-->
ಜೀವನ ಸಂಭ್ರಮ : ಸಂಚಿಕೆ - 96

ಜೀವನ ಸಂಭ್ರಮ : ಸಂಚಿಕೆ - 96

ಜೀವನ ಸಂಭ್ರಮ : ಸಂಚಿಕೆ - 96
ಲೇಖಕರು :  ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

                        

        ಭರ್ತೃ ಹರಿ ಒಬ್ಬ ಮಹಾರಾಜನಾಗಿದ್ದನು. ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದನು. ರಾಜ್ಯ ಸಂಪತ್ತಿನಿಂದ ತುಂಬಿತ್ತು. ಯಾವುದಕ್ಕೆ ಏನೂ ಕೊರತೆ ಇರಲಿಲ್ಲ. ಆತನಿಗೆ ಸುಂದರಳಾದ ಪತ್ನಿ ಇದ್ದಳು. ಭರ್ತೃ ಹರಿಗೆ ಪತ್ನಿ ಮೇಲೆ ಅಷ್ಟು ಪ್ರೇಮ. ಒಮ್ಮೆ ವನ ಸಂಚಾರಕ್ಕೆ ರಾಜ ಹೋಗಿದ್ದನು. ಆಗ ಅರಣ್ಯದ ಸಮೀಪ, ನದಿ ಬದಿಯಲ್ಲಿ ಒಬ್ಬ ಸನ್ಯಾಸಿ ವಾಸವಾಗಿದ್ದನು. ರಾಜ ಆ ಸನ್ಯಾಸಿಯನ್ನು ಭೇಟಿ ಮಾಡಿ ಆಶೀರ್ವಾದ ಕೇಳಿದ. ಆ ಸನ್ಯಾಸಿ ಈ ರಾಜನ ಆಳ್ವಿಕೆ ಬಗ್ಗೆ ತಿಳಿದಿದ್ದು, ಆತ ಒಂದು ಹಣ್ಣನ್ನು ರಾಜ ಭರ್ತೃ ಹರಿಗೆ ನೀಡುತ್ತಾ ಹೇಳಿದ, "ಈ ಹಣ್ಣು ಪೂರ್ತಿ ತಿಂದರೆ ನೀನು ಸಾಯುವವರೆಗೂ ಯುವಕನಾಗಿರುತ್ತೀಯೆ. ನೀನು ಯುವಕನಾಗಿದ್ದರೆ ರಾಜ್ಯ ಇನ್ನೂ ಚೆನ್ನಾಗಿರುತ್ತದೆ. ಚೆನ್ನಾಗಿ ರಾಜ್ಯವಾಳು. ಪ್ರಜೆಗಳನ್ನು ಚೆನ್ನಾಗಿ ನೋಡಿಕೊ" ಎಂದು ಆಶಿರ್ವಾದ ಮಾಡಿದನು.

