ಹಕ್ಕಿ ಕಥೆ : ಸಂಚಿಕೆ - 109
Tuesday, July 25, 2023
Edit
ಹಕ್ಕಿ ಕಥೆ : ಸಂಚಿಕೆ - 109
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ರುದ್ರನಾಥ ಎಂಬ ಶಿವಾಲಯವೊಂದರ ಕಡೆಗೆ ಚಾರಣ ಹೊರಟ ನಾವು ದಾರಿಯಲ್ಲಿ ಕಂಡ ಕಾಲೇಜಿ ಫೆಸೆಂಟ್ ಎಂಬ ಕಾಡುಕೋಳಿಯ ಬಗ್ಗೆ ಕಳೆದ ವಾರ ಬರೆದಿದ್ದೆ. ಚಹಾ ಕುಡಿಯುತ್ತಿದ್ದಾಗ ಕಂಡ ಈ ಹಿಮಾಲಯದ ಕಾಡುಕೋಳಿಯನ್ನು ನೋಡಿ ನಮ್ಮ ಚಾರಣ ಮುಂದುವರೆಸಿದೆವು. ರುದ್ರನಾಥದ ಚಾರಣ ಉಳಿದವುಗಳ ಹಾಗಲ್ಲ. ಚಾರಣದ ದಾರಿ ಸುಮಾರು ಹದಿನೆಂಟು ಕಿಲೋಮೀಟರ್ ದೂರ. ಅದರಲ್ಲಿ ಸುಮಾರು ಹತ್ತು ಕಿಲೋಮೀಟರ್ ನಿರಂತರ ಏರುದಾರಿ. ಆನಂತರ ಸುಮಾರು ಎಂಟು ಕಿಲೋಮೀಟರ್ ಸಮತಟ್ಟು ಮತ್ತು ಏರು ಇಳಿವಿನ ದಾರಿ. ಏರುದಾರಿಯಲ್ಲಿ ನಡುನಡುವೆ ಸಣ್ಣ ಹುಲ್ಲುಗಾವಲು ಪ್ರದೇಶಗಳು ಸಿಗುತ್ತವೆ. ಈ ಹುಲ್ಲುಗಾವಲುಗಳನ್ನು ಅಲ್ಲಿನ ಜನ ಬುಗಿಯಾಲ್ ಎಂದು ಕರೆಯುತ್ತಾರೆ. ಉಳಿದಂತೆ ಮೊದಲ ಹತ್ತು ಕಿಲೋಮೀಟರ್ ನಲ್ಲಿ ದಟ್ಟವಾದ ಕಾಡು. ಬೆಳಗ್ಗೆ ಐದೂವರೆಗೆ ಹೊರಟ ನಾವು ಚಹಾ ಕುಡಿದು, ತಿಂಡಿ ತಿಂದು, ಅಲ್ಲಲ್ಲಿ ಜ್ಯೂಸ್ ಕುಡಿದು, ದಣಿವಾರಿಸಿಕೊಂಡು ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಪನಾರ್ ಬುಗಿಯಾಲ್ ಎಂಬ ಸುಂದರವಾದ ಹುಲ್ಲುಗಾವಲು ಪ್ರದೇಶಕ್ಕೆ ತಲುಪಿದೆವು.
ಹತ್ತು ಕಿಲೋಮೀಟರ್ ಕ್ರಮಿಸಲು ಬರೋಬ್ಬರಿ ಒಂಭತ್ತು ಗಂಟೆಗಳೇ ಬೇಕಾಗಿದ್ದವು. ದಾರಿಯುದ್ದಕ್ಕೂ ಅಲ್ಲೇ ಸಿಗುವ ಕಲ್ಲುಗಳನ್ನು ಹಾಸಿ ದಾರಿ ಮಾಡಿದ್ದರು. ನಮ್ಮ ಗೈಡ್ ಅಮಿತ್ ರಾವತ್ ನಮಗಿಂತ ಸ್ವಲ್ಪ ಮೊದಲೇ ಹೋಗಿ ಅಲ್ಲಿ ನಮಗೆ ಊಟದ ವ್ಯವಸ್ಥೆ ಮಾಡಿಸಿದ್ದರು. ಅಲ್ಲೆಲ್ಲ ಆರ್ಡರ್ ಕೊಟ್ಟ ನಂತರವೇ ಧಾಬಾದವರು ಊಟ ತಯಾರಿಸುತ್ತಿದ್ದರು. ನಾವು ನಾಲ್ಕು ಜನ ಸ್ವಲ್ಪ ಮುಂಚಿತವಾಗಿ ತಲುಪಿದ್ದರಿಂದ ಟೆಂಟ್ ನಲ್ಲಿ ವಿಶ್ರಾಂತಿ ಪಡೆದೆವು. ದಾರಿಯುದ್ದಕ್ಕೂ ಮಳೆ ಮತ್ತು ಮಂಜು ಆವರಿಸಿದ್ದರಿಂದ ಸುತ್ತಮುತ್ತಲೂ ಏನಿತ್ತು ಎಂಬುವುದೇ ನಮಗೆ ಕಾಣುತ್ತಿರಲಿಲ್ಲ. ಟೆಂಟ್ ನಲ್ಲಿ ಮಲಗಿದವರಿಗೆ ಉಳಿದವರು ಬರುವವರೆಗೂ ಗಾಢ ನಿದ್ರೆ. ಸುಮಾರು ಮೂರು ಗಂಟೆಯ ಸಮಯಕ್ಕೆ ಎಲ್ಲರೂ ಪನಾರ್ ತಲುಪಿದರು. ಎಲ್ಲರೂ ಸೇರಿ ಊಟ ಮಾಡಿದೆವು. ಮುಂದೆ ಇನ್ನೂ ಎಂಟು ಕಿಲೋಮೀಟರ್ ಏರಿಳಿತದ ದಾರಿ ಇತ್ತು. ಇನ್ನೂ ಕನಿಷ್ಠ ಐದುಗಂಟೆಗಳ ನಡಿಗೆ. ಆದರೆ ನಮ್ಮಲ್ಲಿ ಹೆಚ್ಚಿನವರು ನಡಿಗೆ ಮುಂದುವರೆಸುವುದು ಬೇಡ ಎಂದು ನಿರ್ಧರಿಸಿದ್ದರು. ಒಂದೊಳ್ಳೆ ನಿದ್ರೆ ಮತ್ತು ವಿಶ್ರಾಂತಿ ಎಲ್ಲರಿಗೂ ಅಗತ್ಯವಾಗಿ ಬೇಕಿತ್ತು. ಊಟ ಮಾಡಿ ಎಲ್ಲರೂ ವಿಶ್ರಾಂತಿ ಪಡೆದರು.
