-->
ಜಗಲಿ ಕಟ್ಟೆ : ಸಂಚಿಕೆ - 10

ಜಗಲಿ ಕಟ್ಟೆ : ಸಂಚಿಕೆ - 10

ಜಗಲಿ ಕಟ್ಟೆ : ಸಂಚಿಕೆ - 10
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

         
      ನಾನು ಚಿತ್ರಕಲಾಪದವಿಯನ್ನು ಪೂರ್ಣಗೊಳಿಸಿ ಸ್ವತಂತ್ರ ಕಲಾವಿದನಾಗಿದ್ದಂತಹ ಸಮಯ. ಕಲಾನಿಧಿ ಗೋಪಾಡ್ಕರ್ ಅವರ ಸಲಹೆ ಮೇರೆಗೆ ಮಂಗಳೂರಿನ ಒಂದು ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ನಿಯೋಜನೆಗೊಂಡೆ. ಅಲ್ಲಿ ಒಂದು ಒಪ್ಪಂದ ಇತ್ತು. ಚಿತ್ರಕಲೆಗೆ ಸಂಬಂಧಿಸಿದಂತೆ ಮಕ್ಕಳ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಸಂಘಟಿಸಬೇಕಾಗಿತ್ತು. ಅದು ವಿನೂತನವೂ ಆಗಬೇಕಾಗಿತ್ತು. ಸೇರಿದ ಪ್ರಥಮ ವರ್ಷದಿಂದ ನಿರಂತರ ಮೂರು ವರ್ಷ ಅಂತಹದ್ದು ನೆರವೇರಿಸಿಯೂ ಕೊಟ್ಟಾಯ್ತು.....!! ಪ್ರಚಾರವು ಸಿಕ್ಕಿತ್ತು....!!
      ವಿಷಯ ಅದಲ್ಲ...! ಆ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಣದ ಅವಧಿಯ ಕೆಲ ಹೊತ್ತು ಮಕ್ಕಳ ಜೊತೆ ಮಾತನಾಡುತ್ತಿದ್ದೆ. ಆ ಶಾಲೆಯ ಒಂದನೇ ತರಗತಿಯ ಇಬ್ಬರು ಮಕ್ಕಳಲ್ಲಿ ವಿಶೇಷ ಪ್ರತಿಭೆ ಗುರುತಿಸಿದೆ. ಯಾವುದೇ ವಿಷಯ ಕೊಟ್ಟರೂ ಆ ವಿಷಯವನ್ನು ಮುಂದುವರಿಸಿ ಕಥೆ ಹೇಳುವುದಾಗಿತ್ತು...!! ಒಂದನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನಿರರ್ಗಳವಾಗಿ ಕಥೆ ಹೇಳೋದು ಬಹಳ ಆಶ್ಚರ್ಯಕರವಾಗಿತ್ತು...!! ನಾನು ಈ ಇಬ್ಬರು ಮಕ್ಕಳನ್ನು ದೊಡ್ಡ ತರಗತಿಗೆ ಕರೆಸಿ ಆ ಮಕ್ಕಳ ಮುಂದೆ ಕಥೆ ಹೇಳುವುದನ್ನು ರೂಢಿ ಮಾಡಿಸಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ಮಾತನಾಡುವ ಕೌಶಲ್ಯ ಬೆಳೆಯಿತು. ನೇರ ವೇದಿಕೆಗೆ ಬಂದು ಕೊಟ್ಟ ವಿಷಯದಲ್ಲಿ ಅದು ಕಲ್ಪನೆಗೆ ಅಸಾಧ್ಯವಾಗಿರುವಂತಹ ಕಥೆಯನ್ನು ಹೇಳುವುದು ಸುದ್ದಿ ಆಯಿತು. ಖ್ಯಾತ ದಿನ ಪತ್ರಿಕೆಯವರು ಲೇಖನವನ್ನು ಬರೆದು ಆ ಇಬ್ಬರು ಮಕ್ಕಳನ್ನು ಪ್ರಶಂಸಿಸಿದರು. 