         ಆ ಹಣ್ಣನ್ನು ತೆಗೆದುಕೊಂಡು ಅರಮನೆಗೆ ಬಂದನು. ಆ ಹಣ್ಣನ್ನು ನೋಡುತ್ತಾ ಈ ರೀತಿ ಚಿಂತಿಸಿದ. ಈ ಹಣ್ಣನ್ನು ನಾನು ತಿಂದು ಯುವಕನಾಗಿದ್ದು, ನನ್ನ ಪತ್ನಿಯಾದ ಮಹಾ ರಾಣಿ ಮುದುಕಿಯಾದರೆ ಏನು ಚಂದ..? ಆಕೆ ತಿಂದು ತರುಣಿಯಾಗಿದ್ದರೆ ನನಗೆ ಸಂತೋಷವಾಗುತ್ತದೆ ಎಂದು ಭಾವಿಸಿ, ಮಹಾರಾಣಿಗೆ ಆ ಹಣ್ಣನ್ನು ನೀಡಿದ. ಈ ಹಣ್ಣು ತಿಂದರೆ ನೀನು ಸಾಯುವವರಿಗೆ ತರುಣಿಯಾಗಿರುತ್ತಿ ಎಂದನು. ಮಹಾರಾಣಿ ಆ ಹಣ್ಣನ್ನು ಪಡೆದು, ಆಮೇಲೆ ತಿನ್ನುವುದಾಗಿ ಹೇಳಿದಳು. ಮಹಾರಾಣಿಗೆ, ಅರಮನೆಯಲ್ಲಿ ಆನೆ ನೋಡಿಕೊಳ್ಳುತ್ತಿದ್ದ ಮಾವುತನ ಮೇಲೆ ಅನುರಾಗ. ಆಕೆ ಆ ಮಾವುತನನ್ನು ಕರೆದು, ಈ ಹಣ್ಣು ತಿಂದರೆ ನೀನು ಸಾಯುವ ವರೆಗೂ ತರುಣನಾಗಿರುತ್ತಿ. ನೀನು ತರುಣನಾಗಿ ಇರುವುದು ನನಗಿಷ್ಟ ಎಂದು ಆ ಹಣ್ಣನ್ನು ಮಾವುತನಿಗೆ ನೀಡಿದಳು. ಆಮೇಲೆ ಹಣ್ಣು ತಿನ್ನುವುದಾಗಿ ಹೇಳಿ ಮಾವುತ ತೆಗೆದುಕೊಂಡು ಹೋದನು. ಆತನಿಗೆ ಆ ರಾಜ್ಯದ ನರ್ತಕಿ ಮೇಲೆ ಅನುರಾಗ. ಈ ಹಣ್ಣನ್ನು ನರ್ತಕಿ ತಿಂದರೆ ಚಂದ ಎಂದು ಭಾವಿಸಿ, ಆ ಹಣ್ಣನ್ನು ನರ್ತಕಿಗೆ ನೀಡಿದ. ಆ ನರ್ತಕಿ ಹಣ್ಣನ್ನು ಆಮೇಲೆ ತಿನ್ನುವುದಾಗಿ ಹೇಳಿ ಚಿಂತಿಸಿದಳು. ಇದನ್ನು ನಾನು ತಿಂದು ತರುಣಿಯಾಗಿ ಇದ್ದರೆ ಯುವಕರ ಜೀವನ ಹಾಳಾಗುತ್ತದೆ. ಪ್ರಜೆಗಳನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುವ ರಾಜ ತಿಂದರೆ, ರಾಜ  ತರುಣನಾಗಿದ್ದರೆ ರಾಜ್ಯ ಇನ್ನಷ್ಟು ಸುಭಿಕ್ಷ ಎಂದು ಭಾವಿಸಿ, ಆ ಹಣ್ಣನ್ನು ರಾಜನಿಗೆ ನೀಡಿದಳು. ಈ ಹಣ್ಣನ್ನು ತಿಂದರೆ ತಾವು ಇರುವವರೆಗೂ ತರುಣರಾಗಿರುತ್ತೀರಿ. ರಾಜ್ಯ ಚೆನ್ನಾಗಿರುತ್ತದೆ. ನಾನು ತಿಂದರೆ ರಾಜ್ಯಕ್ಕೆ ಯಾವುದೇ ಲಾಭವಿಲ್ಲ ಎಂದಳು. ಆಗ ಹಣ್ಣನ್ನು ನೋಡಿದ ಮಹಾರಾಣಿಗೆ ನೀಡಿದ ಹಣ್ಣು ಅದಾಗಿತ್ತು. ಆಗ ಚಿಂತಿಸಿದ ನಾನು ಮಹಾರಾಣಿಗೆ ಅನುರಕ್ತ. ಮಹಾರಾಣಿ ಇನ್ಯಾರಿಗೋ ಅನುರಕ್ತಳು. ಆತ ನರ್ತಕಿಯ ಮೇಲೆ ಅನುರಕ್ತ. ಈ ಜಗತ್ತು ಇಷ್ಟೆ. ಇದರ ಸಹವಾಸ ಬೇಡ ಎಂದು, ಮಹಾಜ್ಞಾನಿಯಾಗಬೇಕೆಂದು ಬಯಸಿ ರಾಜ್ಯ ತೊರೆದನು. ಮುಂದೆ ದೊಡ್ಡ ವಿದ್ವಾಂಸನಾದನು.

