-->
ಜಗಲಿ ಕಟ್ಟೆ : ಸಂಚಿಕೆ - 8

ಜಗಲಿ ಕಟ್ಟೆ : ಸಂಚಿಕೆ - 8

ಜಗಲಿ ಕಟ್ಟೆ : ಸಂಚಿಕೆ - 8
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


      ಬೇಸಿಗೆ ರಜೆ ಕಳೆದು ಶಾಲೆ ಪ್ರಾರಂಭವಾಗಿ ಈಗಾಗಲೇ 45 ದಿನಗಳು ಕಳೆದು ಹೋಯಿತು. ಇದೀಗ ಮಳೆ ಹಬ್ಬದ ಸಂಭ್ರಮವನ್ನು ಸವಿಯುತ್ತಾ ಇದ್ದೇವೆ. ಮಳೆಯ ನೀರಲ್ಲಿ ಸಂಭ್ರಮಿಸುವ ಅನುಭವವೇ ಮಧುರ. ಹರಿಯುವ ನೀರಲ್ಲಿ ಕಾಗದದ ದೋಣಿ ಮಾಡಿ ಬಿಡುವುದು, ನಿಂತ ನೀರಲ್ಲಿ ಹಾರಿ ಕುಣಿದು ಕುಪ್ಪಳಿಸುವುದು, ಮಾರ್ಗದಲ್ಲಿ ನಿಂತ ನೀರಿನ ಮೇಲೆ ವೇಗವಾಗಿ ಓಡುವ ವಾಹನಗಳಿಂದ ಕಾರಂಜಿಯಂತೆ ಹಾರುವ ನೀರಿನ ರಭಸವನ್ನು ಕಣ್ತುಂಬಿಸಿಕೊಳ್ಳುವ ಸುಂದರ ಸುಯೋಗವನ್ನು ಅನುಭವಿಸುತ್ತಿದ್ದೇವೆ. ಡಾ.ಗುರುರಾಜ ಇಟಗಿಯವರು "ಮಳೆ - ದಿನಗಳು" ಲೇಖನದಲ್ಲಿ ತನ್ನ ಅನುಭವಗಳನ್ನು ತುಂಬಾ ಸುಂದರವಾಗಿ ಮೆಲುಕು ಹಾಕಿದ್ದರು. ಲೇಖನದಲ್ಲಿ ಹೇಳುತ್ತಾ, ನನ್ನ ಬದುಕಿನಲ್ಲಂತೂ ಮಳೆಗಾಲ ಕೇವಲ ಮಳೆಗಾಲವಾಗಿ ಉಳಿದಿಲ್ಲ. ಅದೊಂದು ಅದ್ಭುತ ಅನುಭವ, ಜೀವನ ಪಾಠ. ಸಹಜೀವನದ ಮಹತ್ವವನ್ನು ಸಾರುವ ಇಂತಹ ಅನುಭವಗಳನ್ನು ಪಡೆದ ನಾನಂತೂ ಧನ್ಯ. ಎಲ್ಲರ ಜೀವನದಲ್ಲೂ ಇಂತಹದ್ದೊಂದು ಮಳೆಗಾಲ ಮತ್ತೆ-ಮತ್ತೆ ಜೊತೆಯಾಗಲಿ ಎಂದಿದ್ದಾರೆ.
     ಇನ್ನೀಗ ಎಲ್ಲೆಡೆ ಸ್ಪರ್ಧೆಗಳ ಸದ್ದು. ಶಾಲೆಗಳಲ್ಲಿ ಕ್ರೀಡೆ , ಪ್ರತಿಭಾ ಕಾರಂಜಿ ಹಾಗೂ ಇನ್ನಿತರ ಸ್ಪರ್ಧೆಗಳಿಗೆ ತಯಾರಿಗಳು ನಡೆಯುತ್ತಿವೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಆದರೆ ಸೀಮಿತ ಅವಕಾಶ, ತರಬೇತಿಯ ಕೊರತೆ, ಸಂಪನ್ಮೂಲಗಳ ಅಭಾವದಿಂದ ಅವಕಾಶಗಳಿಂದ ವಂಚಿತರಾಗುವವರು ಅನೇಕ. 