          ಕೆಲವೇ ತಿಂಗಳಲ್ಲಿ ನನಗೆ ಸರಕಾರಿ ಕೆಲಸ ದೊರೆಯಿತು. ಆ ಕಾರಣದಿಂದ ಆ ಮಕ್ಕಳ ಸಂಪರ್ಕದಿಂದ ದೂರವಾದೆ. ಇಬ್ಬರು ಮಕ್ಕಳೂ ಪ್ರತಿಭಾನ್ವಿತರಾಗಿದ್ದರು. ವಿವಿಧ ಅವಕಾಶಗಳನ್ನು ಪಡೆಯುವ ಮೂಲಕ ಬೆಳೆಯುವ ಎಲ್ಲಾ ಸಾಧ್ಯತೆಗಳು ಆ ಮಕ್ಕಳಿಗೆ ಇತ್ತು. ಆದರೆ ನಿರಂತರ ಸಂಪರ್ಕದ ಮೂಲಕ ಅವಕಾಶಗಳನ್ನು ಪಡೆಯುತ್ತಿದ್ದುದು ಒಂದು ವಿದ್ಯಾರ್ಥಿನಿಯ ಪೋಷಕರು ಮಾತ್ರ. ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ಅವಕಾಶವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇನ್ನೊಬ್ಬ ವಿದ್ಯಾರ್ಥಿಯ ಪೋಷಕರು ಯಾವುದೇ ಕಾಳಜಿಯನ್ನು ತೋರಿಸುವ ಪ್ರಯತ್ನ ಮಾಡದಾದರು. ಹೀಗಾಗಿ ಅವಕಾಶ ವಂಚಿತರಾಗಬೇಕಾದ ಅನಿವಾರ್ಯತೆಗೆ ಆ ವಿದ್ಯಾರ್ಥಿ ಬಲಿಯಾಗಬೇಕಾಯಿತು.
    ವಿದ್ಯಾರ್ಥಿಗಳ ಪೋಷಕರ ವ್ಯವಹಾರಿಕ ಒತ್ತಡ, ಬಿಡುವಿಲ್ಲದ ಕೆಲಸದ ಪರಿಣಾಮ ಮಕ್ಕಳ ಮೇಲೆ ಖಂಡಿತವಾಗಿಯೂ ಪ್ರಭಾವ ಬೀಳುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷ ಪ್ರತಿಭೆ ಇರುತ್ತದೆ. ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ಅದಕ್ಕಾಗಿ ಮಕ್ಕಳ ಜಗಲಿ.... ನಿಮ್ಮ ಮನೆ ಮಕ್ಕಳ ಜಗಲಿ...!!


        ಕಳೆದ ಸಂಚಿಕೆಯ ಜಗಲಿಕಟ್ಟೆ - 9 ಅಂಕಣದಲ್ಲಿ ರಮೇಶ ಎಂ. ಬಾಯಾರು , ಮಲ್ಲಿಕಾ ಧನಂಜಯ್ , ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ , ಶ್ರೀಮತಿ ‌ಕವಿತಾ ಶ್ರೀನಿವಾಸ್ , ಸೃಜನಶೀಲ ಶಿಕ್ಷಕಿ ವಿದ್ಯಾ ಕಾರ್ಕಳ , ಶ್ರೀರಾಮ ಮೂರ್ತಿ ನಿವೃತ್ತ ವಿಜ್ಞಾನ ಶಿಕ್ಷಕರು , ಭಾರತಿ ರಂಗನಾಥ ಹೆಗಡೆ ಹಳ್ಳಿ ಬೈಲ್ , ಗಣ್ಯ , ದೀಕ್ಷಾ ಕುಲಾಲ್ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

