್ಟನ್ನು ಒತ್ತುವುದನ್ನು ನಿಲ್ಲಿಸಿ ತನ್ನ ಹೆಸರನ್ನು ಬರೆಯಲು ಕಲಿತಾಕ್ಷಣ ಅಥವಾ ಓದಲು ಕಲಿತಾಕ್ಷಣ  ಜ್ಞಾನಿಯಾಗಿಬಿಡುತ್ತಾನೆ? ಎಂಬುದನ್ನು ಯಾರೂ ವಿವರಿಸಿಲ್ಲ, ಹಾಗೂ ಸ್ವತಃ ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವವರೇ ಅದನ್ನು ನಂಬಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಜ್ಞಾನ ಸಂಪಾದನೆಗೆ ಅಕ್ಷರವು ಸಾಧನ ಎಂಬ ನಂಬಿಕೆ ಇಂಥವರಲ್ಲಿ ಬೇರೂರಿರುವುದು ಸ್ಪಷ್ಟ.

     ಶಿಕ್ಷಣವು ವ್ಯಕ್ತಿಯೋರ್ವನಿಗೆ ಸಿಗಬೇಕಾದ ಮೂಲಹಕ್ಕುಗಳಲ್ಲಿ ಒಂದು. ಇದರಿಂದ ಆತನ ಜೀವನಕ್ಕೆ ಉದ್ಯೋಗ ನೀಡುವಷ್ಟೇ ಅಲ್ಲ, ಜೀವನ ಬೆಳಗಲೂ ಪ್ರೇರಣೆಯಾಗಬೇಕು. ಜ್ಞಾನ ವೃದ್ಧಿಗೆ ಶಿಕ್ಷಣ ಅತ್ಯಗತ್ಯ. ಈ ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯೂ ಬಾಯಿಪಾಠದ ಶಿಕ್ಷಣಕ್ಕಿಂತ ವ್ಯಕ್ತಿತ್ವ, ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡುತ್ತಿತ್ತು. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಿರುತ್ತಿದ್ದ. ಹಿರಿಯ-ಕಿರಿಯರಿಗೆ ಗೌರವಾಧರಗಳನ್ನು ನೀಡುವುದನ್ನು ಕಲಿತಿರುತ್ತಿದ್ದ. ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದ ಎಂದು ಓದಿ ಕೇಳಿದ್ದೇವೆ. ಹಾಗೆಂದು ಈಗಿನ ಆಧುನಿಕ ಶಿಕ್ಷಣ ಮೌಲ್ಯ ಶಿಕ್ಷಣ ನೀಡುವುದನ್ನು ಕಲಿಸುತ್ತಿಲ್ಲವೇ...? ಎಂದರೆ ತಪ್ಪಾಗುತ್ತದೆ. ಆಧುನಿಕ ಶಿಕ್ಷಣ ಪದ್ಧತಿ ಮೌಲ್ಯ ಶಿಕ್ಷಣಕ್ಕೂ ಒತ್ತು ನೀಡಿದೆ, ಆದರೆ ಕೆಲವೊಂದು ಬದಲಾವಣೆ ಅತ್ಯಾವಶ್ಯಕ ಅಗತ್ಯವಿದೆ ಎಂಬ ಬಲವಾದ ವಾದಗಳು ಆಗಾಗ ಕೇಳಿಬರುತ್ತಿವೆ. ಇದಕ್ಕೆ ಕೇವಲ ಶಿಕ್ಷಣ ಪದ್ಧತಿ ಹೊಣೆಯಾಗಬೇಕಿಲ್ಲ. ಬದಲಾಗಿ ಇಡೀ ವ್ಯವಸ್ಥೆಯೇ ಹೊಣೆಯಾಗಬೇಕಿದೆ.
ಅಂದರೆ ಈ ಬದಲಾವಣೆಗೆ ನಾವೇ ಹೊಣೆ! ಏಕೆಂದರೆ ನಾವೂ ಈ ವ್ಯವಸ್ಥೆಯ ಭಾಗವಲ್ಲವೇ??