     ಸ್ಪರ್ಧೆಗಳು ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ನಡೆಯುತ್ತದೆ. ಸ್ಪರ್ಧೆಯ ಕಾರಣಗಳಿಗಾಗಿ ನಾವು ತಯಾರಿಗೊಳ್ಳುವುದಕ್ಕಿಂತಲೂ ಮುಖ್ಯವಾಗಿ ಸ್ವ- ಕೌಶಲ್ಯವನ್ನು ಬೆಳಗುವುದಕ್ಕಾಗಿ ಪ್ರಯತ್ನ ಪಟ್ಟರೆ ಆರೋಗ್ಯಕರ ಎನ್ನುವುದು ನನ್ನ ಅನಿಸಿಕೆ. ಇಲ್ಲಿ ಪ್ರತಿಭೆಯ ಪ್ರದರ್ಶನವಾಗುವ ಮೂಲಕ ಪ್ರತಿಭಾವಂತರಿಗೆ ಮನ್ನಣೆ ಸಿಗುವಂತಾಗಬೇಕು.
    ಈ ಬಗೆಗೆ ನಾನು ಪ್ರಯೋಗಿಸಿರುವ ಕೆಲವು ಕಾರ್ಯಕ್ರಮಗಳಲ್ಲಿ ಎರಡು ಉದಾಹರಣೆಗಳನ್ನು ನೀಡಬಲ್ಲೆ. 
       ರಂಗಭೂಮಿಯ ಭೀಷ್ಮ ಡಾ.ಬಿ.ವಿ. ಕಾರಂತರು ನಮ್ಮೂರಿನವರು. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ಬಾಬುಕೋಡಿ ಎನ್ನುವುದು ಅವರ ಹುಟ್ಟಿದ ಸ್ಥಳ. 2010ರ ಸುಮಾರಿಗೆ ಪಠ್ಯ ಪುಸ್ತಕದ ಚಿತ್ರರಚನೆಗಾಗಿ ಬೆಂಗಳೂರಿನ DSERT ಯಲ್ಲಿದ್ದೆ. ಸಾಯಂಕಾಲದ ಹೊತ್ತು ಬನಶಂಕರಿ , ಕತ್ರಿಗುಪ್ಪೆಯ ಆಸುಪಾಸಿನಲ್ಲಿ ವಾಕಿಂಗ್ ಹೋಗಿದ್ದಾಗ ಒಂದು ಸರ್ಕಲಲ್ಲಿ 'ಬಾಬುಕೋಡಿ ವೆಂಕಟರಮಣ ಕಾರಂತ ರಸ್ತೆ' ನೋಡಿದೆ. ತುಂಬಾ ಆಶ್ಚರ್ಯವಾಯಿತು..!! ಹುಟ್ಟೂರಲ್ಲಿ ಇರಬಹುದಾದ ಗೌರವಕ್ಕಿಂತಲೂ ಹೆಚ್ಚಿನ ಅಭಿಮಾನವನ್ನು ಹೊಂದಿರುವ ಹೊರಭಾಗದ ಜನರ ಕುರಿತಾಗಿ ತುಂಬಾ ಸಂತೋಷಪಟ್ಟೆ. 