     ಮಕ್ಕಳ ಜಗಲಿಯ ನನ್ನ ಆತ್ಮೀಯ ಶಿಕ್ಷಕ - ಶಿಕ್ಷಕಿಯರಿಗೆ ಜನನಿ ಮಾಡುವ ನಮಸ್ಕಾರಗಳು. ಜಗಲಿ ಕಟ್ಟೆ ಅಂಕಣವನ್ನು ಆರಂಭಿಸಿರುವ ತಾರಾನಾಥ ಕೈರಂಗಳ ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು. ಜಗಲಿಯ ನನ್ನ ಅನುಭವ ಅನಿಸಿಕೆಗಳನ್ನು ಬರೆದು ಕಳಿಸಬೇಕೆಂದು ಎಷ್ಟೋ ದಿನಗಳಿಂದ ಆ ಸಮಯದ ನಿರೀಕ್ಷೆಯಲ್ಲಿದ್ದೆ. ಕೊರೊನಾ ಸಮಯದ ಸಂದಿಗ್ದತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಕೊರೊನಾ ಸಮಯದಲ್ಲಿ ನಮಗೆ ಶಾಲೆಗೆ ರಜೆ ಇತ್ತು. ಮಕ್ಕಳ ಜಗಲಿಯಲ್ಲಿ ಬರುವ ಕಥೆ , ಕವನ, ಲೇಖನ, ಚಿತ್ರಕಲೆ, ಕ್ರಾಫ್ಟ್ ಹೀಗೆ ಹಲವಾರು ಕಲಾ ಚಟುವಟಿಕೆಗಳನ್ನು ನಾನು ತಪ್ಪದೇ ನೋಡುತ್ತೇನೆ. ಇದರಿಂದ ನನ್ನಲ್ಲೂ ಕಥೆ, ಕವನ, ಅಕ್ಕನ ಪತ್ರ, ಚಿತ್ರಕಲೆ, ಕ್ರಾಫ್ಟ್ ಮಾಡುವ ಹುಮ್ಮಸ್ಸು ಮೂಡಿತು. ನನಗೂ ನನ್ನ ತಮ್ಮನಿಗೂ ಮಕ್ಕಳ ಜಗಲಿಗೆ ಚಿತ್ರ ಬಿಡಿಸಿ ಕಳಿಸುವುದೆಂದರೆ ಎಲ್ಲಿಲ್ಲದ ಸಂತೋಷ. ಕಥೆ ಬರೆಯುವುದರಲ್ಲಿ ಮೆಚ್ಚುಗೆ ಪ್ರಮಾಣ ಪತ್ರ ಸಿಕ್ಕಿದಾಗ ತುಂಬಾ ಸಂತೋಷವಾಯಿತು. ಮಕ್ಕಳ ಜಗಲಿ ನಮ್ಮ ಜಗಲಿ. ಇದರಿಂದ ನಾನು ಸಾಕಷ್ಟು ಒಳ್ಳೆಯ ಅಭ್ಯಾಸಗಳನ್ನು ಕಲಿತೆನು. ಮಕ್ಕಳ ಜಗಲಿಯಲ್ಲಿ ಅವಕಾಶ ಸಿಕ್ಕಿದಕ್ಕೆ ತುಂಬಾ ಸಂತೋಷವಾಯಿತು. ಇದರಿಂದ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಗುರುತಿಸಿಕೊಳ್ಳುವುದಕ್ಕೆ ಸಹಾಯವಾಯಿತು. ನಮ್ಮಂತಹ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯನ್ನು ತೋರಿಸುವ ವೇದಿಕೆ ಎಂದು ಹೇಳಿದರೆ ತಪ್ಪಾಗಲಾರದು. ಎಳೆಯ ಮಕ್ಕಳ ಪ್ರತಿಭೆಯನ್ನು ತೋರಿಸುವ ಪತ್ರಿಕೆ. ಒಟ್ಟಿನಲ್ಲಿ ಹೇಳುವುದಾದರೆ ನನಗೆ ಮತ್ತು ನನ್ನ ತಮ್ಮನಿಗೆ ಮಕ್ಕಳ ಜಗಲಿ ಎಂದರೆ ತುಂಬಾ ತುಂಬಾ ಇಷ್ಟ. ಪ್ರೋತ್ಸಾಹ ಕೊಡುತ್ತಿರುವ ನನ್ನ ಪ್ರೀತಿಯ ಪೋಷಕರಿಗೂ ಹಾಗೂ ಗುರುಗಳಿಗೂ ಧನ್ಯವಾದಗಳು.
............................................... ಜನನಿ . ಪಿ
7ನೇ ತರಗತಿ 
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೊಯಿಲ ಕೆ.ಸಿ.ಫಾರ್ಮ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************


     ಎಲ್ಲರಿಗೂ ನಮಸ್ಕಾರಗಳು.