          ಒಬ್ಬ ಸಿರಿವಂತನಿದ್ದನು. ದೊಡ್ಡ ಮನೆ. ಆತ ಪ್ರೀತಿಯಿಂದ ಒಂದು ನಾಯಿ ಸಾಕಿದ್ದನು. ಆ ನಾಯಿಗೆ ಪ್ರತಿದಿನ ಬಿಸಿನೀರಿನಿಂದ ಸಾಬೂನು ಹಾಕಿ ಸ್ನಾನ ಮಾಡಿಸುತ್ತಿದ್ದರು. ಅದಕ್ಕೆ ಸುಗಂಧದ ನೀರು ಹಾಕಿ ವಿದೇಶಿ ವಸ್ತುಗಳಿಂದ ಶೃಂಗಾರ ಮಾಡುತ್ತಿದ್ದರು. ಅದಕ್ಕೆ ದೇಶ ವಿದೇಶಗಳ ತಿಂಡಿ ತರಿಸಿ ನೀಡುತ್ತಿದ್ದನು. ಅದು ತಿಂದು ಕೊಬ್ಬಿ, ಭರ್ಜರಿಯಾಗಿತ್ತು. ಒಮ್ಮೆ ಮನೆಯ ಆಳು ಆ ನಾಯಿಯನ್ನು ತಿರುಗಾಡಿಸಿಕೊಂಡು ಬರಲು ಹೋಗಿದ್ದನು. ದಾರಿಯಲ್ಲಿ ಆ ನಾಯಿಯ ಕಣ್ಣಿಗೆ ಯಾವುದೋ ಪ್ರಾಣಿಯ ಹಸಿ ಎಲುಬು ಕಂಡಿತು. ತಕ್ಷಣ ನಾಯಿ ಎಲುಬಿನ ಕಡೆ ಎಳೆಯುತ್ತಿತ್ತು. ಆ ಮನೆಯ ಆಳು ಆ ಎಲುಬಿನ ಹತ್ತಿರ ಹೋಗದಂತೆ ನಾಯಿಯನ್ನು ಎಳೆದು ತಂದು ಕಟ್ಟು ಹಾಕಿದನು. ಅದಕ್ಕೆ ತರಾವರಿ ತಿಂಡಿ ಹಾಕಿದ. ಆ ನಾಯಿ ಮನಸ್ಸಿನಲ್ಲಿ ಎಲುಬು ತುಂಬಿತ್ತು. ಈ ತರಾವರಿ ತಿಂಡಿ ರುಚಿಸಲಿಲ್ಲ ತಿನ್ನಲಿಲ್ಲ. ಏಕೆ ತಿನ್ನುತ್ತಿಲ್ಲ ?ಎಂದು ಆ ಮಾಲಿಕ ಯೋಚಿಸಿದ. ಆರೋಗ್ಯ ಸರಿ ಇಲ್ಲದಿರಬಹುದು. ಅದರ ದಾರ ಬಿಚ್ಚು ಎಂದನು. ದಾರ ಬಿಚ್ಚಿದೆ ತಡ ಆ ನಾಯಿಯ ಎಲುಬಿನ ಹತ್ತಿರ ಓಡಿತು. ಆ ಆಳು ಅದರ ಹಿಂದೆ ಹೋಗಿ ಅದನ್ನು ಕರೆತರಲು ಪ್ರಯತ್ನಿಸಿದ. ಆಗ ನಾಯಿಗೂ ಆಳಿಗೂ ಆಗುವ ಸಂಭಾಷಣೆ ಈ ರೀತಿ ಇದೆ.
ಆಳು: ಯಾಕೆ ಈ ಹೊಲಸು ಎಲುಬ ಬಯಸುತ್ತೀಯಾ?. ನಿನಗೆ ಎಂತೆಂಥ ತಿಂಡಿ ಹಾಕಲಾಗುತ್ತಿದೆ.
ನಾಯಿ: ನಮ್ಮ ಮಾಲೀಕನು ನನಗೆ ಮೋಸ ಮಾಡಿದ. ಮನೆಯಲ್ಲಿರುವ ವಿದೇಶದ ತಿಂಡಿ ಶ್ರೇಷ್ಠ ಎಂದು. ನೀನು ಅದನ್ನೇ ಹೇಳುತ್ತಾ ಇದಿಯೇ. ಈ ಎಲುಬು ಎಂತ ರುಚಿ ಗೊತ್ತಾ ಎಂದಿತು.
     ನಮ್ಮ ಜೀವನವು ಹೀಗೆ ಆಗಿದೆ. ನಾವು ಮನೆ, ಮಠ,  ಆಸ್ತಿ, ಹಣ, ಚಿನ್ನದ ವ್ಯಾಮೋಹಕ್ಕೆ ಬಂಧಿಯಾಗಿದ್ದೇವೆ. ನಮ್ಮ ಕಣ್ಣಿಗೆ ಇವನ್ನು ಬಿಟ್ಟು ಬೇರೇನು ಕಾಣುತ್ತಿಲ್ಲ. ನಮಗೆ ಜಗತ್ತಿನ ವೈಭವ, ವೈವಿಧ್ಯತೆ ಅನುಭವಿಸಲು ಸಾಧ್ಯವಿಲ್ಲದಷ್ಟು  ಬಂಧಿಯಾಗಿದ್ದೇವೆ. ಗಳಿಸುತ್ತಾ ಕೂಡಿಸುತ್ತಾ ಹೋದರೆ, ನಾವು ನಾಯಿ ಮೂಳೆಗೆ ಅಂಟಿಕೊಂಡಂತೆ ಬಂಧಿಗಳಾಗುತ್ತಾ ಹೋಗುತ್ತೇವೆ. ನಾವು ಜಗತ್ತಿಗೆ ಬಂದಿದ್ದು ಗಳಿಸಲು, ಕೂಡಿಸಲು ಅಲ್ಲ. ಜಗತ್ತಿನ ವೈಭವವನ್ನು, ವೈವಿಧ್ಯತೆಯನ್ನು ಅನುಭವಿಸಲು. ಅನುಭವ ನಮ್ಮನ್ನು ಸುಂದರಮಾಡುತ್ತದೆ ಮತ್ತು ಶ್ರೀಮಂತ ಮಾಡುತ್ತದೆ ಅಲ್ಲವೇ ಮಕ್ಕಳೆ.

......................................... ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************




Ads on article

Advertise in articles 1

advertising articles 2

Advertise under the article