-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 73

ಸ್ಫೂರ್ತಿಯ ಮಾತುಗಳು : ಸಂಚಿಕೆ - 73

ಸ್ಫೂರ್ತಿಯ ಮಾತುಗಳು : ಸಂಚಿಕೆ - 73
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                     
    ಹೊಸ ಉಡುಪು, ಹೊಸ ಪುಸ್ತಕ, ಹೊಸ ತಿಂಡಿ, ಹೊಸ ಶಾಲೆ, ಹೊಸ ಅಧ್ಯಾಪಕ, ಹೊಸ ಮನೆ, ಹೊಸ ಕೊಡೆ, ಹೊಸ ವರ್ಷ.... ಹೀಗೆ ಹೊಸದು ಎನ್ನುವಾಗ ಎಲ್ಲರಲ್ಲಿಯೂ ಅದೆಂತಹ ಸಂಭ್ರಮ! ಹಳೆಯದೆಂದೊಡನೆ ಅದೇನೋ ತಾತ್ಸಾರ ಮತ್ತು ಜಿಗುಪ್ಸೆ. ವಸ್ತುಗಳು ಹಳೆಯದಾದೊಡನೆ ಹೊಸದನ್ನು ಪಡೆಯುವ ಆಸೆ ಚಿಗುರೊಡೆಯುತ್ತದೆ. ಪ್ರಕೃತಿಯು ಸಹಜವಾಗಿಯೇ ಹೊಸತನದಿಂದಲೇ ಕೂಡಿರುತ್ತದೆ. ಮರ, ಗಿಡ, ಬಳ್ಳಿ, ಹೂ, ಕಾಯಿ, ಹಣ್ಣು, ಗಾಳಿ, ನೀರು ಇತ್ಯಾದಿಗಳು ನಿತ್ಯ ಹೊಸತನದಲ್ಲಿರುತ್ತವೆ. ಯಾವುದನ್ನೂ ಹಳೆಯದೆಂದು ನಾವು ಕಳಚುವಂತಿಲ್ಲ. ಪ್ರಕೃತಿಯಲ್ಲಿರುವ ಸರ್ವ ಜೀವಿಗಳು, ನೆಲ, ಜಲ, ಗಾಳಿ, ಬೆಳಕು ಇವುಗಳನ್ನು ಹಳೆಯವುಗಳೆನ್ನದೆ ನಿತ್ಯ ನೂತನವೆಂದರಿತು ಅವುಗಳೊಂದಿಗೆ ಸಂಭ್ರಮಿಸುತ್ತೇವೆ. ರಕ್ತ ಸಂಬಂಧದಲ್ಲಿ ಹಳತು ಎಂಬ ಭಾವನೆಯೇ ಹುಟ್ಟುವುದಿಲ್ಲ. ಗೆಳೆಯರಲ್ಲಿ ಹೊಸ ಗೆಳೆಯ, ಹಳೆಯ ಗೆಳೆಯ ಎಂಬ ಪ್ರಬೇಧಗಳಿವೆ. ಹಳೆಯ ಯಜಮಾನ, ಹೊಸ ಯಜಮಾನ, ಹಳೆಯ ಮಾಲಿಕ ಹೊಸ ಮಾಲಿಕ, ಹಳೆಯ ಮುಖ್ಯೋಪಾಧ್ಯಾಯ, ಹೊಸ ಮುಖ್ಯೋಪಾಧ್ಯಾಯ ಎಂದು ವ್ಯಕ್ತಿಯು ಬದಲಾದಾಗ ಹೇಳುತ್ತೇವೆ. ಇಲ್ಲಿ ’ಹಳೆಯ’ ಎಂದು ನಾವು ಬೆಟ್ಟು ಮಾಡುವ ವ್ಯಕ್ತಿ ಇನ್ನೊಬ್ಬರಿಗೆ ಹೊಸಬರಾಗತ್ತಾರೆ. ಇಂದಿನ ನಮ್ಮ ಹೊಸಬರು ಇನ್ಯಾರಿಗೋ ಹಳಬರಾಗುತ್ತಾರೆ.