ಈ ವಾರದ ಮಕ್ಕಳ ಜಗಲಿ ಹೊತ್ತು ತಂದ ಎಲ್ಲಾ ಅಂಕಣಗಳ ಬರಹಗಳು ತುಂಬಾನೇ ಚೆನ್ನಾಗಿದ್ದವು. ಯಾಕೂಬ್ ಕೊಯ್ಯೂರು ಸರ್ ರವರು ಶಕ್ತಿಸ್ವರೂಪವಾದ ಹೆಣ್ಣಿನ ಬಗ್ಗೆ ಬರೆದಿರುವ ಒಂದೊಂದೂ ವಾಕ್ಯಗಳೂ ಓದುಗರಿಗೆ ಹೆಣ್ಣಿನ ಬಗ್ಗೆ ಇನ್ನಷ್ಟು ಗೌರವ ಮೂಡಿಸುವುದಂತೂ ಸತ್ಯ ಸರ್. 
       ಗೋಪಾಲಕೃಷ್ಣ ನೇರಳೆಕಟ್ಟೆಯವರು ತನ್ನ ಕೈಗೆ ಚುಚ್ಚಿದ ಮುಳ್ಳು ಐದು ನಿಮಿಷಗಳಲ್ಲಿ ನೀಡಿದ ನೋವು, ಮುಳ್ಳನ್ನು ತೆಗೆದ ಕ್ಷಣವೇ ಮಾಯವಾಗಿದ್ದು, ಬಹುಶಃ ನಮ್ಮೊಳಗೂ ಚುಚ್ಚಿರುವ ಕೆಲವೊಂದು ಕೆಟ್ಟ ಬುದ್ಧಿಗಳು, ನಮ್ಮತನವನ್ನು ನಾಶ ಮಾಡುವ ಮೊದಲೇ ನಮ್ಮಿಂದ ಕಿತ್ತುಹಾಕಿದರೆ ಸಮಸ್ಯೆಯಿಲ್ಲದ ಜೀವನ ನಮ್ಮದಾಗಬಹುದು ಎಂಬುವುದನ್ನು ಸರಳ, ಸುಂದರವಾಗಿ ತಿಳಿಸಿದ ರೀತಿ ಚೆನ್ನಾಗಿತ್ತು.
      ತುಳಸಿಯನ್ನು ಭಕ್ತಿಯಿಂದ ಪೂಜಿಸಿದರೆ ನಮ್ಮ ಎಷ್ಟೋ ಬೇಡಿಕೆಗಳು ಈಡೇರುತ್ತವೆ. ಏನೋ ಒಂದು ರೀತಿಯ ನವಚೈತನ್ಯ ನಮ್ಮನ್ನು ಆವರಿಸಿದಂತಹ ಅನುಭವ. ಅಂತಹ ತುಳಸಿ ಗಿಡದ ಬಗ್ಗೆಯೇ ಈ ವಾರದ ನಿಷ್ಪಾಪಿ ಸಸ್ಯಗಳ ಲೇಖನದಲ್ಲಿ ಮೂಡಿ ಬಂದದ್ದು ಖುಷಿಯಾಯಿತು.
     ಹಾಗೆಯೇ ಮಕ್ಕಳ ಚಿತ್ರಗಳು ಹಾಗೂ ಮಕ್ಕಳ ಕವನಗಳ ಎಲ್ಲವೂ ಸೊಗಸಾಗಿತ್ತು. ಮಕ್ಕಳ ಜಗಲಿಯ ಕೇಂದ್ರಬಿಂದು ತಾರನಾಥ ಸರ್ ನಿಮ್ಮ ಬರಹಗಳು, ಸಲಹೆಗಳು ಪ್ರೋತ್ಸಾಹದಾಯಕವಾಗಿವೆ. 