        ಅಂದೇ ನಿರ್ಧಾರ ಮಾಡಿದ ಹಾಗೆ ನಮ್ಮ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಪುರುಷೋತ್ತಮ ಟಿ , ವಿಜ್ಞಾನ ಶಿಕ್ಷಕ ಶ್ರೀರಾಮ ಮೂರ್ತಿ ಹಾಗೂ ಕನ್ನಡ ಶಿಕ್ಷಕ ಶಿವಕುಮಾರ ಎಂ.ಜಿ. ಹಾಗೂ ಶಾಲಾ ಹಿತೈಷಿಗಳ ಸಹಕಾರದಲ್ಲಿ ಮಕ್ಕಳ ನಾಟಕ ತಂಡವನ್ನು ಕಟ್ಟಿದೆವು. ಡಾ.ಬಿ. ವಿ. ಕಾರಂತರ ನೆನಪಿನಲ್ಲಿ ಪ್ರತಿ ಎರಡು ವರುಷಕ್ಕೊಮ್ಮೆ ಹೊಸ ನಾಟಕಗಳನ್ನು ಸಿದ್ಧಪಡಿಸಿದೆವು. ಸಂಪೂರ್ಣ ಕಲಾತಂಡದ ನಿರ್ಮಾಣ ಮಾಡಿ ವರ್ಷಪೂರ್ತಿ ಅವಕಾಶ ಸಿಕ್ಕಿದ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಮಕ್ಕಳಿಗೆ ವೇದಿಕೆಯನ್ನು ಒದಗಿಸಿದೆವು. ಕೆಂಪು ಹೂ, ನೀಲಿ ಕುದುರೆ, ಮಣ್ಣಿನ ಮಗಳು ಅಬ್ಬಕ್ಕ, ಗೊಂಬೆ ರಾವಣ ಹೀಗೆ 4 ನಾಲ್ಕು ಪ್ರಸ್ತುತಿಗಳು ನಡೆದಿದೆ. ಇಲ್ಲಿ ಯಾವುದೇ ಸ್ಪರ್ಧೆಯ ಹಂಗಿಲ್ಲದೆ ಮಕ್ಕಳು ಸಂಪೂರ್ಣ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವುದು ಹೆಮ್ಮೆಯೆನಿಸುತ್ತದೆ.
       2ನೇ ಉದಾಹರಣೆ : 2016ರಲ್ಲಿ ಮಕ್ಕಳಿಗಾಗಿ ಕೊಲಾಜ್ ಕಲಾಕೃತಿಗಳ ರಚನಾ ಕಾರ್ಯಾಗಾರ ಮಾಡಲಾಯಿತು. ಇಲ್ಲಿ ನಿರ್ಮಾಣಗೊಂಡ ಕಲಾಕೃತಿಗಳನ್ನು ಜಿಲ್ಲೆಯಾದ್ಯಂತ ಪ್ರದರ್ಶನಗೈದಿದ್ದು ಒಂದು ಸಾಹಸವೇ ಅನಿಸುವಷ್ಟು ಅನುಭವಗಳನ್ನು ನೀಡಿದೆ ಎಂದರೆ ತಪ್ಪಲ್ಲ. ದಕ್ಷಿಣ - ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರತಿಯೊಂದು ಮುಖ್ಯ ಭಾಗಗಳಲ್ಲಿ ಪ್ರದರ್ಶನ ಕಂಡಿತ್ತು. ಜೂನ್ ತಿಂಗಳಿಂದ ಆರಂಭಗೊಂಡು ಮಾರ್ಚ್ ತಿಂಗಳಲ್ಲಿ ಸಮಾರೋಪಗೊಂಡಿರುವ ಒಂದು ಅವಿಸ್ಮರಣೀಯ ಚಿತ್ರಕಲಾ ಪ್ರದರ್ಶನ : ಮಂಚಿ - ಮಕ್ಕಳ "ಕೊಲಾಜ್ - ಚಿತ್ರ ಪಯಣ". 
     ವಿದ್ಯಾರ್ಥಿಗಳು ಚಿತ್ರಕಲಾ ಪ್ರದರ್ಶನದ ಗ್ಯಾಲರಿಗಳ ಪರಿಚಯ ಮಾಡಿಕೊಂಡರು. ಜಿಲ್ಲೆಯ ಎಲ್ಲಾ ಭಾಗಗಳ ಪತ್ರಕರ್ತರೊಂದಿಗೆ ಮಾತನಾಡುವ ಕೌಶಲ್ಯ ಬೆಳೆಸಿಕೊಂಡರು. ಕೊಲಾಜ್ ಚಿತ್ರಗಳ ವೀಕ್ಷಕ ಜನರೊಂದಿಗೆ ಮಾತನಾಡುತ್ತ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಹೊಸ ವಿಷಯಗಳನ್ನು ಪಡೆದುಕೊಂಡಿರುವುದು ಸ್ಪರ್ಧೆಯ ಹೊರತಾದ ಕಾರ್ಯಕ್ರಮದಲ್ಲಿ ಎನ್ನುವುದನ್ನು ಗಮನಿಸಬೇಕಾಗಿದೆ...!!