    ಹಾಗಾದರೆ ನಾವು ನಿಭಾಯಿಸಬೇಕಾಗಿರುವ ಹೊಣೆಯೆಂದರೆ, ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅಕ್ಷರವನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ.

     ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ  ಬರೆಹದ ಮೂಲಕವೇ ಜ್ಞಾನ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.
ಈ ನಿಟ್ಟಿನಲ್ಲಿ ಈಗಿನ ಜಾರಿಗೊಳಿಸಿರುವ ನೂತನ ಶಿಕ್ಷಣ ಪದ್ದತಿ ಅನುಕೂಲಿಯಾಗಲಿದೆ ಎಂಬುವುದನ್ನು ಒಪ್ಪಬೇಕು. ಅಂತೆಯೇ ವಿದ್ಯಾರ್ಥಿಗಳ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಒದಗಿಸಬೇಕಿದೆ. ಅವರ ಆಸಕ್ತಿ, ಕೌಶಲ ವೃದ್ಧಿಗೆ ಪೂರಕವಾದ ಶಿಕ್ಷಣ ಮಾಧ್ಯಮ ರೂಢಿಸಿಕೊಳ್ಳಬೇಕಿದೆ. ಕೇವಲ ಉದ್ಯೋಗ ಸೃಷ್ಟಿಗೆ ಮಾತ್ರ ಶಿಕ್ಷಣ ಸೀಮಿತವಾಗಿರಿಸದೇ ಇಡೀ ಮನುಷ್ಯನ ವ್ಯಕ್ತಿತ್ವ, ಸರ್ವತೋಮುಖ ಅಭಿವೃದ್ಧಿಯಾಗುವ ಶಿಕ್ಷಣ ನೀಡಬೇಕಿದೆ.

     ಈ ನಡುವೆ ಒಂದು ಆಶಾದಾಯಕ ಬೆಳವಣಿಗೆ ಎಂದರೆ 2030ರ ವೇಳೆಗೆ ಭಾರತದಲ್ಲಿ ಕಳೆದ ವರ್ಷದಿಂದಲೇ  ಜಾರಿಯಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾದಲ್ಲಿ, ಶಿಕ್ಷಣ ಪದ್ಧತಿಯೂ ಮುಂದುವರಿದಿರುತ್ತದೆ. ಈಗಾಗಲೇ ವೃತ್ತಿ ಶಿಕ್ಷಣ, ಕೌಶಲ ವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗುತ್ತಿದೆ. ತಂತ್ರಜ್ಞಾನವೂ ಅಭಿವೃದ್ಧಿಯಾಗಿದ್ದು ಶಿಕ್ಷಣದಲ್ಲಿ ಕೂಡ ಬಳಕೆಯಾಗುತ್ತಿದೆ. ವಿಧವಿಧವಾದ ಕೋರ್ಸ್‌ಗಳು ದೇಶಕ್ಕೆ ಪರಿಚಯವಾಗುತ್ತಿವೆ. ಇದು ಮುಂದುವರಿದ ಶಿಕ್ಷಣ ಭಾಗವಾಗಿದೆ. ಹೀಗಾಗಿ ನಾವು ಕೂಡ ಶಿಕ್ಷಣ ಪದ್ಧತಿಗೆ ಒಗ್ಗಿಕೊಳ್ಳಬೇಕಿದೆ. ಆಗಾಗ ಅವಶ್ಯಕ ಮಾರ್ಪಾಡುಗಳನ್ನು ಮಾಡಿಕೊಳ್ಳತ್ತಾ ನಮ್ಮ ಹೊಣೆಗಾರಿಕೆ ನಿಭಾಯಿಸಬೇಕಾಗಿದೆ.
ಧನ್ಯವಾದಗಳು
ಚಿತ್ರಗಳು : ಅಂತರ್ಜಾಲ ಕೃಪೆ.
..................................... ಮಂಜುಳಾ ಪ್ರಸಾದ್
ಸಹ ಶಿಕ್ಷಕಿ, 
ಸ ಹಿ ಪ್ರಾ ಶಾಲೆ ಯಲುವಹಳ್ಳಿ, 
ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ.
Mob: +91 88614 46889
******************************************
Ads on article

Advertise in articles 1

advertising articles 2

Advertise under the article