ಸಂಜೆ ಐದೂವರೆಯ ಹೊತ್ತಿಗೆ ಎದ್ದಾಗ ಸ್ವಲ್ಪ ವಾತಾವರಣ ತಿಳಿಯಾಗಿತ್ತು. ನಾವು ಬಹಳ ಎತ್ತದರದಲ್ಲಿದ್ದೇವೆ ಎನ್ನವುದು ನಮ್ಮ ಅರಿವಿಗೆ ಬಂದಿತ್ತು. ಮೈದಾನದಂತಿದ್ದ ಜಾಗ ಸುಂದರವಾಗಿ ಕಾಣುತ್ತಿತ್ತು. ಅಲ್ಲಿ ಸುತ್ತಮುತ್ತ ಎರಡು ಧಾಬಾ ಮತ್ತು ನಾಲ್ಕು ಟೆಂಟುಗಳಿದ್ದವು. ನಾವು ಉಳಿದಿದ್ದ ಟೆಂಟ್ ನ ಬಳಿಯಲ್ಲೇ ಎರಡು ಕಾಗೆಗಳು ಬಂದು ಕುಳಿತವು. ಅರೆ ಕಾಗೆಗಳು ಇಲ್ಲೂ ಇವೆಯಾ ಎಂದು ಆಶ್ಚರ್ಯವಾಯಿತು. ಅವುಗಳು ಸಲೀಸಾಗಿ ಗುಡ್ಡದ ಇಳಿಜಾರಿನಲ್ಲಿ ಹಾರುತ್ತಿದ್ದವು. ಹಾರುವಾಗ ಅವುಗಳ ಹೆಗಲಿನ ಭಾಗದಲ್ಲಿ ಎರಡೂ ಕಡೆಗೆ ಸಣ್ಣ ಬಿಳೀ ಬಣ್ಣದ ಗುರುತು ಇತ್ತು. ಉಳಿದಂತೆ ಪೂರ್ಣ ಗಾಢ ಕಪ್ಪು ಬಣ್ಣ. ಹಾರುವಾಗ ಮತ್ತು ಇನ್ನೊಂದು ಕಾಗೆಯನ್ನು ಕರೆಯುವ ಧ್ವನಿಯೂ ನಮ್ಮೂರಿನ ಕಾಗೆಗಳಿಗಿಂತ ಭಿನ್ನವಾಗಿ ಗಡುಸಾಗಿತ್ತು. ಅವುಗಳ ಫೋಟೋ ತೆಗೆದುಕೊಂಡು ಅವುಗಳ ಬಗ್ಗೆ ಮೊಬೈಲಿನಲ್ಲಿದ್ದ ಹಕ್ಕಿ ಪುಸ್ತಕದಲ್ಲಿ ಹುಡುಕಿದೆ. ಇವುಗಳು ಹಿಮಾಲಯದ ತಪ್ಪಲಿನಲ್ಲೇ ವಾಸಿಸುವ ಕಾಗೆಯ ಪ್ರಜಾತಿಗಳು ಎಂದು ತಿಳಿಯಿತು. ನಮ್ಮೂರಿನ ಕಾಗೆಗಳಿಗಿಂದ ದೊಡ್ಡದೂ, ದಪ್ಪನೆಯ ಕೊಕ್ಕು, ದಪ್ಪನೆಯ ಧ್ವನಿಯಿಂದ ಅವುಗಳ ವ್ಯಕ್ತಿತ್ವವೂ ಭಿನ್ನವಾಗಿತ್ತು. ಧಾಬಾಗಳ ಆಸುಪಾಸಿನಲ್ಲಿ ಸಿಗುವ ಅಳಿದುಳಿದ ಆಹಾರ ತಿನ್ನಲು ಬಂದಿದ್ದವು. ಇತರೆ ಕಾಗೆಗಳಂತೆಯೇ ಮರದಮೇಲೆ ಕಡ್ಡಿಗಳನ್ನು ಜೋಡಿಸಿ ಗೂಡು ಕಟ್ಟುತ್ತವೆಯಂತೆ. ನನ್ನ ಜೊತೆಗಿದ್ದ ಚಾರಣ ಮಿತ್ರರು ಇದಕ್ಕೆ ಹಿಮಾಲಯದ ಕಾಗೆ ಎಂದು ಹೆಸರಿಟ್ಟಿದ್ದಾರೆ. ನೀವು ಏನು ಹೆಸರಿಡುತ್ತೀರಿ?
ಇಂಗ್ಲೀಷ್ ಹೆಸರು: Large-billed Crow
ವೈಜ್ಞಾನಿಕ ಹೆಸರು: Corvus macrorhynchos
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಇನ್ನೊಂದು ಹೊಸ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************