      ಹಾಗಂದ ಮಾತ್ರಕ್ಕೆ ಸ್ಪರ್ಧೆಗಳು ಬೇಕು...! ಆದರೆ ಅದು ನಮ್ಮ ಪ್ರತಿಭೆಗೆ ಯಾವುದೇ ರೀತಿಯ ಮಾನದಂಡವಲ್ಲ ಎನ್ನುವ ಸತ್ಯವನ್ನು ತಿಳಿಯಲೇ ಬೇಕು....!!
         

ಕಳೆದ ಸಂಚಿಕೆಯ ಜಗಲಿಕಟ್ಟೆ - 7 ಅಂಕಣದಲ್ಲಿ ಶಾನ್ವಿ ವಿ ಪ್ರಥಮ ಪಿಯುಸಿ , ಶ್ರೀಮತಿ ಸುರೇಖಾ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶ್ರೀಮತಿ ‌ಕವಿತಾ ಶ್ರೀನಿವಾಸ್ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ.... 

     ನಮಸ್ಕಾರಗಳು... ಸರ್..... ಈ ಬಾರಿ ನನ್ನ ಜ್ಞಾನದ ‌ಅರಿವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಜಗಲಿಯಲ್ಲಿ ಪ್ರಕಟವಾದ ಲೇಖನಗಳು ಕಾರಣವಾದವು. ಜೀವನ ಸಂಭ್ರಮ ಸಂಚಿಕೆಯನ್ನು‌ ಓದುತ್ತಿದ್ದಂತೆ ಜೀವನವನ್ನು ಸುಂದರವಾಗಿ, ಸಂತೋಷವಾಗಿ, ಶ್ರೀಮಂತವಾಗಿ, ಶಾಂತವಾಗಿ ಬದುಕುವುದು ಹೇಗೆ ಎಂಬ ಅರಿವಾಯಿತು. ಇತಿಹಾಸ ಅರಿಯೋಣ ಪ್ರಾಚ್ಯಪ್ರಜ್ಞೆ ಬೆಳೆಸೋಣ ಎಂಬ ಸುಂದರ ಸಂಚಿಕೆಯಲ್ಲಿ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ತಂಜಾವೂರಿನ ಬೃಹದೀಶ್ವರ ದೇವಾಲಯದ ಐತಿಹಾಸಿಕ ಅದ್ಭುತವನ್ನೂ, ನಿಷ್ಪಾಪಿ ಸಸ್ಯಗಳು ಸಂಚಿಕೆಯಿಂದ ಅಗ್ನಿಶಿಖ ಎಂಬ ಅಪರೂಪದ ಸಸ್ಯದ ಬಗ್ಗೆ ತಿಳಿಯಿತು. ಕುಳಿತಲ್ಲೇ ಎಷ್ಟೊಂದು ವಿಚಾರಗಳನ್ನು ಜಗಲಿ ತಿಳಿಸಿಕೊಡುತ್ತಿದೆ. ನಿಮಗೆಲ್ಲರಿಗೂ ಧನ್ಯವಾದಗಳು ಸರ್. ನಾನಂತೂ ಇನ್ನಷ್ಟು ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಕಾಯುತ್ತಿರುತ್ತೇನೆ.