     ಹೊಸದು ಎಲ್ಲರಿಗೂ ಇಷ್ಟ. ನಾವೂ ದಿನವೂ ಹೊಸಬರಾದರೆ ನಾವೂ ಎಲ್ಲರಿಗೂ ಇಷ್ಟರಾಗಲಾರೆವೇ? ನಮ್ಮನ್ನು ಹೊಸದುಗೊಳಿಸುವುದು ಹೇಗೆ? ದಿನದಿಂದ ದಿನಕ್ಕೆ ನಮ್ಮಲ್ಲಿರುವ ಜ್ಷಾನ ವೃದ್ಧಿಯಾದರೆ ನಾವು ಹೊಸತನ ಪಡೆದಂತೆಯೇ ಅಲ್ಲವೇ? ನಮ್ಮಲ್ಲಿರಬಹುದಾದ ಕೆಟ್ಟ ಗುಣಗಳು ಕಳಚಿದಂತೆ ನಾವು ಹೊಸತನ ಪಡೆಯುತ್ತೇವೆ. ನಮ್ಮಲ್ಲಿರುವ ಕೆಟ್ಟ ಹವ್ಯಾಸಗಳನ್ನು ದೂರ ಮಾಡಿದಂತೆ ನಾವು ಹೊಸತನ ಪಡೆಯುತ್ತೇವೆ. ದಿನದಿಂದ ದಿನಕ್ಕೆ ನಮ್ಮ ಶಿಸ್ತು ಸುರಕ್ಷಿತವಾಗಿ ಉಳಿದುಕೊಂಡರೆ ನಮ್ಮಲ್ಲಿ ನಿತ್ಯ ಹೊಸತನವೇ ಗೋಚರಿಸುತ್ತದೆ. ಹಳೆಯ ಕೃತಕ ಅಥವಾ ಉತ್ಪಾದಿತ ವಸ್ತುಗಳು ನಮಗೆ ಯಾಕೆ ಬೇಡ? ಉತ್ಪಾದಿತ ವಸ್ತುಗಳು ದಿನದಿಂದ ದಿನಕ್ಕೆ ಗುಣ ಮಟ್ಟವನ್ನು ಕಳೆದುಕೊಳ್ಳುತ್ತವೆ. ಅವುಗಳ ಕಾಂತಿ ಮತ್ತು ಬಲ ನಶಿಸುತ್ತದೆ. ಹೊಸ ವಿನ್ಯಾಸಗಳು ಬಂದಾಗ ಹೊಸ ಕಾಂತಿ ಮತ್ತು ಬಲಗಳನ್ನು ಹೊಂದಿರುತ್ತವೆ. ಮಾನವನು ಸಹಜವಾಗಿಯೇ ಬದಲಾವಣೆ ಮತ್ತು ಸುಧಾರಣೆಗೊಳಗಾಗುವುದೇ ಹೊಸತನ. ಡಿ.ವಿ.ಜಿ. ಯವರ ಕಗ್ಗವೊಂದರ ಈ ಸಾಲುಗಳನ್ನು ಗಮನಿಸಿರಿ....

ಪೊಸರಸಂ ಬೇರಿಗನುದಿನಮೋದವಿ ಧರೆಯಿಂದ|
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ||
ಹೊಸ ಸೃಷ್ಟಿಸತ್ತ್ವಮೆತ್ತಣಿನೋ ಬರುತನುದಿನಂ |
ಪೊಸತಾಗಿಪುದು ಜಗವ “ಮಂಕುತಿಮ್ಮ” ||

     ಭೂಮಿಯಿಂದ ಬೇರಿನ ಮೂಲಕ ಸಸ್ಯಗಳಿಗೆ ಹೊಸ ಹೊಸ ರಸವು ಒದಗುವುದರಿಂದ ಆ ಸಸ್ಯಗಳು ಹೊಸ ಹೊಸ ಚಿಗುರನ್ನು ಮೂಡಿಸುವುದರೊಂದಿಗೆ ಹೊಸತನವನ್ನು ಮೆರೆಯುತ್ತವೆ. ಹಳೆತನವನ್ನು ಮರೆಯುತ್ತವೆ. ಹಾಗೆಯೇ ಹೊಸ ಹೊಸ ಸೃಷ್ಟಿ ಸತ್ತ್ವಗಳು ಎಲ್ಲೆಲ್ಲಿಂದಲೋ ಬಂದು ಈ ಜಗತ್ತಿಗೆ ಹೊಸತನವನ್ನೀಯುತ್ತವೆ ಎಂಬುದು ಈ ಕಗ್ಗದ ಮೇಲ್ನೋಟದ ಅರ್ಥ. 

     ಪಕ್ಷಿಗಳಿಗೂ, ಉರಗಗಳಿಗೂ, ಜೀವಿಗಳಿಗೂ, ಮನುಷ್ಯನಿಗೂ ನಿತ್ಯವೂ ಹೊಸ ಹೊಸ ರಸಗಳು ದೊರೆಯುತ್ತಲೇ ಇರುತ್ತವೆ. ಮನುಷ್ಯನಿಗೆ ಆಹಾರದ ರಸವಲ್ಲದೆ ಅನುಭವಗಳ ರಸಗಳೂ ದೊರೆಯುತ್ತಿರುತ್ತವೆ. ನಾನಾ ಮೂಲಗಳಿಂದ ಹೊಸ ಹೊಸ ಜ್ಞಾನಗಳು ಮನುಷ್ಯನನ್ನು ಸೇರುತ್ತಲೇ ಆತನಲ್ಲಿ ಹೊಸತನದ ಸೃಷ್ಟಿಯಾಗುತ್ತದೆ ಎಂಬ ಗೂಢ ಒಳನೋಟವನ್ನೂ ಈ ಕಗ್ಗದಲ್ಲಿ ಕಾಣುತ್ತೇವೆ.

    ಹೊಸತನವು ನಮ್ಮಲ್ಲಿ ಸ್ವಯಂ ಜನ್ಯವೂ ಹೌದು, ಇತರರ ಮತ್ತು ಪ್ರಕೃತಿಯ ಕೊಡುಗೆಯೂ ಹೌದು. ಸ್ವಯಂ ಜನ್ಯ ಮತ್ತು ಕೊಡುಗೆಗಳಾಗಿ ಒದಗುವ ಹೊಸತನಗಳನ್ನು ನಮ್ಮಲ್ಲಿ ರೂಢಿಸಿಕೊಳ್ಳದೆ ಇದ್ದರೆ ನಾವು ಹಳೆಯ ಸರಕುಗಾಳಾಗುತ್ತೇವೆಯೇ ಹೊರತು ಹೊಸತನದ ಕಳೆ ನಮಗೊದಗದು. ಹಳೆಯ ಸರಕುಗಳೆಂದರೆ ಎಲ್ಲರಿಗೂ ಎಲರ್ಜಿ. ನಾವು ಎಲರ್ಜಿಯಾಗಬೇಕೇ ಎನರ್ಜಿಯಾಗಬೇಕೇ? ನಿರ್ಧಾರ ನಮ್ಮದು... ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article