    "2022ರ ರಾಜ್ಯ ಮಟ್ಟದ ಕವನ ಮತ್ತುಕಥಾ ಸ್ಪರ್ಧೆ" ಯ ಸಂದರ್ಭದಲ್ಲೇ ಮಕ್ಕಳ ಜಗಲಿಯ ವೇದಿಕೆ ನಮಗೆ ಪರಿಚಯವಾದದ್ದು. ಈ ವರುಷವೂ ಅಂತಹ ಸ್ಪರ್ಧೆಗಳನ್ನು ಆಯೋಜಿಸಿರಿ. ಹಾಗೂ ಇನ್ನಷ್ಟು ಚಿಣ್ಣರು ಜಗಲಿಯ ಬಳಗದಲ್ಲಿ ನಲಿಯುವಂತಾಗಲಿ. ಕಳೆದ ಬಾರಿ ನನ್ನ ಮಗಳು ಪ್ರಣಮ್ಯಾಳಿಗೂ ಮೆಚ್ಚುಗೆ ಗಳಿಸಿದ ಪ್ರಮಾಣ ಪತ್ರ ದೊರಕಿತ್ತು. ಅವಳ ಶಾಲೆಯ ಎಲ್ಲಾ ಶಿಕ್ಷಕರು ಅವಳನ್ನು ತುಂಬಾನೇ ಅಭಿನಂದಿಸಿದ್ದರು. ಇನ್ನಷ್ಟು ಕವನಗಳ ರಚನೆಗೆ ಬಹುಶಃ ಮಕ್ಕಳ ಜಗಲಿ ಅನುವು ಮಾಡಿಕೊಟ್ಟಿದೆ. ಧನ್ಯವಾದಗಳು ಜಗಲಿಗೆ. ಇಂತಹ ಯಶಸ್ಸಿನ ಹಾದಿ ಇನ್ನಷ್ಟು ಮಕ್ಕಳಿಗೆ ಜಗಲಿಯ ಮುಖೇನ ಸಿಗುವಂತಾಗಲಿ ಎಂಬ ಶುಭ ಹಾರೈಕೆಗಳೊಂದಿಗೆ.
........................................... ವಿದ್ಯಾ ಗಣೇಶ್
ಚಾಮೆತ್ತಮೂಲೆ ಮನೆ , ಕೊಣಾಲು ಗ್ರಾಮ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



       ಜಗಲಿಯ ಎಲ್ಲರಿಗೂ ನನ್ನ ಪ್ರೀತಿಯ ನಮನಗಳು. ಒಂದು ವಾರದ ಜಗಲಿಯ ಮೇಲ್ನೋಟದ ಮೂಲಕ ನನ್ನ ಅನಿಸಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ರವರು ಭೂಪದೇವನ ಕಥೆಯೊಂದಿಗೆ ಅಸಾಧ್ಯವಾಗದನ್ನು ಸಾಧ್ಯವಾಗಿಸಲು ಸಾಧನೆಯೇ ಸಾಧನ ಎನ್ನುವುದನ್ನು ಬಹಳ ಸುಂದರವಾಗಿ ನಿರೂಪಿಸಿದ್ದಾರೆ. ಅದೇ ದಿನ ಶ್ರೀಮತಿ ಹರಿಣಾಕ್ಷಿಯವರ ಲೇಖನ ಬಹಳ ದಿನಗಳ ನಂತರ ಪ್ರಕಟವಾಯಿತು. ಆಸ್ಟ್ರೇಲಿಯಾದ ನಿಕ್ ಜೆಸಿಕ್ ನ ಸಾಧನೆಯನ್ನು ಮಾರ್ಮಿಕವಾಗಿ ತಿಳಿಸಿ ಜಗಲಿಯ ನಮ್ಮ ಎಲ್ಲಾ ಮಕ್ಕಳಿಗೆ ಸ್ಪೂರ್ತಿ ತುಂಬಿದ್ದಾರೆ. ರಮೇಶ್ ಸರ್ ರವರು ತಮ್ಮ ಸ್ಪೂರ್ತಿಯ ಮಾತುಗಳಿಂದ ಹೊಸತನದ ಕುರಿತು ತಿಳಿಸುತ್ತಾ ನಾವು ಹೊಸತನವನ್ನು ಮೈಗೂಡಿಸಕೊಳ್ಳಬೇಕೆಂಬ ಕಿವಿಮಾತು ತುಂಬಾ ಇಷ್ಟವಾಯಿತು. ಅರಂವಿಂದರವರ ಹಕ್ಕಿ ಕಥೆಯಲ್ಲಿ ಹಿಮಾಲಯದ ಚಾರಣದ ಅನುಭವದ ಜೊತೆಗೆ ಹೊಸ ಕಾಗೆಯ ಪ್ರಭೇದವೊಂದರ ಪರಿಚಯವಾಯಿತು. ಜೊತೆಗೆ ಶಿಕ್ಷಕಿ ಮಂಜುಳಾ ಪ್ರಸಾದ್ ರವರು ಪ್ರಾಚೀನ ಕಾಲದಿಂದ ಇಲ್ಲಿತನಕ ಶಿಕ್ಷಣದಲ್ಲಾದ ಬದಲಾವಣೆಗಳ ಕುರಿತು