....................... ಶ್ರೀಮತಿ ‌ಕವಿತಾ ಶ್ರೀನಿವಾಸ್
'ಚೈತನ್ಯ' ನೆಲ್ಯಡ್ಕ, ಅಂತರ, 
ನರಿಕೊಂಬು ಗ್ರಾಮ ಮತ್ತು ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************


     ಮಕ್ಕಳ ಜಗಲಿಯಲ್ಲಿ ವಾಣಿಯಕ್ಕ ಮುನ್ನಿಯ
ಮದುವೆ ಎನ್ನುವ ಪುಸ್ತಕವನ್ನು ಪರಿಚಯಿಸಿದ್ದಾರೆ.
ಬಾಲ್ಯವಿವಾಹದ ಸಂದರ್ಭವನ್ನು ಶಾಲೆಯ
ಸಹಪಾಠಿಗಳು ಹೇಗೆ ಪ್ರತಿರೋಧಿಸಬಹುದು ಎಂದು ತಿಳಿಸುವ ಪುಸ್ತಕ ಇದು ಎನ್ನುವುದು ಅವರ ಪರಿಚಯ ಬರಹದಿಂದ ತಿಳಿಯಿತು. ನನ್ನಲ್ಲಿ ಈ ಪುಸ್ತಕ ಇಲ್ಲ. ಇಂತಹ ಸಂಗತಿಗಳು ಪ್ರಾಥಮಿಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿಯ ಮಕ್ಕಳಿಗೆ ಇರುವ ಮೀನಾ ಸಂಘದಲ್ಲಿ ತಿಳಿಸಲು ಉಪಯುಕ್ತವಾಗಿವೆ. ಮಕ್ಕಳಿಗೆ ಪಠ್ಯದ
ಸಿಲೆಬಸ್ ಜೊತೆ ಇಂತಹ ಅರಿವು ಕೂಡ ಬಹಳ
ಮುಖ್ಯವಾಗಿದೆ. ನಮ್ಮೂರಲ್ಲಿ ಇದೆಲ್ಲ ಇಲ್ಲ ಎಂದು
ತಳ್ಳಿಬಿಡುವ ಹಾಗೂ ಇಲ್ಲ. ಸರಕಾರಿ ಶಾಲೆಗಳಲ್ಲಿ ಇದೀಗ ಬಹುತೇಕ ವಲಸಿಗ ಕಾರ್ಮಿಕರ ಮಕ್ಕಳು ಕಲಿಯುತ್ತಿರುವ ಸಂದರ್ಭ ಇಂತಹ ಅರಿವನ್ನು ಮಕ್ಕಳಿಗೆ ನೀಡುವುದು ಅತ್ಯಗತ್ಯವಾಗಿದೆ ಎನ್ನುವುದು ನನ್ನ ಅನಿಸಿಕೆ.
    ಸ್ವಪ್ನಳ ಚಿತ್ರಗಳು ಚೆನ್ನಾಗಿವೆ. ಗುರುವಿಲ್ಲದೆ ಸ್ವಂತ ಪ್ರಯತ್ನದಿಂದ ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದ ಚಿತ್ರಗಳಲ್ಲಿ ಪಳಗಿದವಳು ಈಕೆ.5 ನೇ ತರಗತಿಯ ಬಾಲಕಿ ಬಿಡಿಸಿದ ವ್ಯಕ್ತಿ ಚಿತ್ರಗಳು ವಯಸ್ಸಿಗೆ ಮೀರಿ ಚೆನ್ನಾಗಿವೆ. ಚಿತ್ರಕಲೆಯ ಆಸಕ್ತಿಯನ್ನು ಬೆಳೆಸಿಕೊಳ್ಳುವ ಎಲ್ಲ ಅವಕಾಶಗಳು ಇವಳಿಗೆ ಮುಂದೆ ಸಿಗಲಿ ಎನ್ನುವ ಅಕ್ಕರೆಯ ಹಾರೈಕೆಗಳು.