ಸೊಗಸಾಗಿ ತಿಳಿಸಿದ್ದಾರೆ. ವಿಜಯಾ ಮೇಡಂರವರ ನಿಷ್ಪಾಪಿ ಸಸ್ಯಗಳ ಲೇಖನ ಸರಣಿ ತುಂಬಾ ಉಪಯುಕ್ತವಾಗಿದೆ. ಈ ಸಲದ ಸಂಚಿಕೆಯಲ್ಲಿ ತುಳಸಿ ಗಿಡದ ಮಹತ್ವವನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಯಾಕೂಬ್ ಸರ್ ಜಗಲಿಯ ಬಳಗದಲ್ಲಿರುವುದು ಇನ್ನಷ್ಟು ಖುಷಿ ನೀಡಿತು. ಅವರ ಹೃದಯದ ಮಾತಿನ ಮೊದಲ ಸಂಚಿಕೆಯಲ್ಲಿ ಹೆಣ್ಣಿನ ಕುರಿತಾದ ಲೇಖನ ಮನ ಮುಟ್ಟುವಂತಿದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎನ್ನುವ ನುಡಿಗೆ ಕೈಗನ್ನಡಿಯಾಗಿದೆ ಈ ಲೇಖನ. ಛಾಯಾ ಚಿತ್ರದಲ್ಲಿ ಅದ್ಭುತವಾಗಿ ಕಾಣುವ ರಾಣಿ ಕಿ ವಾವ್ ನೈಜವಾಗಿ ನೋಡಿದಾಗ ಇನ್ನಷ್ಟು ಸುಂದರವಾಗಿರಬಹುದಲ್ಲವೆ? ಸುಭಾಸರವರ ಸಂಚಾರಿ ಡೈರಿಯಲ್ಲಿ ಪ್ರಕಟವಾದ ಹೂತು ಹೋಗಿದ್ದ ಪುರಾತನ ಬಾವಿಯ ಪರಿಚಯ ಇಷ್ಟವಾಯಿತು. ವಿದ್ಯಾರ್ಥಿಯೊಬ್ಬನಿಂದ ಜೀವನದ ಪಾಠ ಕಲಿತ ಶಿಕ್ಷಕ - ಶಿಕ್ಷಕರ ಡೈರಿಯಲ್ಲಿ ಸುಂದರ ಅನುಭವವನ್ನು ಹಂಚಿಕೊಂಡಿದ್ದಾರೆ ಗೋಪಾಲಕೃಷ್ಣ ಸರ್. ಚೆನ್ನಾಗಿತ್ತು ಸರ್ ನಿಮ್ಮ ಅನುಭವ. ವಾಣಿಯಕ್ಕನವರು ಪುಸ್ತಕ ಪರಿಚಯದ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುತ್ತಿದ್ದಾರೆ ಎನ್ನಬಹುದು. ಮಕ್ಕಳ ಬುದ್ಧಿಯನ್ನು ಚುರುಕುಗೊಳಿಸುವ ಪದದಂಗಳ ಶತಕದತ್ತ ಸಾಗಲಿ ಎಂದು ಹಾರೈಸುವೆ. ಜೊತೆಗೆ ಈ ಸಲದ ಮಕ್ಕಳ ಚಿತ್ರಗಳು ಕವನಗಳು ಅದ್ಭುತವಾಗಿದ್ದುವು. ಅಂತೂ ಜಗಲಿ ಈ ವಾರ ತುಂಬಾ ಅದ್ಭುತವಾಗಿ ಜಗಲಿಯ ಎಲ್ಲರಿಗೂ ಮುದ ನೀಡಿದೆ ಎಂದರೆ ತಪ್ಪಾಗಲಾರದು. ತಾರಾನಾಥ ಸರ್ ರವರ ಜೊತೆಗೆ ಜಗಲಿಯ ಕಿರಿಯ ಹಿರಿಯ ಎಲ್ಲರಿಗೂ ಮಗದೊಮ್ಮೆನನ್ನ ನಮನಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
***************************************


     ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು, ವಿದ್ಯಾ ಗಣೇಶ್
ಚಾಮೆತ್ತಮೂಲೆ ಮನೆ, 7ನೇ ತರಗತಿ ವಿದ್ಯಾರ್ಥಿನಿ ಜನನಿ ಪಿ .....ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article