   ಶಿಕ್ಷಕರ ಸ್ಕೂಲ್ ಡೈರಿ ಅಂಕಣದಲ್ಲಿ ಶಿಕ್ಷಕಿ ಪ್ರೇಮ್ ರವರ ಪ್ರಾಮಾಣಿಕ ಅಭಿವ್ಯಕ್ತಿಗೆ ವಂದನೆಗಳು.
     ಜಗಲಿಕಟ್ಟೆಯಲ್ಲಿ ತಾರಾನಾಥ ಸರ್ ತಮ್ಮ ಶಿಕ್ಷಕ ವೃತ್ತಿಯ ಆರಂಭಕ್ಕೂ ಮೊದಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವ ಬಗ್ಗೆ ಅವರ ಕನಸು ಆಗಲೇ ಆರಂಭವಾಗಿದೆ ಎನ್ನುವುದು ನನ್ನಲ್ಲಿ ಅಚ್ಚರಿ ಮತ್ತು ಧನ್ಯತಾ ಭಾವ ಒಟ್ಟಿಗೆ ಮೂಡಿಸಿತು. ಮಕ್ಕಳ ಜಗಲಿಯ ಮೂಲಕ ತಾರಾನಾಥ ಸರ್ ಪರಿಚಯವಾಗುವ ಮೊದಲು ಸರ್ಕಾರಿ ಶಾಲೆ ಮತ್ತು ವರ್ಲಿ ಆರ್ಟ್ ಇವುಗಳೊಂದಿಗೆ ತಾರಾನಾಥ ಕೈರಂಗಳರ ಹೆಸರು ಬೆಸೆದುಕೊಂಡಿರುವುದು ಕೇಳಿದ್ದೆ. ಬಹುತೇಕ ಸರ್ಕಾರಿ ಶಾಲೆಗಳ ಗೋಡೆಗಳು ಇವರ ತಂಡದ ಮೂಲಕ ವರ್ಲಿ ಆರ್ಟ್ ನಿಂದ ಕಂಗೊಳಿಸ್ತಾ ಇದೆ ಎಂದು ಪತ್ರಿಕೆ, ವಿವಿಧ ಮಾಧ್ಯಮ ಮೂಲಕ ತಿಳಿದು ಬರುತ್ತಿತ್ತು. ತುಂಬಾ ಶಾಲೆಗಳ ಹೆಸರು ಕೇಳಿದಾಗಲೆಲ್ಲ.. ತಾರಾನಾಥ ಸರ್ ಎಂದರೆ ಬಹಳ ಹಿರಿಯರು ಎಂದೂ ಭಾವಿಸಿದ್ದೆ. ಶಿಕ್ಷಕರ ತರಬೇತಿಯಲ್ಲೊಮ್ಮೆ ಕೊಲಾಜ್ ವರ್ಕ್ ಕಲಿಸಲು ಇವರೇ ಸಂಪನ್ಮೂಲ ವ್ಯಕ್ತಿಗಳಾಗಿದ್ದಾಗ ನಾನು ಇಷ್ಟು ದಿನ ಕೇಳಿದ ವ್ಯಕ್ತಿ ಇಷ್ಟು ಕಿರಿಯರು, ಇಷ್ಟು ವಿನಯಶೀಲರು ಎಂದು ತಿಳಿದು ಅಚ್ಚರಿಯಾಗಿತ್ತು. ಸರ್, ನೀವು ನಿಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಳ್ಳುತ್ತ ನಮಗೆ ಪ್ರೇರಣೆಯಾಗುತ್ತಿರುವಿರಿ. ಜಗಲಿಕಟ್ಟೆಯ ಮುಂದಿನ ಬರಹಕ್ಕೂ ಕಾತುರದಿಂದ ಕಾಯುತ್ತೇವೆ. 
....................... ವಿದ್ಯಾ ಕಾರ್ಕಳ, ಸಹಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀಮತಿ ‌ಕವಿತಾ ಶ್ರೀನಿವಾಸ್ , ಮತ್ತು ಸೃಜನಶೀಲ ಶಿಕ್ಷಕಿ ವಿದ್ಯಾ ಕಾರ್ಕಳ ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article